Skip to main content

 

  ಒಂದು ಅಜ್ಜಿ ಕಥೆ

ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ?

ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ

ಬಿಡುವಿರದು ಬಣಗು ಚಿಂತೆಗೆ, ಬುತ್ತಿ ಹಂಗಿರದು

ಕಡಿದಲ್ಲವರ್ಗೆ ಬಾಳ್- ಮಂಕು ತಿಮ್ಮ

 

 

ಬಸವನ ಗುಡಿಯಮಂಕು ತಿಮ್ಮ (ಡಿವಿಜಿ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ. ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು. ಸಂಬಳದಾರರು, ದಿನಕೂಲಿಗೆ ದುಡಿಯುವವರು, ‘ಟೈಮ್ ಪಾಸ್ ಮಾಡುವುದು ಹೇಗೆ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು, ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗತ್ತÀ ಮುಖಮಾಡುವ ಹೊತ್ತು. ‘ತಡ ಮಾಡಬಾರದು ಎಂದು ಲಗುಬಗೆಯಿಂದ ಹೊರಟ ನನ್ನನ್ನು, ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ, ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ, ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು. ಹೆಜ್ಜೆಗಳು ನಿಧಾನವಾದವು.

ಹೋಟೆಲ್ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ, ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು. ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ. ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ. ಹೊತ್ತಲ್ಲಿ, ಇಳಿವಯಸ್ಸಿನಲ್ಲಿ ಇನ್ನೂ ತನ್ನ ಹೂಗಳ ಗಿರಾಕಿಗಳಿಗೆ ಕಾಯುತ್ತಾ ಕುಳಿತ ಮುದುಕಿ ನನಗೊಂದು ವಿಸ್ಮಯದಂತೆ ಗೋಚರಿಸಿದಳು. ಮಾತ್ರವಲ್ಲ ಅವಳನ್ನು ಕಡೆಗಣಿಸಿ ನಡೆದೆ ಎಂಬ ಅಪರಾಧಿ ಪ್ರಜ್ಞೆ ನನ್ನ ಚಿತ್ತದ ಮೂಲೆಯನ್ನು ತಿವಿಯಲು ಶುರು ಮಾಡಿತು. ಅವಳು ಮಾರುತ್ತಿದ್ದ ಹೂ ಕೊಂಡುಕೊಳ್ಳದೆ ತಪ್ಪು ಮಾಡಿದೆ ಎಂದು ಅನಿಸತೊಡಗಿತು. ಸರಿ. ಯೋಚಿಸುತ್ತಾ ಅಲ್ಲೇ ನಿಂತೆ.

ವಾಪಾಸು ಅವಳತ್ತ ನಡೆದರೆ ಇನ್ನೂ ಸಮಯ ಮೀರುತ್ತದೆ. ಮನೆಯಲ್ಲಿ ರಾತ್ರಿಯ ಊಟಕ್ಕೆ ತಡವಾಗುತ್ತದೆ. ಕಟ್ಟಿಸಿಕೊಂಡ ಹೋಟೆಲ್ ತಿಂಡಿ ತಣ್ಣಗಾಗುತ್ತದೆ. ಬಿಸಿ ಬಿಸಿ ತಿಂಡಿಯನ್ನು ಮಗನ ಕೈಗಿಡುವ ಸಂತೃಪ್ತಿ ಇಲ್ಲದಾಗುತ್ತದೆ. ಹಾಗೆಂದು ಅವಳನ್ನು ಕಡೆಗಣಿಸಿ ನಡೆದರೆ, ‘ಅಪರಾಧಿ ನಾನಲ್ಲ ಅನ್ನುವ ಹಾಗಿಲ್ಲ. ‘ಪಾಪೋಹಂ ಪಾಪ ಕರ್ಮಾಹಂ. . .’ ಜಪಿಸಬೇಕಾಗುತ್ತದೆ. ಏನು ಮಾಡಲಿ?

ಎರಡು ಆಯ್ಕೆಗಳ ನಡುವಿನ ಸಂದಿಗ್ಧದಲಿ ಸಿಲುಕಿದವನಿಗೆ ದೇವರೇ ದಾರಿ ತೋರಿದ. ಫೂಟ್ ಪಾತ್ ಮೇಲೆ ದಾಪುಗಾಲು ಹಾಕುತ್ತಿದ್ದ ನನ್ನನ್ನು, ಪ್ರಸಿದ್ಧ ಮಳಿಗೆಯೊಂದರ ಸೆಕ್ಯೂರಿಟಿ ಗಾರ್ಡ್ ತನ್ನ ಕೈ ಅಡ್ಡ ಹಿಡಿದು ತಡೆದ. ‘ಎಲಾ ಇವನ! ಫೂಟ್ ಪಾತ್ ಮೇಲೂ ಟ್ರಾಫಿಕ್ ಕಂಟ್ರೋಲ್ ಮಾಡ್ತಾನಲ್ಲ?’ ಎಂದು ಒಂದಿಷ್ಟು ಅಚ್ಚರಿ, ಅಸಹನೆಯಿಂದ ಅಲ್ಲೇ ನಿಂತು ಬಿಟ್ಟ ನನಗೆ, ಉತ್ತರ ರೂಪದಲ್ಲಿ, ಮಳಿಗೆಯ ಬೇಸ್ಮೆಂಟ್ನಿಂದ ಡೈನೋಸರ್ ಗಾತ್ರದ ವಾಹನವೊಂದು ಧುಮ್ಮಿಕ್ಕುವುದು ಕಂಡಿತು. ಸೆಕ್ಯೂರಿಟಿ ಗಾರ್ಡ್ ತಡೆಯದೇ ಇದ್ದಿದ್ದರೆ, ಯಮಸ್ವರೂಪಿ ವಾಹನ ನನ್ನನ್ನು ಯಮಲೋಕಕ್ಕೆ ಒಯ್ಯುತ್ತಿತ್ತು.

ಅಷ್ಟು ಮಾತ್ರವಲ್ಲ, ‘ಮನೆಯ ಕಡೆಗೋ? ಮುದುಕಿಯ ಕಡೆಗೋ?’ ಎಂಬ ನನ್ನ  ಸಂದಿಗ್ಧದ ಪರಿಹಾರಕ್ಕೆಡಿವೈನ್ ಇಂಟರ್ವೆನ್ಷನ್ ಅನ್ನುವ ಹಾಗೆ ಸೆಕ್ಯೂರಿಟಿ ಗಾರ್ಡ್ ನನ್ನನ್ನು ತಡೆ ಹಿಡಿದಿದ್ದ. ದೈವೇಚ್ಛೆ ಅಂದರೆ ಇದೇನೆ!

ಇನ್ನು ಯೋಚಿಸಲಿಕ್ಕೆ ಏನಿದೆ? ನಾನು ಹೂವಾಡಗಿತ್ತಿಯ ಕಡೆಗೆ ಹೆಚ್ಚು ಕಮ್ಮಿ ಓಡಲು ಶುರು ಮಾಡಿದೆ. ‘ರಾತ್ರಿಯಾಯಿತು ಎಂದು ಆಕೆ ಈಗಾಗಲೇ ಜಾಗ ಖಾಲಿ ಮಾಡಿದ್ದರೆ?’ ಎಂಬ ಆತಂಕ ಬೇರೆ. ದೇವರು ದಯಾಮಯಿ! ‘ಆಕೆ ರಾತ್ರಿವರೆಗೆ ಅಲ್ಲೇ ಕುಳಿತದ್ದು ಸಾರ್ಥಕವಾಗಲಿ ಎಂಬಂತೆ, ನಾನೆಂಬ ಹೂವಿನ ಗಿರಾಕಿ ಆಕೆಗೆ ಸಿಗುವಂತೆ ಮಾಡಿದ್ದ, ಭಗವಂತ. ಇತ್ತ ನನ್ನನ್ನು ಅಪರಾಧಿ ಪ್ರಜ್ಞೆಯಿಂದ ಮುಕ್ತಗೊಳಿಸಿದ್ದ. ಆಕೆಯನ್ನು ಕಂಡು, ಮಿತಿಮೀರಿ ಹರುಷಗೊಂಡ ನನ್ನನ್ನು ಕಂಡು, ಆಕೆಗೆ ಸೋಜಿಗವಾಗಿರಬೇಕು.

ಡಿಜಿಟಲ್ ಪೇಮೆಂಟ್ ಅಭ್ಯಾಸವಾಗಿಹೋಗಿದ್ದ ನಾನುಕಿಸೆಯಲ್ಲಿ ಎಷ್ಟು ಚಿಲ್ಲರೆ ಇದೆ?’ ಎಂದು ಕೂಡಾ ನೋಡದೆ ವ್ಯಾಪಾರಕ್ಕೆ ಇಳಿದಿದ್ದೆ. ಸದ್ಯ ಬಚಾವಾದೆ! ಕಿಸೆಯಲ್ಲಿ ನೂರರ ನೋಟಿತ್ತು. ದುಡಿದು ಸಂಪಾದಿಸುತ್ತೇನೆ ಎಂದು ವಯಸ್ಸಿನಲ್ಲೂ ರಾತ್ರಿವರೆಗೆ ವ್ಯಾಪಾರ ಮಾಡುತ್ತಾ ಕುಳಿತ ಛಲವಾದಿ ಮುದುಕಿಗೆ ಒಂದಿಷ್ಟು ಸಂಪಾದನೆಯಾಗಲಿ ಎಂದುಎರಡು ಮೊಳ ಕೊಡಿ ಅಂದೆ. ಅಷ್ಟಕ್ಕೂ ನನಗೆ ಹೂವಿನ ಅಗತ್ಯವೇನಿತ್ತು? ಹೆಂಡತಿಯ ಶಾಪಿಂಗ್ ಲಿಸ್ಟ್ನಲ್ಲಿ ಅದು ಇರಲಿಲ.್ಲ. ಕ್ಷಣದಲ್ಲಿ ಹೂಮಾಲೆ, ಪತ್ನಿಗೆ ಒಂದು ಸಂತಸದ ಸೋಜಿಗ ಅನಿಸಲಿದೆ ಎಂಬ ಸಂತೃಪ್ತಿ ಮೂಡಿತು.

ನೂರರ ನೋಟಿಗೆ ನಲ್ವತ್ತರ ಬದಲಿಗೆ ಐವತ್ತು ರೂ ಕೈಗಿತ್ತ ಅಜ್ಜಿ, ಕನ್ನಡದಂತೆ ಭಾಸವಾದ ತಮಿಳಿನಲ್ಲಿಇಷ್ಟೇ ಇರೋದು ಎಂದು ನುಡಿದು, ಹತ್ತು ರೂಪಾಯಿ ಬದಲಿಗೆ ಅಂತ ಒಂದು ಎಕ್ಸ್ಟ್ರಾ ಹೂಮಾಲೆಯನ್ನು ಕವರ್ಗೆ ತುರುಕಿ, ನನಗೆ ಕೈ ಮುಗಿದಳು. ‘ಪರವಾಗಿಲ್ಲ ಎಂದು ನಾನು ಮನೆಕಡೆಗೆ ಹೊರಟೆ. ‘ಸಂತಸ, ನೆಮ್ಮದಿ ಸಣ್ಣ ಸಣ್ಣ ಸಂಗತಿಗಳಲಿ ಅಡಗಿದೆ ಅನ್ನುವುದು ಇದಕ್ಕೇ ಇರಬೇಕು ಅನಿಸಿತು, ಕ್ಷಣ ನನ್ನಲ್ಲಿ ಮನೆ ಮಾಡಿದ ಉಲ್ಲಾಸ, ನಿರಾಳತೆ, ನೆಮ್ಮದಿ ನನಗೇನೇ ಅಚ್ಚರಿ ಅನಿಸಿದಾಗ.

ಮನೆಗೆ ಬಂದ ಮೇಲೆ ಅಜ್ಜಿ ನನ್ನನ್ನು ಇನ್ನಿಲ್ಲದಂತೆ ಕಾಡಿದಳು. ನಾನು ಆಕೆಯ ವಿವರಗಳನ್ನು ಕೇಳಿ ಪಡೆಯದೆ ಹಾಗೆ ಬರಿಗೈಯಲ್ಲಿ ಬಂದು ಬಿಟ್ಟೆನಲ್ಲ ಎಂದು ಪರಿತಪಿಸಿದೆ. (ಒಂದು ವೇಳೆ, ಪ್ರಸಿದ್ಧ ಸಾಹಿತಿ ಅಬ್ದುಲ್ ರಶೀದ್ ನನ್ನ ಜಾಗದಲ್ಲಿದ್ದಿದ್ದರೆ, ಆಕೆಯ ಜಾತಕವನ್ನೇ ಬಿಡಿಸಿಟ್ಟು, ಅಸೂಯೆ ಹುಟ್ಟಿಸುವ ಹಾಗೆ ತಮ್ಮ ಕಾವ್ಯದಂತ ಹೃದ್ಯ ಗದ್ಯವನ್ನು ಆಕೆಗೆ ಅರ್ಪಿಸಿಬಿಡುತ್ತಿದ್ದರು).    

ಇದಾಗಿ ಸುಮಾರು ಎರಡು ವಾರಗಳ ಬಳಿಕ. 2023 ಜೂನ್ 3ನೇ ಶನಿವಾರ. ಅದೇ ಡಿವಿಜಿ ರಸ್ತೆ, ಅದೇ ಹೋಟೆಲ್, ಅದೇ ರಾತ್ರಿ ಹೊತ್ತು, ಅದೇ ನಾನು ಮತ್ತು ಅದೇ ಅಜ್ಜಿ!

ಹಿಂದಿನಂತೆ ದಿನವೂ ಪಾರ್ಸೆಲ್ಗೆ ಆರ್ಡರ್ ಮಾಡಿದವ, ಹೋಟೆಲ್ ರಶ್ ಗಮನಿಸಿ ಲೌಂಜ್ನಲ್ಲಿ ಕುಳಿತೆ. ‘ಅಷ್ಟಕ್ಕೂ ಆಕೆ ಅದೇ ಜಾಗದಲ್ಲಿ ಇಂದೂ ಕೂಡಾ ಹೂ ಮಾರಾಟ ಮಾಡುತ್ತಿರುತ್ತಾಳೆ ಎಂದು ಏನು ಗ್ಯಾರಂಟಿ?’ ಎಂಬ ಸಂದೇಹ ಕಾಡುತ್ತಿದ್ದರೂ, ಬಾರಿ ಮಾತ್ರ ಅಜ್ಜಿಯನ್ನುಸುಮ್ಮನೆ ಬಿಡಬಾರದು ಅಂದುಕೊಂಡಿದ್ದವ, ಹೊರಗೆ ರಸ್ತೆಯಡೆಗೆ ಕಣ್ಣು ಹಾಯಿಸಿದೆ. ರಸ್ತೆ ಬದಿಯ ಅದೇ ಜಾಗದಲ್ಲಿ ಅವಳನ್ನು ಕಂಡಾಗ, ‘ ಅಜ್ಜಿಯ ಮೇಲೆ ಕ್ರಷ್ ಆದ ಕಾಲೇಜು ಹುಡುಗ ನಾನೇನೋ ಎಂಬಂತೆ ಸಂಭ್ರಮಪಟ್ಟೆ! ಆವಳು ಜಾಗವನ್ನೇ ತನ್ನ ಮಾರುಕಟ್ಟೆ ಮಾಡಿಕೊಂಡಿದ್ದಳು. ಕಾಯುತ್ತಾ ಸುಮ್ಮನೆ ಕಳೆಯುವ ಸಮಯದ ಸದುಪಯೋಗ ಮಾಡುವುದು ಎಂದು ತೀರ್ಮಾನಿಸಿದವ, ಅವಳಿಂದ ಅದೇ ನಿತ್ಯ ಮಲ್ಲಿಗೆ ಮಾಲೆಯ  ಎರಡು ಮೊಳ ಖರೀದಿಸಿದೆ. ಎಲ್ಲಾ ಮುಜುಗರವನ್ನು ಬದಿಗಿಟ್ಟುನಿಮ್ಮ ಹೆಸರೇನು?’ ಎಂದು ಕೇಳಿದರೆ ಆಕೆತಮಿಳು ಬಿಟ್ಟು ಬೇರೆ ತೆರಿಯಾದು ಎಂಬಂತೆ ಉತ್ತರಿಸಿದಳು. ನನ್ನ ತಮಿಳು ಜ್ಞಾನವೇನು ಕಡಿಮೆಯೇ? ಹಾಗೂ ಹೀಗೂಪೇರು ಎಂಬ ಪದ ಬಳಸಿ ಅವಳಿಂದತೆಯ್ಯಮ್ಮ ಎಂಬ ಉತ್ತರ ಪಡೆದೆ. ಊರು ತಿರುಕ್ಕೂಳ್ಳೂರ್ ಅಂದ ಹಾಗಾಯಿತು. ನಾನು ಈಗ ಪೂರ್ತಿ ಮೈಚಳಿ ಬಿಟ್ಟಿದ್ದೆ. ‘ನೋಡುವವರು ಏನೇ ಅಂದುಕೊಳ್ಳಲಿ, ಡೋಂಡ್ ಕೇರ್ ಎಂದು ನನಗೆ ನಾನೇ ಅಂದುಕೊಂಡುನಿಮ್ಮ ಒಂದು ಫೊಟೋ ತೆಗೆಯಲೇ?’ ಎಂದು ಕೇಳಿದೆ. ನಿಮ್ಮ ಸುದ್ದಿ ಪೇಪರ್ ನಲ್ಲಿ ಬರ್ತದೆ ಎಂದೆ ಅವಳಿಗೆ ಎಷ್ಟು ಅರ್ಥವಾಯಿತೋ, ಆಕೆಮುಡಿಯಾದು ಅನ್ನಲಿಲ್ಲ! ಆದಾಗ್ಯೂ ಹೂ ಮಾರಾಟದಲ್ಲೇ ವ್ಯಸ್ತಳಾಗಿದ್ದ ತೆಯ್ಯಮ್ಮ ನನ್ನ ಮೊಬೈಲ್ಗೆ ಸರಿಯಾಗಿ ಪೋಸ್ ಕೊಡಲಿಲ್ಲ. ಹಾಗಿದ್ದೂ ವಿವಿಧ ಭಂಗಿಗಳಲ್ಲಿ ಅವಳ ಮೂರು ಫೊಟೋಗಳನ್ನು ಕ್ಲಿಕ್ಕಿಸಿ ಅವಳಿಗೆಥ್ಯಾಂಕ್ಸ್ ಹೇಳಿ ಮನೆಯತ್ತ ಹೆಜ್ಜೆ ಹಾಕಿದೆ.

ನಡೆಯುತ್ತಿದ್ದಂತೆ ಹೆಜ್ಜೆ ಹೆಜ್ಜೆಗೂ, ಉತ್ತರಗಳನ್ನು ತನ್ನೊಡಲಲ್ಲೇ ಇಟ್ಟುಕೊಂಡಂತಹ ಪ್ರಶ್ನೆಗಳು, ನನ್ನನ್ನು  ಕಾಡತೊಡಗಿದವು. ತೆಯ್ಯಮ್ಮನನ್ನು ಬದುಕಿಸುತ್ತಿರುವ ಶಕ್ತಿ ಯಾವುದು? ಆಕೆ ಯಾವ ಜಿಮ್ಗೆ ಹೋಗುತ್ತಾಳೆ? ಯಾವೆಲ್ಲಾ ವೈಟಮಿನ್ ಸಪ್ಲಿಮೆಂಟ್ಗಳನ್ನು ದಿನಾ ನುಂಗುತ್ತಾಳೆ? ಅವಳ ಆಧ್ಯಾತ್ಮಿಕ ಗುರು ಯಾರಿರಬಹುದು? ರವಿ ಶಂಕರ್? ಜುಗ್ಗಿ ವಾಸುದೇವ್? ಯಾರಿರಬಹುದು ಆಕೆಯ ನೆಚ್ಚಿನ ಮೋಟಿವೇಷನಲ್ ಸ್ಪೀಕರ್? ರೋಬಿನ್ ಶರ್ಮಾ? ಅಂಕುರ್ ವಾರಿಕು? ಡೇಲ್ ಕಾರ್ನಿಗೆ? ‘ಅಟಾಮಿಕ್ ಹ್ಯಾಬಿಟ್ಸ್ ಖ್ಯಾತಿಯ ಜೇಮ್ಸ್ ಕ್ಲೀಯರ್?          ಮಾರ್ಕ್ ಮ್ಯಾನ್ಸನ್? ‘ಇಕಿಗಈ ಬರೆದವರಾ?  ಯಾರವ್ವಾ ಅವಳು/ಅವನು?

ಅಮಾವಾಸ್ಯೆಯ ಕಡು ಕಪ್ಪು ಚಾದರವನು ಹೊದ್ದು ಮಲಗಿದ ರಾತ್ರಿಗಳಲಿ ಕೂಡಾ ಡಿವಿಜಿ ಎಂಬ ಅಮರ ದೀವಿಗೆಯು, ನಿರ್ಜನ ರಸ್ತೆಯನು ಬೆಳಗುವ ಪವಾಡದ ಕುರಿತು ಕಿಂಚಿತ್ತೂ ಅರಿವಿಲ್ಲದೆ ಹೂಮಾಲೆ ಕಟ್ಟುತಲೇ ಬದುಕು ಕಟ್ಟಿಕೊಂಡ ಯಶಸ್ವಿ ನಾರಿ ತೆಯ್ಯಮ್ಮ; ನನ್ನ ಪಾಲಿಗೆ ಪರಮ ಪೂಜ್ಯ ಗುರುವಿನಂತೆ ಭಾಸವಾದಳು, ಅದೇನೋ ಹೊಸ ಬೇಳಕು ಬೀರಿದಂತೆ ಕಂಡಳು. ಮಾರಕವಾದ ಯಾವ ರೋಗವನ್ನೂ ತನ್ನ ಬಳಿಗೆ ಸುಳಿಯಲು ಬಿಡದೆ, ಮಲ್ಲಿಗೆಯ ಒಂದು ಪ್ರಭೇದದಲ್ಲಿ ತಲ್ಲೀನಳಾಗಿ, ಸೋಲು ಗೆಲುವಿನ ಗೀಳಿಗೆ ಬಲಿಯಾಗದೆ, ಗೆಲುವಾಗಿ ತನಗರಿವಿಲ್ಲದೆ ಆಕೆ ರವಾನಿಸುವ ಜೀವನ ಸಂದೇಶÀ ಹೂವಿನಂತೆ ಕಮನೀಯ, ಸುಗಂಧಭರಿತ ಅನಿಸಿತು ನನಗೆ.

ಬದುಕಿನ ಅರ್ಥವಿರುವುದು ಬದುಕಿರುವುದರಲ್ಲೇ ಅನ್ನುತ್ತಾನೆ ಅಲನ್ ವಿಲ್ಸನ್  ವಾಟ್ಸ್. “ ವಿಷಯ ಎಷ್ಟೊಂದು ತಿಳಿಯಾಗಿದೆ ಮತ್ತು ಸ್ಪಷ್ಟವಾಗಿದೆ ಹಾಗೂ ಸರಳವಾಗಿದೆ. ಹಾಗಿದ್ದರೂ, ಪ್ರತಿಯೊಬ್ಬರು ಕೂಡಾ, ತಮಗೂ ಮಿಗಿಲಾದದ್ದನ್ನು ಸಾಧಿಸುವುದು ಅತ್ಯಗತ್ಯ ಅನ್ನುವ ಹಾಗೆ, ಅದೇನೋ ಭಾರೀ ಆತಂಕಭರಿತ ಅವಸರದಲ್ಲಿರುತ್ತಾರೆ ಅನ್ನುತ್ತಾನವನು.

(“The meaning of life is just to be alive. It is so plain and so obvious and so simple. And yet, everybody rushes around in a great panic as if it were necessary to achieve something beyond themselves.”-Alan Wilson Watts)

 

ಹೌದು! ಬದುಕಿರುವುದು, ಬದುಕಿ ಉಳಿಯುವುದು ಕೂಡಾ ಒಂದು ಸಾಧನೆಯೆ.

ʼಹಾಗಿದ್ದರೆ ಬದುಕುವುದು ಅಂದರೆ ಏನು ?ʼಎಂಬ ಪ್ರಶ್ನೆಗೆ ಬಗೆಬಗೆಯ ಉತ್ತರಗಳು, ವ್ಯಾಖ್ಯಾನಗಳು ಇರಬಹುದು, ದೊರೆಯಬಹುದು. ಆದರೆ ಒಂದಂತೂ ಸತ್ಯ. ಬದುಕಿನ ಮರ್ಮ ಇರುವುದು ಚಲನಶೀಲತೆಯಲ್ಲಿ, ಕ್ರಿಯಾಶೀಲತೆಯಲ್ಲಿ. ಜಡವಾಗಿರುವುದು ಅಂದರೆ ಬದುಕಿಗೆ ಬೆನ್ನು ಹಾಕಿದಂತೆ. ನಾವು ವಿಶ್ರಮಿಸುತ್ತಿರುವ ವೇಳೆಯಲ್ಲೂ, ನಮ್ಮ ಎದೆ ನಮಗಾಗಿ ಬಡಿದುಕೊಳ್ಳುತ್ತದೆ. ಕೋಟಿ ಕೋಟಿ ಜೀವಕೋಶಗಳು ನಮಗಾಗಿ ದುಡಿಯುತ್ತಿರುತ್ತವೆ, ಸದ್ದಿಲ್ಲದೆ, ಮುಷ್ಕರ ಹೂಡದೆ.

 ಶುದ್ಧವೋ ಅಶುದ್ಧವೋ, ದೇಹದೊಳಗಿನ ರಕ್ತ ನಿಂತನೀರಂತಿರದು. ಸಜೀವ ದೇಹದೊಳಗೆ ಸದಾ ಹರಿಯುತಿರುವುದು ಅದರ ಹಣೆಬರೆಹ! ವೈಜ್ಞಾನಿಕವಾಗಿ ನೋಡಿದರೂ, ಜೀವಿತವೆಂದರೆ ದುಡಿತ. ಜೀವನವೆಂದರೆ ನಾಮಪದವಲ್ಲ. ಜೀವನವೆಂಬುದು ದೇಶ, ಭಾಷೆ, ಜಾತಿ, ಮತ, ಧರ್ಮಗಳ ಎಲ್ಲೆ ಮೀರಿದ ಒಂದು ಸಾರ್ವತ್ರಿಕ ಕ್ರಿಯಾಪದ!

ವೇದಾಂತ ನನಗೆ ಹೊಸದೇನಲ್ಲ. ಚಿಂತನೆಯ ತುಣುಕುಗಳು ಆಗೊಮ್ಮೆ ಈಗೊಮ್ಮೆ ನನ್ನ ಮನದಲ್ಲಿ ಹಾದು ಹೋದ ಅನುಭವವಾಗಿದೆ. ಆದರೆ ಅದು ಹೀಗೆ ಹರಳುಗಟ್ಟಿದ್ದು, ಸ್ಫಟಿಕದಂತೆ ಸ್ಪಷ್ಟವಾದದ್ದು ಅಜ್ಜಿಯ ದರ್ಶನ ಭಾಗ್ಯ ಕರುಣಿಸಿದ ದಿವ್ಯ ಅಮೃತ ಘಳಿಗೆಯಲ್ಲಿ, ಜಗÀತ್ತಿಗೆ ಕಗ್ಗವನ್ನು ಬೋಧಿಸಿದ ಮಂಕುತಿಮ್ಮನ ರಂಗ ಭೂಮಿ, ಕರ್ಮ ಭೂಮಿಯಲ್ಲಿ, ಚರಕದ ಮೂಲಕ ಬಾಳ ಚಕ್ರದ ಸಂದೇಶವಿತ್ತÀ ಗಾಂಧಿ () ಬಜಾರು ಎಂಬ ಕಮ್ಮಟದಲ್ಲಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ನಿಸಾರ್ ಅಹ್ಮದ್, ಅನಕೃ, ನರಸಿಂಹಯ್ಯ ಮುಂತಾದ ಅನರ್ಘ್ಯ ರತ್ನಗಳ ಪಾದ ಧೂಳಿಯಿಂದ, ಸಾಮಿಪ್ಯದಿಂದ ಪುನೀತವಾದ ಪಥದಲ್ಲಿ, ಜ್ಞಾನದೇಗುಲದ ಹಿನ್ನೆಲೆಯಲ್ಲಿ.

ಏನಾದರೂ ಮಾಡುತಿರು ತಮ್ಮ, ನೀ ಸುಮ್ಮನಿರಬ್ಯಾಡ ಎಂಬ ಗೋಪಾಲ ಕೃಷ್ಣ ಅಡಿಗರ ಕವಿತೆಯ ಸಾಲಿನ ಅರಿವಿಲ್ಲದೆ, ‘ಕಾಯಕವೇ ಕೈಲಾಸ ಎಂದ ಬಸವಣ್ಣನ ಧರ್ಮವನ್ನು ಅಕ್ಷರಶಃ ಪಾಲಿಸುತ್ತಾ ನನ್ನಲ್ಲಿ ಅರಿವು, ಅಚ್ಚರಿ ಹುಟ್ಟಿಸಿದ್ದಲ್ಲದೆ ನನ್ನ ಅಂತರಂಗದಲ್ಲಿ ಸುಜ್ಞಾನದ ದೀವಿಗೆ ದೇದಿಪ್ಯಮಾನವಾಗಿ ಉರಿಯುವಂತೆ ಮಾಡಿದಳು ದೇವಿ ತೆಯ್ಯಮ್ಮ.

ಕೆಲವು ದಿನಗಳ ಬಳಿಕ ಒಂದು ರಾತ್ರೆ ತೆಯ್ಯಮ್ಮನನ್ನು ದಾಟಿ ಮುಂದುವರಿಯುವಾಗಬರುವಾಗ ಹೂಮಾಲೆ ಕೊಂಡುಕೊಳ್ಳುತ್ತೇನೆ ಎಂದು ಆಶ್ವಾಸನೆ ನೀಡಿ ತೆರಳಿದ್ದೆ. ವಾಪಾಸು ಬರುವಾಗ ಘಂಟೆ ನೋಡದೆ ಹೋದ ನನ್ನ ದಡ್ಡತನವನ್ನು ನಾನೇ ಹಳಿದುಕೊಂಡೆ. ಅಲ್ಲಿ ತೆಯ್ಯಮ್ಮ ನಾಪತ್ತೆ. ಆಗ ನೆನಪಾಯಿತು, ಹೋಟೆಲ್ ಪಕ್ಕದ ಅಂಗಡಿಯಾಕೆ ತೆಯ್ಯಮ್ಮ (ಮತ್ತು ತಾನು ಕೂಡಾ) ಮನುಷ್ಯಳೇ ಅಲ್ಲ, ಒಂದು ಅನಿಷ್ಟವೆನ್ನುವಂತೆ ಆಕೆಯನ್ನು ಅಲ್ಲಿಂದತೊಲಗಾಚೆ ಎಂದು ಜರೆಯುತ್ತಿದ್ದದ್ದು, ‘ನಿನಗೇನು ಹೂ ಮಾರಲು ಇದೇ ಜಾಗ ಆಗಬೇಕೆ?’ ಎಂದು ಅವಳ ವಾರಿಸುದಾರತನದ ಕುರಿತು ಗಂಭೀರ ಸವಾಲು ಎಸೆದು, ಅಣಕಿಸಿದ್ದು ನೆನಪಾಯಿತು. ‘ಇನ್ನೇನು ಜಗಳ ಶುರುವಾಗುತ್ತಿದೆಯಷ್ಟೆ. ನಾನು ವಾಪಸು ಬರುವ ವೇಳೆ ಇದು ಕುದಿಯುವ ಬಿಂದು ತಲುಪಿರುತ್ತದೆ. ಆಗ ನೋಡಿಕೊಂಡರಾಯಿತು ಅಂದುಕೊಂಡಿದ್ದೆ ನಾನು. ನನ್ನ ನಂಬಿಕೆ ಹುಸಿಯಾಗಿತ್ತು. ಬಹುಶಃ ಅಂಗಡಿಯಾಕೆ ತೆಯ್ಯಮ್ಮನನ್ನು ಅಲ್ಲಿಂದ ಎತ್ತಂಗಡಿ ಮಾಡುವಲ್ಲಿ ಯಶಸ್ವಿಯಾಗಿದ್ದಳು ಅನಿಸುತ್ತದೆ. ಛೇ! ನಾನು ಅಜ್ಜಿಯ ವಿಷಯದಲ್ಲಿ ಇನ್ನೊಂದು ಬಾರಿ ತಪ್ಪು ಮಾಡಿದೆ ಅನಿಸಿತು. ನಾನು ಅಂಗಡಿಯಾಕೆಯ ಬಳಿ ಅವಳ ಪರವಾಗಿ ವಾದಿಸಬೇಕಿತ್ತು. ಸರಿ. ಆದರೆ ಎನೆಂದು ವಾದಿಸುವುದು? ಬೀದಿ ಬದಿ ವ್ಯಾಪಾರವನ್ನು ಯಾವ ಕಾನೂನಿನ ಅಡಿ ನ್ಯಾಯೀಕರಿಸಲು ಸಾಧ್ಯ? ಅಂತೂ ನನ್ನ ನಿಷ್ಕ್ರಿಯತೆಗೆ, ಜಡತ್ವಕ್ಕೆ ನನ್ನ ಕಾನೂನು ಜ್ಞಾನ ನೆರವಿಗೆ ಬಂದಾಗ ಮನಸ್ಸು ತಕ್ಕ ಮಟ್ಟಿಗೆ ಅಪರಾಧಿ ಪ್ರಜ್ಞೆಯಿಂದ ಮುಕ್ತವಾಯಿತು. ಆದರೆ ಸುಪ್ತ ಮನಸ್ಸಿನಲ್ಲಿ ಕೊರಗು ಕಾಡುವುದು ಮುಂದುವರಿದಿತ್ತು.    

ಇದಾದ ಬಳಿಕ ಒಂದೆರಡು ಬಾರಿ ಗಾಂಧಿ ಬಜಾರಿಗೆ ಹೋಗಿದ್ದಾಗಲೂ ಮೊಮ್ಮಗನಿಗೆ ತನ್ನ ಅಜ್ಜಿಯ ದರ್ಶನ ಭಾಗ್ಯ ದೊರೆಯಲಿಲ್ಲ! ‘ಅಕ್ಕಪಕ್ಕದ ಅಂಗಡಿಯವರೆಲ್ಲ ಸೇರಿ ತೆಯ್ಯಮ್ಮನನ್ನು ಅಲ್ಲಿಂದ ತೊಲಗಿಸಿರಬಹುದೇ?’ ಎಂಬ ಚಿಂತೆ ಕಾಡಿದಾಗ ವಿಪರೀತ ನೋವಾಯಿತು, ರೋಷವುಕ್ಕಿತು. ಆಕೆಯನ್ನು, ನಾನು ನೋಡುವ ಮತ್ತು ಇತರರು ನೋಡುವ ದೃಷ್ಟಿಕೋನದ ಹಿಂದಿರುವ ವ್ಯತ್ಯಾಸ ನನ್ನನ್ನು ಕೊಂಚ ಅಧೀರನನ್ನಾಗಿಸಿತು. ಎಲ್ಲದರಲ್ಲೂ ಒಳಿತನನ್ನು ಕಾಣುವುದು ಕೂಡಾ ಒಂದು ದೌರ್ಬಲ್ಯ ಇರಬಹುದೇ ಎಂಬ ಸಂಶಯ ಕೂಡಾ ಹಣಕಿ ಹಾಕಿತು. 

 ಆಕೆಯನ್ನು ಅರಸುತ್ತಾ ಡಿವಿಜಿ ರಸ್ತೆಯ ಇಕ್ಕೆಲಗಳ ಮೇಲೆ ಕಣ್ಣು ಹಾಯಿಸುತ್ತಾ, ಅವಳ ಕೈಯಲ್ಲಿ ಮಾಲೆಯಾಗಿ ಒಂದಕ್ಕೊಂದು ಬೆಸೆದುಕೊಳ್ಳುವ ಹೂಗಳಂತೆ ನನ್ನನ್ನು ಮತ್ತು ಆಕೆಯನ್ನು ಅವ್ಯಕ್ತ ದಾರವೊಂದರಲ್ಲಿ ಪೋಣಿಸಿದ ಸೂತ್ರಧಾರನ ಲೀಲೆಗೆ ಚಕಿತನಾಗುತ್ತಾ ನಡೆದು ಮನೆ ತಲುಪಿದೆ.

ಮುಂದೊಂದು ದಿನ ಸಂಜೆ ಅವಳು ಅದೇ ರಸ್ತೆಯ ಇನ್ನೊಂದು ಹೆಸರುವಾಸಿ ಹೋಟೆಲ್ ಎದುರೆ ಪ್ರತ್ಯಕ್ಷಳಾದಳು. ನಾನು ಪುನಃಆಮೇಲೆ ಎಂದು ಅವಳನ್ನು ದಾಟಿ ಹೋಗಿ ಅದೇ ತಪ್ಪನ್ನು ಮಾಡಿದೆ. ನಾನು ಮರಳಬೇಕಾದರೆ ಅವಳೆಲ್ಲಿ? ಹೀಗೆ ಕಣ್ಣು ಮುಚ್ಚಾಲೆಯಾಡಿದ ತೆಯ್ಯಮ್ಮ ಒಂದು ಶನಿವಾರ 15ನೇ ಜುಲೈ, 2023ರಂದು ಡಿವಿಜಿ ರಸ್ತೆಯ ಫೂಟ್ಪಾತ್ನಲ್ಲಿ ಕೊನೆಗೂ ಗೋಚರವಾದಾಗ, ನನಗೆ ಕಡಲಬ್ಬರದಲ್ಲಿ ನಾವೆ ಮುಳುಗಿದ ನಾವಿಕನಿಗೆ ನೆಲ ಕಾಣಿಸಿದಂತಹ ಸಂಭ್ರಮ.

ಬಹುಶಃ, ಆಕೆ ದಿನದ ಮಟ್ಟಿಗೆ ತನ್ನಅಂಗಡಿಯನ್ನು ಬಂದ್ ಮಾಡಿದ್ದಿರಬೇಕು. ಹೀಗಾಗಿ ಅರಾಮವಾಗಿ ಇತರ ಹೂವಾಡಗಿತ್ತಿಯರೊಂದಿಗೆ ಹರಟುತ್ತಾ ಕುಳಿತಿದ್ದಳು. ಇತರರೆದುರಿಗೆ ನಾನು ಅವಳನ್ನು ಮಾತಿಗೆಳೆದದ್ದು ಆಕೆಯ ಮುಜುಗರಕ್ಕೆ ಕಾರಣವಾಯಿತೇನೋ? ಇನ್ನೇನು ಮಾಡುವುದೆಂದು ತೋಚದೆ ಅವಳು ಹರಟುತ್ತಿದ್ದ ಹೂವಾಡಗಿತ್ತಿಯಿಂದ ಹೂ ಕೊಂಡುಕೊಂಡೆ. ಬಹುಶಃ ತೆಯ್ಯಮ್ಮನ ಸರಕು ಎಲ್ಲವೂ ಆದಿನ ಮಾರಾಟವಾಗಿತ್ತೆಂದು ತೋರುತ್ತದೆ.

22ನೇ ಜುಲೈ 2023 ಶನಿವಾರದಂದು, ನಾನು ತೆಯ್ಯಮ್ಮನನ್ನು ಮೊದಲ ಬಾರಿ ಕಂಡ ಅದೇ ಹೋಟೆಲ್ ಎದುರೆ ಕಂಡಾಗ ತುಂಬಾ ಸಮಾಧಾನವೆನಿಸಿತು. ಬಹುಶಃ ಯಾರೋ ಪುಣ್ಯಾತ್ಮರು, ತೆಯ್ಯಮ್ಮನನ್ನು ಅಲ್ಲಿಂದ ಎತ್ತಂಗಡಿ ಮಾಡದಂತೆ ಅಂಗಡಿಯಾಕೆಯನ್ನು ತಡೆಹಿಡಿದಿದ್ದರಬೇಕು.

 ತಕ್ಷಣವೇ ಅವಳಿಂದ ರೂ 50 ರಷ್ಟು ಹೂಮಾಲೆ ಖರೀದಿಸಿದೆ. ಜಿಟಿ ಜಿಟಿ ಮಳೆ ಜೊತೆಗೆ ದಿಢೀರನೆ ಆವರಿಸಿದ ಚಳಿಯಿಂದ ರಕ್ಷಣಗೆಗೆಒಂದು ಹ್ಯಾಟ್ ಧರಿಸು ಎಂದು ಸಲಹೆ ನೀಡಿ ಅಲ್ಲಿಂದ ಮುಂದಕ್ಕೆ ಸಾಗಿದೆ.

ಬರೆಹ ಪ್ರಕಟವಾದ ಮೇಲೆ ಇದರ ಪ್ರತಿಯನ್ನು ಲ್ಯಾಮಿನೇಷನ್ ಮಾಡಿ ಅವಳ ಕೈಗಿಡಬೇಕು. ಮಾತ್ರವಲ್ಲ ದೊರೆತ ಸಂಭಾವನೆಯನ್ನು ಪೂರ್ತಿ ಅವಳಿಗೆ ಕೊಟ್ಟು ಕೃತಜ್ಞತೆ ಸಲ್ಲಿಸಬೇಕು. ಅಲ್ಲಿಯವರೆಗೆ ಕೇವಲ ಅವಳ ಹೂಮಾಲೆಯ ಗ್ರಾಹಕನಾಗಿರಬೇಕು, ಅವಳ ಬಳಿ ಅದೂ ಇದೂ ಮಾತನಾಡಿ ಅವಳಲ್ಲಿ ಇನ್ನಿಲ್ಲದ ಪ್ರಶ್ನೆಗಳನ್ನು, ಸಂಶಯಗಳನ್ನು ಹುಟ್ಟುಹಾಕಬಾರದು ಎಂದು ನಿಶ್ಚಯಿಸಿದೆ.

ನನ್ನ ಅಜ್ಜಿ ಕಥೆ ಯಾವುದೇ ರೋಚಕ ತಿರುವು, ಕ್ಲೈಮಾಕ್ಸ್ ಇಲ್ಲದೆ ಕೊನೆಯಾಯಿತು ಅನಿಸಬಹುದು. ಹೀಗಾಗಿ ಓದುಗರಿಗೆ ನಿರಾಶೆಯಾಗಿರಬಹುದು. ಅದು ಸಹಜ. ಏಕೆಂದರೆ ಇದು ವಾಸ್ತವ, ಕಥೆಯಲ್ಲ. ತೆಯ್ಯಮ್ಮ ಹೂವಿನೊಂದಿಗೆ ಬದುಕಿ, ಹೂವಿನಿಂದಲೇ ಬದುಕಿ, ಹೂವನರಳಿಸಿದ, ತನ್ನ ಬಾಳನರಳಿಸಿದ ಭುವಿಗೆ ಒಂದಲ್ಲ ಒಂದು ದಿನ ಮರಳುತ್ತಾಳೆ. ಆದರೆ ಬರೆಹದ ಸಾರ್ಥಕತೆ ಇರುವುದು, ತೆಯ್ಯಮ್ಮ ಸಾರುವ ನಿರಂತರ ದುಡಿಮೆಯ ಸಂದೇಶವನ್ನು ಮನಗಂಡು ಅದನ್ನು ನೀವು ನಿಮ್ಮ ಬದುಕಿನಲ್ಲಿ ಅಳವಡಿಸಿ, ನಿಮ್ಮ ಬದುಕನ್ನು ಯಶಸ್ಸಿನ ಕಥೆಯಾಗಿಸುವುದರಲ್ಲಿ! ಬರೆಹ ಕಥೆಯಾಗುವುದು ಆವಾಗ.

Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾಗಲ್ಲ, ನಿಜವಾಗಿ, ʼಒಂದು ಆಕೃತಿಯ ಒಳಭಾಗಗಳನ್ನು, ...
        Food for Teeth                                    If you thought millions of people in Mera Bharat( that’s Mahan) grapple with the issue of not knowing from where their next meal would come, you are all wrong-or else you are not watching much of the idiot box as much as the people calculating the TRP suppose you do! Now what is TRP? It is Television Rating Points. That’s someone somewhere is glad to know how much you weigh as a couch-potato. So when you are watching TV someone is ‘watching’ you like the BB (Big Brother).  A cute device called ‘People’s Meter’ might have been attached to your TV. Or to the one in one of your neighbors’ house. This device keeps track of what you watch and how often, how long etc. And that info is accessed by the geniuses who are ...