Skip to main content

 

                       ಸುತ್ತ-ಮುಕ್ತ ಅಂಕಣ 

            

 

   ಹೊಡೆತ, ಸವೆತ ಸಹಿಸುವ ಭೂಮಾತೆಗೆ ನಮಿಸುತಾ. . .

 

ಅಂದು ದೈತ್ಯ, ಭೀಭತ್ಸ ಮೃಗಗಳಾದ ಡೈನೋಸಾರ್ಗಳು, ತಮ್ಮ ವಿನಾಶದ ಯಾವ ಮುನ್ಸೂಚನೆಯೂ ಇಲ್ಲದೆ ಭೂಲೋಕವನ್ನು ಆಳಿದ್ದವು, ನಮ್ಮ ಹಾಗೆ.

66 ದಶಲಕ್ಷ ವರ್ಷಗಳ ಹಿಂದಿನ ಮಾತು. ಸುಮಾರು 10 ಕಿ ಮೀ ವ್ಯಾಸದಷ್ಟು ಭಾರಿ ಗಾತ್ರದ ಒಂದು ಆಸ್ಟರಾಯ್ಡ್ /ಧೂಮಕೇತು, ಇಂದು ಮೆಕ್ಸಿಕೋ ದೇಶದ್ದೆಂದು ಬಗೆಯಲಾಗುವ ಜಾಗವನ್ನು ಅಪ್ಪಳಿಸಿ ಊಹಾತೀತ ಅನಾಹುತ ಮಾಡುತ್ತದೆ. ಕ್ಷಣಾರ್ಧದಲ್ಲಿ ಪರ್ವತಗಳು ಮೇಲೇಳುತ್ತವೆ. ಅದು ಬಡಿದೆಬ್ಬಿಸಿದ ಸುನಾಮಿಗೆ ಜೀವಸಂಕುಲಗಳು ಆಹುತಿಯಾಗುತ್ತವೆ. ಹೊಡೆತಕ್ಕೆ ಮುನ್ನ ಸಿಡಿದ ಅದರ ಅವಶೇಷಗಳ ಮಳೆ ಬೀಳುತ್ತದೆ. ಜ್ವಾಲಾಮುಖಿಗಳು ವಿನಾಶಕ್ಕೆ ಕೈಜೋಡಿಸುತ್ತವೆ. ಭಾರಿ ಧೂಳು, ಬೂದಿಯ ಭರಪೂರವನ್ನೆಬ್ಬಿಸಿದ ಹೊಡೆತ ಭೂಮಿಯನ್ನು ಸುಮಾರು ಎರಡು ವರ್ಷಗಳ ವರೆಗೆ ಕತ್ತಲೆಯಲ್ಲಿರಿಸುತ್ತದೆ, ವಿಪರೀತ ತಂಪಾಗಿರಿಸುತ್ತದೆ. ಡೈನೋಸಾರ್ ಮತ್ತಿತರ ಜೀವಿಗಳು ನಿರ್ನಾಮವಾಗುತ್ತವೆ. 

ಆಸ್ಟರಾಯ್ಡ್ ಅಪ್ಪಳಿಸಿದ ಜಾಗ ಇಂದಿನ ಮೆಕ್ಸಿಕೋದಚಿಕ್ಸ್ಲೂಬ್ ಪಟ್ಟಣವಾದುರಿಂದ ಅದನ್ನು ಚಿಕ್ಸ್ಲೂಬ್ ಎಂದು ಕರೆಯಲಾಗುತ್ತದೆ.

ಹಿರೊಶಿಮಾದ ಮೇಲೆ ಹಾಕಲಾದ ಪರಮಾಣು ಬಾಂಬ್ ಸಿಡಿಸಿದ ಶಕ್ತಿಗಿಂತ 10 ಬಿಲಿಯ ಪಟ್ಟು ಹೆಚ್ಚು ಶಕ್ತಿ ಬಿಡುಗಡೆ ಮಾಡಿದ ಅಪ್ಪಳಿಸುವಿಕೆ, 20 ಕಿ ಮೀ ಆಳ ಹಾಗೂ 180 ಕಿ ಮೀ ವ್ಯಾಸದಷ್ಟು ಅಗಾಧವಾದ ಕ್ರೇಟರ್ ಒಂದನ್ನು ಭೂಮಿ ಮೆಲೆ ಕೊರೆದಿದೆ.

 ಮೆಕ್ಸಿಕೋದ ಯೂಕೇಟನ್ ಪೆನಿನ್ಸುಲಾ(ಜಲರಾಶಿಯಡಿಯ ಭೂಭಾಗ) ದಲ್ಲಿ ಮರೆಯಾಗಿದ್ದ ಕ್ರೇಟರ್, ವಿಜ್ಞಾನಿಗಳ ಗಮನಕ್ಕೆ ಬಂದದ್ದು 1970ರಲ್ಲಿ. ಇದೂ ಸೇರಿ ಸುಮಾರು 170 ವಿವಿಧ ಆಕಾರಗಳ ಕ್ರೇಟರ್ಗಳು ಭೂಮಿಯ ಮೇಲಿವೆ. ಇವುಗಳಲ್ಲಿ ಕೆಲವು ಇತ್ತೀಚಿನವು, ಇನ್ನು ಕೆಲವು 2 ಬಿಲಿಯ ವರ್ಷ ಹಳತು.

ಇವುಗಳಿಗೆ ಕಾರಣ ಭೂಮಿಗೆ ಅಪ್ಪಳಿಸಿದ ಕ್ಷುದ್ರಗ್ರಹಗಳು, ಉಲ್ಕೆಗಳು ಹಾಗೂ ಧೂಮಕೆತುಗಳು. ಅದೃಷ್ಟವಶಾತ್, ಹೆಚ್ಚಿನ ಆಕಾಶಕಾಯಗಳು ಭೂಮಿಯ ವಾತಾವರಣ ಪ್ರವೇಶಿಸುತ್ತಿದ್ದಂತೆ ಘರ್ಷಣೆಯಿಂದ ಹೊತ್ತಿ ಭಸ್ಮವಾಗುತ್ತವೆ.

ಆದಾಗ್ಯೂ ಭೂಮಿ ತಾಯಿ ಇಷ್ಟೊಂದು ಜೀವರಾಶಿಗಳನ್ನು ಹೆತ್ತು, ಹೊತ್ತು, ಸಾಕಿ, ಸಲಹುತ್ತಾ ಬಂದಿದ್ದಾಳೆಂದರೆ ಆಕೆ ಎಂಥಾ ಗಟ್ಟಿಗಿತ್ತಿ ಇರಬೇಕಲ್ಲವೇ? ಹಾಗೇನೂ ಇಲ್ಲ! ಹಾಗಿದ್ದಲ್ಲಿ ಸಿಂಕ್ಹೋಲ್ ಎಂಬ ಇನ್ನೊಂದು ಬಗೆಯ ಹೊಂಡಗಳು ಬುವಿಯನ್ನು ವಿರೂಪಗೊಳಿಸುತ್ತಿರಲಿಲ್ಲ.

ನಮಗೆ ಮಾನವ ನಿರ್ಮಿತ ರಸ್ತೆ ಹೊಂಡಗಳು ಮತ್ತದರ ಕರ್ಮಕಾಂಡಗಳು ಚಿರಪರಿಚಿತ. ನೀರು ದೊರೆಯದ್ದಕ್ಕೆ ಹಾಗೇ ಬಿಟ್ಟ ಕೊಳವೆಬಾವಿಗಳು, ಅವು ನುಂಗುವ ಕಂದಮ್ಮಗಳು ತರುವ ಗೋಳು, ಗಣಿಗಾರಿಕೆಯ ಕ್ವಾರಿಗಳು ಇತ್ಯಾದಿ ಬಲ್ಲ ನಮಗೆ (2021 ಜೂನ್ನಲ್ಲಿ ದೆಹಲಿಯಲ್ಲಿ ರಸ್ತೆ ಬದಿ ಪಾರ್ಕ್ ಮಾಡಿದ್ದ ಕಾರ್ ಒಂದನ್ನು ಏಕಾಏಕಿ ಒಂದು ಸಿಂಕ್ಹೋಲ್ ಗುಳುಂ ಮಾಡಿದಂಥಹಾ  ಅಪರೂಪದ ಘಟನೆಗಳನ್ನು ಬಿಟ್ಟರೆ) ಸಿಂಕ್ಹೋಲ್ಗಳು ಏನಿದ್ದರೂ ಸುದ್ದಿ ಮಾತ್ರ . . .

ಸಿಂಕ್ಹೋಲ್ಗಳಲ್ಲಿ ಮುಖ್ಯವಾಗಿ ಎರಡು ವಿಧ. ಸೂರು ಕುಸಿಯುವುದರಿಂದ ಭೂಗತ ಗುಹೆ ಬಾಯ್ಬಿಟ್ಟು ಉಂಟಾಗುವುದು ಒಂದಾದರೆ ಮಣ್ಣಿನ ಕೆಳಗಿರುವ ಕಲ್ಲು, ನೀರಿನಲ್ಲಿ ಕರಗಿ ಅಡಿಯಲ್ಲಿ ಬಿರುಕು ಬಿಟ್ಟು ಉಂಟಾಗುವುದು ಇನ್ನೊಂದು.

ಆದರೆ ಎಲ್ಲಿ, ಯಾವಾಗ ಭೂಮಿ ಹೀಗೆ ಬಾಯ್ಬಿಡುತ್ತದೆ ಎಂದು ಕರಾರುವಕ್ಕಾಗಿ ಹೇಳಲು ಅಸಾಧ್ಯ. ಇದನ್ನೇ ವಸ್ತುವಾಗಿಸಿ 2021 ಆಗಸ್ಟ್ ನಲ್ಲಿ ಬಿಡುಗಡೆಯಾದ ದಕ್ಷಿಣ ಕೊರಿಯಾದಸಿಂಕ್ ಹೋಲ್ ಎಂಬ ಸಿನೆಮಾ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಮಾಡಿದೆ.  

ಯೆಮೆನ್ ದೇಶದ ಪೂರ್ವದ ಅಲ್-ಮೆಹರ್ ಪ್ರೊವಿನ್ಸ್ ಮರುಭೂಮಿಯ ಮಧ್ಯೆ ಮಿಲಿಯಗಟ್ಟಲೆ ವರ್ಷದಷ್ಟು ಪುರಾತನವಾದ ಒಂದು ಸಿಂಕ್ ಹೋಲ್ ಇದೆ. ‘ವೆಲ್ ಆಫ್ ಬೇರ್ಹಾಟ್ ಎಂಬ ಹೆಸರಿನ ಅದು, ‘ವೆಲ್ ಆಫ್ ಹೆಲ್ ಎಂಬ ಅಡ್ಡ ಹೆಸರಿನಿಂದ ಕುಪ್ರಸಿದ್ಧ. 98 ಅಡಿ ವ್ಯಾಸದ ವೃತ್ತಾಕಾರದ ಬಾಯಿಯಿರುವ ಇದರ ಕುರಿತು ಪೂರ್ತಿಯಾಗಿ ತಿಳಿಯದೆ, ಅದರಿಂದ ಸೂಸುವ ದುರ್ನಾತಕ್ಕೆ ಅದನ್ನುನರಕದ ಬಾವಿ ಎಂದು ಕರೆದ ಅಲ್ಲಿನವರು. ಅದರ ಮೇಲೆ ನಾನಾ ಕಟ್ಟುಕತೆ, ಅಂತೆ ಕಂತೆಗಳನ್ನು ಹರಿಯ ಬಿಟ್ಟರು.

ಅದರೊಳಗೊಂದು ದೆವ್ವ ಬಂಧಿಯಾಗಿದೆ, ಅದರಿಂದ ದುರದೃಷ್ಟ ತಗಲುತ್ತದೆ, ತುಂಬಾ ಹತ್ತಿರ ಹೋದವರನ್ನು ತನ್ನೊಳಗೆ  ಸೆಳೆದೊಯ್ಯುತ್ತದೆ, ಅದು ಭೂಮಿಯನ್ನೆ ಸರ್ವನಾಶ ಮಾಡಬಲ್ಲ ಒಂದು ಸೂಪರ್ ಜ್ವಾಲಾಮುಖಿ. . . ಇತ್ಯಾದಿ ಇತ್ಯಾದಿ.

2021 ಸೆಪ್ಟೆಂಬರ್ ತಿಂಗಳಲ್ಲಿ, ಪಾತಾಳದ ಬಾಗಿಲು ಎಂದು ಅವರು ನಂಬುವ ನರಕದ ಬಾವಿಗೆ ಭೂಗರ್ಭಶಾಸ್ತ್ರಜ್ಞರನ್ನೂ ಒಳಗೊಂಡ 8 ಜನರ ತಂಡವೊಂದು ಅದರ ಬುಡದ ವರೆಗೆ ಇಳಿದು ಅದನ್ನು ವೈಜ್ಞಾನಿಕವಾಗಿ ಪರಿಶೋಧಿಸಿತು.

ಅಲ್ಲಿ ಅವರಿಗೆ ದೊರೆತದ್ದು ಹಾವು, ಕಪ್ಪೆಗಳು, ನೀರಿನ ಸೆಲೆಗಳು, ಗುಹೆಯಲ್ಲಿ ಮೂಡುವ ಮುತ್ತಿನಂಥಾ ರಚನೆಗಳು, ದುರ್ನಾತಕ್ಕೆ ಕಾರಣವಾದ ಪಶು ಪಕ್ಷಿಗಳ ಕಳೆಬರಗಳು- ಇಷ್ಟು ಮಾತ್ರ. ಭೂತವಂತೂ ಅವರಿಗೆ ಕಾಣಲು ಸಿಗಲಿಲ್ಲ, ‘ಆಲೀಸ್ ಅದ್ಭುತ ಲೋಕವೂ ದಕ್ಕಲಿಲ್ಲ.

ಅಪಾಯಕಾರಿ ಆಕಾಶಕಾಯದ ಜಾಡನ್ನು ಪತ್ತೆ ಹಚ್ಚಬಲ್ಲಷ್ಟು ಮುಂದುವರಿದಿರುವ ವಿಜ್ಞಾನ, ಕಾಲಬುಡದ ಕೆಳಗಿನ ಬುವಿಯ ಮರ್ಮ ಅರಿಯಲು ಇನ್ನೂ ಕಾಯಬೇಕಾಗಿದೆ.  

ಮೇಲಿನಿಂದ ಹೊಡೆತ, ಮೈಮೇಲಿನ ಸವೆತ ಎಲ್ಲವನ್ನೂ ಸಹಿಸುತ ನಮ್ಮನ್ನು ಸಲಹುವ ಭೂಮಾತೆ-ಗಟ್ಟಿಗಿತ್ತಿಯೋ ಅಲ್ಲವೋ-ಅವಳ ಋಣ ತೀರಿಸುವುರಲ್ಲಿದೆ ನಮ್ಮ ಗಟ್ಟಿತನ ಅನ್ನುವುದು ನಿಸ್ಸಂಶಯ.

 

           

Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ -ಆಗಸ್ಟ್‌ 2025ರ ತುಷಾರ ದಲ್ಲಿ ಪ್ರಕಟವಾಗಿತ್ತು     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾ...
  ಛಾಯಾಚಿತ್ರ ಒಂದು, ಸಂಚಲನಗಳು ಹತ್ತು ಹಲವು   ಮೊಬೈಲ್‌, ಸಾಮಾಜಿಕ ಜಾಲತಾಣ ಬಿಡಿ; ಇಂಟರ್ನೆಟ್ ಕೂಡಾ ಅಂಬೆಗಾಲಿಡುತ್ತಿದ್ದ ತೊಂಭತ್ತನೇ ದಶಕದ ಕಾಲವದು. ಆದಾಗ್ಯೂ   ಅದೊಂದು ಛಾಯಾಚಿತ್ರ     ಅಂದು ಸೃಷ್ಟಿಸಿದ ಸಂಚಲನ, ಎಬ್ಬಿಸಿದ ಆಕ್ರೋಶ ಮತ್ತು ತಲ್ಲಣಗಳ ತೀವ್ರತೆ- ನಾವು ಇಂದು ವೈರಲ್‌ ಎಂದು ಏನನ್ನು ಕರೆಯುತ್ತೇವೆಯೋ- ಅದಕ್ಕೆ ಸಮಾನ.   ಸುಡುವ ಕ್ಷಾಮಕ್ಕೆ ತುತ್ತಾದ ಸುಡಾನ್‌   ಅಂತಃಕಲಹ ಅನ್ನುವುದು ಆಫ್ರಿಕಾ ಖಂಡದ ದೇಶಗಳ ಹಣೆಬರಹ. ಅಂದಮೇಲೆ, ಸುಡಾನ್‌ ನಂತಹಾ ಆಫ್ರಿಕನ್ ದೇಶವನ್ನು ಅದು ಕಾಡದೆ ಇರುತ್ತದೆಯೇ? ಆದರೆ   ಒಳಜಗಳ ಫಲದಿಂದ ಭೀಕರ ಕ್ಷಾಮಕ್ಕೆ ತುತ್ತಾದದ್ದು ಸುಡಾನ್‌ನ ಘೋರ ದುರಂತ. ಆಫ್ರಿಕಾದ ಈಶಾನ್ಯದಲ್ಲಿರುವ ಸುಡಾನ್ ಗೆ   ಸಾಂಸ್ಕೃತಿಕವಾಗಿ ಶತಶತಮಾನಗಳ ಸಮೃದ್ಧ ಪರಂಪರೆಯಿದೆ. ಇದು ಕತ್ತಲೆಯ ಖಂಡದ ಬೃಹತ್‌ ರಾಷ್ಟ್ರಗಳಲ್ಲಿ ಒಂದು. ಹೆಚ್ಚುಕಮ್ಮಿ ಕೃಷಿಯೇ ಆರ್ಥಿಕತೆಯ ಮೂಲವಾಗಿರುವ ಈ ದೇಶ ಬಂಜರು, ಅರೆ ಬಂಜರು ಭೂಮಿ ಮತ್ತು ಹುಲ್ಲುಗಾವಲುಗಳಿಂದ ತುಂಬಿದ್ದು, ತೈಲ ಮತ್ತು ಖನಿಜಗಳಿಗೆ ಇಲ್ಲಿ ಕೊರತೆಯೇನೂ ಇಲ್ಲ.   ಬ್ರಿಟನ್‌ ಹಾಗೂ ಈಜಿಪ್ಟ್‌ ದೇಶಗಳು ಜಂಟಿಯಾಗಿ ಆಳುತ್ತಿದ್ದ ಈ ದೇಶ 1956 ರಲ್ಲಿ ಸ್ವತಂತ್ರವಾಯಿತು. ಆ   ದರೆ ವಿವಿಧ ಸಂಸ್ಕೃತಿ, ಭಾಷೆ ಹಾಗೂ ಜನಾಂಗಗಳ ತಾಣವಾಗಿರುವ ಸುಡಾನ್‌ನ ಪಾಲಿಗೆ ರಾಜಕೀಯ ಅಸ್ಥಿರತೆ, ಸೇನಾಡಳಿತ ಹ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...