Skip to main content

 

ಮಂಕು ತಿಮ್ಮನ ರಸ್ತೆ

 

ನಡೆಯುತ್ತೇನೆ ಮಂಕು

ಕವಿದ  ವನ   ಹಾಗೆ

ಮಂಕು ತಿಮ್ಮನ ರಸ್ತೆಯಲಿ

 

ಇದು ಗಾಂಧಿ ಬಜಾರು

 

ಹಿಂದೆ ಇಲ್ಲಿ ಎದುರಾಗುತ್ತಿದ್ದರು

ನಡೆದಾಡುವ ಕಾವ್ಯ ನಿಸಾರರು

ಧುತ್ತನೆ ಮತ್ತದೇ ಬೇಜಾರು

ಕಳೆಯಲು ಸಂಜೆ ಬರುತಿದ್ದವರು

 

ಠಾಕು ಠೀಕು ಅದೇ ಕೋಟು ಪ್ಯಾಂಟು

ಅವರದ್ದು ಇಂಗ್ಲಿಷು

ಕಾವ್ಯ ಸುರಿಸುವ ದಿರಿಸು

ನಗು ಬೀರುವ ಕನ್ನಡ

ಮನಸು ಗಾಂಧಿ ಬಜಾರು

 

ಮಾಸದ ಲಾಸ್ಯದ ನಿತ್ಯೋತ್ಸವದ ಕವಿಗೆ

ತೆರಳಿದ ಬಾಹ್ಯಲೋಕವೂ 

ಅರಳುವ ಕಾವ್ಯಲೋಕವು

 

ಇನ್ನೂ ಹಿಂದೆ ಶಿಸ್ತಿನಿಂದ

ನಿತ್ಯ ನಡೆದು ಬಂದ

ಕನ್ನಡದ ಚರಾಸ್ತಿ ಮಾಸ್ತಿಯವರ

ಪಾದಸ್ಪರ್ಶಕೆ ಪಾವನವಾದ

ಪುಳಕಗೊಂಡ ರಸ್ತೆಯಿದು

 

ಅವರ ಕೈಗೆ ಕೊಡೆಯ ನಂಟು

ಕಂಡ ಕಂಡ ಮಕ್ಕಳಿಗೆ ಕೊಡಲು

ಅವರ ಜೇಬಲ್ಲಿ ಪೆಪ್ಪರುಮಿಂಟು

 

ಅವರ ನಡಿಗೆಯ ಧನ್ಯದೃಶ್ಯ

ಕಾಣದವರಿಗೂ ಅಡಿಗಡಿಗೆ

ಕಲ್ಪನೆಯಲಿ ಅದು ಬರುವುದುಂಟು

 

ಅವರು ನಡೆಯದ ದಿನ

ರಸ್ತೆಯೂ ಅಳುವುದನ

ಕಂಡವರುಂಟು

ಗಾಂಧಿ ಸಾಹಿತಿ ಆದಂತೆ

ಒಂದು ದಂತ ಕತೆ ಮಾಸ್ತಿ

ಅನಿಸುವುದುಂಟು

 

ಸುಮ್ಮನಲ್ಲ ಅವರು ಹೆಜ್ಜೆಹಾಕಿದ

ಬಡಾವಣೆ ಗಾಂಧಿ ಬಜಾರು

ಖಾದಿ ಭಂಡಾರ, ಡಿವಿಜಿ ಕನಸಿನ

ಗೋಖಲೆ ಸಂಸ್ಥೆಗಳೇ ಕುರುಹು     

 

ಡಿವಿಜಿ ರಸ್ತೆ ಬಿಟ್ಟು ನಡೆದರೆ

ಹೆಚ್ಚು ದೂರವೇನಿಲ್ಲ

ಕನ್ನಡಿಗರ ಅವಕೃಪೆಗೆ ಒಳಗಾದ

ಅನಕೃ ಹೆಸರಿನ ಪಾರ್ಕು

ನರಸಿಂಹಯ್ಯನವರ ಕರ್ಮಭೂಮಿ

ನ್ಯಾಷನಲ್ ಕಾಲೇಜು

 

ವರ್ಷ ವರ್ಷ ಕಡಲೆ ಕಾಯಿ ಪರಿಷೆ

ನಡೆವ ಬಸವನಗುಡಿಯಿಂದ ಇಳಿದರೆ

ತಲುಪುವ ರಸ್ತೆ ಡಿವಿಜಿ ಹೆಸರಿಗಷ್ಟೆ

 

ಇಲ್ಲಿ ಇವತ್ತು ಐವತ್ತು ನೂರು

ಅಡಿಗಳಿಗೊಂದು ದರ್ಶಿನಿ ಹೋಟೆಲು

ತಿಂಡಿಪೋತರ ದಂಡು

ಬಳಕೆದಾರರ ಹಿಂಡು

ಉದಾತ್ತ ತತ್ತ್ವಗಳ ಅಣಕವಾಡು

ಇನ್ನೆಲ್ಲಿಯ ಗಾಂಧಿ?

ಇದು ಬರಿ ಬಜಾರು

 

ಆರದ ದೀವಿಗೆ ಅಗಲಿದ ಡಿವಿಜಿ

ಎಲ್ಲ ಕಾಲಕ್ಕೂ ಸಲ್ಲುವಂತಹ ಕಗ್ಗ

ಅಂದಕಾಲತ್ತಿಲೇ ಬರೆದವರು

 

ಹಾಕಿಕೊಟ್ಟ ಹಾದಿಯಲಿ ನಡೆÀಯಲಾರೆ

ಅವರ ಹೆಸರಿಟ್ಟ ರಸ್ತೆಯನು ಮಾತ್ರ

ತೊರೆಯಲಾರೆ, ಮರೆಯಲಾರೆ

                  

(‘ತುಷಾರ ಜುಲೈ 2022 ಸಂಚಿಕೆಯಲ್ಲಿ ಪ್ರಕಟ)

Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ -ಆಗಸ್ಟ್‌ 2025ರ ತುಷಾರ ದಲ್ಲಿ ಪ್ರಕಟವಾಗಿತ್ತು     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾ...
  ಛಾಯಾಚಿತ್ರ ಒಂದು, ಸಂಚಲನಗಳು ಹತ್ತು ಹಲವು   ಮೊಬೈಲ್‌, ಸಾಮಾಜಿಕ ಜಾಲತಾಣ ಬಿಡಿ; ಇಂಟರ್ನೆಟ್ ಕೂಡಾ ಅಂಬೆಗಾಲಿಡುತ್ತಿದ್ದ ತೊಂಭತ್ತನೇ ದಶಕದ ಕಾಲವದು. ಆದಾಗ್ಯೂ   ಅದೊಂದು ಛಾಯಾಚಿತ್ರ     ಅಂದು ಸೃಷ್ಟಿಸಿದ ಸಂಚಲನ, ಎಬ್ಬಿಸಿದ ಆಕ್ರೋಶ ಮತ್ತು ತಲ್ಲಣಗಳ ತೀವ್ರತೆ- ನಾವು ಇಂದು ವೈರಲ್‌ ಎಂದು ಏನನ್ನು ಕರೆಯುತ್ತೇವೆಯೋ- ಅದಕ್ಕೆ ಸಮಾನ.   ಸುಡುವ ಕ್ಷಾಮಕ್ಕೆ ತುತ್ತಾದ ಸುಡಾನ್‌   ಅಂತಃಕಲಹ ಅನ್ನುವುದು ಆಫ್ರಿಕಾ ಖಂಡದ ದೇಶಗಳ ಹಣೆಬರಹ. ಅಂದಮೇಲೆ, ಸುಡಾನ್‌ ನಂತಹಾ ಆಫ್ರಿಕನ್ ದೇಶವನ್ನು ಅದು ಕಾಡದೆ ಇರುತ್ತದೆಯೇ? ಆದರೆ   ಒಳಜಗಳ ಫಲದಿಂದ ಭೀಕರ ಕ್ಷಾಮಕ್ಕೆ ತುತ್ತಾದದ್ದು ಸುಡಾನ್‌ನ ಘೋರ ದುರಂತ. ಆಫ್ರಿಕಾದ ಈಶಾನ್ಯದಲ್ಲಿರುವ ಸುಡಾನ್ ಗೆ   ಸಾಂಸ್ಕೃತಿಕವಾಗಿ ಶತಶತಮಾನಗಳ ಸಮೃದ್ಧ ಪರಂಪರೆಯಿದೆ. ಇದು ಕತ್ತಲೆಯ ಖಂಡದ ಬೃಹತ್‌ ರಾಷ್ಟ್ರಗಳಲ್ಲಿ ಒಂದು. ಹೆಚ್ಚುಕಮ್ಮಿ ಕೃಷಿಯೇ ಆರ್ಥಿಕತೆಯ ಮೂಲವಾಗಿರುವ ಈ ದೇಶ ಬಂಜರು, ಅರೆ ಬಂಜರು ಭೂಮಿ ಮತ್ತು ಹುಲ್ಲುಗಾವಲುಗಳಿಂದ ತುಂಬಿದ್ದು, ತೈಲ ಮತ್ತು ಖನಿಜಗಳಿಗೆ ಇಲ್ಲಿ ಕೊರತೆಯೇನೂ ಇಲ್ಲ.   ಬ್ರಿಟನ್‌ ಹಾಗೂ ಈಜಿಪ್ಟ್‌ ದೇಶಗಳು ಜಂಟಿಯಾಗಿ ಆಳುತ್ತಿದ್ದ ಈ ದೇಶ 1956 ರಲ್ಲಿ ಸ್ವತಂತ್ರವಾಯಿತು. ಆ   ದರೆ ವಿವಿಧ ಸಂಸ್ಕೃತಿ, ಭಾಷೆ ಹಾಗೂ ಜನಾಂಗಗಳ ತಾಣವಾಗಿರುವ ಸುಡಾನ್‌ನ ಪಾಲಿಗೆ ರಾಜಕೀಯ ಅಸ್ಥಿರತೆ, ಸೇನಾಡಳಿತ ಹ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...