Skip to main content

 

ದಿ ಡೈಲಿ ನ್ಯೂಸ್'ಎಂಬ ಹೊಸ ಕನ್ನಡ ದೈನಿಕದ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾಗುತ್ತಿರುವ ನನ್ನ ಅಂಕಣ

ಸುತ್ತ-ಮುಕ್ತ' 5 ನೇ ಬರೆಹ (ಅನ್-ಎಡಿಟೆಡ್) 

                   ಸುತ್ತ-ಮುಕ್ತ

                   ಲೇ: ಸತ್ಯಕಾಮ ಶರ್ಮಾ

     ಹೇಗು ಹೇಗೋ ಎಸೆದದ್ದು ಪಾಠ ಕಲಿಸದೆ ಬಿಡದು

 

ಬಾರಿ ಒಲಿಂಪಿಕ್ಸ್  ನಲ್ಲಿ ಭಾರತಕ್ಕೆ ಬಂಗಾರದ ಪದಕ ದೊರೆತ ಜಾವೆಲಿನ್ ಥ್ರೋನಂಥಾ ಎಸೆಯುವಿಕೆಗೆ ಕ್ರೀಡಾ ಪಟುತ್ವ ಬೇಕೇ ಬೇಕು. ಇವಲ್ಲದೆ, ಎಲ್ಲೆಂದರಲ್ಲಿ, ಕಸ ಎಸೆಯುವುದರಲ್ಲಿ ನಾವು ವಿಶ್ವ ಚಾಂಪಿಯನ್ಗಳು, ವಿಶ್ವವೇ ಅಸೂಯೆ ಪಡುವಷ್ಟು ಸ್ವತಂತ್ರರು.

ಹಾಗೆಂದು ನೆರೆಮನೆಯ ಕೌಂಪೌಂಡ್ಗೆ ಕಸ ಎಸೆಯಲು, ಒಂದು ಕೈನಲ್ಲಿ ಕಸದ ತೊಟ್ಟೆ ಇನ್ನೊಂದರಲ್ಲಿ ಟು-ವೀಲರ್ ಹ್ಯಾಂಡಲ್ ಹಿಡಿದು ಡ್ರೈವ್ ಮಾಡುತ್ತಾ ಪ್ರಶಸ್ತ ಸ್ಥಳದಲ್ಲಿ ಅದನ್ನು ಎಸೆಯಲು;   ಚಾಕಚಕ್ಯತೆ, ಸಮಯ ಪ್ರಜ್ಞೆ, ಕ್ರೀಡಾ ಪಟುತ್ವ ಇರಲೇಬೇಕಾಗುತ್ತದೆ. ಒಟ್ಟಿನಲ್ಲಿ ಕಸ ನಮ್ಮ ಮನೆಯಲ್ಲಿ ಇರಬಾರದು. ಆದಾಗ್ಯೂಸ್ವಚ್ಛ ಭಾರತ್ ಅಭಿಯಾನ, ಕೊರೊನಾ ಮತ್ತು ಮೆಟ್ರೋ ಟ್ರೇನ್ ಇವೆಲ್ಲವುಗಳ ಪರಿಣಾಮದಿಂದ ನಾವು ಒಂದಿಷ್ಟು ಬದಲಾಗಿದ್ದೇವೆ.

ಕಸಕ್ಕೆ ಹೊಸ ಸೇರ್ಪಡೆ -ವೇಸ್ಟ್. ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ ಉಪಕರಣಗಳ ತ್ಯಾಜ್ಯ ಇದರ ಮುಖ್ಯ ಭಾಗ. ಹಾಳಾದ ಮೌಸ್, ಕೀ ಬೋರ್ಡ್, ಮೊಬೈಲ್, ಟಿವಿ, ಅಂದಿನ ಟು-ಇನ್-ವನ್, ರೇಡಿಯೋ, ಮಿಂಚಿ ಮರೆಯಾದ ಪೇಜರ್ ಇವುಗಳಲ್ಲಿ  ಸೀಸ, ಪಾದರಸ, ಕ್ಯಾಡ್ಮಿಯಂ ಮತ್ತು ಇನ್ನೂ ಹಲವಾರು ವಿಷಕಾರಕ ಪದಾರ್ಥಗಳಿದ್ದು ಅವು ಮಣ್ಣು ಹಾಗೂ ನೀರಿನ ಸೆಲೆಗಳನ್ನು ಹಾನಿಗೊಳಿಸುತ್ತವೆ.

ಉಪಕರಣಗಳ ರಿಪೇರಿ ತೀರಾ ಅಸಾಧ್ಯ ಅನ್ನುವವರೆಗೆ ಅವನ್ನು ಉಪಯೋಗಿಸುವ ನಾವು, -ವೇಸ್ಟ್ ವಿಷಯದಲ್ಲಿ ವಿದೇಶಿಯರಿಗಿಂತ ಮೇಲು. ಉಪಕರಣಗಳು ಸ್ವಲ್ಪ ಕೆಟ್ಟುಹೋದರೂ ಕಿತ್ತೆಸೆಯುವ ಸಂಸ್ಕøತಿಯ ಅವರಿಗೆ, -ವೇಸ್ಟ್ ಗುಪ್ಪೆಗಳಿಂದ ಜ್ಞಾನೋದಯವಾಗಿದೆ. ಸಾಹಿತಿ, ಚಿಂತಕ ಆಲ್ಡಸ್ ಹಕ್ಸ್ಲೀ, ‘ಮೆಂಡಿಂಗ್ ಇಸ್ ಬೆಟರ್ ದಾನ್ ಎಂಡಿಂಗ್ ಅಂದಂತೆ, ಅವರೀಗ ದುರಸ್ತಿಯತ್ತ ಮುಖಮಾಡಿದ್ದಾರೆ. ಆಪಲ್ ಕಂಪನಿಯೂ ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ.

ಸಾಗರಗಳನ್ನು ಪ್ಲಾಸ್ಟಿಕ್ ತೊಟ್ಟಿ ಮಾಡಿದ ಮಾನವ, ತೈಲ ಟ್ಯಾಂಕರ್ಗಳ ಸೋರಿಕೆಯಿಂದ ಅವನ್ನು ಕಲುಷಿತಗೊಳಿಸಿದ್ದಾನೆ. ಉಪಗ್ರಹ ಚಂದ್ರ ಹಾಗೂ ಮಂಗಳ ಗ್ರಹವನ್ನೂ ನಾವು ಬಾಕಿ ಬಿಟ್ಟಿಲ್ಲ.

2015ರಲ್ಲಿ ನಡೆಸಿದ ಒಂದು ಬಾಹ್ಯಾಕಾಶ ಸಮೀಕ್ಷೆಯಲ್ಲಿ ಚಂದ್ರನ ಮೇಲೆ  ಪತ್ತೆಯಾಗಿದ್ದ ಒಂದು ವಸ್ತುವನ್ನು  ಕ್ಷುದ್ರಗ್ರಹ (ಆಸ್ಟರಾಯ್ಡ್) ಎಂದು ಬಗೆಯಲಾಗಿತ್ತು. ಇತ್ತೀಚೆಗೆ ಅದು ರಾಕೆಟ್ ಒಂದರ, ಸುಮಾರು 3 ಟನ್ ತೂಕದ ಭಾಗ ಎಂಬುದು ತಿಳಿದು ಬಂದಿದೆ. ಅದು ಸಾಹಸಿ ಉದ್ಯಮಿ ಎಲಾನ್ ಮಸ್ಕ್ ಸಂಸ್ಥೆ ಸ್ಪೇಸ್ಎಕ್ಸ್ ಗೆ ಸೇರಿದ್ದು ಇರಬಹುದು ಎಂದು ನಂಬಿದ್ದ ಖಗೋಳ ಶಾಸ್ತ್ರಜ್ಞರು ಮುಂದೆ ಅದು ಚೈನೀಸ್ ರಾಕೆಟ್ ಅಂದುಬಿಟ್ಟರು. ಚೈನಾ ಅದನ್ನು ನಿರಾಕರಿಸಿತು. ಚಂದ್ರನ ಮೇಲೆ, ಇನ್ನೂ ಒಂದು ಕುಳಿ ಕೊರೆದ -ವೇಸ್ಟ್ ಸಾಕಷ್ಟು ಧೂಳಿನ ಬಿರುಗಾಳಿ ಎಬ್ಬಿಸಿದ್ದು ನಿಸ್ಸಂಶಯ. ಅಷ್ಟಕ್ಕೂ, ಯು ಎಸ್ ಚಂದ್ರನ ಮೇಲೆ ಊರಿದ ಅವರ ರಾಷ್ಟ್ರಧ್ವಜ, ಚಂದ್ರನ ಪಾಲಿಗೆ ಒಂದು ಕಸವಲ್ಲವೇ?

ಯುರೋಪಿಯನ್ ಸ್ಪೇಸ್ ಏಜನ್ಸಿ ಪ್ರಕಾರ ಬಾಹ್ಯಾಕಾಶದಲ್ಲಿ 36,500ಕ್ಕಿಂತ ಹೆಚ್ಚು ಗುಜರಿ ವಸ್ತುಗಳು (ವಿಫಲ ಕೃತಕ ಉಪಗ್ರಹ, ರಾಕೆಟ್ ಭಾಗ ಇತ್ಯಾದಿ) ಭೂಮಿಗೆ ಪ್ರದಕ್ಷಿಣೆ ಹಾಕುತ್ತಿವೆ. ಸ್ಯಾಟಲೈಟ್ ಹಾಗೂ ಬಾಹ್ಯಾಕಾಶ ನೌಕೆಗಳಿಗೆ ಇವು ಮಾರಕವಾಗಬಲ್ಲವು. “ಇದು ನಾವೇ ಮಾಡಿ ಹಾಕಿದ ಚಿಂದಿ ಚಿತ್ರಾನ್ನ ಅನ್ನುವ ಪ್ರೊಫೆಸರ್ ಹ್ಯೂ ಲೂವಿಸ್, “ ನಾವು ನಿರಪಾಯಕಾರಿ ಎಂದು ಬಗೆದಿರುವ ವಸ್ತುಗಳು ಅನಿರೀಕ್ಷಿತವಾಗಿ ಭೂಮಿಗೆ ಬಂದು ಅಪ್ಪಳಿಸಬಹುದು ಎಂದು ಎಚ್ಚರಿಸುತ್ತಾನೆ.

  ಅದು 1979 ಜುಲೈ ತಿಂಗಳ 11ನೇ ತಾರೀಖು. ಸುಮಾರು 3 ಬೆಡ್ ರೂಮ್ ಮನೆಯಷ್ಟು ಗಾತ್ರ, 79 ಟನ್ ತೂಕದ, ಯು ಎಸ್ ಸ್ಕೈಲ್ಯಾಬ್ ಸ್ಪೇಸ್ ಸ್ಟೇಷನ್, ಪಶ್ಚಿಮ ಆಸ್ಟ್ರೇಲಿಯಾದ ಸುಮಾರು 150 ಅಗಲದ ಹೆಚ್ಚು ಕಡಿಮೆ ನಿರ್ಜನ ಪ್ರದೇಶದ ಸುತ್ತಮುತ್ತ ಸಿಡಿದು 500 ಹೋಳುಗಳಾಗಿ ಪಟಾಕಿಯಂತೆ ಬೆಳಗಿ ಕೊನೆಗೂ ಬೀಳುವುದರೊಂದಿಗೆ ಇಡೀ ವಿಶ್ವಕ್ಕೆ ವಿಶ್ವವೇ ನೆಮ್ಮದಿಯ ನಿಟ್ಟುಸಿರು ಬಿಡುತ್ತದೆ.

 ಅಮೆರಿಕಾದ ಮೊತ್ತಮೊದಲಪ್ರದಕ್ಷಿಣೆ ಬರಬಲ್ಲ ಸ್ಪೇಸ್ ಸ್ಟೇಷನ್, ಸ್ಕೈಲ್ಯಾಬ್. ಅದರ ಕಕ್ಷೆ ಕುಸಿಯುವುದರೊಂದಿಗೆ ಅದರ ಗ್ರಹಚಾರ ಕೆಟ್ಟು ಹೋಗಿತ್ತು. ಅದರ ಕಕ್ಷೆಯನ್ನು ಮೇಲಕ್ಕೆ ತಳ್ಳುವ ಪ್ರಯತ್ನಗಳು ಕೈಕೊಟ್ಟವು. ಅದು ಭೂಮಿಗೆ ಅಪ್ಪಳಿಸುವುದು ಶತಸಿದ್ಧವಾದ ನಂತರ, ವಿಶ್ವದೆಲ್ಲೆಡೆ ಆತಂಕ, ಕುತೂಹಲ, ಭೀತಿ ಹೆಚ್ಚಾಗುತ್ತಾ ಹೋಯಿತು. ಅದು ಎಲ್ಲಿ, ಯಾವಾಗ ಬೀಳುತ್ತದೆ ಎಂದು ಜನ ಬೆಟ್ ಕಟ್ಟಲು ಶುರು ಮಾಡಿದ್ದು ಒಂದೆಡೆಯಾದರೆ, ವೃತ್ತಪತ್ರಿಕೆಗಳು ಅದರ ಅವಶೇಷ ಹಿಡಿದು ತಂದವರಿಗೆ ಬಹುಮಾನ ಘೋಷಿಸಿದವು. ಇನ್ನು ಕೆಲವರುಸ್ಕೈಲ್ಯಾಬ್ ಥೀಮ್ ಉಳ್ಳ ಕಾರ್ಮಿಕರು ಧರಿಸುವಂಥ ಹೆಲ್ಮೆಟ್ ಮಾಡಿ ಮಾರಿದರು.

ವಿಜ್ಞಾನಿಗಳು, ಅದರ ದಿಕ್ಕು ಬದಲಿಸಿ, ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಿಂದ 800 ಮೈಲು ದಕ್ಷಿಣಾಭಿಮುಖವಾಗಿ ಸಾಗರದಲ್ಲಿ ಬೀಳಿಸಲು  ಮಾಡಿದ್ದ ಕೊನೆಯ ಪ್ರಯತ್ನ ಫಲಕೊಡಲಿಲ್ಲ.

 ಸಮಾಧಾನದ ವಿಷಯವೆಂದರೆ, ಹೆಚ್ಚಿನ ಬಾಹ್ಯಾಕಾಶ ಅವಶೇಷಗಳು ಭೂಮಿಗೆ ಬಂದು ಬೀಳುವುದು ದಕ್ಷಿಣ ಶಾಂತ ಸಮುದ್ರದ, ‘ಸ್ಪೇಸ್ ಶಿಪ್ ಶ್ಮಶಾನ ಎನ್ನಲಾಗುವ ನಿರ್ಜನ ಪ್ರದೇಶದಲ್ಲಿ. ಅಂದಹಾಗೆ, ಯು ಎಸ್ ಎಸ್ ಆರ್ ಮಿರ್ ಸ್ಪೇಸ್ ಸ್ಟೇಷನ್ ಬಿದ್ದದ್ದು ಅಲ್ಲೇನೇ!

ವಿವೇಚನೆಯಿಲ್ಲದೆ ಎಸೆದರೆ, ಎಸೆದದ್ದು ನೆತ್ತಿಗೆ ಬಂದು ಹೊಡೆಯುತ್ತದೆ.

 

               

  

Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ -ಆಗಸ್ಟ್‌ 2025ರ ತುಷಾರ ದಲ್ಲಿ ಪ್ರಕಟವಾಗಿತ್ತು     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾ...
  ಛಾಯಾಚಿತ್ರ ಒಂದು, ಸಂಚಲನಗಳು ಹತ್ತು ಹಲವು   ಮೊಬೈಲ್‌, ಸಾಮಾಜಿಕ ಜಾಲತಾಣ ಬಿಡಿ; ಇಂಟರ್ನೆಟ್ ಕೂಡಾ ಅಂಬೆಗಾಲಿಡುತ್ತಿದ್ದ ತೊಂಭತ್ತನೇ ದಶಕದ ಕಾಲವದು. ಆದಾಗ್ಯೂ   ಅದೊಂದು ಛಾಯಾಚಿತ್ರ     ಅಂದು ಸೃಷ್ಟಿಸಿದ ಸಂಚಲನ, ಎಬ್ಬಿಸಿದ ಆಕ್ರೋಶ ಮತ್ತು ತಲ್ಲಣಗಳ ತೀವ್ರತೆ- ನಾವು ಇಂದು ವೈರಲ್‌ ಎಂದು ಏನನ್ನು ಕರೆಯುತ್ತೇವೆಯೋ- ಅದಕ್ಕೆ ಸಮಾನ.   ಸುಡುವ ಕ್ಷಾಮಕ್ಕೆ ತುತ್ತಾದ ಸುಡಾನ್‌   ಅಂತಃಕಲಹ ಅನ್ನುವುದು ಆಫ್ರಿಕಾ ಖಂಡದ ದೇಶಗಳ ಹಣೆಬರಹ. ಅಂದಮೇಲೆ, ಸುಡಾನ್‌ ನಂತಹಾ ಆಫ್ರಿಕನ್ ದೇಶವನ್ನು ಅದು ಕಾಡದೆ ಇರುತ್ತದೆಯೇ? ಆದರೆ   ಒಳಜಗಳ ಫಲದಿಂದ ಭೀಕರ ಕ್ಷಾಮಕ್ಕೆ ತುತ್ತಾದದ್ದು ಸುಡಾನ್‌ನ ಘೋರ ದುರಂತ. ಆಫ್ರಿಕಾದ ಈಶಾನ್ಯದಲ್ಲಿರುವ ಸುಡಾನ್ ಗೆ   ಸಾಂಸ್ಕೃತಿಕವಾಗಿ ಶತಶತಮಾನಗಳ ಸಮೃದ್ಧ ಪರಂಪರೆಯಿದೆ. ಇದು ಕತ್ತಲೆಯ ಖಂಡದ ಬೃಹತ್‌ ರಾಷ್ಟ್ರಗಳಲ್ಲಿ ಒಂದು. ಹೆಚ್ಚುಕಮ್ಮಿ ಕೃಷಿಯೇ ಆರ್ಥಿಕತೆಯ ಮೂಲವಾಗಿರುವ ಈ ದೇಶ ಬಂಜರು, ಅರೆ ಬಂಜರು ಭೂಮಿ ಮತ್ತು ಹುಲ್ಲುಗಾವಲುಗಳಿಂದ ತುಂಬಿದ್ದು, ತೈಲ ಮತ್ತು ಖನಿಜಗಳಿಗೆ ಇಲ್ಲಿ ಕೊರತೆಯೇನೂ ಇಲ್ಲ.   ಬ್ರಿಟನ್‌ ಹಾಗೂ ಈಜಿಪ್ಟ್‌ ದೇಶಗಳು ಜಂಟಿಯಾಗಿ ಆಳುತ್ತಿದ್ದ ಈ ದೇಶ 1956 ರಲ್ಲಿ ಸ್ವತಂತ್ರವಾಯಿತು. ಆ   ದರೆ ವಿವಿಧ ಸಂಸ್ಕೃತಿ, ಭಾಷೆ ಹಾಗೂ ಜನಾಂಗಗಳ ತಾಣವಾಗಿರುವ ಸುಡಾನ್‌ನ ಪಾಲಿಗೆ ರಾಜಕೀಯ ಅಸ್ಥಿರತೆ, ಸೇನಾಡಳಿತ ಹ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...