Skip to main content

 

ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ

-ಆಗಸ್ಟ್‌ 2025ರ ತುಷಾರ ದಲ್ಲಿ ಪ್ರಕಟವಾಗಿತ್ತು

 

 

ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು!

ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌  (Ernő Rubik  ) ಅನ್ನುವ ಶಿಲ್ಪಿ ಹಾಗೂ  ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು.

ಅಷ್ಟಕ್ಕೂ ಏರ್ನೋ ರೂಬಿಕ್‌  ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು  ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾಗಲ್ಲ, ನಿಜವಾಗಿ, ʼಒಂದು ಆಕೃತಿಯ ಒಳಭಾಗಗಳನ್ನು, ಅದರ ಇಡೀ ರಚನೆಗೆ ಧಕ್ಕೆಯಾಗದಂತೆ ಸ್ವತಂತ್ರವಾಗಿ ಚಲಿಸುವುದು ಹೇಗೆ?ʼ ಎಂಬ ಸಮಸ್ಯೆಗೆ ಸಂಬಂಧಿಸಿ, ಒಂದು ಪ್ರಾತ್ಯಕ್ಷಿಕೆಯಾಗಿ ಅವನು ಅದನ್ನು ತಯಾರಿಸಿದ ಎಂದೂ ಹೇಳಲಾಗುತ್ತದೆ. ಅದೇನೇ ಇರಲಿ, ಈ ಆರು ಮುಖಗಳ ಬಣ್ಣ ಬಣ್ಣದ ಘನಾಕೃತಿಯ ಮುಖಗಳನ್ನು ಚಲಿಸಿ ಪರಿಹರಿಸುವ ಒಗಟು, ವಿಶ್ವದೆಲ್ಲೆಡೆ ಉಂಟುಮಾಡಿದ ಸಂಚಲನಕ್ಕೆ ಯಾವುದೂ ಸಾಟಿಯಿಲ್ಲ.

ʼಇದರಲ್ಲೇನಿದೆ ಮಹಾ? ಇದರ ಆರು ಮುಖಗಳಲ್ಲಿ ಪ್ರತಿಯೊಂದು ಮುಖದ ಬಣ್ಣ ಒಂದೇ ಆಗಿಸಬೇಕು. ಅಷ್ಟೇ ತಾನೇ?ʼ ಅಂದುಕೊಂಡು ಆ ಕಾಲದಲ್ಲಿ ಅದನ್ನು ಕೈಗೆತ್ತಿಕೊಂಡು, ಒಗಟು ಬಿಡಿಸಲು ಹೋಗಿ, ಪರದಾಡಿ,  ಕೈಚೆಲ್ಲಿ ಮುಖಭಂಗ ಅನುಭವಿಸಿದ ಘಟಾನುಘಟಿಗಳಿಗೆ, ಮೇಧಾವಿಗಳಿಗೆ ಲೆಕ್ಕವಿಲ್ಲ! ಊರಲ್ಲಿ ಜೀನಿಯಸ್‌ ಎಂದು ಪ್ರಖ್ಯಾತರಾದವರ ಕುರಿತು ʼಅವರು ರೂಬಿಕ್ಸ್‌ ಕ್ಯೂಬ್‌ ಟ್ರೈ ಮಾಡಿದ್ರಾ?ʼ ಎಂದು ಕುತೂಹಲಪಡುವುದು ಆ ಕಾಲದಲ್ಲಿ ಸಾಮಾನ್ಯವೆನಿಸಿತ್ತು. ವಿಪರ್ಯಾಸವೆಂದರೆ ಆ ಕ್ಯೂಬ್‌ ನ ಜನಕ ರೂಬಿಕ್‌ ಗೇನೇ ಅದರ ಒಗಟು ಬಿಡಿಸಲು ಬರೋಬ್ಬರಿ ಒಂದು ತಿಂಗಳು ಬೇಕಾಗಿ ಬಂತಂತೆ.   

ರೂಬಿಕ್‌ ನ ಕೈಚಳಕವೋ ಕೈಗುಣವೋ , ʼಏನೋ ಮಾಡಲು ಹೋಗಿ ಏನೋ ಮಾಡಿದʼ ಓರ್ವ ಮಾಮೂಲಿ ವಾಸ್ತುಶಿಲ್ಪಿಗೆ ಅದು ಅಪಾರ ಹೆಸರು ದಯಪಾಲಿಸಿತು ಅವನತ್ತ ಹಣದ ಹೊಳೆಯನ್ನೇ ಹರಿಸಿತು. 2017 ರಲ್ಲೇ  ಮಾರಾಟವಾದ ಈ ಕ್ಯೂಬ್‌ ಗಳ ಸಂಖ್ಯೆ 250  ದಶಲಕ್ಷದ ದಾಖಲೆ ಬರೆದಿತ್ತು ಮತ್ತು ಆವಾಗ ಅದರ ಮಾಲಿಕ ಅದರ ಜನಕ ಎರ್ನೋ ಆಗಿದ್ದ. 2024 ರ ಜನವರಿವರೆಗೆ ಮಾರಾಟವಾದ ರೂಬಿಕ್ಸ್‌ ಕ್ಯೂಬ್‌ ಗಳ ಸಂಖ್ಯೆ 500 ದಶಲಕ್ಷ. ( 2021ರಲ್ಲಿ ಅದರ ಮಾಲಕತ್ವ ಪಡೆದ ಕೆನಡಾದ ಸ್ಪಿನ್‌ ಮಾಸ್ಟರ್‌ ಕಂಪನಿ ಗಳಿಸಿದ ಆದಾಯ 75 ದಶಲಕ್ಷ ಡಾಲರ್.‌) ಈ ಅಂಕಿ ಸಂಖ್ಯೆಗಳಲ್ಲಿ, ಅನಧಿಕೃತ ನಕಲಿ ಮಾಲುಗಳ ಮಾರಾಟ ಸಂಖ್ಯೆ, ಆದಾಯ ಸೇರಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

 

1975ರಲ್ಲೇ ಏರ್ನೋ ರೂಬಿಕ್‌  ಅದನ್ನು ಮ್ಯಾಜಿಕ್‌ ಕ್ಯೂಬ್‌ ಎಂದು ತನ್ನ ತಾಯ್ನಾಡು ಹಂಗೇರಿಯಲ್ಲಿ ಪೇಟೆಂಟ್‌ ಮಾಡಿಸಿಕೊಂಡಿದ್ದ. ಅದು ಅಲ್ಲಿ ಜನಪ್ರಿಯವಾಯಿತು ಕೂಡಾ. ಆದರೆ ಅವನ ದೇಶ ಹಂಗೇರಿಯಲ್ಲಿ ಅಂದು ಚಾಲ್ತಿಯಲ್ಲಿದ್ದ ಕಟ್ಟುನಿಟ್ಟಿನ ರಫ್ತು ನೀತಿ, ಅದರ ಮಾರುಕಟ್ಟೆಯನ್ನು ವಿಸ್ತರಿಸುವಲ್ಲಿ ಅವನ ಪಾಲಿಗೆ ಒಂದು ಅಡಚಣೆಯಾಗಿತ್ತು. ಕಗ್ಗಂಟುಗಳನ್ನು ಬಿಡಿಸಿಡುವುದರಲ್ಲಿ ಸಿದ್ಧಹಸ್ತನಾದ ಅವನು, ಇದಕ್ಕೆ ಕೂಡಾ ಒಂದು ಪರಿಹಾರವನ್ನು ಕಂಡುಕೊಂಡ. ಅದುವೇ ಅಂತಾರಾಷ್ಟ್ರೀಯ ಆಟಿಕೆಗಳ ಮೇಳಗಳು! 1979  ರಲ್ಲಿ ಲಂಡನ್‌, ಪ್ಯಾರಿಸ್‌, ನ್ಯೂ ಯಾರ್ಕ್‌ ಹಾಗೂ ನೂರಂಬಾಹ್ಗ್‌ (Nuremburg)  ನಲ್ಲಿ ನಡೆದ ಅಂತಾರಾಷ್ಟ್ರೀಯ ಆಟಿಕೆಗಳ ಮೇಳಗಳಲ್ಲಿ, ಈ ಮ್ಯಾಜಿಕ್‌ ಕ್ಯೂಬ್‌ ಜನರ ಮೇಲೆ ಭಾರೀ ಮೋಡಿ ಮಾಡಿತು, ಜನ ಅದಕ್ಕಾಗಿ ಮುಗಿಬಿದ್ದರು. 

 

ಮರು ನಾಮಕರಣ

1980 ರಲ್ಲಿ ಈ ಮ್ಯಾಜಿಕ್‌ ಕ್ಯೂಬ್‌ಗೆ, ರೂಬಿಕ್ಸ್‌ ಕ್ಯೂಬ್‌ ಎಂದು ಮರು ನಾಮಕರಣ ಮಾಡಲಾಗುತ್ತದೆ ಮತ್ತು ಅಲ್ಲಿಂದ ಅದರ ದೆಸೆಯೇ ಬದಲಾಗುತ್ತದೆ. ಅಲ್ಲಿಂದಲೇ ಶುರು ಅದರ ಅಸಲಿ ಆಟ.

ವರ್ಷ 1982. ರೂಬಿಕ್ಸ್‌ ಕ್ಯೂಬ್‌ ನ ಹತ್ತಿಕ್ಕಲಾಗದ ಜನಪ್ರಿಯತೆ  ಅದನ್ನು, ಹಂಗೇರಿಯ ಬುಡಾಪೆಸ್ಟ್‌ ನಲ್ಲಿ ನಡೆದ ಮೊತ್ತ ಮೊದಲ ವಿಶ್ವ  ರೂಬಿಕ್ಸ್‌ ಕ್ಯೂಬ್‌ ಚಾಂಪಿಯನ್ಶಿಪ್‌ ಪಂದ್ಯಾವಳಿಗೆ ಎಡೆ ಮಾಡಿಕೊಡುತ್ತದೆ. 

ಮುಂದೆ 1990 ದಶಕದ  ಭಾರೀ ಜನಪ್ರಿಯ ಟಿ ವಿ ಕಾರ್ಯಕ್ರಮ ʼಸಿಂಪ್ಸನ್‌ʼ ನಲ್ಲಿ, ಅನಂತರ  ವಿಲ್‌ ಸ್ಮಿತ್‌ ನಾಯಕನಾಗಿರುವ  ʼಪರ್ಸ್ಯೂಟ್‌ ಆಫ್‌ ಹ್ಯಾಪಿನೆಸ್‌ʼ (ರೂಬಿಕ್ಸ್‌ ಕ್ಯೂಬ್‌ ನ್ನು ಪರಿಹರಿಸಿ ಭೇಷ್‌ ಅನಿಸಿಕೊಂಡು ಅವನು ಉದ್ಯೋಗ ಗಿಟ್ಟಿಸಿಕೊಳ್ಳುತ್ತಾನೆ)   ಮತ್ತು 2008ರಲ್ಲಿ ವಾಲ್ಟ್‌ ಡಿಸ್ನಿ ಬ್ಯಾನರ್‌ ನಡಿ ತೆರೆಗೆ ಬಂದ ʼವಾಲ್-ಇʼ ಎಂಬ ಚಿತ್ರದಲ್ಲಿ ಕಾಣಿಸಿಕೊಂಡು ತನ್ನ ದಶಾವತಾರವನ್ನು ಪ್ರದರ್ಶಿಸುತ್ತದೆ,  ಜನಪ್ರಿಯತೆಯ ಮಗದೊಂದು ಮಜಲನ್ನು ತಲಪುತ್ತದೆ. ಈ ತಲೆಮಾರಿನ ಜನಪ್ರಿಯ ವೆಬ್‌ ಸಿರೀಸ್‌  ʼದಿ ಬಿಗ ಬ್ಯಾಂಗ್‌ ಥಿಯರಿʼ ಯ ನಾಯಕ ಶೆಲ್ಡನ್‌ ಕೂಪರ್‌ ಕೈಯಲ್ಲಿ ಕಾಣಿಸಿಕೊಂಡ ಅದು ಗಜೆಟ್‌ ನಲ್ಲಿ ಮುಳುಗಿರುವ ಹೊಸ ಪೀಳಿಗೆಯನ್ನು ತನ್ನತ್ತ ಆಕರ್ಷಿಸುತ್ತದೆ.

2012 ಇಸವಿಯಲ್ಲಿ ಅದೊಂದು ದಿನ ಲಂಡನ್‌ ನಲ್ಲಿ ಜಮಾಯಿಸಿದ 1414 ಜನರು ಏಕಕಾಲಕ್ಕೆ ರೂಬಿಕ್ಸ್‌ ಕ್ಯೂಬ್‌ ನ ಒಗಟು ಬಿಡಿಸುವ ಮೂಲಕ ವಿಶ್ವ ದಾಖಲೆ ಬರೆಯುತ್ತಾರೆ. ಎರಡು ವರ್ಷಗಳ ತರುವಾಯ, ಸುಪ್ರಸಿದ್ಧ ಪಾಪ್‌ ಗಾಯಕ ಜಸ್ಟಿನ್‌ ಬೀಬ (Justin Bieber), ತಡ ರಾತ್ರಿಯ ಒಂದು ಜನಪ್ರಿಯ ಟಿವಿ ಕಾರ್ಯಕ್ರಮದಲ್ಲಿ ಅದರ ಒಗಟನ್ನು ಬಿಡಿಸಿಡುತ್ತಾ, ಆ ಘನಾಕೃತಿ ಮಗದೊಂದು ಮೈಲಿಗಲ್ಲು ಕ್ರಮಿಸಲು ನೆರವಾಗುತ್ತಾನೆ. 2021ರಲ್ಲಿ ಕೆನಡಾದ ಸ್ಪಿನ್‌ ಮಾಸ್ಟರ್‌ ಎಂಬ ಮಕ್ಕಳ ಮನೋರಂಜನೆಗೆ ಮೀಸಲಾದ ಕಂಪನಿಯು ರೂಬಿಕ್ಸ್‌ ಕ್ಯೂಬ್‌ ನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತದೆ.

2023ರಲ್ಲಿ ಮ್ಯಾಕ್ಸ್‌ ಪಾರ್ಕ್‌ ಎಂಬಾತ 3.13 ಸೆಕೆಂಡ್‌ಗಳ  ಅವಧಿಯಲ್ಲಿ ಅದರ ಒಗಟನ್ನು ಬಿಡಿಸಿ ಹೊಸ ದಾಖಲೆ ಬರೆಯುತ್ತಾನೆ, 40 ವರ್ಷಗಳ ಹಿಂದಿನ 22.95 ಸೆಕೆಂಡ್‌ಗಳ  ದಾಖಲೆಯನ್ನು ಮುರಿಯುತ್ತಾನೆ.

2204, ವಿಶ್ವದೆಲ್ಲೆಡೆ ರೂಬಿಕ್ಸ್‌ ಕ್ಯೂಬ್‌ನ ಅರ್ಧ ಶತಮಾನದ ಸಂಭ್ರಮಾಚರಣೆಗೆ ಸಾಕ್ಷಿಯಾಗುತ್ತದೆ. 

ಆ ಘನಾಕೃತಿಯಲ್ಲಿ ಬ್ರಹ್ಮಾಂಡ ಅಡಗಿದೆ      

   ಎಲ್ಲೋ ಆರ್ಕಿಟೆಕ್ಟ್‌ ವಿದ್ಯಾರ್ಥಿಗಳ ಕೈಯಲ್ಲಿ ಉಳಿದುಕೊಂಡಿರಬಹುದಾಗಿದ್ದ ಈ ಕ್ಯೂಬ್,  ದೇಶ, ಭಾಷೆ, ವಯಸ್ಸು ಎಲ್ಲವುಗಳ ಎಲ್ಲೆ ಮೀರಿ ಇಷ್ಟೊಂದು ಜನಪ್ರಿಯವಾಗಲು, ಎಲ್ಲರ ಕೈಯಲ್ಲಿ ನಲಿದಾಡಲು ಕಾರಣವೇನು?

ಒಂದು ನಿರ್ದಿಷ್ಟ ಪ್ರಮಾಣದ ರೂಬಿಕ್ಸ್‌ ಕ್ಯೂಬ್‌ ನ ಪ್ರತಿಯೊಂದು ಬದಿಯ ಅಳತೆ 5.6  ಸೆಂಟಿಮೀಟರ್.‌ ಇದರಲ್ಲಿ ಚಾಣಾಕ್ಷ ರೂಬಿಕ್‌, 26 ಪುಟ್ಟ ಪುಟ್ಟ ಘನಾಕೃತಿಗಳನ್ನು ತುರುಕಿದ್ದಾನೆ!  ಈ ಪುಟ್ಟ ಕ್ಯೂಬಿಗಳು ಒಂದಕ್ಕೊಂದು  ಒಳಗೊಳಗೇನೇ ಥಳುಕು ಹಾಕಿಕೊಂಡಿರುತ್ತವೆ ಮತ್ತು ಅವು ವಿಭಿನ್ನ ನೆಲೆಗಳಿಗೆ ಚಲಿಸಬಲ್ಲವು. ಮಾತ್ರವಲ್ಲ ಪ್ರತಿಯೊಂದು ಕ್ಯೂಬಿಯ ಮೇಲ್ಮೈಗೆ ಒಂದು ಬಣ್ಣವಿದೆ.

ಹೀಗಾಗಿ ಈ ಒಂದು ಕ್ಯೂಬ್‌ ನಲ್ಲಿ ಅನಂತಾನಂತ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಇದರ ಒಗಟನ್ನು ಮೊತ್ತಮೊದಲು ಜಾಹೀರಾತು ಮಾಡಿದ್ದು ಹೀಗಂತೆ ʼ 3 ಬಿಲಿಯ ಸಂಯೋಜನೆಗಳು, ಒಂದೇ ಒಂದು ಪರಿಹಾರʼ ಅರ್ಥಾತ್‌, ಪರಿಹಾರವಾಗಿ ದೊರೆವ ಸಂಯೋಜನೆ, ಈ 3 ಬಿಲಿಯಗಳಲ್ಲಿ ಒಂದು. ಇದರ ಒಗಟಿಗೆ ಪರಿಹಾರ ಅದೆಷ್ಟು ದುರ್ಲಭ ಎಂಬುದು ಇದರಿಂದ ಅರಿವಾಗುತ್ತದೆ. ಮಾತ್ರವಲ್ಲ, ಗಣಿತದ ಸೂತ್ರಗಳನ್ನು ಅನುಸರಿಸಿ ಕರಾರುವಕ್ಕಾಗಿ ಲೆಕ್ಕ ಹಾಕಿದರೆ, ಈ ಸಂಯೋಜನೆಗಳು 3 ಬಿಲಿಯಕ್ಕಿಂತಲೂ ಹೆಚ್ಚು , ತಲೆ ಚಿಟ್ಟು ಹಿಡಿಸುವಷ್ಟು (43,252,003,274,489,856,000 ) ಎಂದು ಅರಿವಾಗುತ್ತದೆ. ಅರ್ಥಾತ್‌, ಇದರ ಪರಿಹಾರ ಈ ಬಿಲಿಯಗಟ್ಟಲೆ ಸಾಧ್ಯತೆಗಳಲ್ಲಿ ಕೇವಲ ಒಂದೇ ಒಂದು ಮಾತ್ರ! ಹೀಗಾಗಿ ಇದರ ಒಗಟನ್ನು ಬಿಡಿಸಲು ಸಿದ್ಧ ಸೂತ್ರಗಳನ್ನು ಹೆಣೆದವರೂ ಇದ್ದಾರೆ.

ಸೂತ್ರಧಾರರು

ಅಂಬರ್‌ ಚಟರ್ಜಿ, ಬಾಬಾ ಆಟಮಿಕ್‌ ರೀಸರ್ಚ್‌ ಸೆಂಟರ್‌ ನ ನ್ಯೂಕ್ಲಿಯರ್‌ ಫಿಸಿಕ್ಸ್‌ ವಿಭಾಗದ‌ ನಿವೃತ್ತ ಮುಖ್ಯಸ್ಥ, ಅಖಿಲ ಭಾರತ ವೆಬ್ ಚದುರಂಗ ಒಕ್ಕೂಟದ ಚೇರ್‌ ಮ್ಯಾನ್, ಚದುರಂಗ ಪಟು.  1980ರಲ್ಲಿ, ರೂಬಿಕ್ಸ್‌ ಕ್ಯೂಬ್‌ ನ ಒಗಟು ಬಿಡಿಸಲು ಹೊರಟ ಅವರಿಗೆ,  ಇದಕ್ಕೆ ಒಂದು ವ್ಯಸ್ಥಿತ ಪರಿಹಾರವನ್ನು ಹೆಣೆಯಬೇಕಾದರೆ, ತಮ್ಮ ಎಲ್ಲಾ ನಡೆಗಳನ್ನು ಬರೆದಿಡಬೇಕಾಗುತ್ತದೆ ಎಂಬುದು ವೇದ್ಯವಾಯಿತು.  ಸಹಜವಾಗಿ ಅವರು ರೂಬಿಕ್ಸ್‌ ಕ್ಯೂಬ್‌ ನ ಒಗಟಿಗೆ ಚೆಸ್‌ ಅಟದ ಹೊಳಹುಗಳನ್ನು ಆಧರಿಸಿ, ನೊಟೇಷನ್‌ ಗಳನ್ನು ರೂಪಿಸಿದ್ದರು ಮತ್ತದು  ಇಂದು ಕ್ಯೂಬ್‌ ನ ಪ್ರಮಾಣಿತ ನೊಟೇಷನ್‌ ಎಂದು ಬಗೆಯಲಾಗುವ ನೊಟೇಷನ್‌ ಗಳನ್ನು ಹೋಲುತ್ತವೆ. ಅವರು ಈ ಕ್ಯೂಬ್‌ ನ ತಾಂತ್ರಿಕತೆಯ ಮರ್ಮವನ್ನು ಅರಿಯಲು ಅದನ್ನು ಬಿಡಿಸಿ ಬಿಡಿಸಿ ನೋಡಿ, ಒಂದು ತಿಂಗಳು ಕಾಲ ತಾನು ಮಾಡಿದ ಎಲ್ಲಾ ರೂಪಾಂತರಗಳನ್ನು ದಾಖಲು ಮಾಡಿದರು.

ಆದರೇನಂತೆ? ಅವರ ಸಹೋದ್ಯೋಗಿಗಳು ಇದಕ್ಕೆ ನೀಡಿದ್ದು ತಣ್ಣನೆಯ ಪ್ರತಿಕ್ರಿಯೆ. ಕಾರಣ? ದಿನಪತ್ರಿಕೆಗಳಲ್ಲಿ, ಅದಾಗಲೇ ಕೆಲವು ಯುವಕ ಯುವತಿಯರು ಕೆಲವೇ ನಿಮಿಷಗಳಲ್ಲಿ ಅದರ ಒಗಟನ್ನು ಬಿಡಿಸಿದ್ದ ವಿಷಯ ವರದಿಯಾಗಿತ್ತು! ಮಾತ್ರವಲ್ಲ, ಟಾಟಾ ಇನ್ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರೀಸರ್ಚ್‌ ನ ಗಣಿತಜ್ಞರಲ್ಲೊಬ್ಬರು, ಗ್ರೂಪ್‌ ಥಿಯರಿ ಆಧರಿಸಿ ಸಿದ್ಧ ಪಡಸಿದ ಸೂತ್ರದಲ್ಲಿ ಅಂಬರ್‌ ಚಟರ್ಜಿ ಸೂಚಿಸಿದ್ದ ಪರಿಹಾರದಲ್ಲಿದ್ದುದಕ್ಕಿಂತ ಕಡಿಮೆ ಹಂತಗಳಿದ್ದವು. ಆದರೇನಂತೆ ಈಗ 71ರ ಹರೆಯದ ಅವರು ಹೊಸತಾಗಿ ರೂಬಿಕ್ಸ್‌ ಕ್ಯೂಬ್‌ ಇನ್ನೊಂದು ಆವೃತ್ತಿಯನ್ನು ಹೊರತರುವ ಹುಮ್ಮಸ್ಸಿನಲ್ಲಿದ್ದಾರೆ. ಅದರ ಆರು ಮುಖಗಳಲ್ಲಿ ಚದುರಂಗದ ರಾಜ, ರಾಣಿ, ಆನೆ, ರಥ, ಕುದುರೆ ಮತ್ತು ಕಾಲಾಳುಗಳನ್ನು  ಅಂಟಿಸಿ ಹೊಸತೊಂದು ತೊಡಕನ್ನು ಪರಿಚಯಿಸಲಿದ್ದೇನೆ ಅನ್ನುತ್ತಾರೆ ಅವರು.

   ರೂಬಿಕ್ಸ್‌ ಕ್ಯೂಬ್‌ ಕೆಲವರ ಬಾಳನ್ನು ಎಷ್ಟರ ಮಟ್ಟಿಗೆ ಆವರಿಸಿದೆ ಅನ್ನುವುದಕ್ಕೆ ಅಂಬರ್‌ ಚಟರ್ಜಿ ಒಂದು ನಿದರ್ಶನ.  

ಈ ಹಿಂದೆ ಅದನ್ನು ಹೆಚ್ಚು ಸಲೀಸಾಗಿ ತಿರುಗುವಂತೆ ಮಾಡಲು  ವ್ಯಾಸ್ಲಿನ್‌ ಇತ್ಯಾದಿ ವೈಟ್‌ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಲಾಗುತ್ತಿತ್ತು. ಈಗ ಅದರ ಅಗತ್ಯವಿಲ್ಲ. ಈಗ ಈ ಕ್ಯೂಬ್‌ ನೊಳಗೆ ಅಯಸ್ಕಾಂತವಿರುತ್ತದೆ ಮತ್ತು ತಿರುಗುವಿಕೆಗೆ ಹೆಚ್ಚು ಸಹಕಾರಿಯಾಗುವ ಉತ್ತಮ ಪದಾರ್ಥಗಳಿಂದ ಇದನ್ನು ತಯಾರಿಸಲಾಗುತ್ತದೆ. ಈಗ ಈ ಕ್ಯೂಬ್‌ ನ ಬಗೆಬಗೆಯ ಆವೃತ್ತಿಗಳು ತಲೆಯೆತ್ತಿವೆ. ವಿಶ್ವ ಕ್ಯೂಬ್‌ ಸಂಘಟನೆ ಎರಡು ವರ್ಷಗಳಿಗೊಮ್ಮೆ17  ಆವೃತ್ತಿಗಳನ್ನೊಳಗೊಳ್ಳುವ ವಿಶ್ವ ಚಾಂಪಿಯನ್ಶಿಪ್‌ ಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ಇದರಲ್ಲಿ ಬ್ಲೈಂಡ್‌ ಫೋಲ್ಡ್‌ ಸ್ಪರ್ಧೆ ಕೂಡಾ ಇರುತ್ತದೆ.  

ಈ ವಿಶ್ವ ಚಾಂಪ್ಯನ್‌ ಗಳ ನಡುವೆ ಈಗಾಗಲೇ ಕೆಲವು ದಿಗ್ಗಜರು ವಿಶ್ವ ವಿಖ್ಯಾತರಾಗಿದ್ದಾರೆ. ಆಟಿಸಂ ಅಸ್ವಾಸ್ಥ್ಯ ದಿಂದ  ಬಳಲುತ್ತಿರುವ ಅಮೇರಿಕನ್-ಕೊರಿಯನ್‌ ಮ್ಯಾಕ್ಸ್‌ ಪಾರ್ಕ್‌  ಹಾಗೂ ಆಸ್ಟ್ರೇಲಿಯಾದ ಫೆಲಿಕ್ಸ್‌ ಝೆಮ್ಡೆಗ್ಸ್‌ ಆಪ್ತ ಮಿತ್ರರು, ಆದರೆ ಕ್ಯೂಬ್‌ ನ ವಿಶ್ವ ಚಾಂಪಿಯನ್ಶಿಪ್‌ ನಲ್ಲಿ ಬದ್ಧ ಎದುರಾಳಿಗಳು! ಇವರಿಬ್ಬರ ಸಂಬಂಧನವನ್ನು ಆಧರಿಸಿರುವ ʼ ದ ಸ್ಪೀಡ್‌ ಕ್ಯೂಬರ್ಸ್‌ʼ ನೆಟ್‌ ಫ್ಲಿಕ್ಸ್‌ನ ಲ್ಲಿ ಲಭ್ಯವಿರುವ ಒಂದು ಮನೋಜ್ಞ ಸಾಕ್ಷ್ಯಚಿತ್ರ.

ದೇವರ ಸಂಖ್ಯೆ

ಕ್ಯೂಬ್‌ನ ಜನನವಾಗಿ ದಶಕಗಳ ನಂತರ ಇಂದಿನ ಈ ಡಿಜಿಟಲ್‌ ಯುಗದಲ್ಲಿ ನೂರಕ್ಕೂ ಮೀರಿ ಪರಿಹಾರದ ಅಲ್ಗೋರಿತಂ ಗಳನ್ನು ಗ್ರೂಪ್‌ ಥಿಯರಿ ಬಲ್ಲ ಗಣಿತಜ್ಞರು ಮತ್ತು ಇಂಥಾ ರಚನೆಗಳನ್ನು ಗುರುತಿಸುವಲ್ಲಿ ಪರಿಣಿತರಾದ ಯುವ ಜನಾಂಗ, ಮುಂದಿಟ್ಟಿದ್ದಾರೆ. ಇಂದು ಯೂ ಟ್ಯೂಬ್‌ ನಲ್ಲಿ ಇಂತಹ ಬಗೆ ಬಗೆಯ ವೀಡಿಯೋಗಳು ಲಭ್ಯ.

ಇದರ ಪರಿಹಾರಕ್ಕೆ ಅಗತ್ಯವಿರುವ ಕನಿಷ್ಠ ತಿರುಗಣೆಗಳ ಸಂಖ್ಯೆ- ಅದುವೇ ದೇವರ ಸಂಖ್ಯೆ - 90 ಡಿಗ್ರಿ ಕೋನದಲ್ಲಿ 20 ನ್ನು ಮೀರುವಂತಿಲ್ಲ ಎಂಬುದು ಸಾಬೀತಾಗಿದೆ.

ಭಾರತದಲ್ಲಿ

ಭಾರತದಲ್ಲಿ ಕ್ಯೂಬ್‌ ಹವ್ಯಾಸಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸ್ಥಳೀಯವಾಗಿ ಸ್ಪೀಡ್‌ ಕ್ಯೂಬ್‌ ಸ್ಪರ್ಧೆಗಳನ್ನು ಕೂಡಾ ಕೈಗೊಳ್ಳಲಾಗುತ್ತದೆ.

ಪಾದಗಳಿಂದಲೇ ಇದರ ಒಗಟನ್ನು ಬಿಡಿಸಿದ ವಿಲಕ್ಷಣ ಉದಾಹರಣೆಗಳಿಗೆ ಭಾರತ ನೆಲೆಯಾಗಿದೆಯಾದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ, ವೇಗವಾದ ಪರಿಹಾರ ಸ್ಪರ್ಧೆಯಲ್ಲಿ ಭಾರತೀಯರು ಇನ್ನೂ ಹೆಸರು ಮಾಡಿಲ್ಲ ಅನ್ನುವುದು ವಿಷಾದನೀಯ. 

ಭಾರತದಲ್ಲಿ ಕ್ಯೂಬಿಂಗ್‌ನಲ್ಲಿ ತರಬೇತಿ ನೀಡುವ ಕೋಚ್‌ ಗಳು ಹಲವರು ಇದ್ದಾರೆ. 13 ವರ್ಷಗಳಿಂದ ಕ್ಯೂಬಿಂಗ್ ಮಾಡುತ್ತಾ ಬಂದಿರುವ‌ ನಾಗರಕೋಯಿಲ್‌ ನ ಶಿಕ್ಷಕಿ ವಾಣಿ ಕೃಷ್ಣಮೂರ್ತಿ ಇಂದು ಪೂರ್ಣಾವಧಿ ಕೋಚ್‌ ಆಗಿದ್ದಾಳೆ. ವಿಶ್ವ ಕ್ಯೂಬಿಂಗ್‌ ಸಂಘದ ವತಿಯಿಂದ ಸ್ಪರ್ಧೆಗಳನ್ನುಆ ಯೋಜಿಸುವ ಈಕೆ ನಡೆಸುವ ಆನ್‌ ಲೈನ್‌ ತರಗತಿಗಳಿಗೆ ವಿಶ್ವದಾದ್ಯಂತ ವಿದ್ಯಾರ್ಥಿಗಳಿದ್ದಾರೆ. ಅವಳ ಮೊದಲ ವಿದ್ಯಾರ್ಥಿಗಳು ಓರ್ವ ವೈದ್ಯ ಮತ್ತು ಅವನ ಮಗಳು-ಈಗ ಅವಳು ಕೂಡಾ ಓರ್ವ ವೈದ್ಯೆ ಎನ್ನುತ್ತಾರೆ ವಾಣಿ. ಅವಳು ಅನಾಥಾಶ್ರಮದ ಮಕ್ಕಳಿಗೆ ಉಚಿತರಬೇತಿ ನೀಡುತ್ತಾಳೆ ಮಾತ್ರವಲ್ಲ ಶಿಬಿರಗಳನ್ನೂ ಏರ್ಪಡಿಸುತ್ತಾಳೆ.  

ಸಾಫ್ಟ್‌ ವೇರ್‌ ಉದ್ಯೋಗಿಗಳಲ್ಲಿ ಹಲವರಿಗೆ ಕ್ಯೂಬಿಂಗ್‌ ಹವ್ಯಾಸವಿದೆ. ಹೈದರಾಬಾದ್‌ ನ ಇಂಜಿನೀಯರ್‌ ಸಿರಿಶ್‌ ಸೊಮಂಚಿ 30 ವರ್ಷಗಳಿಂದ ಕ್ಯೂಬಿಂಗ್ ಹವ್ಯಾಸಿ. ಅವರ ಮಕ್ಕಳೂ ಅವರ ಜಾಡು ಹಿಡಿದಿದ್ದಾರೆ, ಯೂ ಟ್ಯೂಬ್‌ ನೋಡಿ ಕಲಿತಿದ್ದಾರೆ. ಇವರನ್ನೆಲ್ಲಾ ಮೀರಿಸುವ ಪ್ರತಿಭೆ ಬೆಂಗಳೂರಿನ ಶಾನ್‌ ಪಿಂಟೋ. ಹತ್ತನೇ ತರಗತಿ ತೇರ್ಗಡೆಯಾಗಿರುವ ಇವನು 7 ವರ್ಷದ ಬಾಲಕನಾಗಿದ್ದಾಗಲೇ 5 ನಿಮಿಷಗಳಲ್ಲಿ ಕ್ಯೂಬ್‌ ನ ಒಗಟು ಬಿಡಿಸಿಡುತ್ತಿದ್ದ. ಈಗ ಆ ಅವಧಿ 15  ಸೆಕಂಡ್‌ ಗಳಿಗೆ ಇಳಿದಿದೆ.

“ ಕ್ಯೂಬಿಂಗ್‌ ನಿರತರ ವರ್ಗ ಅತ್ಯಂತ ಪರಿಪೂರ್ಣ               ಮತ್ತು  ಆದರಣೀಯ ಸಮುದಾಯಗಳಲ್ಲಿ ಒಂದು. ವೇಗ, ವಯಸ್ಸು, ನ್ಯೂನತೆ ಇದಾವುದನ್ನೂ ಪರಿಗಣಿಸದೆ, ಯಾರೇ ಆಗಲಿ ಇಲ್ಲಿ ಸ್ವಾಗತಾರ್ಹ ಅನಿಸುವಂತಿದೆ. ಸ್ಪೀಡ್‌ ಕ್ಯೂಬಿಂಗ್‌ ನಲ್ಲಿ ತೊಡಗಿಸಿಕೊಳ್ಳುವ ಮಕ್ಕಳಿಗೆ ನಿಜವಾಗಿಯೂ ಉತ್ತಮ ಸಾಮಾಜಿಕ ಬಳಗ, ಸಾಮುದಾಯಿಕ ಹಾಗೂ ʼನಾವು ಇಲ್ಲಿ ಸಲ್ಲುವವರುʼ ಎಂಬ ಆರೋಗ್ಯಕರ ಪ್ರಜ್ಞೆ ಇರುವುದಲ್ಲದೆ ಅವರು ತುಂಬಾ ಮೌಲಿಕವಾದ ಜೀವನ ಪಾಠಗಳನ್ನು ಪಡೆದಿರುತ್ತಾರೆ. ಕ್ಯೂಬಿಂಗ್‌ ನ್ನು ಸುಧಾರಿಸುವುದರ ಬೆನ್ನುಹತ್ತುವುದು ಕೂಡಾ ಒಂದು ಅಪ್ಯಾಯಮಾನ ಚಟುವಟಿಕೆ.”

ಪಿಂಟೋನ ಈ ಮಾತುಗಳಿಗೆ ಮಾರ್ಕ್‌ ನ ಅನುಭವವೇ ಸಾಕ್ಷಿ. ಆಟಿಸಂನಿಂದ ಬಳಲುತ್ತಿದ್ದ, ಅವನ ಮೋಟಾರ್‌ ಕೋ ಆರ್ಡಿನೇಷನ್‌ ಕೌಶಲ್ಯವನ್ನು ವೃದ್ಧಿಸಲು ಅವನ  ತಾಯಿ ಅವನಿಗೆ ಕ್ಯೂಬಿಂಗ್ ಕಲಿಸಿದಳು. ಅವನು ಇತರ ಕ್ಯೂಬರ್‌ ಗಳ ಜೊತೆ ಸಂಪರ್ಕ ಬೆಳೆಸಿದ್ದು,  ಸಾಮಾಜಿಕ ಸಂಬಂಧ ಬೆಸೆಯುವುದರಲ್ಲಿ ಅವನಿಗೆ ನೆರವಾಯಿತು.   

 

ಆಟಕ್ಕುಂಟು, ಲೆಕ್ಕಕ್ಕಿಲ್ಲ!

 

2011ರಲ್ಲೇ ಮುಂಬಯಿಯ ಐ ಐ ಟಿ ಯಲ್ಲಿ ರೂಬಿಕ್ಸ್‌ ಕ್ಯೂಬ್‌ ಕ್ಲಬ್‌ ನ್ನು ಸ್ಥಾಪಿಸಲಾಯಿತು. ಮುಂದಿನ ವರ್ಷ,937  ಕ್ಯೂಬರ್ ಗಳು 30 ಸೆಕೆಂಡ್‌ ಗಳ ಒಳಗೆ, ಏಕ ಕಾಲಕ್ಕೆ ಕ್ಯೂಬಿಂಗ್‌ ಮಾಡಿ ವಿಶ್ವ ದಾಖಲೆ ಬರೆದರು.

ಸಾಫ್ಟ್‌ ವೇರ್‌ ಟೆಕಿ ಶಿವರಾಂ ಬನ್ಸಾಲ್‌ ಹಿಂದೆ  3 x 3  ಮಲ್ಟಿ ಬ್ಲೈಂಡ್‌ ಫೋಲ್ಡ್‌ ನಲ್ಲಿ ( ಪ್ರತಿಯೊಂದು ಬದಿಯಲ್ಲಿ 9 ಪುಟ್ಟ ಕ್ಯೂಬ್‌ ಗಳಿರುವುದನ್ನು 3x3  ಕ್ಯೂಬ್‌ ಎನ್ನಲಾಗುತ್ತದೆ.)  ವಿಶ್ವ ದಾಖಲೆ ಹೊಂದಿದ್ದ.ಇವನು 5x5 ಬ್ಲೈಂಡ್‌ ಫೋಲ್ಡ್‌ ಮತ್ತು ಮಲ್ಟಿ ಬ್ಲೈಂಡ್‌ ಫೋಲ್ಡ್‌ ಏಷಿಯನ್‌ ಚಾಂಪಿಯನ್ ಮತ್ತು ಗಿನ್ನೆಸ್‌ ರೆಕಾರ್ಡ್‌ ಹೊಂದಿರುವಾತ. ಅವನ ಸಹೋದರಿ 10  ವರ್ಷದ ಬಾಲಕಿಯಾಗಿದ್ದಾಲೇ ಕ್ಯೂಬಿಂಗ್‌ ಮಾಡುತ್ತಾ ಬಂದಿದ್ದಾಳೆ ಮತ್ತು 2 ಬಾರಿ ವಿಶ್ವ ಚಾಂಪ್ಯನ್‌ ಶಿಪ್‌ ನಲ್ಲಿ ಭಾಗವಹಿಸಿದ ಭಾರತದ ಏಕೈಕ ಮಹೀಳಾಪಟು ಈಕೆ.    

ಕ್ಯೂಬರ್‌ ಅಭಿಜೀತ್‌ ಘೊಡವೋಂಕರ್‌, ಮುಂಬಯಿ ಐ ಐ ಟಿ ಯಲ್ಲಿ ರೀಸರ್ಚ್‌ ಫೆಲೋ ಆಗಿದ್ದವನು. ಈಗ ಟಾಟಾ ಇನ್ಸ್‌ ಟಿ ಟ್ಯೂಟ್‌ ಆಫ್‌ ಫಂಡಮೆಂಟಲ್‌ ರೀಸರ್ಚ್‌ ನಲ್ಲಿ ಸೈಂಟಿಫಿಕ್‌ ಆಫಿಸರ್ ಮಾತ್ರವಲ್ಲ, ಡಬ್ಲ್ಯು ಸಿ ಎ ಯಲ್ಲಿ  ಭಾರತದ ಪಶ್ಚಿಮ ಪ್ರದೇಶದ ತರಬೇತಿ ಪ್ರತಿನಿಧಿ ಮತ್ತು 2019ರಿಂದ ಅದರ ಅಡ್ವೈಸರಿ ಕೌನ್ಸಿಲ್‌ ಸದಸ್ಯ. ಅಭಿಜೀತ್‌ ಭಾರತದಲ್ಲಿ ಹಲವು ಕ್ಯೂಬಿಂಗ್‌ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾನೆ ಮತ್ತು ಅವುಗಳನ್ನು ಆಯೋಜಿಸಿದ್ದಾನೆ ಕೂಡಾ. 4 ದೇಶಗಳಲ್ಲಿ 89 ಡಬ್ಲ್ಯು ಸಿ ಎ ಸ್ಪರ್ಧೆಗಳಲ್ಲಿ ಹಾಜರಾಗಿದ್ದಾನೆ.

ಇಷ್ಟಾದರೂ ರೂಬಿಕ್ಸ್‌ ಕ್ಯೂಬ್‌ ʼಕ್ರೀಡೆʼ ಏಕೆ ಅಷ್ಟೊಂದು ಸದ್ದು ಮಾಡುವುದಿಲ್ಲ? ಮಾಧ್ಯಮಗಳ ಕ್ರೀಡಾ ಪುಟಗಳಲ್ಲಿ ಸುದ್ದಿ ಆಗುವುದಿಲ್ಲ?

4x4 ಬ್ಲೈಂಡ್‌ ಫೊಲ್ಡೆಡ್‌  ನಲ್ಲಿ ಹಾಲಿ ಏಷಿಯನ್‌ ಚಾಂಪಿಯನ್‌ ಮತ್ತು 4x4 ಬ್ಲೈಂಡ್‌ ಫೊಲ್ಡೆಡ್‌ ಹಾಗೂ 5x5  ಬ್ಲೈಂಡ್‌ ಫೊಲ್ಡೆಡ್‌  ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅಭಿಜೀತ್‌ ನ ಮಾತುಗಳಲ್ಲಿ ಇದಕ್ಕೆ ಉತ್ತರವಿದೆ!

“ಕ್ಯೂಬಿಂಗ್‌ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಹಾಗೂ ಅವುಗಳನ್ನು ಆಯೋಜಿಸುವವರು, ತಮ್ಮ ವೈಯಕ್ತಿಕ ಆಸಕ್ತಿಯಿಂದ ಇವನ್ನು ಮಾಡಬೇಕೇ ಹೊರತು ಇದಕ್ಕೆ ಒಂದು ಕ್ರೀಡೆ ಎಂಬ ನೆಲೆಯಲ್ಲಿ ಸರ್ಕಾರದಿಂದ ಯಾವುದೇ ಪ್ರಾಯೋಜಕತ್ವ ಅಥವಾ ಅಂಗೀಕಾರ ಇಲ್ಲ.”

ಹೌದು! ಈ ರೂಬಿಕ್ಸ್‌ ಕ್ಯೂಬ್ ಅಕ್ಷರಶಃ‌ ಆಟಕ್ಕುಂಟು, ಲೆಕ್ಕಕ್ಕಿಲ್ಲ! ಅರ್ಥಾತ್‌ ಅದನ್ನು ಈಗಲೂ ಒಂದು ಆಟಿಕೆ ಎಂದೇ ಪರಿಗಣಿಸಲಾಗುತ್ತದೆ! ಹೀಗಿರುವಾಗ ಅದನ್ನು ಬಿಡಿಸುವಾಟವನ್ನು ಕ್ರೀಡೆ ಎಂದು ಪರಿಗಣಿಸುವುದು ಹೇಗೆ? ಆದುದರಿಂದ ಈ ವಿಶ್ವವ್ಯಾಪಿ ಕ್ಯೂಬ್‌ಗೆ  ತ್ರಿಶಂಕು ಸ್ಥಿತಿ ತಪ್ಪಿದ್ದಲ್ಲ. 

ಬಹುಶಃ ಅದರ ಸೃಷ್ಟಿಕರ್ತ ಲಘುವಾದ ಧಾಟಿಯಲ್ಲಿ ಅದಕ್ಕೆ ನೀಡಿದ ವ್ಯಾಖ್ಯಾನ ಅದರ ಸ್ಥಾನ ಮಾನಕ್ಕೆ ಕನ್ನಡಿ ಹಿಡಿಯುತ್ತದೆ:

“ನನಗೆ ಅನಿಸುತ್ತದೆ ಬಹುಶಃ ಈ ಕ್ಯೂಬ್‌, ನಮಗೆ ಕೈಗಳಿವೆ ಎಂಬುದನ್ನು ನೆನಪಿಸುತ್ತದೆ. (ಇದರ ದೆಸೆಯಿಂದ) ನೀವು ಕೇವಲ ಆಲೋಚನಾ ಮಗ್ನರಾಗಿರುವುದಿಲ್ಲ, ನೀವು ಏನೋ ಒಂದನ್ನು ಮಾಡುತ್ತಲೇ ಇರುತ್ತೀರಿ. ಇದು ನೀವು ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಒಂದು ಕಲಾಕೃತಿ.”

-ಸತ್ಯಕಾಮ ಶರ್ಮಾ  ಕಾಸರಗೋಡು

      

 

    

 

 

    

 

Comments

Post a Comment

Popular posts from this blog

  ಛಾಯಾಚಿತ್ರ ಒಂದು, ಸಂಚಲನಗಳು ಹತ್ತು ಹಲವು   ಮೊಬೈಲ್‌, ಸಾಮಾಜಿಕ ಜಾಲತಾಣ ಬಿಡಿ; ಇಂಟರ್ನೆಟ್ ಕೂಡಾ ಅಂಬೆಗಾಲಿಡುತ್ತಿದ್ದ ತೊಂಭತ್ತನೇ ದಶಕದ ಕಾಲವದು. ಆದಾಗ್ಯೂ   ಅದೊಂದು ಛಾಯಾಚಿತ್ರ     ಅಂದು ಸೃಷ್ಟಿಸಿದ ಸಂಚಲನ, ಎಬ್ಬಿಸಿದ ಆಕ್ರೋಶ ಮತ್ತು ತಲ್ಲಣಗಳ ತೀವ್ರತೆ- ನಾವು ಇಂದು ವೈರಲ್‌ ಎಂದು ಏನನ್ನು ಕರೆಯುತ್ತೇವೆಯೋ- ಅದಕ್ಕೆ ಸಮಾನ.   ಸುಡುವ ಕ್ಷಾಮಕ್ಕೆ ತುತ್ತಾದ ಸುಡಾನ್‌   ಅಂತಃಕಲಹ ಅನ್ನುವುದು ಆಫ್ರಿಕಾ ಖಂಡದ ದೇಶಗಳ ಹಣೆಬರಹ. ಅಂದಮೇಲೆ, ಸುಡಾನ್‌ ನಂತಹಾ ಆಫ್ರಿಕನ್ ದೇಶವನ್ನು ಅದು ಕಾಡದೆ ಇರುತ್ತದೆಯೇ? ಆದರೆ   ಒಳಜಗಳ ಫಲದಿಂದ ಭೀಕರ ಕ್ಷಾಮಕ್ಕೆ ತುತ್ತಾದದ್ದು ಸುಡಾನ್‌ನ ಘೋರ ದುರಂತ. ಆಫ್ರಿಕಾದ ಈಶಾನ್ಯದಲ್ಲಿರುವ ಸುಡಾನ್ ಗೆ   ಸಾಂಸ್ಕೃತಿಕವಾಗಿ ಶತಶತಮಾನಗಳ ಸಮೃದ್ಧ ಪರಂಪರೆಯಿದೆ. ಇದು ಕತ್ತಲೆಯ ಖಂಡದ ಬೃಹತ್‌ ರಾಷ್ಟ್ರಗಳಲ್ಲಿ ಒಂದು. ಹೆಚ್ಚುಕಮ್ಮಿ ಕೃಷಿಯೇ ಆರ್ಥಿಕತೆಯ ಮೂಲವಾಗಿರುವ ಈ ದೇಶ ಬಂಜರು, ಅರೆ ಬಂಜರು ಭೂಮಿ ಮತ್ತು ಹುಲ್ಲುಗಾವಲುಗಳಿಂದ ತುಂಬಿದ್ದು, ತೈಲ ಮತ್ತು ಖನಿಜಗಳಿಗೆ ಇಲ್ಲಿ ಕೊರತೆಯೇನೂ ಇಲ್ಲ.   ಬ್ರಿಟನ್‌ ಹಾಗೂ ಈಜಿಪ್ಟ್‌ ದೇಶಗಳು ಜಂಟಿಯಾಗಿ ಆಳುತ್ತಿದ್ದ ಈ ದೇಶ 1956 ರಲ್ಲಿ ಸ್ವತಂತ್ರವಾಯಿತು. ಆ   ದರೆ ವಿವಿಧ ಸಂಸ್ಕೃತಿ, ಭಾಷೆ ಹಾಗೂ ಜನಾಂಗಗಳ ತಾಣವಾಗಿರುವ ಸುಡಾನ್‌ನ ಪಾಲಿಗೆ ರಾಜಕೀಯ ಅಸ್ಥಿರತೆ, ಸೇನಾಡಳಿತ ಹ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...