Skip to main content

 

ಛಾಯಾಚಿತ್ರ ಒಂದು, ಸಂಚಲನಗಳು ಹತ್ತು ಹಲವು

 

ಮೊಬೈಲ್‌, ಸಾಮಾಜಿಕ ಜಾಲತಾಣ ಬಿಡಿ; ಇಂಟರ್ನೆಟ್ ಕೂಡಾ ಅಂಬೆಗಾಲಿಡುತ್ತಿದ್ದ ತೊಂಭತ್ತನೇ ದಶಕದ ಕಾಲವದು. ಆದಾಗ್ಯೂ  ಅದೊಂದು ಛಾಯಾಚಿತ್ರ   ಅಂದು ಸೃಷ್ಟಿಸಿದ ಸಂಚಲನ, ಎಬ್ಬಿಸಿದ ಆಕ್ರೋಶ ಮತ್ತು ತಲ್ಲಣಗಳ ತೀವ್ರತೆ- ನಾವು ಇಂದು ವೈರಲ್‌ ಎಂದು ಏನನ್ನು ಕರೆಯುತ್ತೇವೆಯೋ- ಅದಕ್ಕೆ ಸಮಾನ.  

ಸುಡುವ ಕ್ಷಾಮಕ್ಕೆ ತುತ್ತಾದ ಸುಡಾನ್‌  ಅಂತಃಕಲಹ ಅನ್ನುವುದು ಆಫ್ರಿಕಾ ಖಂಡದ ದೇಶಗಳ ಹಣೆಬರಹ. ಅಂದಮೇಲೆ, ಸುಡಾನ್‌ ನಂತಹಾ ಆಫ್ರಿಕನ್ ದೇಶವನ್ನು ಅದು ಕಾಡದೆ ಇರುತ್ತದೆಯೇ? ಆದರೆ  ಒಳಜಗಳ ಫಲದಿಂದ ಭೀಕರ ಕ್ಷಾಮಕ್ಕೆ ತುತ್ತಾದದ್ದು ಸುಡಾನ್‌ನ ಘೋರ ದುರಂತ.

ಆಫ್ರಿಕಾದ ಈಶಾನ್ಯದಲ್ಲಿರುವ ಸುಡಾನ್ ಗೆ  ಸಾಂಸ್ಕೃತಿಕವಾಗಿ ಶತಶತಮಾನಗಳ ಸಮೃದ್ಧ ಪರಂಪರೆಯಿದೆ. ಇದು ಕತ್ತಲೆಯ ಖಂಡದ ಬೃಹತ್‌ ರಾಷ್ಟ್ರಗಳಲ್ಲಿ ಒಂದು. ಹೆಚ್ಚುಕಮ್ಮಿ ಕೃಷಿಯೇ ಆರ್ಥಿಕತೆಯ ಮೂಲವಾಗಿರುವ ಈ ದೇಶ ಬಂಜರು, ಅರೆ ಬಂಜರು ಭೂಮಿ ಮತ್ತು ಹುಲ್ಲುಗಾವಲುಗಳಿಂದ ತುಂಬಿದ್ದು, ತೈಲ ಮತ್ತು ಖನಿಜಗಳಿಗೆ ಇಲ್ಲಿ ಕೊರತೆಯೇನೂ ಇಲ್ಲ.

 ಬ್ರಿಟನ್‌ ಹಾಗೂ ಈಜಿಪ್ಟ್‌ ದೇಶಗಳು ಜಂಟಿಯಾಗಿ ಆಳುತ್ತಿದ್ದ ಈ ದೇಶ 1956 ರಲ್ಲಿ ಸ್ವತಂತ್ರವಾಯಿತು. ಆ  ದರೆ ವಿವಿಧ ಸಂಸ್ಕೃತಿ, ಭಾಷೆ ಹಾಗೂ ಜನಾಂಗಗಳ ತಾಣವಾಗಿರುವ ಸುಡಾನ್‌ನ ಪಾಲಿಗೆ ರಾಜಕೀಯ ಅಸ್ಥಿರತೆ, ಸೇನಾಡಳಿತ ಹಾಗೂ ಸತತ ಅಂತಃಕಲಹ ಒಂದು ಶಾಪವಾಗಿ ಪರಿಣಮಿಸಿತು. ಇದು ಯಾವ ಹಂತಕ್ಕೆ ತಲುಪಿತು ಎಂದರೆ, 2011ರಲ್ಲಿ ದಕ್ಷಿಣ ಭಾಗ  ಪ್ರತ್ಯೇಕ ರಾಷ್ಟ್ರವಾಗಿ ಬೇರ್ಪಟ್ಟು ಸುಡಾನ್ ಎರಡು ಹೋಳಾಯಿತು.  

ಹಾಗೆ ನೋಡಿದರೆ, ದಕ್ಷಿಣ ಭಾಗದಿಂದ ಉತ್ತರಾಭಿಮುಖವಾಗಿ ಹರಿವ ಜೀವನಾಡಿ ನೈಲ್‌ ನದಿ ಎಂಬ ವರದಾನವನ್ನು ಪಡೆದ ಸುಡಾನ್‌, ನೈಸರ್ಗಿಕ ಅಂಶಗಳಿಂದ ಭೀಕರ ಕ್ಷಾಮಕ್ಕೆ ತುತ್ತಾಗುವುದು ಅಸಂಭವನೀಯ. ಅಂತಃಕಲಹಕ್ಕೆ ಸತತವಾಗಿ ಬಲಿಯಾಗುವುದು, ಅದರ ಫಲವಾಗಿ ಭೀಕರ ಕ್ಷಾಮಕ್ಕೆ ತುತ್ತಾಗುವುದು, ವಿಶ್ವ ಸಂಸ್ಥೆ ಮತ್ತು ಕೆಲವು ರಾಷ್ಟ್ರಗಳು ನೆರವು ನೀಡುವುದು; ಸುಡಾನ್‌ನ ಪಾಲಿಗೆ ಸರ್ವೇ ಸಾಮಾನ್ಯ.

90ರ ದಶಕದಲ್ಲಿ, ಆಫ್ರಿಕಾ ಕಂಡು ಕೇಳರಿಯದ ಭೀಕರ ಕ್ಷಾಮಕ್ಕೆ ಸುಡಾನ್ ತುತ್ತಾಯಿತು. ಇದಕ್ಕೆ ಕಾರಣ ತಾರಕಕ್ಕೇರಿದ ಅಲ್ಲಿನ ಅಂತರ್ಯುದ್ಧ. ಎರಡನೇ ಸುಡಾನ್‌ ಅಂತರ್ಯುದ್ಧ ಎಂದು ಕರೆಯಲಾಗುವ ಈ ಕ್ಷೋಭೆಗೆ ಮುಖ್ಯ ಕಾರಣ ಸುಡಾನ್‌ ಸರಕಾರ ಮತ್ತು ಬಂಡುಕೋರರ ನಡುವಿನ ಸುದೀರ್ಘವಾದ ಸೆಣೆಸಾಟ. ಅಪಾರ ಸಾವು ನೋವು, ಹಸಿವು ಹಾಗೂ ಅಪೌಷ್ಠಿಕತೆಗಳನ್ನು ತಂದಿಟ್ಟ ಈ ಮಾನವೀಯ ಬಿಕ್ಕಟ್ಟು ಹೆಚ್ಚು ಪರಿಣಾಮ ಬೀರಿದ್ದು ದಕ್ಷಿಣ ಮತ್ತು ಪಶ್ಚಿಮ ಸುಡಾನ್‌  ಮೇಲೆ. ಬೇಸಾಯದ ಭೂಮಿ, ಮಾರುಕಟ್ಟೆ, ಸಾಗಾಟ, ಆಹಾರ ಉತ್ಪಾದನೆ ಹಾಗೂ ಸರಬರಾಜು ವ್ಯವಸ್ಥೆಗಳನ್ನು ಅಲ್ಲೋಲಕಲ್ಲೋಲಗೊಳಿಸಿದ ಈ ನಿರಂತರ, ನಿರರ್ಥಕ ಕದನ; ಲಕ್ಷಾಂತರ ಸುಡಾನೀಯರು ಮನೆ ಮಠ ಕಳೆದುಕೊಂಡು ಗುಳೇ ಹೋಗುವಂತೆ ಮಾಡಿತು. ಇದರೊಂದಿಗೆ ಮಳೆಯು ಕಣ್ಣುಮಚ್ಚಾಲೆಯಾಡಿದ್ದು ವಿಧಿಯಾಟವಾದರೆ, ಯುದ್ಧದ ರಣನೀತಿಯ ಭಾಗವಾಗಿ, ಕೆಲವೆಡೆಗೆ ಉದ್ದೇಶಪೂರ್ವಕವಾಗಿ ಆಹಾರ ಪೂರೈಕೆಗೆ ತಡೆಯೊಡ್ಡಿದ್ದು ಅಮಾನವೀಯತೆಯ ಪರಾಕಾಷ್ಠೆಯೇ ಸರಿ. ಕ್ಷೋಭೆಯ ದೆಸೆಯಿಂದ ಕ್ಷಾಮ, ಕ್ಷಾಮದ ದೆಸೆಯಿಂದ ಕೊಲೆರಾ, ದಡಾರಂದಂತಹಾ ಕಾಯಿಲೆಗಳು ಅಲ್ಲದೆ ವಿಶೇಷವಾಗಿ ಮಕ್ಕಳು ಹಾಗೂ ವಯಸ್ಸಾದವರನ್ನು ಕಾಡಿದ ಅಪೌಷ್ಠಿಕತೆ ಈ ವಿಷವರ್ತುಲದಿಂದ ಸುಡಾನ್‌ಗೆ ಸುಡಾನೇ ವಿಲ ವಿಲ ನಲುಗಿತು. ಹಸಿವಿನಿಂದ ಕಂಗೆಟ್ಟವರು ಬದುಕು ದುಸ್ಸಾಧ್ಯವೆನಿಸಿದ ನಿರಾಶ್ರಿತ ಶಿಬಿರಗಳ‌ ಪಾಲಾದರು.

ಸಹಜವಾಗಿಯೇ ಸುಡಾನ್‌ನ ದುಸ್ಥಿತಿಗೆ ಜಗತ್ತು ಮರುಗಿತು, ಸ್ಪಂದಿಸಿತು. ವಿಶ್ವ ಸಂಸ್ಥೆ ಮತ್ತು ಮಾನವೀಯ ಕಳಕಳಿಯ ಸಂಘ ಸಂಸ್ಥೆಗಳು ಜಂಟಿಯಾಗಿ ಪ್ರಾರಂಭಿಸಿದ ʼಆಪರೇಷನ್‌ ಲೈಫ್‌ ಲೈನ್‌ ಸುಡಾನ್‌ʼ ಮುಂತಾದ ಮಾದರಿಯ ನೆರವಿನ ಹಸ್ತಗಳು ಸುಡಾನ್‌ನತ್ತ ಚಾಚಿ; ಆಹಾರ, ಔಷಧಿ ಮತ್ತಿತರ ಜೀವನಾವಶ್ಯಕ ವಸ್ತುಗಳನ್ನು ರವಾನಿಸಿ, ವಿತರಿಸಲು ಮುಂದಾದವು. ಆದರೆ ಅಲ್ಲಿನ ನಿಲ್ಲದ ಯುದ್ಧ ಇದಕ್ಕೆ ಅಲ್ಲಲ್ಲಿ ತಡೆಯೊಡ್ಡಿದ್ದರಿಂದ,ಈ ನೆರವಿನ ಕಾರ್ಯಾಚರಣೆಗೆ ಕೊಂಚ ಹಿನ್ನಡೆಯಾಯಿತು.   

  

ದುರಂತ ಕಥೆಯಾಗಿ ಹೋದ ಚಿತ್ರ–ಪತ್ರಕರ್ತ  

ಕೇವಲ 33 ವರ್ಷ ವಯಸ್ಸಿಗೇ ಜಗತ್ತಿಗೆ ವಿದಾಯ ಹೇಳಿದ, ಈ ಕಥಾನಕದ ನಾಯಕ, ಚಿತ್ರ-ಪತ್ರಕರ್ತ ಕೆವಿನ್‌ ಕಾರ್ಟರ್ (‌ Kevin Carter-ಸರಿಯಾದ ಉಚ್ಚಾರ: ಕೆವಿನ್‌ ಕಾಟ)ನ ಪೂರ್ವಾಶ್ರಮ, ಹೆಚ್ಚಿನ ಬರಹಗಾರ/ ಪತ್ರಕರ್ತರಂತೆ ʼಏನೋ ಮಾಡಲು ಹೋಗಿ ಇನ್ನೇನೋ ಮಾಡಿದʼ ಕಥೆಗಳ ಸರಮಾಲೆ. 

1960 ಸೆಪ್ಟೆಂಬರ್‌ 13ರಂದು ದಕ್ಷಿಣ ಆಫ್ರಿಕಾದ ಜೊಹನೆಸ್ಬರ್ಗ್ ನಲ್ಲಿ ಜನಿಸಿದ ಕೆವಿನ್‌ ಕಾರ್ಟರ್ ಗೆ,  ಹುಟ್ಟಿನಿಂದ ತಾನು ಬಿಳಿಯನಾದರೂ, ಬಾಲ್ಯದಲ್ಲಿಯೇ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಮೇಲೆ  ಅಸಮಾಧಾನವಿತ್ತು. ತನ್ನ ನೆರೆಯಹೊರೆಯಲ್ಲಿ ಕಾನೂನು ಸಮ್ಮತವಾಗಿಯೇ ವಾಸಿಸುತ್ತಿದ್ದ ಅಮಾಯಕ ಕರಿಯರಮೇಲೆ ಪೊಲೀಸರು ನಡೆಸುತ್ತಿದ್ದ ದೌರ್ಜನ್ಯವನ್ನು ಅವನು ಗಮನಿಸುತ್ತಿದ್ದ.  ಉದಾರವಾದಿ ಕ್ಯಾಥೋಲಿಕ್‌ಗಳಾದ ತನ್ನ ತಂದೆ ತಾಯಿ ಈ ವಿಷಯದಲ್ಲಿ ಜಡವಾಗಿದ್ದರು ಎಂದು ತನ್ನ ಅಸಮಾಧಾನವನ್ನು ಅವನು ಮುಂದೆಂದೋ ತೋಡಿಕೊಂಡಿದ್ದ.

 ಪ್ರೌಢ ಶಾಲೆಯ ನಂತರ ಶಿಕ್ಷಣಕ್ಕೆ ಗುಡ್‌ ಬೈ ಹೇಳಿ, ಫಾರ್ಮಸಿಸ್ಟ್‌ ಆದ.  ಸೇನೆಯಲ್ಲಿ ಸೇವೆಯನ್ನು ಸರ್ಕಾರ ಕಡ್ಡಾಯಗೊಳಿಸಿದ್ದರಿಂದ ಸೇನೆಯನ್ನು ಸೇರಿದ ಅವನು, ಇನ್ಫಾಂಟರಿಯಿಂದ ಪಾರಾಗಲು ವಾಯುದಳ ಸೇರಿ ಅದರಲ್ಲಿ 4 ವರ್ಷ ಸೇವೆ ಸಲ್ಲಿಸಿದ. 1980ರಲ್ಲಿ, ಮೆಸ್-ಹಾಲ್‌ನಲ್ಲಿ ಓರ್ವ ಕರಿಯ ವೈಟರ್‌ (ಮಾಣಿ)ನನ್ನು ಕೆಲವರು ಹೀಯಾಳಿಸುತ್ತಿದ್ದುದನ್ನು ಕಂಡು ಅವನ ಸಮರ್ಥನೆಗೆ ಮುಂದಾಗಿ ಇತರ ಸೈನಿಕರಿಂದ ಚೆನ್ನಾಗಿ ಒದೆ ತಿಂದ. ತರುವಾಯ, ರಜೆ ಹಾಕದೆ ಕರ್ತವ್ಯಕ್ಕೆ ಗೈರು ಹಾಜರಾಗಿ, ಡೇವಿಡ್‌ ಎಂಬ ಹೆಸರಿನಲ್ಲಿ, ರೇಡಿಯೋ ಡಿಸ್ಕ್-‌ ಜಾಕಿಯಾಗಿ ಹೊಸ ಅವತಾರವೆತ್ತಿದ! ಇದಂತೂ ಅವನಿಗೆ ತಾನು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ತ್ರಾಸದಾಯಕ ಅನಿಸಿತು. ತಡ ಮಾಡದೆ, ಅಗತ್ಯದಂತೆ ಸೇನೆಯಲ್ಲಿ ತನ್ನ ಬಾಕಿ ಇರುವ ಸೇವಾಅವಧಿಯನ್ನು ಮುಂದುರಿಸಲು ನಿರ್ಧರಿಸಿದ.

ಆದರೆ ಎಲ್ಲವೂ ಪೂರ್ವನಿರ್ಧರಿತ ಎಂಬಂತೆ ಆ ಗಳಿಗೆ ಬಂತು! 1983ರಲ್ಲಿ ಪ್ರೆಟೋರಿಯಾದ ಚರ್ಚ್‌ ಬೀದಿಯಲ್ಲಿ ಸಂಭವಿಸಿದ ಭಿಕರ ಬಾಂಬ್‌ ಸ್ಫೋಟವನ್ನು ಕಣ್ಣಾರೆ ಕಂಡ ಅವನು, ಓರ್ವ ಚಿತ್ರ-ಪತ್ರಕರ್ತನಾಗಲು ನಿರ್ಧರಿಸಿದ. ಅದೇ ಅವನ ದೆಸೆಯನ್ನು ಬದಲಿಸಿತು. ಅದೇ ಅವನ ಬಾಳಿಗೆ ಮುಳುವಾಯಿತು.

ಮೊದಲಿಗೆ ಜೊಹನೆಸ್ಬರ್ಗ್‌ನ ಒಂದು ಫೊಟೋಗ್ರಾಫಿಕ್ಸ್‌ ಸರಬರಾಜು ಮಳಿಗೆಯಲ್ಲಿ, ಬಳಿಕ ‘ಜೊಹನೆಸ್ಬರ್ಗ್‌ ಸಂಡೇ ಎಕ್ಸ್‌ ಪ್ರೆಸ್‌’ ನಲ್ಲಿ ಚಿತ್ರ-ಪತ್ರಕರ್ತನಾಗಿ ದುಡಿದವ ‘ಜೊಹನೆಸ್ಬರ್ಗ್‌ ಸ್ಟಾರ್‌’ ಪತ್ರಿಕೆಯನ್ನು ಸೇರಿ, ವರ್ಣಭೇದ ನೀತಿಯ ಬರ್ಬರತೆಯನ್ನು ಬಯಲಿಗೆಳಲು ಮುಂದಾದ.

ಅದು ಎಂಭತ್ತರ ದಶಕ. ಅಂದು ಕರಿಯರೇ ವಾಸಿಸುತ್ತಿದ್ದ ಪಟ್ಟಣಗಳಲ್ಲಿ, ಬಿಳಿಯರ ಜೊತೆ ಶಾಮೀಲಾಗುತ್ತಿದ್ದ ವಿಶ್ವಾಸ ಘಾತುಕ ಕರಿಯರನ್ನು ಪತ್ತೆಹಚ್ಚಿದ ತಕ್ಷಣ ವಿಚಾರಣೆ ನಡೆಸದೆ  ಕುಪ್ರಸಿದ್ಧವೆನಿಸಿದ್ದ ʼನೆಕ್ಲೇಸಿಂಗ್‌ʼ (ಪೆಟ್ರೋಲ್‌ ನಲ್ಲಿ ನೆನೆಸಿದ ರಬ್ಬರ್‌ ಟಯರ್‌ ನ್ನು, ತಪ್ಪಿತಸ್ಥರ ತೋಳುಗಳು ಮತ್ತು ವಕ್ಷಸ್ಥಲದ ಮೂಲಕ ತುರುಕಿ, ಅದಕ್ಕೆ ಬೆಂಕಿಹಚ್ಚುವ ಪೈಶಾಚಿಕ ಕೃತ್ಯ) ಮೂಲಕ  ಸಾರ್ವಜನಿಕರ ಸಮ್ಮುಖದಲ್ಲಿ ವಧಿಸಲಾಗುತ್ತಿತ್ತು. ಈ ʼನೆಕ್ಲೇಸಿಂಗ್‌ʼನ್ನು ಮೊತ್ತಮೊದಲಿಗೆ ಕ್ಯಾಮರಾದಲ್ಲಿ ಸೆರೆಹಿಡಿದ ಖ್ಯಾತಿ ಕಾರ್ಟರ್‌ ಗೆ ಸಲ್ಲುತ್ತದೆ.   

   ಛಾಯಾಗ್ರಾಹಕನ ʼಹಸಿವುʼ ತಣಿಸಿದ ಐತಿಹಾಸಿಕ ಕ್ಷಣ

ವಿಶ್ವ ಸಂಸ್ಥೆಯು, ವಿಶ್ವ ಸಂಸ್ಥೆ ಮತ್ತು ಮಾನವೀಯ ಕಳಕಳಿಯ ಸಂಘ ಸಂಸ್ಥೆಗಳು ಜಂಟಿಯಾಗಿ ಪ್ರಾರಂಭಿಸಿದ ʼಆಪರೇಷನ್‌ ಲೈಫ್‌ ಲೈನ್‌ ಸುಡಾನ್‌ʼ ಮೂಲಕ ಸುಡಾನ್ನ ನೆರವಿಗೆ ಮುಂದಾದದ್ದು ನಿಜ. ಆದರೆ ನೆರವು ನೀಡಲು ಬೇಕಾದ  ಹಣಕಾಸಿನ ಕೊರತೆಯನ್ನು ಅದು ಎದುರಿಸುತ್ತಿತ್ತು ಅನ್ನುವುದು ಕೂಡಾ ಅಷ್ಟೇ ನಿಜ! ಹೀಗಾಗಿ ದೇಣಿಗೆ ನೀಡುವ ಸಂಘ ಸಂಸ್ಥೆಗಳಿಂದ ಧನಸಹಾಯ ಪಡೆಯುವುದನ್ನು ಮುಂದುವರಿಸಲು, ಸುಡಾನ್ನ ಕ್ಷಾಮದ ಕರಾಳತೆಯನ್ನು ಅವುಗಳಿಗೆ  ಮನದಟ್ಟು ಮಾಡುವುದು ವಿಶ್ವ ಸಂಸ್ಥೆಗೆ ಅನಿವಾರ್ಯವಾಗಿತ್ತು ಮತ್ತು ಅದಕ್ಕೆ ಸುಡಾನ್‌ನ ಕ್ಷಾಮದ ಕರಾಳತೆಗೆ ಹೆಚ್ಚು ಪ್ರಚಾರ ನೀಡುವ, ಅದನ್ನು ಪರಣಾಮಕಾರಿಯಾಗಿ ಬಿಂಬಿಸುವ ಅಗತ್ಯವಿತ್ತು. ಈ ಗುರುತರವಾದ ಕಾರ್ಯಕ್ಕೆ ಅದು, ʼನೆಕ್ಲೇಸಿಂಗ್‌ʼ ಛಾಯಾಚಿತ್ರಗಳಿಂದ ಹೆಸರು ಮಾಡಿದ್ದ ಕಾರ್ಟರ್‌ ನನ್ನು ಆಯ್ಕೆ ಮಾಡಿದ್ದು ಸೂಕ್ತವಾಗಿತ್ತು.

ಅಂತಯೇ ಕಾರ್ಟರ್,‌  ಜುವಾಂವ್‌ ಸಿಲ್ವ ಎಂಬ ಪತ್ರಕರ್ತನ ಸಲಹೆಯ ಮೇರೆಗೆ ಅವನ ಜೊತೆಯಲ್ಲಿ ಸುಡಾನ್‌ ಪ್ರವೇಶಿಸಿದ.

ಆ ಐತಿಹಾಸಿಕ ದಿನ ಸುಡಾನ್‌ನ ಅಯೋಡಾ ಪಟ್ಟಣದಲ್ಲಿ ವಿಶ್ವ ಸಂಸ್ಥೆ ತೆರೆದ ಗಂಜಿ ಕೇಂದ್ರ ಎಂದಿನಂತೆ ಹಸಿದವರಿಂದ ಗಿಜಿಗುಟ್ಟುತ್ತಿದೆ. ಅಪಾರ ಹಸಿವು, ಅಪೌಷ್ಠಿಕತೆಯಿಂದ ಕಂಗಾಲಾಗಿ, ಜೀವಂತ ಅಸ್ಥಿಪಂಜರವಾಗಿ ಹೋಗಿದ್ದ ಓರ್ವ ಕಂದಮ್ಮ ಆ ಗಂಜಿ ಕೇಂದ್ರದತ್ತ ಸಾಗಲು ಪ್ರಯತ್ನಿಸಿ ತೆವಳುತ್ತಾ  ಬಿದ್ದಂತಿದೆ. ಈ ಹೃದಯವಿದ್ರಾವಕ ದೃಶ್ಯದ ಕರಾಳತೆಗೆ ಕಳೆಗಟ್ಟುವಂತೆ, ಅವಳ ಹಿಂದೆ ಒಂದು ರಣಹದ್ದು ಹೊಂಚು ಹಾಕಿ ಕುಳಿತಿದೆ. ಅಷ್ಟಕ್ಕೂ ಅದರ ನಿತ್ಯದೂಟಕ್ಕೆ ಬೇಕಾದದ್ದು ಕೊಳೆತ ಮಾಂಸ! ಹೀಗಾಗಿ ಅದು ಆ ಹುಡುಗಿಯ ಸಾವನ್ನು ಬಯಸುತ್ತಾ ಸದ್ದಿಲ್ಲದೆ ತಪಸ್ಸು ಗೈಯುತ್ತಿದೆ.

ಈ ಕರ್ಣಕಠೋರ ದೃಶ್ಯವನ್ನು ಕಣ್ಣಾರೆ ಕಂಡ ಕಾರ್ಟರ್‌ನಲ್ಲಿ ಅಂತರ್ಗತನಾಗಿದ್ದ ಛಾಯಾಗ್ರಾಹಕ ತಕ್ಷಣ ಚುರುಕಾಗುತ್ತಾನೆ. ಅವನು ಈ ಅಭೂತಪೂರ್ವ ಕ್ಷಣವನ್ನು ಸೆರೆಹಿಡಿಯುತ್ತಾನೆ. ಕ್ಯಾಮರಾದ ಕಣ್ಣು ರೆಪ್ಪೆ ತೆರೆದು ಮುಚ್ಚುತ್ತಿದ್ದಂತೆ ಅವನು ಇತಿಹಾಸ ಸೃಷ್ಟಿಸುತ್ತಾನೆ. ʼಸಾವಿರ ಪದಗಳಿಗೆ ಸರಿದೂಗುವಂತಹ ಆ ಒಂದು ಛಾಯಾಚಿತ್ರʼ ʼ ದಿ ನ್ಯೂಯಾರ್ಕ್‌ ಟೈಂ

ಸ್ʼ ನಲ್ಲಿ 1993ರ ಮಾರ್ಚ್‌ 26ನೇ ತಾರೀಖು ಪ್ರಕಟವಾಗುತ್ತದೆ ಮತ್ತು ಸಮಸ್ತ ವಿಶ್ವದ ಕಣ್ಣು ತೆರೆಸುತ್ತದೆ. ʼರಣಹದ್ದು ಹಾಗೂ ಪುಟ್ಟ ಹುಡುಗಿʼ ( ದಿ ವಲ್ಚರ್‌ ಆಂಡ್‌ ದಿ ಲಿಟ್ಲ್‌ ಗರ್ಲ್‌)  

 ಎಂದೇ ವಿಶ್ವ ವಿಖ್ಯಾತವಾದ ಆ ಛಾಯಾಚಿತ್ರದಿಂದ ಇಡೀ ವಿಶ್ವಕ್ಕೆ ಸುಡಾನ್‌ನ ಕ್ಷಾಮದ ತೀವ್ರತೆಯ ಅರಿವಾಗುತ್ತದೆ. ದಿಗ್ಭ್ರಮೆ, ಅನುಕಂಪ, ಆಕ್ರೋಶ ಜಗತ್ತಿನೆಲ್ಲೆಡೆ ಭುಗಿಲೇಳುತ್ತದೆ. ಆ ದಿನ ಪತ್ರಿಕೆಯನ್ನು ಸಂಪರ್ಕಿಸಿ ಆ ಬಾಲಕಿಯ ಅವಸ್ಥೆ ಏನಾಯಿತು ಎಂದು ವಿಚಾರಿಸಿದವರು ನೂರಾರು. ʼಕಾರ್ಟರ್‌ ಪ್ರಕಾರ ಆ ರಣಹದ್ದನ್ನು ಓಡಿಸಲಾಯಿತು ಮತ್ತು ಅವಳು ಮುಂದೆ ಸಾಗಿದಳುʼ ಎಂದು ಹೇಳಿ ಆ ದಿನಪತ್ರಿಕೆ ಅವರನ್ನು ಸಮಾಧಾನಪಡಿಸಿತು. 1993ರಲ್ಲಿ ಆ ಛಾಯಾಚಿತ್ರ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿಗೆ ಭಾಜನವಾಯಿತು ಮತ್ತು ಕೆವಿನ್‌ ಕಾರ್ಟರ್‌ ಓರ್ವ ಸಿಲೆಬ್ರಿಟಿ ಫೊಟೋ‌ ಜರ್ನಲಿಸ್ಟ್‌ ಪಟ್ಟವನ್ನೇರಿದ, ವಿಶ್ವ ವಿಖ್ಯಾತನಾದ.

ಮೃತ್ಯುಪಾಶವಾದ ಛಾಯಾಚಿತ್ರ  

ಕುರುಕ್ಷೇತ್ರದಲ್ಲಿ ʼನನ್ನವರ ವಿರುದ್ಧವೇ ನಾನು ಹೇಗೆ ಹೋರಾಡಲಿ?ʼ ಎಂಬ ಸಂದಿಗ್ಧವನ್ನು ಎದುರಿಸಿದ  ಅರ್ಜುನನಿಗೂ ʼಮೊದಲು ಮಾನವ, ಅನಂತರ ಚಿತ್ರ-ಪತ್ರಕರ್ತನಾದ ತನ್ನ ಮೊದಲ ಕರ್ತವ್ಯವೇನು?ʼ ಎಂಬ ಜಿಜ್ಞಾಸೆಗೊಳಗಾದ ಕಾರ್ಟರ್‌ಗೂ ಹೆಚ್ಚು ವ್ಯತ್ಯಾಸವೇನಿಲ್ಲ. ಆದರೆ ಅವನಿಗೆ ಪರಿಹಾರ ಸೂಚಿಸಲು ಅಲ್ಲಿ ಸಾರಥಿಯಾಗಿ ಶ್ರೀಕೃಷ್ಣ ಪರಮಾತ್ಮ ಇರಲಿಲ್ಲ!  

ಹಿಂದೆ ನೋಡಿದರೆ ಯಮದೂತನಂತೆ ಹೆಜ್ಜೆಯಿಡುತ್ತಿರುವ ಹಸಿದ ರಣಹದ್ದು. ಮುಂದೆ ನೋಡಿದರೆ ಹಸಿವು ನೀಗಿಸಿ ಜೀವದಾನ ಮಾಡಬಲ್ಲ ಸಂಜೀವಿನಿ ಗಂಜಿಕೇಂದ್ರ, ಸ್ವಲ್ಪ ದೂರದಲ್ಲಿ. ನಡುವೆ ನೋಡಿದರೆ ಎಲುಬುಗೂಡಿಗೆ ಕುಟುಕು ಜೀವಬಂತು ಅನ್ನುವಂತೆ ಏಳುತ್ತಾ ಬೀಳುತ್ತಾ ಸಾಗುತ್ತಿದ್ದ ಬಡಪಾಯಿ ಪುಟ್ಟ ಬಾಲಕಿ.  

ಎದೆ ಝಲ್ಲೆನಿಸುವ ಆ ದೃಶ್ಯವನ್ನು ಕಂಡು ಅವನೇನೂ ಸುಮ್ಮನಿರಲಿಲ್ಲ. ಆ ರಣಹದ್ದನ್ನು ಅವನು ಅಲ್ಲಿಂದ ಓಡಿಸಿದ್ದನಂತೆ. ( ಅದರ ಅಗತ್ಯವಿರಲಿಲ್ಲ. ರಣಹದ್ದುಗಳು ವನ್ಯಮೃಗಗಳಂತೆ ಬೇಟೆಯಾಡುವುದಿಲ್ಲ. ಅವುಗಳ ಪಾಲಿಗೆ ಕೊಳೆತ ಮಾಂಸವೇ ಪಂಚ ಭಕ್ಷ್ಯ ಪರಮಾನ್ನ. ಮಾತ್ರವಲ್ಲ ಗುಂಪಿನಲ್ಲಿದ್ದಾಗ ಅವುಗಳಲ್ಲಿ ಜೋರಾಗಿ ಹಸಿದವರಿಗೆ ಆಹಾರದಲ್ಲಿ ಆದ್ಯತೆ! ಮಾನವರಂತೆ ಅವುಗಳು ಉಚಿತ ಅನ್ನಕ್ಕಾಗಿ ಕಚ್ಚಾಡುವುದಿಲ್ಲ). ರಣಹದ್ದನ್ನು ಅಲ್ಲಿಂದ ಓಡಿಸಿದ್ದರಿಂದ, ಆ ಸನ್ನಿವೇಶದ ಭೀಕರತೆ ಕೊಂಚ ಕಡಿಮೆಯಾಯಿತು, ಅಷ್ಟೇ.

ಆದರೆ ರಣಹದ್ದಿಗಿಂತಲೂ ಕ್ರೂರವಾದ ಮಾನವ ಮೃಗಗಳು ಅವನನ್ನು ನೆಮ್ಮದಿಯಾಗಿ ಬಾಳಲು ಬಿಡಲಿಲ್ಲ. ಅವರು ಅವನ ಅಂತರಾಳವನ್ನು , ಮನಸ್ಸಾಕ್ಷಿಯನ್ನು ಕ್ರೂರವಾಗಿ ಕುಕ್ಕಿದರು. ʼಹಸಿದು ಹೈರಾಣಾಗಿದ್ದ ಆ ಬಾಲಕಿಯನ್ನು ಗಂಜಿ ಕೇಂದ್ರದತ್ತ ಕೊಂಡೊಯ್ಯುವ ಬದಲು ಅವನು ಆ ಹೃದಯ ವಿದ್ರಾವಕ ದೃಶ್ಯದ  ಫೊಟೋ ಕ್ಲಿಕ್ಕಿಸುತ್ತಾ ಉಳಿದನಲ್ಲ?ʼ ಎಂಬ ಕೂಗು ಎಲ್ಲಡೆ ಕೇಳಿ ಬಂತು. ಅವನನ್ನು ಟೀಕಿಸಿದವರ, ನಿಂದಿಸಿದವರ, ಜರೆದವರ ಸಂಖ್ಯೆ ಕಡಿಮೆಯೇನಲ್ಲ. (ಅವರಲ್ಲಿ ಕೆಲವರು ಅವನ ಯಶಸ್ಸನ್ನು ಕಂಡು ಕರುಬಿದವರು ಇರಬಹುದು).

ʼಪತ್ರಕರ್ತರಿಗೆ ರೋಗ ತಗಲುವ ಅಪಾಯ ಇರುವುದರಿಂದ ಯಾರೂ ಕೂಡಾ ಸುಡಾನ್‌ನ ಕ್ಷಾಮ ಪೀಡಿತರನ್ನು ಸ್ಪರ್ಶಿಸಬಾರದು ಎಂದು ನಮಗೆ ನಿರ್ದೇಶಿಸಲಾಗಿತ್ತು. ಮಾತ್ರವಲ್ಲ ಮುಂದೆ ಆ ಮಗು ತಾನಾಗಿಯೇ ಎದ್ದು ಗಂಜಿ ಕೇಂದ್ರವನ್ನು ತಲುಪಿದಳು ಕೂಡಾʼ ಎಂಬ ಅವನ ವಿವರಣೆ; ಹೀಯಾಳಿಕೆಗಳ  ಹೇಶಾವರದ ನಡುವೆ ಕ್ಷೀಣವಾಗಿ ಹೋಯಿತು.

ನಡೆಯಬಾರದ್ದು ನಡೆದ ಮೇಲೆ, 2011ರಲ್ಲಿ ಕೆಲವು ಸತ್ಯಾಂಶಗಳು ಬಯಲಾದವು. ʼಅಲ್ಲಿ ಹಸಿವಿನಿಂದ ಬಿದ್ದವಳು ಬಾಲಕಿ ಅಲ್ಲ, ಬದಲಾಗಿ ಕೋಂಗ್‌ ನ್ಯಾಂಗ್‌ ಎಂಬ ಹೆಸರಿನ ಬಾಲಕ ಮತ್ತು ವಿಶ್ವ ಸಂಸ್ಥೆಯ ಗಂಜಿ ಕೇಂದ್ರದವರು ಅವನನ್ನು ಆಮೇಲೆ ಚೆನ್ನಾಗಿ ನೋಡಿಕೊಂಡರು. ಅವನು 2007ರಲ್ಲಿ ಜ್ವರದಿಂದ ಸಾವನ್ನಪ್ಪಿದʼ ಎಂಬ ವಿವರಗಳನ್ನು ಅವಳ ತಂದೆ ಬಹಿರಂಗಪಡಿಸಿದ.

ಮಾನಸಿಕ ʼಚಿತ್ರʼ ಹಿಂಸೆಗೆ ಬಲಿಯಾದ ಚಿತ್ರ-ಪತ್ರಕರ್ತ

ಮಾನವಪರ ಕಾಳಜಿಯಿದ್ದ ಸೂಕ್ಷ್ಮ ಮನಸ್ಸಿನ ಕಾರ್ಟರ್‌ ತನ್ನ ಮೇಲಿನ ಟೀಕೆ, ಆಪಾದನೆ ಹಾಗೂ ನಿಂದನೆಗಳ ಭಾರದಿಂದ ಕುಗ್ಗಿ ಹೋದ. ತಾನು ಸೆರೆಹಿಡಿದ ಚಿತ್ರಕ್ಕೆ ಸೆರೆಯಾಳಾಗಿ ನರಳಿದ. “ ನಾನು ಅವಳಿಗೆ ಸಹಾಯ ಮಾಡಬೇಕಿತ್ತು. ನನ್ನ ಮನಸ್ಸಾಕ್ಷಿ ನನ್ನನ್ನು ಶಾಂತಿಯಿಂದಿರಲು ಬಿಡುತ್ತಿಲ್ಲ” ಎಂದು ಅವನು ಹಲುಬಿದ್ದ.  ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಸ್ಟಾರ್‌ ಚಿತ್ರ-ಪತ್ರಕರ್ತನಾದವನ ಬದುಕು ವರ್ಣಮಯ ಚಲನಚಿತ್ರವಾಗಬೇಕಿತ್ತು. ಅದರೆ ಅದು ಯಾರೂ ಊಹಿಸದಿದ್ದ ತಿರುವಿನೊಂದಿಗೆ ಗಾಢಾಂಧಕಾರದಲ್ಲಿ ಕೊನೆಯಾಯಿತು!

ಪುಲಿಟ್ಜರ್‌ ಪ್ರಶಸ್ತಿಗೆ ಭಾಜನಾಗಿ ಕೇವಲ ನಾಲ್ಕು ತಿಂಗಳೊಳಗೆ, 27 ಜುಲೈ 1994ರಂದು, ಕಾರ್ಬನ್‌ ಮೋನೋಕ್ಸೈಡ್‌ ವಿಷಾನಿಲ ಸೇವಿಸಿ ಇಹಲೋಕದ ಯಾತ್ರೆ ಮುಗಿಸಿದಾಗ ಅವನ ವಯಸ್ಸು ಕೇವಲ 33 ವರ್ಷ.

ಅಜರಾಮರನಾದ ಕಾರ್ಟರ್‌

ಕಾರ್ಟರ್ ಸೆರೆಹಿಡಿದ ಚಿತ್ರ, ಮಾಧ್ಯಮ ವೃತ್ತಿಯವರ ಆದ್ಯತೆಗಳು, ನೈತಿಕತೆ ಹಾಗೂ ಮೌಲ್ಯಗಳ ಕುರಿತು ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿತು. ಅಕ್ಷರಗಳಲಿ, ಸ್ವರಗಳಲಿ, ಚಿತ್ರ ಮಂದಿರದ ಪರದೆಗಳಲಿ ಪುನರ್ಜನ್ಮ ಪಡೆದ ಅವನು ಅಜರಾಮರನಾದ.

ಮ್ಯಾನಿಕ್‌ ಸ್ಟ್ರೀಟ್‌ ಪ್ರೀಚರ್ಸ್‌ ಎಂಬ ರಾಖ್‌ ಬ್ಯಾಂಡ್‌ 1996ರಲ್ಲಿ ಹೊರತಂದ ತನ್ನ 4ನೇ ಹಾಡುಗಳ ಆಲ್ಬಂ ʼಎವೆರಿತಿಂಗ್‌ ಮಸ್ಟ್‌ ಗೋʼ ನಲ್ಲಿರುವ ʼಕೆವಿನ್ ಕಾರ್ಟರ್ʼ ಹಾಡಿಗೆ ಸ್ಫೂರ್ತಿ, ಅವನ ಜೀವನಗಾಥೆ. 

ಅಮೇರಿಕಾದ ಹೆವಿ ಮೆಟಲ್‌ ಬ್ಯಾಂಡ್‌ ʼಸಾವಾಟೇಜ್ʼ‌ 2001ರಲ್ಲಿ ಹೊರತಂದ ʼಪೋಯೆಟ್ಸ್ ಆಂಡ್‌ ಮ್ಯಾಡ್‌ ಮೆನ್‌ʼ ಗೆ ಕೂಡಾ ಕೆವಿನ್ ಕಾರ್ಟರ್‌ ನ ಪ್ರಕರಣವೇ  ಸ್ಫೂರ್ತಿ.

ʼಹೌಸ್‌ ಆಫ್‌ ಲೀವ್ಸ್‌ʼ ಎಂಬ ಪುಸ್ತಕದ ಮುಖ್ಯ ಪಾತ್ರ ಚಿತ್ರ-ಪತ್ರಕರ್ತ ವಿಲ್‌ ನಾವಿಡ್ಸನ್‌ ಇದೇ  ರೀತಿಯ ತುಮುಲವನ್ನು ಎದುರಿಸುತ್ತಾನೆ ಮತ್ತು ಅದು ಕಾರ್ಟರ್‌ ನ ಪ್ರಕರಣದಿಂದಲೇ ಪ್ರೇರಿತವಾದದ್ದುಎಂದು ಸ್ಪಷ್ಟಪಡಿಸಲಾಗಿದೆ.

ʼದ ಬ್ಯಾಂಗ್‌ ಬ್ಯಾಂಗ್‌ ಕ್ಲಬ್:‌ ಸ್ನ್ಯಾಪ್‌ ಶಾಟ್ಸ್‌ ಫ್ರಂ ಅ ಹಿಡನ್‌ ವಾರ್‌ʼ ಎಂಬ ಕೃತಿಯ (2010ರಲ್ಲಿ ಬಿಡುಗಡೆಯಾದ) ಬೆಳ್ಳಿತೆರೆ ಆವೃತ್ತಿಯಲ್ಲಿ ಕಾರ್ಟರ್ ಒಂದು ಪಾತ್ರವಾಗಿ ಮೂಡಿಬರುತ್ತಾನೆ.

ಕ್ಷಾಮ ಬಲಿಪಡೆದ ಪ್ರತಿಭೆ

“ ನನ್ನನ್ನು ದಯವಿಟ್ಟು ಕ್ಷಮಿಸಿ. ಸಂತಸ ಅಸ್ತಿತ್ವದಲ್ಲೇ ಇಲ್ಲ ಅನ್ನುವಷ್ಟರ ಮಟ್ಟಿಗೆ ನೋವು ಅದರ ಮೇಲೆ ಸವಾರಿ ಮಾಡುತ್ತದೆ. ಖಿನ್ನನಾಗಿದ್ದೇನೆ… ಫೋನ್‌ ಇಲ್ಲ… ಮನೆಬಾಡಿಗೆಗೆ… ಮಕ್ಕಳ ಪೋಷಣೆಗೆ… ಸಾಲ ತೀರಿಸಲು…ಹಣ ( ʼಇಲ್ಲʼ ಎಂಬ ಅರ್ಥದಲ್ಲಿ)!!! ಹಸಿದ ಅಥವಾ ಗಾಯಗೊಂಡ ಮಕ್ಕಳು, ಕೊಲೆಗಳು ಹಾಗೂ ಶವಗಳು ಹಾಗೂ ಕೋಪತಾಪಗಳು ಹಾಗೂ ವೇದನೆಗಳು, ಮನಬಂದಂತೆ ಗುಂಡಿಕ್ಕುವ ( ಹೆಚ್ಚಾಗಿ) ಪೊಲೀಸರು ಮತ್ತು ವಧೆಗಾಗಿ ನಿಯುಕ್ತರಾದವರು ಮಾಡುವ ಕೊಲೆಗಳು…ಇವೆಲ್ಲದರ ಪ್ರಖರ ನೆನಪುಗಳು ನನ್ನನ್ನು ಕಾಡುತ್ತಿವೆ. ಅದೃಷ್ಟವಿದ್ದಲ್ಲಿ,  ನಾನು ಕೇನ್‌ ನೊಂದಿಗೆ ( ಕೆಲವೇ ದಿಗಳ ಹಿಂದೆ ಅಸುನೀಗಿದ್ದ ಅವನ ಗೆಳೆಯ)  ಜೊತೆಯಾಗಲು ಹೋಗಿದ್ದೇನೆ.”

ಇದು ಕೆವಿನ್‌ ಕಾರ್ಟರ್‌ ನ ಡೆತ್‌ ನೋಟ್.‌ ಬಹುಶಃ ಅವನು ತನ್ನ ವೃತ್ತಿ ಜೀವನದ ಬಗೆಗೆ ಒಟ್ಟಾರೆ ರೋಸಿ ಹೋಗಿದ್ದ. ಅವನ ಆತ್ಮಹತ್ಯೆಗೆ, ಕೇವಲ ಆ ಚಿತ್ರದ ತರುವಾಯ ಅವನನ್ನು ಕಾಡಿದ ಅಪರಾಧಿ ಪ್ರಜ್ಞೆ ಮಾತ್ರ ಕಾರಣ ಅನ್ನುವಂತಿಲ್ಲ. ಆದರೆ ಹೆಚ್ಚುಕಡಿಮೆ ಅದೇ ಕಾರಣ ಎಂದು ಬಿಂಬಿಸಲಾಗಿದೆ.

ಕೆವಿನ್‌ ಕಾರ್ಟರ್‌ ಮೂಲಭೂತವಾಗಿ ಯಾರು? ಓರ್ವ ಪ್ರತಿಭಾವಂತ ಚಿತ್ರ-ಪತ್ರಕರ್ತನೇ? ಉಗ್ರ ಮಾನವತಾವಾದಿಯೇ? ಅವನೊಳಗೆ ಅಂತರ್ಗತರಾಗಿದ್ದ ಈ ಇಬ್ಬರ ನಡುವಿನ ತಿಕ್ಕಾಟಕ್ಕೆ ಅವನು ಬಲಿಯಾದನೆ?

ಸುಡಾನ್‌ ನ ಮಾನವ ನಿರ್ಮಿತ ಭೀಕರ ಕ್ಷಾಮ ಸಾವಿರಾರು ಅಮಾಯಕರ ಬಲಿ ಪಡೆಯಿತು. ಅದು ಪರೋಕ್ಷವಾಗಿ ಬಲಿ ಪಡೆದ ಪ್ರತಿಭಾವಂತ ಚಿತ್ರ-ಪತ್ರಕರ್ತ ಕೆವಿನ್‌ ಕಾರ್ಟರ್‌ ನ ಚಿತ್ರ, ಮನುಕುಲದ ಸ್ಮೃತಿಪಟಲದಲ್ಲಿ ಚಿರಾಯುವಾಯಿತು.    

Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ -ಆಗಸ್ಟ್‌ 2025ರ ತುಷಾರ ದಲ್ಲಿ ಪ್ರಕಟವಾಗಿತ್ತು     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...