Skip to main content

 ಮಾರ್ಚ್ 15 ( ರವಿ ಬೆಳಗೆರೆ ಅವರ ಜನ್ಮ ದಿನದಂದು ) 2022  'ವಿಶ್ವವಾಣಿ' ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಬರೆಹದ ಮೂಲ ಪ್ರತಿ (ಅನ್-ಎಡಿಟೆಡ್) ಇಲ್ಲಿದೆ. ಇದು ಪ್ರಕಟವಾದದ್ದು 'ಕಡು ದಿಗಂತದಲ್ಲಿ ಬೆಳಕಿನ ಗೆರೆ ಆಗಿದ್ದ ರವಿಯ ಜನ್ಮದಿನದ ಹೊತ್ತಲ್ಲಿ . . .' ಎಂಬ ಶೀರ್ಷಿಕೆಯಡಿಯಲ್ಲಿ. ಸಂಪಾದಕರು, ಉಪ ಸಂಹಾರದ  ಕೊನೆಯ ವಾಕ್ಯವನ್ನು, ‘ರ ಬೆ’ ಅವರ ಜನ್ಮ ದಿನಕ್ಕೆ ತಕ್ಕಂತೆ ಬದಲಿಸಿದ್ದರು.    

 

ನಾನು ನೀಡಿದ ಶೀರ್ಷಿಕೆ: ರೈಲ್ವೇ ಹಳಿ ಮೇಲೆ ತಾನಿಟ್ಟ ನಾಣ್ಯ ಜಜ್ಜಿ ಹೋಗಿರುವುದನ್ನು ಕಂಡು ಅವನು ಸಂಭ್ರಮಪಡುತ್ತಿದ್ದ!

 

ಹಳದಿ ಪತ್ರಿಕೆಯಿಂದ ಹೆಸರು ಮಾಡಿ ಹೆಸರಿಗೆ ಒಂದಿಷ್ಟು ಕೆಸರು ಮೆತ್ತಿಸಿಕೊಂಡ, ಅಕ್ಷರ ತಪಸ್ವಿ ರವಿ ಬೆಳಗೆರೆ ಅವರನ್ನು, ‘ನೀಲಿ ಚಿತ್ರಗಳ ಮೂಲಕ (ಕು)ಪ್ರಸಿದ್ಧಳಾದ ಸನ್ನಿ ಲಿಯೋನ್ ಅಂಥವಳಿಗೆ ಅಗ್ನಿs ಶ್ರೀಧರ್ ಹೋಲಿಸಿದ್ದು-ನೂರಕ್ಕೆ ನೂರು ಸರಿ. ಅಥವಾ ಅಲ್ಲ!

  ಏಕೆಂದರೆ ನನಗೆ ಎಷ್ಟೋ ಬಾರಿ ಅನಿಸಿದ್ದಿದೆ-‘ ಸನ್ನಿ ಲಿಯೋನ್ ಲಕ್ಷಣವಾಗಿ ಸೀರೆ ಉಟ್ಟು ಪೋಸ್ ಕೊಟ್ಟರೆ, ಆಕೆ ನೋಡಲು (ಮುಖವನ್ನು ಎಂದು ತಿದ್ದಿಕೊಂಡು ಓದುವುದು) ಎಷ್ಟು ಸುಂದರಿಯಾಗಿ ಕಾಣಿಸಬಹುದುಎಂದು!

 ಹಲವರ ಪಾಲಿಗೆ, ಕಡು ದಿಗಂತದಲ್ಲಿ ಒಂದು ಬೆಳಕಿನಗೆರೆ ಆಗಿದ್ದ ರವಿ ಅವರಿಗೂ, ಮಾತನ್ನು ಅನ್ವಯಿಸಬಹುದು. ಅದಮ್ಯ, ಅನನ್ಯ ಮೇರು ಪ್ರತಿಭೆ ಒಂದಿಷ್ಟು ಸಂಯಮ, ಸಾವಧಾನ ಮತ್ತು ನಿಯಂತ್ರಣಗಳನ್ನು ಮೈಗೂಡಿಸಿಕೊಂಡಿದ್ದರೆ, ವ್ಯಸನಗಳ ದಾಸನಾಗದೆ ಇದ್ದಿದ್ದರೆ, ಕನ್ನಡಕ್ಕೆ ಅದೆಂಥಾ ಸಾಹಿತಿ ದೊರಕುತ್ತಿದ್ದರು!

 ಆಸಿಡ್ ದಾಳಿಗೆ ತುತ್ತಾದ ಹಸೀನಾಳಂತ ದುರ್ದೈವಿಗಳ ಪಾಲಿಗೆ ಆತ ದೀನ ಬಂಧು. ಹಸೀನಾ ಪರವಾಗಿ ಬರೆದೂ ಬರೆದೂ ಒಂದು ಸಹಾನುಭೂತಿಯ ಅಲೆ ಎಬ್ಬಿಸಿದ್ದಲ್ಲದೆ ಅವಳ ಚಿಕಿತ್ಸೆಗಾಗಿ ಓದುಗರಿಂದ ದೇಣಿಗೆ ಸಂಗ್ರಹಿಸುವುದರಲ್ಲೂ ಅವರು ಯಶಸ್ವಿ ಆದರು. ಕಾರ್ಗಿಲ್ ಹುತಾತ್ಮರ ಅವಲಂಬಿಗಳಿಗೂ ದೇಣಿಗೆ ಸಂಗ್ರಹಿಸಿದರು. ಹೇಳದೆ ಕೇಳದೆ ಬಂದ ಸಾವಿಗೆ ಶರಣಾದ ಅವರ ಯುವ ಗೆಳೆಯ, ಕರ್ಮಠ ಪತ್ರಕರ್ತ ಸೀತಾನದಿ ಸುರೇಂದ್ರರ ಹೆಸರಿನಲ್ಲಿ ಯುವ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಒಂದು ಸ್ಕಾಲರ್ಶಿಪ್ ಕೂಡಾ ಸ್ಥಾಪಿಸಿದರು. ಆದಾಗ್ಯೂ, ಇವೆಲ್ಲವನ್ನು ಮಾಡದೆಯೂ ಅವರ ನೆಚ್ಚಿನ ಮುಖೇಶ್ ಹಾಡುಗಳಲ್ಲಿ ಕರಗಿ ಹೋಗುತ್ತಾ ಎಂದೋ ಕೈಕೊಟ್ಟ ಅವಳನ್ನು ಇಂದಿಗೂ ನೆನೆಯುತ್ತಾ ಹಾಯಾಗಿರಬುಹುದಿತ್ತು ರವಿಗೆ. ಅವರು ಹಾಗೆ ಮಾಡಲಿಲ್ಲ.

ಅವರಿಗೆ ಪಾದಗಳೇ ಇಲ್ಲ- ಜಾಗದಲ್ಲಿ ಇರುವುದೆರಡು ಚಕ್ರಗಳು ಅನ್ನುವ ಹಾಗೆ, ದೇಶ ಭಾಷೆಗಳ ಎಲ್ಲೆ ಮೀರಿ ಸುತ್ತಿದರು. ಅಫಘಾನಿಸ್ಥಾನ, ಪಾಕಿಸ್ಥಾನ, ಆಫ್ರಿಕಾ ಎಲ್ಲೆಡೆಯಿಂದ ತಂದ ಅನುಭದ ಮೂಟೆಯನ್ನುಹಾಯ್ ಬೆಂಗಳೂರು ವಿನ ಪುಟಗಳಲ್ಲಿ ಸುರುವಿದರು.

ಅಮ್ಮನ ಬಗೆಗೆ ಬರೆದದ್ದೇ ಬರೆದದ್ದು. ಬರೆದುದನ್ನೇ ಬರೆದದ್ದು ಆದರೇನು? ಪ್ರತಿ ಬಾರಿಯೂ ಎಷ್ಟೊಂದು ವೈವಿಧ್ಯಮಯವಾಗಿ ಬರೆದರು, ಮಾತ್ರವಲ್ಲ ಎಷ್ಟೊಂದು ಆಪ್ತವಾಗಿ ಬರೆದರು. ಕರುನಾಡಿನ ಹೆಂಗಳೆಯರ ಎದೆಗೆ ಅವರು ಲಗ್ಗೆ ಹಾಕಿದ್ದು ಹೀಗೆ. ಮಾತ್ರವಲ್ಲ, ಅಮ್ಮನಲ್ಲಿ ದೇವರನ್ನು ಕಾಣುವ ಎಷ್ಟೋ ಗಂಡಸರಿಗೆ ರವಿ ಬೆಳಗೆರೆ ಪರಿವಾರದ ಸದಸ್ಯ, ಕರುಳು ಹಂಚಿಕೊಂಡವರಷ್ಟು ಹತ್ತಿರವೆನಿಸಿದರು. ಆದರೆ ಅಪ್ಪ? ಹಾಗಂದರೆ ಮೌನಿಯಾಗಿಬಿಡುತ್ತಿದ್ದ ರವಿಯ ಇನ್ನೊಂದು ಮುಖದ ಬಗ್ಗೆ ಬರೆಯದಿರುವುದೇ ಲೇಸು. ಪ್ರಾಣ ವಾಯು ಹೊಕ್ಕುಹೊರಬರದ ಜೀವ ಇಲ್ಲ ಅನ್ನುವ ಹಾಗೆ ರವಿ ಬೆಳಗೆರೆ ಬರೆಯದ ವಿಷಯಗಳಿಲ್ಲ-ಕ್ರಿಕೆಟ್, ವಿಜ್ಞಾನ ಹೊರತು ಪಡಿಸಿದರೆ ಅವರು ಕೈಯಾಡಿಸದ ಕ್ಷೇತ್ರವಿಲ್ಲ. (‘ಹಾಯ್ ಬೆಂಗಳೂರು ಪ್ರಾರಂಭವಾದ ಹೊಸತರಲ್ಲಿ ಕ್ರೀಡೆಗೆ ಒಂದು ಪುಟ ಮೀಸಲಾಗಿಟ್ಟಂತೆ ನೆನಪು. ಅದು ಆಮೇಲೆ ಹೇಳಹೆಸರಿಲ್ಲದೆ ಮಂಗ ಮಾಯವಾಯಿತು!) ಮೊತ್ತಮೊದಲ ಬಾರಿಗೆ ಕನ್ನಡದ ಪತ್ರಕರ್ತನೊಬ್ಬ ತನ್ನ ಮುಕೇಶ್ ಹಾಡುಗಳ ಹುಚ್ಚಿನ ಕುರಿತು ಬರೆದಾಗ ಎಷ್ಟೋ ಮಂದಿ ಓದುಗರಿಗೆಅರೇ, ಇವರೂ ಕೂಡಾ ನಮ್ಮ ಹಾಗೆ ಮನುಷ್ಯರು ಅನಿಸಿದ್ದು ನಿಜ.

ಹಿಮಾಲಯನ್ ಬ್ಲಂಡರ್ ನ್ನು ಕನ್ನಡಕ್ಕೆ ತಂದು ಎತ್ತರಕೇರಿದ ರವಿ, ಖುಶ್ವಂತ ಸಿಂಗ್ ಎಂಬ ದಿಗ್ಗಜನ  ಜೊತೆಗಿನ ತಮ್ಮ ಸಲಿಗೆಯನ್ನು ರಸವತ್ತಾಗಿ ಬಣ್ಣಿಸಿ ನಮ್ಮಂತವರಲ್ಲಿ ಅಸೂಯೆ ಹುಟ್ಟಿಸಿದರು. ಪ್ರತೀ ವಾರ ನಮ್ಮ ಕೈಗೆಜೋಗಿ (ಜಾನಕಿ), ಜಯಂತ ಕಾಯ್ಕಿಣಿ, ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಆಲೂರು ಚಂದ್ರಶೇಖರರ ಅಂಕಣಗಳನ್ನು ಇಡುತ್ತಿದ್ದ ರವಿ, ಅಂಗಡಿಗಳಿಂದಹಾಯ್ ಬೆಂಗಳೂರ್ ಕೊಳ್ಳುವಾಗ ನನ್ನಂಥವರು ನಾಚಿಕೆ ಪಡದಂತೆ ಮಾಡಿದರು.

ಯಂಡಮೂರಿ ವೀರೇಂದ್ರನಾಥರು ಹಾಕಿ ಕೊಟ್ಟಸನ್ಮಾರ್ಗದಲ್ಲಿ ಬಹುದೂರ ಸಾಗಿದ್ದ ನನ್ನಂಥವರು, ‘ತನ್ನ ಎಡವಟ್ಟುಗಳ ಕುರಿತು, ಕೈಕೊಟ್ಟವಳ ಕುರಿತು, ಕ್ರೈಂ ಕುರಿತು, ಹಾಡು, ಸಿಗರೇಟ್, ಮಾತೃಪ್ರೇಮದ ಕುರಿತು ಬರೆದು ಆಗಿಬಿಟ್ಟನಲ್ಲ ಜನಪ್ರಿಯ? ಕೂಡಿ ಹಾಕಿದನಲ್ಲ ಸಂಪತ್ತು?’ ಎಲಾ ಇವನ!’ಎಂದು ಬೆರಗಾಗುವಂತೆ ಮಾಡಿದರು. . . ರವಿಯೆಂಬ ರಗಳೆಗೆರೆ.

ಇನ್ನೇನು ಸಂಜೆಗೆ ಇನ್ನು ಕೆಲವೇ ತಾಸು ಬಾಕಿ ಅನ್ನುವಷ್ಟರಲ್ಲಿ ತನ್ನ ಸಿಟ್ಟು, ಸೆಡವು, ಕೋಪ, ತಾಪ ಎಲ್ಲಾ ಕಡಿಮೆ ಮಾಡಿಕೊಂಡು ಕೆಳಗಿಳಿಯ ತೊಡಗುವ ಜಗದ್ಚಕ್ಷುಃ ಸೂರ್ಯನ ಹಾಗೆ ಕೊನೆ ಕೊನೆಗೆ ಸದ್ದಿಲ್ಲದ ಸರದಾರನಾಗಿ ಬಿ ರವಿ ಅವರ ದುರವಸ್ಥೆಯ ಹಿನ್ನೆಲೆಯಲ್ಲಿ, ಇದು ಕ್ರೂರ ವ್ಯಂಗ್ಯ ಅನಿಸಬಹುದು-ಆದರೆಎಡವಟ್ಟು ಎಂಬ ಪದ ಕಣ್ಣಿಗೆ ಬಿದ್ದಾಗಲೆಲ್ಲಾ ಅವರ ನೆಪಾಗುವಷ್ಟು ಅವರು ಅದನ್ನು ಬಳಸಿದರು. ಅದರಂತೆಯೇ ಬಾಳಿದರು ಕೂಡಾ. ಖದರು, ಮಟಾಷ್, ಖಾಸ್ ಬಾತ್. . . ಅವರು ಕನ್ನಡಕ್ಕೆ ತಂದ ಉರ್ದು, ತೆಲುಗು, ಹಿಂದಿ ಶಬ್ದ ಭಂಡಾರ ಹೇಗಿದೆಯೆಂದರೆ, ಅವುಗಳ ಮೂಲ ಯಾವುದು ಎಂದು ತಿಳಿಯಲಾರದಷ್ಟು ಅವುಗಳು ಇಂದು ಕನ್ನಡದೊಳಗೆ ಹಾಸು ಹೊಕ್ಕಾಗಿವೆ. ಬಳ್ಳಾರಿಯ ತೆಲುಗಿನ ಸೊಗಡನ್ನು ಕನ್ನಡದತ್ತ ಹರಿಸಿದರುರವಿಗಾರು. ‘ಯು ಆರ್ ರೀಯಲಿ ಗ್ರೇಟ್ ಸರ್!’ ನಿಮಗಿದೋ ಪೊಡಮಡುವೆ!

ಆದರೂ ಎಲ್ಲೋ ಒಂದು ಕಡೆ ವಿವೇಕಿಗಳಿಗೆ, ಪ್ರಜ್ಞಾವಂತರಿಗೆ, ಚಿಂತಕರಿಗೆ ಅವರ ನಾಗಾಲೋಟ, ಅದಮ್ಯ ಉತ್ಸಾಹದ ಹಿಂದೆ ಒಂದು ಚಡಪಡಿಸುವ ಅತೃಪ್ತ ವ್ಯಕ್ತಿತ್ವದ ವಾಸನೆ ಹೊಡೆದಂತಾಗುತ್ತಿತ್ತು. ಅವರಲಿಬಿಡೋ ಅನ್ನುವುದು ಅವರನ್ನು ಸತತ ಕಾಡುತ್ತಾ ಬಂತೆ?

ಈಯಪ್ಪ ಮಾಡದ ಚಾಕರಿ ಇಲ್ಲ, ಹೂಡದ ದಂಧೆ ಇಲ್ಲ! ಇವರದ್ದು ದಶಾವತಾರ! (ಅವರನ್ನು ಕಂಡರಾಗದವರುಮಾಡದ ಅನಾಚಾರವಿಲ್ಲ ಎಂದು ಸೇರಿಸಿದರೆ ಆಶ್ಚರ್ಯವಿಲ!್ಲ) ಗೇಟ್ ಕೀಪರ್ ಆಗಿದ್ದವರು, ಸಿನಿಮಾದಲ್ಲೂ ಮಿಂಚಿದರು. ಹಿಂದೆ ಮೆಡಿಕಲ್ ರೆಪ್ ಅವತಾರ ಎತ್ತಿದವರು, ಮುಂದೆ ಮನಸೇ. . .’ ಯಲ್ಲಿ ನೊಂದ, ಜರ್ಝರಿತ ಮನಗಳಿಗೆ ಅಕ್ಷರಗಳಲ್ಲೇ ಸಮಾಧಾನದ ಮುಲಾಮು ಹಚ್ಚಿದರು! ಗ್ರೇವ್ ಡಿಗ್ಗಿಂಗ್ ( ಸಮಾಧಿಯಾದ ಶವವನ್ನು ಅಗೆದು ತೆಗೆದು ಅದರಲ್ಲಿರುವ ಆಭರಣಗಳನ್ನು ಲಪಟಾಯಿಸುವ ಹೀನ ಕೃತ್ಯ) ಮಾಡಿದವರು ಹಲವು ಜೀವಗಳಿಗೆ ಆಸರೆಯಾದರು. ಉದ್ಯೋಗ ಅರಸಿ ಪತ್ರಿಕೆಗಳಿಗೆ ಎಡತಾಕಿದವರು ಪತ್ರಿಕೆ, ಪುಸ್ತಕ ಪ್ರಕಾಶನ ಹುಟ್ಟು ಹಾಕಿ ನೂರಾರು ಮಂದಿಗೆ ಉದ್ಯೋಗ ಒದಗಿಸಿದರು. ಕ್ಲೀಷೆ ಅನಿಸಿದರೂ ಹೀಗನ್ನಲೇ ಬೇಕು-ಪ್ರಾರ್ಥನಾ ಶಾಲೆ ಅವರ ಬಾಳಲ್ಲಿ ಒಂದು ಭಾರೀ ಮೈಲುಗಲ್ಲು, ಒಂದು ದೊಡ್ಡ ತಿರುವು! ಅವರ ಟೀಕಾಕಾರನ್ನು ಹಣಿಯಲು ಅವರ ಭಕ್ತರ ಕೈಗೆ ಸಿಕ್ಕ ಖಂಡಾಂತರ ಕ್ಷಿಪಣಿ ಅದು!

ಬರೆಯುತ್ತಿರಬೇಕಾದರೆ ಅವರು ಎನ್ನಲೋ ಅವನು ಎನ್ನಲೋ ಎಂಬ ಸಂದಿಗ್ಧ ನನ್ನನ್ನು ಕೆಲವೊಮ್ಮೆ ಕಾಡಿದ್ದು ಕೂಡಾ ಅವರ/ ಎಡಬಿಡಂಗಿತನಕ್ಕೆ ಹಿಡಿವ ಕನ್ನಡಿ.

ಒಂದು ಬ್ಯಾಲೆನ್ಸ್ ಶೀಟ್ ಮಾದರಿಯಲ್ಲಿ ಒಂದು ಬದಿಯಲ್ಲಿ ರವಿ ಬೆಳಗೆರೆಯವರ ಎಡವಟ್ಟು, ಕಿತಾಪತಿ, ಲಂಪಟತನ, ಬಾಯಿಬಡುಕತನ, ಅಪಸವ್ಯಗಳನ್ನು ಇನ್ನೊಂದು ಬದಿಯಲ್ಲಿ ಅವರ ಬಹುಮುಖ ಪ್ರತಿಭೆ, ಸತ್ಕಾರ್ಯ, ಹಾಡುಗಳ ಹುಚ್ಚು, ನಿರೂಪಣಾ ಶೈಲಿ, ಬರವಣಿಗೆಯಖದರು, ಎದೆಗಾರಿಕೆ, ದಿಟ್ಟತನ ಇವುಗಳನ್ನು ಪಟ್ಟಿ ಮಾಡಿದರೆ ಯಾವ ಬದಿ ಜಗ್ಗುತ್ತದೋ ಹೂ ನೋಸ್?

ಬಟ್, ಲಂಕೇಶರ ಅನಂತರ ಯಾವ ಪತ್ರಕರ್ತನೂ ಪರಿಯಲ್ಲಿ ಐಕಾನಿಕ್ ಸ್ಟಾಟಸ್ಗೆ ಏರಿದ್ದು ಇಲ್ಲ. ಇನ್ನು ಮುಂದಾದರೂ ಯಾರಾದರೂ ಏರುವುದು ಅಸಾಧ್ಯ. ನಿಜ ಹೇಳಬೇಕೆಂದರೆ, ಅವರ ಗುರು (ಒಂದರ್ಥದಲ್ಲಿ) ಲಂಕೇಶರಕಿಂತಲೂ ಹೆಚ್ಚಿನ ಸ್ಟಾರ್ ವಾಲ್ಯೂ ಪ್ರಾಪ್ತವಾಗಿತ್ತು ಸೂರ್ಯನೆಂಬ ತಾರೆಗೆ, ಅವರ ಶಿಷ್ಯನಿಗೆ! ಪತ್ರಿಕೆ, ಪುಸ್ತಕ ಓದದವರ ಬಾಯಲ್ಲೂ ನಲಿದಾದಾಡಿತ್ತು ಅಪರೂಪದ ಸಾಹಿತಿ, ಸಾಹಸಿ ಪತ್ರಕರ್ತನ ಹೆಸರು! ಓದುವ ಆಭ್ಯಾಸವಿಲ್ಲದವರಿಗೆ ಟಿ ವಿಯಲ್ಲಿ ದಕ್ಕಿದ ಅವರು ಅದನ್ನೂ ನೋಡದವರಿಗೆ ಸಿನಿಮಾ, ಸಿಡಿಗಳ ಮೂಲಕ ಆಪ್ತವಾದರು.

ಯಾವುದೇ ಸಾವಿನ ನಂತರ ಸತ್ತ ವ್ಯಕ್ತಿಯ ಕುರಿತು ಒಂದಿಷ್ಟು ಮೌಲ್ಯ ಮಾಪನ, ಮಂಥನ ನಡೆದೇ ನಡೆಯುತ್ತದೆ ಮತ್ತದು ಪ್ರಜ್ಞಾಪೂರ್ವಕವಾಗಿರುವುದಿಲ್ಲ. ಹೀಗಿರುವಾಗ ಬದುಕಿದ್ದಾಗಲೇ ದಂತ ಕಥೆಯಾದವರನ್ನು ಮನಸ್ಸು ಬಾಕಿ ಮಾಡುತ್ತದೆಯೇ? ಕುವೆಂಪು, ಶಿವರಾಮ ಕಾರಂತ, ಡಿವಿಜಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ರಾ ಬೇಂದ್ರೆ. . . ( ಥಟ್ಟನೆ ನೆನಪಾದ ಕೆಲವು ದಿಗ್ಗಜರು, ಇವರು ಮಾತ್ರವಲ್ಲ ಪಟ್ಟಿಗೆ ಇನ್ನೂ ಹೆಸರುಗಳನ್ನು ಸೇರಿಸಬಹುದು) ಕನ್ನಡದಲ್ಲೇ ಬರೆದ ವಿಶ್ವದರ್ಜೆಯ ಸಾಹಿತಿಗಳು, ಚಿಂತಕರು, ಕವಿಗಳು ನಮಗೆ ಬಿಟ್ಟು ಹೋಗಿರುವ ಜೀವನ ಮೌಲ್ಯಗಳಿಗೆ ಬೆಲೆ ಕಟ್ಟಲಾಗದು. ಹಿನ್ನೆಲೆಯಲ್ಲಿ ನೋಡಿದಾಗ, ಒಂದು ಸಮಷ್ಟಿಗೆ ರವಿ ಬೆಳಗೆರೆ ಅವರ ಬಳುವಳಿ ಏನು?

ಹೀಗೆ ಕೇಳಿಕೊಂಡಾಗ ಮೊದಲು ಹೊಳೆಯುವ ಉತ್ತರ-ಕ್ರೈಂ ನ್ನು ವೈಭವೀಕರಿಸಿದ್ದು! ವಿಕೃತಿಗಳಲ್ಲಿ ವಿಜೃಂಭಿಸಿದ್ದು! ಇವನ್ನೆಲ್ಲಾ ಒಂದು ಜೀವನ ಮಾರ್ಗ ಎಂಬಂತೆ ಬಿಂಬಿಸಿದ್ದು ರವಿ ಬೆಳಗೆರೆ ಗೈದ ಅಕ್ಷಮ್ಯ ಅಪರಾಧ! ಕ್ರೈಂ!

ಇನ್ನು ಅವರು ಪುಸ್ತಕಗಳಿಗೆ ಆಯ್ದುಕೊಳ್ಳುವ ವಸ್ತು ವಿಷಯಗಳು ಕೂಡಾ ಹಾಗೇನೇ! ಅಲ್ಲಿ ಅತೀ ಅನಿಸುವ ವಿಕೃತಿಗೇ ಮೊದಲ ಮಣೆ! ಹಾಗೇ ನೋಡಿದರೆ ಅವರ ಅವಲಕ್ಷಣಗಳಲ್ಲಿ ಅತಿ ಅನ್ನುವುದು ಮೇಲುಗೈ ಸಾಧಿಸಿದ್ದೇ ಅವರ ದುರಂತ. ಅದು ಸಾಲದು ಅನ್ನುವಂತೆ, ತಾನು ಏನೇ ಸಾಧನೆ, ಸಾಹಸ ಮಾಡಿದರೂ ಅನ್ಯರ ಹೊಗಳುವಿಕೆಗೂ ಕಾಯದೆ ಅದನ್ನು ಕೊಚ್ಚಿಕೊಳ್ಳುವ, ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಅಭ್ಯಾಸ ಬೇರೆ! ಇದರಿಂದ ಅವರನ್ನು ಹೊಗಳಲು ಹೊರಟವರ ಬಾಯಿ ಕಟ್ಟಿದಂತಾಗುತ್ತದೆ ಎಂಬ ಸಣ್ಣ ಸತ್ಯ ಕೂಡಾ ಹೊಳೆಯದಾಯಿತಲ್ಲ ಸಕಲಕಲಾವಲ್ಲಭನಿಗೆ!

ವ್ಯವಸ್ಥೆಯನ್ನು ಸುಧಾರಿಸುವ, ಬದಲಿಸುವ ಯಾವುದೆ ರಚನಾತ್ಮಕ ಪ್ರಯತ್ನಗಳನ್ನು ಮಾಡದೆ, ಕೇವಲ ವ್ಯಕ್ತಿಗಳ ತೇಜೋವಧೆಗೇ ಸೀಮಿತವಾಯಿತು ಅವರಹೆಚ್ಚು ಕಪ್ಪು ಕಡಿಮೆ ಬಿಳುಪಿನಿಂದ ತುಂಬಿದ ಪತ್ರಿಕೆ. (ಅವರು ಅಕ್ಕರೆಯಿಂದಕೃಷ್ಣ ಸುಂದರಿ ಎಂದು ಕರೆಯುತ್ತಿದ್ದ) ಅವರ ಸೃಷ್ಟಿಹಾಯ್! ಬೆಂಗಳೂರು ಪೀತ ಪತ್ರಿಕೆ ಎಂಬ ಹಣೆಪಟ್ಟಿಗೆ ತಕ್ಕಂತೆ ಬಾಳಿ, ರನ್ವೇನಲ್ಲೇ ಸಾಗಿತು. ಎಂದೂ ಎತ್ತರಕ್ಕೆ ಟೇಕ್ ಆಫ್ ಆಗಲೇ ಇಲ್ಲ! ಅಷ್ಟೊಂದು ಆರ್ಥಿಕ ಯಶಸ್ಸು ದಕ್ಕಿದ ಮೇಲಾದಾರೂ ತಾನೂ ಮೆಲೇರಿ, ಓದುಗರನ್ನು ಕೂಡಾ ಮುಂದಿನ ಹಂತಕ್ಕೆ ಏರಿಸುವ ಪ್ರಯತ್ನ ಮಾಡಬಹುದಿತ್ತೇನೋ! ಆದರೆ ಅವರಿಗೆ ಅವರೇ ಆವಾಹಿಸಿದ ಇಮೇಜ್ ಮುಖ್ಯವಾಯಿತು-ಮತ್ತು ಅದುವೇ ಮುಳುವಾಯಿತು.

ನನ್ನಂಥವರ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿಅಚ್ಚರಿ ಎಂಬ ಪಾಕ್ಷಿಕ ಹೊರತಂದರು ರವಿ. ಕೆಲವು ಸಂಚಿಕೆಗಳ ಬಳಿಕ ಅದನ್ನು ತಾವೇ ತೆಗಳಿ, ನಿಲ್ಲಿಸಿ ಬಿಟ್ಟರು! ಅದರ ಸುಧಾರಿತ ಆವೃತ್ತಿಯಾಗಿ ಬಂದದ್ದೇ ಮನಸೇ. . . .’ . ಅದುಕನ್ನಡ ಪತ್ರಿಕೆಗಳ ಇತಿಹಾಸದಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಅವರೇ ಕರತಾಡನ, ಶಿಳ್ಳೆಗಳೊಂದಿಗೆ ಡಂಗುರ ಸಾರಿದರು. ಹಾಗಿದ್ದಲ್ಲಿ ಅದು ಮುಗ್ಗರಿಸುತ್ತಾ ಸಾಗಿದ್ದೇಕೆ? ಕೆಲವೊಮ್ಮೆನಿಂತೇ ಹೋಯಿತು ಅನಿಸಿಕೊಂಡ ಪತ್ರಿಕೆ ಪ್ರತಿಬಾರಿ ಹೊಸಬರ ಸಂಪಾದಕತ್ವದಲ್ಲಿ ಹೊಸ ಅವತಾರ ತಾಳುತ್ತಾ, ಕಣ್ಣು ಮುಚ್ಚಾಲೆ ಆಡಿದ್ದೇಕೆ? ( ಸಂದರ್ಭದಲಿ ನನ್ನ ಬಗ್ಗೆ ನಾನೇ ಒಂದಿಷ್ಟು ಹೇಳಿದರೆ ತಪ್ಪಾಗದು ಅನಿಸುತ್ತದೆ. ನಾನು ಬರೆದ ಒಂದು ಕಥೆ ಹಾಗೂ ಲೇಖನ ಮನಸೇ. . . .’ಯಲ್ಲಿ ಪ್ರಕಟವಾಗಿತ್ತು. ರವಿ ಬೆಳಗೆರೆಯವರು ಅವುಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾವತ್ತಾಗಿ ಪ್ರಕಟಿಸಿ, ಸೂಕ್ತ ಸಂಭಾವನೆ ನೀಡಿ ನನ್ನನ್ನು ಪುರಸ್ಕರಿಸಿದ್ದನ್ನು ನಾನು ಎಂದಿಗೂ ಮರೆಯಲಾರೆ.)

ಕೆಲವು ಸಣ್ಣ ಪುಟ್ಟ ಎಡವಟ್ಟುಗಳ ಸ್ಯಾಂಪಲ್: ‘ಯಂಡಮೂರಿ ವೀರೇಂದ್ರನಾಥರನ್ನು ಕನ್ನಡ ಓದುಗರಿಗೆ ಪರಿಚಯಿಸಿ ತಪ್ಪು ಮಾಡಿದೆ ಎಂದು ಕೈ ಹಿಸುಕಿಕೊಂಡ ರವಿ, ‘ಹಾಯ್! ಬೆಂಗಳೂರಿನಲ್ಲಿ ವಾರ ವಾರ ಅವರೊಂದಿಗೆ ಜುಗಲ್ ಬಂಧಿ ಮಾಡುತ್ತೇನೆ ಎಂದು ಘೋಷಿಸಿದರು. ಜುಗಲ್ ಬಂಧಿ ಕೇವಲ ಎರಡು ವಾರ ನಡೆಯಿತು. ಅದುಜಗಳ ಬಂಧಿ ಯಾಗಿ ಕೊನೆಯಾಯಿತೆ? ಇದಕ್ಕೆ ಅವರಿಂದ ಯಾವ ಸ್ಪಷ್ಟನೆ ಆಗಲಿ, ಸಮಜಾಯಿಷಿ ಆಗಲಿ ಇರಲಿಲ್ಲ! ‘ಸುಭಾಷ್ ಚಂದ್ರ ಭೊಸರ ಆತ್ಮಕತೆಗೂ ಇದೇ ದುರ್ಗತಿ! ಸ್ಪಷ್ಟನೆ ಮಾತ್ರ ಇಲ್ಲ.

ಗುರು ಲಂಕೇಶರ ಹಾಗೆ ಅವರು ಕೂಡಾ ಜಾಹೀರಾತು ಇಲ್ಲದೇನೇ ಪತ್ರಿಕೆ ನಡೆಸಿದರು. ಆದರೆ, ಲಂಕೇಶರನ್ನುನೀವು ಅದೆಷ್ಟು ಬಾರಿ ಸಿಟಿಜó ನ್ ಕೇನ್ ಚಿತ್ರದ ಕುರಿತು ಬರೆಯುತ್ತೀರಿ?’ ಎಂದು ಲೇವಡಿ ಮಾಡಿದ ರವಿ, ತಾವೇ ಸ್ವತಃ ಹೇಳಿದ್ದನ್ನೇ ಹೇಳುವ ತೆವಲಿಗೆ ಬಲಿಯಾದರು! ತಮ್ಮ ಪತ್ರಿಕೆಗಳಿಗೆ ಜಾಹೀರಾತಿನ ಆದಾಯವೇ ಅಗತ್ಯವಿಲ್ಲ ಎಂದು ಬೀಗಿದ ಇಬ್ಬರು ದಿಗ್ಗಜರು ಮಾಡಿದ್ದೇನೆಂದರೆ- ತಮ್ಮ ವೈರಿಗಳ ತೇಜೋವಧೆ (ಹಣ ನೀಡದವರ?) ಜೊತೆಯಲ್ಲಿ ತಮ್ಮ ತೆವಲು, ಲಂಪಟತನ, ದುಶ್ಚಟ, ಅಹಮಿಕೆ, ಎಡವಟ್ಟುಗಳನ್ನು ಜಗಜ್ಜಾಹೀರು ಮಾಡಲು ಪತ್ರಿಕೆಯೆಂಬ ಪರಮ ಪವಿತ್ರ ಮಾಧ್ಯಮವನ್ನು ಬಳಸಿಕೊಂಡದ್ದು. ತಮ್ಮನ್ನು ತಾವೇ ಬ್ರಾಂಡ್ ಮಾಡಿಕೊಂಡದ್ದು. ಪತ್ರಿಕೆಯನ್ನು ಆತ್ಮರತಿಯ ಪಾಂಫ್ಲೆಟ್ ಮಟ್ಟಕ್ಕೆ ಇಳಿಸಿದ್ದು. ಇದು ಕನ್ನಡ ಪತ್ರಿಕೋದ್ಯಮದಮಟ್ಟಿಗೆ  ವಿಪರ್ಯಾಸದ ಪರಮಾವಧಿಗಳಲ್ಲಿ ಒಂದು.

ಒಂದು ತಲೆಮಾರಿನ ಯುವಕ-ಯುವತಿಯರ ಪಾಲಿಗೆ ರವಿ ಕೆಚ್ಚೆದೆಯ ವೀರ. ಅವರು ಬರೆದದ್ದೆಲ್ಲಾ ಅಪ್ಯಾಯಮಾನ, ಅಷ್ಟು ಸೊಗಸು! ಪ್ರೀತಿ ಪ್ರೇಮದಲ್ಲಿ ಮುಳುಗಿದವರ ಪಾಲಿಗೆ ಅವರು ಗುರು ವರೇಣ್ಯ! ಮಾರ್ಗದರ್ಶಕ. ಆವರ ಪ್ರೇಮ ಪತ್ರದ ಮಾದರಿಯ, ವಿರಹಿಯ ಮೊರೆತ, ಪ್ರಲಾಪ ಮಾದರಿಯ ಅಂಕಣ (ಶೀರ್ಷಿಕೆ ನೆನಪಾಗುತ್ತಿಲ್ಲ, ಕ್ಷಮಿಸಿ)ವಂತೂ ಒಂದು ಟ್ರೆಂಡ್ ಹುಟ್ಟಿಸಿತ್ತು. (ಮತ್ತದು ಕಣ್ಮರೆಯಾಯಿತು!) ಬರಹಗಳನ್ನು ಅನುಕರಿಸಿದವರೆಷ್ಟೋ, ಅನುಕರಣೆಯಲ್ಲಿ ವಿಫಲರಾದವರೆಷ್ಟೋ!

ಅವರ ಬರಹಗಳಿಗೆ ಫಿದಾ ಆದ ಒಂದು ತಲೆಮಾರು ತನಗರಿವಿಲ್ಲದೇ ನಿಧಾನವಾಗಿ ಬದುಕಿನ ವಾಸ್ತವಗಳಿಗೆ ತೆರೆದು ಕೊಂಡಿತು. ಅಷ್ಟಕ್ಕೂ ನಶೆ ಯಾವ ರೂಪದಲ್ಲೇ ಇರಲಿ, ಅದು ಏರಿದ ಗತಿಯಲ್ಲೇ ಇಳಿದು ಬಿಡುತ್ತದೆ! ಮದುವೆಯಾಗಿ ಪ್ರೀತಿಸಿದವಳ/, ಪ್ರೀತಿಸದವಳ/ ಕೈಹಿಡಿದವರಿಗೆ ಮಕ್ಕಳ ಲಾಲನೆ ಪಾಲನೆ, ಶಿಕ್ಷಣ, ಅಕ್ಕ-ತಂಗಿಯರ ಮದುವೆ, ತಂದೆತಾಯಿಯರ ಜವಾಬ್ದಾರಿ ಎಲ್ಲವೂ ಹೆಗಲಮೇಲೇರಿದಾಗ, ಅಂಥವರ ಪಾಲಿಗೆ ರವಿ ಬೆಳಗೆರೆ ನಿಧಾನವಾಗಿ ಅಪ್ರಸ್ತುತವಾಗುತ್ತಾ ಹೋದರು. ಅದೇ ತಾಯಿಯ ಮೇಲಿನ ಅದಮ್ಯ ಮಮತೆ, ಮುಕೇಶ್ ಹಾಡುಗಳು, ಅಧೋಲೊಕದ ನಂಟು. . .ಇದರ ಪುನರಾವರ್ತನೆಯಿಂದ ತಮಗೆ ಇನ್ನು ಏನು ಲಾಭವಿದೆ ಎಂದು ಅವರ ಅಭಿಮಾನಿಗಳ ಸುಪ್ತ ಮನಸ್ಸಿನಲ್ಲಾದರೂ ಪ್ರಶ್ನೆ ಮೂಡಿಲ್ಲ-ಅನ್ನುವಂತಿಲ್ಲ. ಅವರು ಯಾರೊಂದಿಗೆ ಕನೆಕ್ಟ್ ಆಗುತ್ತಿದ್ದರೋ ಅವರೇ ಅವರಿಗೆ ಕೈಕೊಟ್ಟರು. ಇನ್ನು ರವಿ ಅವರಲ್ಲಾದರೂ  ಆಕರ್ಷಕ ಸರಕುಗಳು, ಬತ್ತಳಿಕೆಯ ಬಾಣಗಳು ಬರಿದಾಗುತ್ತಾ ಬಂದವು. ಹೊಸ ತಲೆಮಾರಿನೊಂದಿಗೆ ಕನೆಕ್ಟ್ ಆಗುವಲ್ಲಿ ವಯಸ್ಸಾಗುತ್ತಾ ಬಂದ ಇಳಿ ಸೂರ್ಯ ವಿಫಲರಾದರು. ಈವನ್ ಸನ್ ವಾಸ್ ಬರ್ನಿಂಗ್ ಔಟ್! ಸೂರ್ಯಾಸ್ತಮಾನ ಕಾಣಲು ಸುಂದರವೆಂದು ಮೈಮರೆತು ಅಷ್ಟಿಷ್ಟು ಬೆಳಕಿನಲ್ಲಿ ದೀಪ ಹಚ್ಚದೆ ಕುಳಿತರೆ, ಕತ್ತಲಲ್ಲಿ ಎಡವುವುದು ಸುನಿಶ್ಚಿತವೆಂದು ಬಲ್ಲ ತಲೆಮಾರಿನ ಎದುರಿಗೆ ನಾರಾಯಣ ಮೂರ್ತಿ, ಸುಧಾ ಮೂರ್ತಿಚಕ್ರವರ್ತಿ ಸೂಲಿಬೆಲೆ, ವಿಶ್ವೇಶ್ವರ ಭಟ್ .ಮೊದಲಾದ ಆದರ್ಶಗಳು ತಲೆಯೆತ್ತಿ ನಿಂತವು! ರವಿಯ ಪ್ರಖರತೆಗೆ ಒಂದಿಷ್ಟು ಕುಂದಿತು.

ಅಷ್ಟರಲ್ಲಿ ರವಿಯವರ ಆರೋಗ್ಯವೂ ಕೈಕೊಟ್ಟಿತು. ಅವರ ಬರಹಗಳ ಖದರು, ಮೊನಚು, ವರಸೆಗಳಿಗೆ ಯಾವ ಧಕ್ಕೆಯಾಗದಿದ್ದರೂ, ಅವರ ವೀಡಿಯೋಗಳು ನಿಜ ಪರಿಸ್ಥಿತಿಯನ್ನು ಬಯಲು ಮಾಡಿದವು. ಸಾಲದ್ದಕ್ಕೆ ಅವರ ತೀರಾ ಖಾಸಗಿ ಬದುಕಿನ ಕೆಲವು ವಿವರಗಳು ಬಟಾಬಯಲಾದದ್ದು, ಇಷ್ಟಾಗಿಯೂ  ಅವರನ್ನು ಗೌರವದಿಂದ ಕಾಣುತ್ತಿದ್ದ ಒಂದು ವರ್ಗವನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡಿದವು. ಅದುವರೆಗೆಗುಸುಗುಸುಪ್ (ಗಾಸಿಪ್ ಎಂಬ ಪದವನ್ನು ಕನ್ನಡೀಕರಿಸಿದ್ದೇನೆ!) ಸ್ತರದಲ್ಲಿದ್ದ, ಪತ್ರಕರ್ತರ ನಡುವೆ ಹರಟೆಗೆ ಕಾರಣವಾಗುತ್ತಿದ್ದ ಅವರ ಬಗೆಗಿನ ರೋಚಕ ಮಾಹಿತಿನಿಜ ಅಂತೆ ಕಣೋ ಎಂದು ಅನಿಸಿಕೊಂಡಾಗ, ಹಲವರಿಗೆ ಅದನ್ನು ಅರಗಿಸಿಕೊಳ್ಳಲು ಕಷ್ಟವೆನಿಸಿತು. ಪ್ರಶ್ನೆ ಅವರ ವಿವಾಹೇತರ ಸಂಬಂಧ, ಸಂಸಾರ ಕುರಿತದ್ದಲ್ಲ. ಬದಲಾಗಿ ಅದನ್ನು ಅವರು ಗುಪ್ತವಾಗಿರಿಸಿದ ಬಗೆಯದ್ದು! ಮೂರ್ತಿ ಭಂಜನೆಯಿಂದಲೇ ಉತ್ಸವ ಮೂರ್ತಿಯೆನಿಸಿಕೊಂಡವನಲ್ಲಿ ಕಂಡ ಊನ ಲೋಕದ ಪಾಲಿಗೆ ಅಕ್ಷಮ್ಯವೆನಿಸಿತು. ಎಲ್ಲರೂ ಮರ್ಯಾದಾ ಪುರುಷೋತ್ತಮ ಅನಿಸಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ವರನಟರ, ರಾಜಕೀಯ ಪ್ರಮುಖರ ಚಾರಿತ್ರ್ಯ ವಧೆ ಮಾಡಿದವರ ಚಾರಿತ್ರ್ಯವೇ ಪ್ರಶ್ನಾರ್ಹವೆನಿಸಿದ್ದು ತೀವ್ರ ಅಲ್ಲೋಲಕಲ್ಲೋಲಗಳಿಗೆ ಕಾರಣವಾಯಿತು. ಮಾಜಿ ಮುಖ್ಯಮಂತ್ರಿಗಳೊಬ್ಬರ ಕೃತಕ ಕೇಶದ ವಿಷಯವನ್ನು ಪದೇ ಪದೇ ಕೆದಕಿ, ಕುಹಕ ಮಾಡುತ್ತಿದ್ದ ಅವರು ಪರೋಕ್ಷವಾಗಿ ಮಟ್ಟದಿಂದ ನಾನು ಎಂದಿಗೂ ಮೇಲೇರಲಾರೆ ಎಂದು ಸಾರಿ ಹೇಳಿದಂತಿತ್ತು. ‘ವಿಗ್ ಧರಿಸುವುದು ಸರಿಯೋ ತಪ್ಪೋ ಅತ್ಲಾಗಿರಲಿ-ಒಂದು ಐಕಾನ್ ಮಟ್ಟಕ್ಕೇರಿದ ವ್ಯಕ್ತಿ ತುಂಬಾ ಕಾಶುವಲ್ ಆಗಿ ತನ್ನ ಎರಡನೇ ಸಂಬಂಧವನ್ನು ಒಪ್ಪಿಕೊಂಡಾಗ, ಅರ್ಥಾತ್ ಅದನ್ನು ಇಲ್ಲಿಯವರಗೆ ಗುಟ್ಟಾಗಿ ಇರಿಸಿದ್ದೆ ಎಂದು ತಪ್ಪೊಪ್ಪಿಕೊಂಡಾಗ, ಅವರನ್ನುಬಲ್ಲವರಿಗೆ ಹೇಗನಿಸುತ್ತದೆ ಎಂಬ ಯೋಚನೆ ಕೂಡಾ ರವಿ ಅವರಲ್ಲಿ ಸುಳಿಯಲಿಲ್ಲವೇ?

ಅಮಾವಾಸ್ಯೆ ರಾತ್ರಿ. ಕುಂಭದ್ರೋಣ ಮಳೆ. ನಡುವೆ ಪವರ್ ಕಟ್ ಆದರೆ ಹೆಗಿರುತ್ತದೆ? ಹಾಗಾಯಿತು ಮುಂದೆ ರವಿ ಅವರ ಕುರಿತು ಬಂದೆರಗಿದ ಬರ ಸಿಡಿಲಿನಂಥ ಸುದ್ದಿಯ ಪರಿಣಾಮ. ‘ಓರ್ವ ಪತ್ರಕರ್ತನ ಹತ್ಯೆಗೆ ಅವರು ಸುಫಾರಿ ನೀಡಿದ್ದರು ಎಂಬುದೇ ದಿನ ಕನ್ನಡ ಸುದ್ದಿ ಚಾನಲ್ ಗಳ ಪಾಲಿಗೆ ಭಾರೀ ಬ್ರೇಕಿಂಗ್ ನ್ಯೂಸ್! ಅಲ್ಲಿಗೆಹಿ ವಾಸ್ ಫೀನಿಶ್ಡ್! ‘ಪಾಪಿಗಳ ಲೋಕದಲ್ಲಿ ಬರೆದವನ ಅಸಲಿಯತ್ತು ಏನಿರಬಹುದು? ಬೆಳಕಿಗೆ ಬಂದದ್ದು ಇಷ್ಟಾದರೆ, ಬೆಳಕು ಕಾಣದ ಪ್ರಕರಣ, ಹಗರಣಗಳು ಎಷ್ಟಿರಬಹುದು? ವ್ಯಕ್ತಿ ತಾನು ಕೊಚ್ಚಿಕೊಂಡಷ್ಟು ಸಾಚಾನೇ? ಇತ್ಯಾದಿ ಪ್ರಶ್ನೆಗಳು ಕಾಡಿದ್ದರಿಂದ ಅವರ ಕಟ್ಟರ್ ಅಭಿಮಾನಿಗಳ ಅವಕೃಪೆಗೂ ಅವರು ಪಾತ್ರರಾದರು. ಹೊತ್ತಿಗೆ ಅವರು ಟಿವಿಯಲ್ಲಿ ಕಾಣಿಸಿಕೊಳ್ಳುವುದು ನಿಂತು ಹೋಗಿತ್ತು. ಮುಂದೆಬಿಗ್ ಬಾಸ್ ನಲ್ಲಿ ಪ್ರತ್ಯಕ್ಷರಾದಾಗ ಹೆಚ್ಚಿನವರಲ್ಲಿ ಅವರನ್ನು ಕಾಣುವ ಕುತೂಹಲ ಇತ್ತೇ ಹೊರತು ಗೌರವ ಭಾವ ಕಡಿಮೆಯಾಗಿತ್ತು.

ಹಂತದಲ್ಲಿ ನಾನುಹಾಯ್ ಬೆಂಗಳೂರು ಓದುವುದನ್ನೇ ಬಿಟ್ಟು ವರುಷಗಳೇ ಕಳೆದಿದ್ದವು. ಹೀಗಾಗಿ ಕೊನೆ ಕೊನೆಗೆ ಅವರ ಒಲವುಗಳು, ವಿಚಾರ (?)ಗಳು, ಅಭಿಪ್ರಾಯಗಳು ಏನಿತ್ತು, ಹೇಗಿತ್ತು ಎಂಬುದರ ಅರಿವು ನನಗಿಲ್ಲ. (ನನ್ನ ಅಣ್ಣ ಫೋನ್ನಲ್ಲಿ ಅವರು ರೆಡ್ಡಿ ಬ್ರದರ್ಸ್, ಶ್ರೀರಾಮುಲು ಮುಂತಾದವರ ಗುಣಗಾನ ಶುರು ಮಾಡಿದ್ದಾರೆ ಅಂದಾಗ ಮಾತ್ರ ಶಾಕ್ ಆಗಿತ್ತು). ಅವರ ಮೇಲೆ ಮಾಧ್ಯಮಗಳು ಅಘೋಷಿತ ಬಹಿಷ್ಕಾರ ಹೇರಿದ ಹಾಗಿತ್ತು.

ಸೂರ್ಯ ಅದಾಗಲೇ ಇಳಿಯಲು ಸಜ್ಜಾಗಿದ್ದ! ಆಗಲೇ ಬಂದೆರಗಿದ್ದು ತನಗಿಂತ ಹೆಚ್ಚಾಗಿ ಇತರಿಗಾಗಿ ಮಿಡಿದ ಅವರ ಹೃದಯ ಸ್ತಂಭನವಾಯಿತು ಎಂಬ ಸುದ್ದಿ.

ರವಿ ಅನ್ನುವುದು ತನ್ನ ಅನ್ವರ್ಥ ನಾಮ ಅನ್ನುವ ಹಾಗೆ ಬೆಳಕು, ಶಾಖ, ಹೊಂಬಿಸಿಲಿನ ಆಶ್ವಾಸನೆಯೊಂದಿಗೆ ಉದಯಿಸಿದ ಪತ್ರಕರ್ತ ರವಿ ಅವರು ತನ್ನ ಪಥ ಸಂಚಲನದ ನಡುವೆ ಕೆಲವೊಮ್ಮೆ ಮೋಡಗಳೆಡೆಯಲ್ಲಿ ಮರೆಯಾಗುತ್ತಾ, ಇನ್ನು ಕೆಲವೊಮ್ಮೆ ಗ್ರಹಣಗಳಿಗೆ ಬಲಿಯಾಗುತ್ತಾ, ಎತ್ತರಕ್ಕೇರಿ ಎಲ್ಲರ ನೆತ್ತಿ ಸುಡುತ್ತಾ ಸಾಗಿ, ನಿಧಾನವಾಗಿ ಕಾವು ಕರಗಿ ಕರಗಿ ಕೆಳಗಿಳಿದು ಮರಳಿ ಬಾರದ ಕ್ಷಿತಿಜದಲ್ಲಿ ಮುಳುಗಿ ಮರೆಯಾದರು.   

ಬಾಲಕ ರವಿ ಮಹಾ ತುಂಟ. ಆಡದ ಆಟವಿಲ್ಲ. ಮಾಡದ ಚೇಷ್ಟೆ ಇಲ್ಲ. ರೈಲ್ವೇ ಹಳಿಯ ಮೇಲೆ ನಾಣ್ಯಗಳನ್ನು ಇರಿಸಿ ರೈಲು ಬರುವುದನ್ನೇ ಕಾದು ಕುಳಿತು, ಅದು ಸಾಗಿ ಹೋದ ಮೇಲೆ ಜಜ್ಜಿ ಹೋಗಿರುವ ನಾಣ್ಯಗಳನ್ನು ಕಂಡು ಖುಷಿ ಪಡುವುದು ಅವರ ಬಾಲ ಲೀಲೆಗಳಲ್ಲಿ ಒಂದು! ಇದು ಅವರೇ ಹೇಳಿಕೊಂಡದ್ದು. ಚೈಲ್ಡ್ ಸೈಕಾಲಜಿ ತಜ್ಞರ ಬಳಿ ಆಟದ ಮರ್ಮವೇನೆಂದು ಕೇಳಿದರೆ ಅವರು ಇಂಥಾ ಬಾಲಕನ ಭಾವೀ ವ್ಯಕ್ತಿತ್ವವನ್ನು ಹೇಗೆ ವಿಶ್ಲೇಷಿಸುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ನನಗೆ!

ನನ್ನಂಥವರು 2-3 ಜನ್ಮಗಳಲ್ಲಿ ಸಾಧಿಸಲಾಗದ್ದನ್ನು ಅವರು 62 ವರ್ಷಗಳ ಆಯುಷ್ಯದಲ್ಲಿ ಸಾಧಿಸಿ ತೋರಿಸಿದರು. ಆದರೆ ಅವರು ಬಿಟ್ಟು ಹೋದ ಆದರ್ಶ, ಸಂದೇಶ, ತತ್ವ, ಸಿದ್ಧಾಂತಗಳೇನು? ‘ನಿಲ್ ಅನ್ನಬೇಕಾಗುತ್ತದೆ-ವಿಷಾದದಿಂದಲೇ! ‘ಹೀಗೆ ಎಂದು ಹೇಳಲಾಗದ ಹಾಗೆ, ‘ಹೆಸರು ಮಾಡುವುದು ಹೇಗೆ?’ ಅನ್ನುವ ಪ್ರಶ್ನೆಗೆರವಿ ಬೆಳಗೆರೆಯ ಹಾಗೆ!’ ಎಂಬ ಉತ್ತರಕ್ಕೆ ನ್ಯಾಯ ಒದಗಿಸಿ, ಯಮನ ಸಾರಥ್ಯದ ತೇರನ್ನೇರಿದರು ಕೊನೆಗೆ.

ಅಥವಾ ಸಾವನ್ನು ಕೂಡಾ ಒಮ್ಮೆ ತೀವ್ರವಾಗಿ ಅನುಭವಿಸಿ, ಸಾವಿನ ಮೇಲೊಂದು ಅದ್ಭುತ ಪುಸ್ತಕ ಬರೆಯುವ ಹಪಹಪಿಗೆ ಬಲಿಯಾದರೆ ನಮ್ಮವ ಆರ್ ಬಿ?

         ‘ಹೇಳಿ ಹೋಗಬಾರದಿತ್ತೇ ಕಾರಣ?’  

                       

Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾಗಲ್ಲ, ನಿಜವಾಗಿ, ʼಒಂದು ಆಕೃತಿಯ ಒಳಭಾಗಗಳನ್ನು, ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...
        Food for Teeth                                    If you thought millions of people in Mera Bharat( that’s Mahan) grapple with the issue of not knowing from where their next meal would come, you are all wrong-or else you are not watching much of the idiot box as much as the people calculating the TRP suppose you do! Now what is TRP? It is Television Rating Points. That’s someone somewhere is glad to know how much you weigh as a couch-potato. So when you are watching TV someone is ‘watching’ you like the BB (Big Brother).  A cute device called ‘People’s Meter’ might have been attached to your TV. Or to the one in one of your neighbors’ house. This device keeps track of what you watch and how often, how long etc. And that info is accessed by the geniuses who are ...