Skip to main content
ತರ್ಕಗಳು ಕನ್ನಡದಲ್ಲಿ ಏರ್ಪಡುವುದಿಲ್ಲ!
ಸುಮಾರು ಒಂದು ವರ್ಷದ ಹಿಂದೆ ‘ವಿಶ್ವವಾಣಿ’ ಯಲ್ಲಿ ಪ್ರಕಟವಾದ ವರದಿಯೊಂದನ್ನು ಉಲ್ಲೇಖಿಸಿ, ಈಗ ಇದನ್ನು ಬರೆಯಲು ಕೆಲವು ಕಾರಣಗಳಿವೆ. ಇದೊಂದು ದಾರುಣ ಘಟನೆ ಮತ್ತು ಇದು ನಡೆದದ್ದು ಅನ್ಯಾಯವಾಗಿ ಕೇರಳ ಸೇರಿದ ನನ್ನ ಹುಟ್ಟೂರು ಕಾಸರಗೋಡಿನ ಪೆರಡಾಲ (ಬದಿಯಡ್ಕ)ದಲ್ಲಿ. ಅದು ನಾಡೋಜ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ಕರ್ಮಭೂಮಿ ಮಾತ್ರವಲ್ಲ ನನ್ನ ತಂದೆ ಕವಿ, ವಾಗ್ಮಿ, ಕನ್ನಡ ಹೋರಾಟಗಾರ, ಬರೆಹಗಾರ ಹಾಗೂ ಅಡ್ವೋಕೇಟ್ ಕೆ. ಎಸ್. ಸುಬ್ರಾಯ ಭಟ್ ಕೆಲಕಾಲ ಶಿಕ್ಷಕರಾಗಿ ಅರ್ಥಾತ್ ಕಯ್ಯಾರರ ಸಹೋದ್ಯೋಗಿಯಾಗಿ ಸೇವೆ ಸಲ್ಲಿಸಿದ ಊರು ಕೂಡಾ.
ಹೀಗಿರುವಾಗ ‘ಅಲ್ಲಿ ನಡೆದ ಘಟನೆಯೊಂದರ ವರದಿಯಲ್ಲಿ ನುಸುಳಿದ ಪದಪ್ರಯೋಗವೊಂದರ ಕುರಿತು, ತೀರಾ ನಿರ್ಭಾವುಕನ ಹಾಗೆ ಬರೆಯುವುದು ಹೇಗೆ?’ ಎಂಬ ಧರ್ಮಸಂಕಟ ನನ್ನನ್ನು ಕಟ್ಟಿಹಾಕಿತು. ಇನ್ನು ಆ ಕುಟುಂಬದವರು ಇದನ್ನು ಹೇಗೆ ಸಹಿಸಿಯಾರು? ಯಾವ ರೀತಿ ತೆಗೆದುಕೊಳ್ಳಬಹುದು? ಎಂಬ ಯೋಚನೆಯಿಂದ ನಾನು ತಟಸ್ಥನಾಗಿದ್ದೆ.
ಅದು ತೀರಾ ಎದೆಕಲಕುವಂತ ವರದಿ. ‘ವಿಶ್ವವಾಣಿ’ ಯಲ್ಲಿ ಪ್ರಕಟವಾದದ್ದು 18ನೇ ಏಪ್ರಿಲ್, 2016ರಂದು. ‘ತಂದೆ ತಾಯಿಯ ಇರಿದು ಯುವಕ ಆತ್ಮಹತ್ಯೆಗೆ ಶರಣು’ ಎಂಬ ತಲೆಬರಹದ ಅಡಿಯಲ್ಲಿ. ಆ ಸಾಫ್ಟ್ ವೇರ್ ಇಂಜಿನಿಯರ್, ಆತ್ಮಹತ್ಯೆ ಮಾಡಿಕೊಂಡದ್ದಲ್ಲದೆ ಅದಕ್ಕೂ ಮುನ್ನ ತನ್ನ ತಂದೆ ತಾಯಿ ಹಾಗೂ ಇತರರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ! ಈ ಕುರಿತು ವರದಿಯಲ್ಲಿ ನುಸುಳಿದ ಕೊನೆಯ ವಾಕ್ಯ ಹೀಗಿತ್ತು:
‘ಸೋಮವಾರ ಮನೋಚಿಕಿತ್ಸೆಯ ವೈದ್ಯರಲ್ಲಿಗೆ ತೆರಳಲಿದ್ದು, ಈ ಕಾರಣ (ಈ ಯುವಕ) ಊರಿಗೆ ಮರಳಿದ್ದು, ಚಿಕಿತ್ಸೆಗೆ (ಅವನು) ವಿರೋಧಿಸುತ್ತಿದ್ದನೆಂದೂ, ಭಾನುವಾರ ಈ ಬಗ್ಗೆ ‘ತರ್ಕಗಳೇರ್ಪಟ್ಟು’ ಇರಿತ ಹಾಗೂ ತನ್ನನ್ನೇ ತಾನು ಆತ್ಮಹತ್ಯೆಗೈಯ್ಯುವವರೆಗೆ ಮುಂದುವರಿಯಿತೆಂದು ಪೊಲೀಸರು ತಿಳಿಸಿದ್ದಾರೆ. ಆ ಕೋಪದಲ್ಲಿ ಅವನು ಹೀಗೆ ಮಾಡಿದ ಎಂದು ಇನ್‍ಸ್ಪೆಕ್ಟರ್ ವಿವರಣೆ ನೀಡಿದರು’.

 (ಆ ವ್ಯಕ್ತಿಯ ಹೆಸರನ್ನು ಉದ್ದೇಶ ಪೂರ್ವಕವಾಗಿ ನಾನು ಪ್ರಸ್ತಾಪಿಸಿಲ್ಲ. ಅದರ ಅಗತ್ಯವೂ ಇಲ್ಲ ಮತ್ತು
‘ತನ್ನನ್ನೇ ತಾನು’ ಆತ್ಮಹತ್ಯೆಗೈಯ್ಯುವವರೆಗೆ’- ಎಂಬ ರಚನೆಯಲ್ಲಿರುವ ಆಭಾಸವನ್ನು ಪ್ರಸ್ತಾಪಿಸುವುದು ನನ್ನ ಈ ಬರೆಹದ ವ್ಯಾಪ್ತಿಗೆ ಮೀರಿದ್ದು)

ಆದರೆ ‘ತರ್ಕಗಳೇರ್ಪಟ್ಟು’ ಅಂದರೆ ಏನು?! ಕೇವಲ ತರ್ಕದಿಂದಲೆ ಓರ್ವ ವ್ಯಕ್ತಿ ಇಷ್ಟೊಂದು ರೋಷಾವಿಷ್ಟನಾಗಲು ಹೇಗೆ ಸಾಧ್ಯ? ಮಾನಸಿಕವಾಗಿ ಅಸ್ವಸ್ಥರಾದರೆ ತರ್ಕಗಳು ಎರ್ಪಡುತ್ತವೆಯೆ? ತರ್ಕ ಅನ್ನುವುದು ಅಷ್ಟೊಂದು ಅಪಾಯಕಾರಿ ಆಗಿದ್ದಲ್ಲಿ, ತರ್ಕಹೀನವಾಗಿ ಬದುಕುವುದು ವಾಸಿ ಅಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳು ‘ವಿಶ್ವವಾಣಿ’ ಓದುಗರನ್ನು ಯಾಕೆ ಕಾಡಲಿಲ್ಲ? ಆಗಿನ್ನೂ 'ತಪ್ಪು-ತಿದ್ದಿ-ತೀಡಿ' ಅಂಕಣ ಚಾಲ್ತಿಯಲ್ಲಿದ್ದ ಕಾಲ ಬೇರೆ. ಊಹೂಂ...ಯಾರೊಬ್ಬರೂ ಈ ಪ್ರಯೋಗವನ್ನು ಪ್ರಶ್ನಿಸಿ ಪತ್ರ ಬರೆಯಲಿಲ್ಲ! ಕನ್ನಡಿಗರು ಹಾಗೆ ಮಾಡುವುದಿಲ್ಲ-ಇದು ಇನ್ನು ಮುಂದೆ ನಾನು ನೀಡುವ ಉದಾಹರಣೆಗಳಿಂದ ಸ್ಪಷ್ಟವಾಗುತ್ತದೆ.

ಬದಿಯಡ್ಕದ ಆತ್ಮ ಕನ್ನಡವಾದರೂ, ಅಲ್ಲಿನ ದೇಹ ಕೇರಳದ್ದು. ಅರ್ಥಾತ್ ಅಲ್ಲಿನವರು ಕನ್ನಡಿಗರಾದರೂ,  ಅಲ್ಲಿ ಸರಕಾರಿ ಉದ್ಯೋಗದಲ್ಲಿರುವವರು ಕೇರಳದವರು! ( ದಕ್ಷಿಣದ ಕೆಲವು ಮಲಯಾಳಿಗಳಿಗೆ, ಕಾಸರಗೋಡಿಗೆ  ‘ಪನಿಶ್‍ಮೆಂಡ್’ ಟ್ರಾನ್ಸಫರ್ ಮಾಡಿಸುತ್ತಾರೆ.) ಈ ವರದಿಯಲ್ಲಿ ಬರುವ ಇನ್‍ಸ್ಪೆಕ್ಟರ್  ಓರ್ವ ಮಲಯಾಳಿ ಅನಿಸುತ್ತದೆ. ಅವನು ಮಲಯಾಳದಲ್ಲಿ ‘ತರ್ಕಙಳೆ ತುಡರ್ನು’ (ತರ್ಕಗಳ ತರುವಾಯ) ಅಥವಾ ‘ತರ್ಕಙಳ್ ಉಂಡಾಯದಿನಾಲ್ ( ತರ್ಕಗಳು ಉಂಟಾದುದರಿಂದ) ಅಂದಿದ್ದಾನೆ. ತರ್ಕ ಅಂದರೆ ಮಲಯಾಳಂ ನಲ್ಲಿ ವಾಗ್ವಾದ, ಮಾತಿನ ಜಟಾಪಟಿ ಎಂದು ಅರ್ಥ. ಪ್ರಶ್ನೆ ಇರುವುದು, ‘ಕನ್ನಡದಲ್ಲಿ ನಾವು ‘ತರ್ಕ’ ಅನ್ನುವುದನ್ನು ಈ ಅರ್ಥದಲ್ಲಿ ಬಳಸುತ್ತೇವೆಯೆ?’ ಎಂದು. ಹೀಗಿರುವಾಗ ‘ತರ್ಕಗಳು ಏರ್ಪಟ್ಟು’ ಎಂದು ಕನ್ನಡಕ್ಕೆ ಭಾಷಾಂತರ ಮಾಡಿದರೆ ಹೇಗೆ? ಇದನ್ನು ಕನ್ನಡಿಗರು ಏನೆಂದು ಅರ್ಥ ಮಾಡಿಕೊಳ್ಳಬೇಕು?  ತರ್ಕ ಅನ್ನುವ ಸಂಸ್ಕøತ ಪದ ಕನ್ನಡದಲ್ಲಿ ಒಂದು ಅರ್ಥದಲ್ಲಿ (ಲಾಜಿಕ್ ಎಂದು) ಮಲಯಾಳಂನಲ್ಲಿ ಇನ್ನೊಂದು ಅರ್ಥದಲ್ಲಿ ಬಳಸಲಾಗುತ್ತದೆ ಎನ್ನುವ ಅರಿವು ಮತ್ತು ಎಚ್ಚರ ಭಾಷಾಂತರಗಾರರಿಗೆ ಇರುವುದು ಅತ್ಯಗತ್ಯ.

ಇಂತದ್ದನ್ನು ಪ್ರಶ್ನಿಸುವ ಪ್ರವೃತ್ತಿ ಕನ್ನಡಿಗರಿಗೆ ಇದ್ದಿದ್ದರೆ ಕರ್ನಾಟಕದಲ್ಲಿ ‘ಪ್ರಬಂಧಕರು’ ಇರುತ್ತಿರಲಿಲ್ಲವೇನೋ! ಆದರೆ ಅವರು ಇದ್ದಾರೆ ಮತ್ತು ಅವರು ಹೆಚ್ಚಾಗಿ ಬ್ಯಾಂಕ್ ಗಳಲ್ಲಿ ಕಾಣಿಸುತ್ತಾರೆ. ಇವರೇನು ಅಲ್ಲಿ ಕುಳಿತು ಪ್ರಬಂಧ ಬರೆಯುತ್ತಾರೆಯೆ ಎಂದು ಕೇಳಿದರೆ ಇಲ್ಲ ಎಂದೇ ಹೇಳ ಬೇಕಾಗುತ್ತದೆ. ( ಬ್ಯಾಂಕ್ ಪ್ರಬಂಧಕರಾಗಿ ನಿವೃತ್ತರಾದರೂ ಡುಂಢಿ ರಾಜ್ ಅವರು ಬರೆದದ್ದು ಹನಿಗವನಗಳನ್ನು  ಮತ್ತು ಬೊಳುವಾರು ಮಹಮ್ಮದ್ ಕುಞï್ಞ  ಅವರು ಬರೆದ್ದು ಕತೆ, ಕಾದಂಬರಿಗಳನ್ನು  ಮಾತ್ರವಲ್ಲದೆ ಕನ್ನಡದ ಮಕ್ಕಳ ಪದ್ಯಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ತರುವ ಅಪರೂಪದ ಕೆಲಸ ಮಾಡಿದ್ದಾರೆ ಕೂಡಾ. ಆದರೆ ‘ಪ್ರಬಂಧಗಳನ್ನು ಬರೆಯಲಿಲ್ಲ ಅನಿಸುತ್ತದೆ. ಶ್ರೀನಿವಾಸ ವೈದ್ಯ ಇದಕ್ಕೆ ಅಪವಾದ ಇರಬಹುದೇನೋ!)

ಈ ಪ್ರಬಂಧಕ ಅನ್ನುವ ಪ್ರಾರಬ್ಧ ಕನ್ನಡದಲ್ಲಿ ವಕ್ಕರಿಸಲು ಕಾರಣ ನಾನು ಹೇಳಿದ ರೀತಿಯ ಭಾಷಾಂತರದ ಎಡವಟ್ಟು. ಕನ್ನಡದಲ್ಲಿ  ಪ್ರಬಂಧ ಅನ್ನುವುದು ಇಂಗ್ಲಿಶ್‍ನ ಎಸ್ಸೇ ಅನ್ನುವುದಕ್ಕೆ ಪರ್ಯಾಯವಾಗಿ ಬಳಕೆಯಲ್ಲಿದೆ. ಆದರೆ ಹಿಂದಿಯಲ್ಲಿ ‘ಪ್ರಬಂಧ್ ಕರ್ ನಾ’ ಅನ್ನುವುದು ಕ್ರಿಯಾಪದವಾಗಿ ‘ಆಳು, ಆಡಳಿತ ನಡೆಸು’ ಇತ್ಯಾದಿ ಅರ್ಥಗಳನ್ನು ನೀಡುವುದರಿಂದ ಹಿಂದಿಯಲ್ಲಿ, ಇಂ ಗ್ಲಿಶ್‍ನ ಮ್ಯಾನೇಜರ್ ಅನ್ನುವುದಕ್ಕೆ ಪರ್ಯಾಯವಾಗಿ ‘ಪ್ರಬಂಧಕ’ ಎಂದು ಬಳಸುವುದು ತಪ್ಪಲ್ಲ. ಆದರೆ ಕನ್ನಡದಲ್ಲಿ ಹಾಗಿಲ್ಲವಲ್ಲ? ಅಷ್ಟಕ್ಕೂ ‘ವ್ಯವಸ್ಥಾಪಕ’ ಅನ್ನುವುದು ಹೆಚ್ಚು ಸರಿ ಅನಿಸುವಾಗ ಈ ಪ್ರಬಂಧಕರು ನಮಗೆ ಅನಿವಾರ್ಯವೇ?

ಇದು ಇಷ್ಟೇ ಅಲ್ಲ! ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯೊಂದನ್ನು ನೀವು ಉದ್ಯೋಗವಕಾಶಗಳ ಕುರಿತು ಮಾಹಿತಿ ನಿರೀಕ್ಷಿಸಿ ಸಂಪರ್ಕಿಸಿದರೆ ನಿಮಗೆ ನಿರಾಶೆ ಕಟ್ಟಿಟ್ಟದ್ದು. ಏಕೆಂದರೆ, ಅದರ ಹೆಸರು ‘ಕರ್ನಾಟಕ ಉದ್ಯೋಗ ಮಿತ್ರ’ ಎಂದಿದೆಯಾದರೂ, ಇದು ‘ಮಿತ್ರ’ ನಾಗಿರುವುದು ಉದ್ಯಮಗಳಿಗೆ ಹಾಗೂ ಕೈಗಾರಿಕೆಗಳಿಗೆ! ಹಾಗಿದ್ದಲ್ಲಿ ‘ಉದ್ಯೋಗ ಮಿತ್ರ’ ಎಂದು ಕನ್ನಡಿಗರನ್ನು ದಾರಿ ತಪ್ಪಿಸುವಂತ ಹೆಸರು ಏಕೆ ಇರಿಸಿಕೊಂಡಿದೆ ಎಂದು ಕೇಳಿದರೆ ಬಂದು ತಲುಪುವುದು ಪುನ: ಹಿಂದಿಗೆ. ಹಿಂದಿಯಲ್ಲಿ ‘ಉದ್ಯೋಗ್À’ ಎಂದರೆ ಕೈಗಾರಿಕೆ, ಉದ್ಯಮ ಎಂದು ಅರ್ಥ. ಆದರೆ ಕನ್ನಡದಲ್ಲಿ ‘ಜಾಬ್/ಎಂಪ್ಲಾಯ್ಮೆಂಟ್’ ಎಂಬ ಅರ್ಥದಲ್ಲಿ ‘ಉದ್ಯೋU’Àವನ್ನು ಬಳಸುತ್ತಿರುವಾಗ ಈ ಹೆಸರು ಸೂಕ್ತವೆನಿಸಿದ್ದು ಹೇಗೆ? ಇದು ಯಾರೋ ಉತ್ತರ ಭಾರತದ ಐ ಎ ಎಸ್ ಅಧಿಕಾರಿ ಮಾಡಿದ ಎಡವಟ್ಟಿನ ಫಲ ಇರಬಹುದೇನೋ! ಈ ಹೆಸರಿನ  ಸಂಸ್ಥೆ ಕರ್ನಾಟಕದಲ್ಲಿ ಸರ್ಕಾರದ ಅಧೀನದಲ್ಲಿರುವುದು ಮತ್ತು ಕನ್ನಡಿಗರು ಅದನ್ನು ಪ್ರಶ್ನಿಸದಿರುವುದು ವಿಚಿತ್ರವಾಗಿದೆ. ಅಂದ ಹಾಗೆ ಕನ್ನಡಿಗರು ವಿರೋಧಿಸಬೇಕಾದ್ದು ಈ ರೀತಿಯ ಹಿಂದಿ ಹೇರಿಕೆಯನ್ನು, ಹೊರತಾಗಿ ‘ನಮ್ಮ’ ಮೆಟ್ರೋ ನಿಲ್ದಾಣಗಳಲ್ಲಿ ಕನ್ನಡ, ಇಂಗ್ಲಿಶ್, ಹಿಂದಿ ಈ ಮೂರರಲ್ಲಿ- ಕನ್ನಡಕ್ಕೆ ಮೊದಲನೇ ಸ್ಥಾನ ಎಂದು ಸಾರಿ ಹೇಳುವ( ಹೇಳುತ್ತಿದ್ದ) ಫಲಕಗಳನ್ನು ಅಲ್ಲ!
ಈ ಹಿಂದೆ ಕೇಂದ್ರ ಸರ್ಕಾರದ ಕನ್ನಡ ಜಾಹೀರಾತು ಒಂದರಲ್ಲಿ ‘ಕುಪೋಷಣೆ’ ಎಂಬ ಪದ ಪ್ರಯೋಗವನ್ನು ಆಕ್ಷೇಪಿಸಿ ನಾನು ಪತ್ರಿಕೆಗಳಿಗೆ ಪತ್ರ ಬರೆದಿದ್ದೆ. ಒಬ್ಬ ಸಹೃದಯಿ ಓದುಗ, ನಿಜವಾಗಿ ‘ಕುಪೋಷಣೆ’ ಸರಿಯಾದ ಪದ, ‘ಅಪೌಷ್ಟಿಕತೆ’ ತಪ್ಪು ಎಂಬ ವಾದ ಮಂಡಿಸಿದರು. ನಾನು ಅವರಿಗೆ ನೀಡಿದ ಉತ್ತರದಲ್ಲಿ ನನ್ನ ಪತ್ರದ ಆಶಯ ಹಿಂದಿಯಲ್ಲಿ ಬಳಸುವ ಪದಗಳನ್ನು ಯಥಾವತ್ತಾಗಿ ಕನ್ನಡದಲ್ಲಿ ಬಳಸುವುದಲ್ಲ ಎಂದು ಎಚ್ಚರಿಸುವುದು ಆಗಿತ್ತೇ ವಿನಃ ವ್ಯಾಕರಣವನ್ನು ವಿಮರ್ಶಿಸುವುದಲ್ಲ ಎಂದು ಕೆಲವು ಉದಾಹರಣೆಗಳ ಸಮೇತ ವಿವರಿಸಿದ್ದೆ. ಇನ್ನು, ಅಪೌಷ್ಟಿಕತೆ ತಪ್ಪೇ ಆಗಿದ್ದಲ್ಲಿ, ಅದು ರೂಢಿ ಆಗುವ ಮುನ್ನವೇ ಎಚ್ಚರಿಸಿ ಕನ್ನಡಿಗರಿಗೆ ಮಹದುಪಕಾರ ಮಾಡಬಹುದಿತ್ತಲ್ಲ? ಎಂದು ಕೂಡಾ ಅವರನ್ನು ಕೇಳಿದ್ದೆ. ( ನನ್ನ ಎರಡನೇ ಪತ್ರ ಪ್ರಕಟವಾಗಲಿಲ್ಲ ಎನ್ನವುದು ಬೇರೆ ಮಾತು.)

ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಯವರು ಲೋಕಸಭೆಯಲ್ಲಿ ಮಾಡಿದ ಐತಿಹಾಸಿಕ ಭಾಷಣವನ್ನು ಕನ್ನಡದ ಸುದ್ದಿ ಚಾನೆಲ್ ಒಂದು ಪ್ರಸಾರ ಮಾಡುತ್ತಿತ್ತು. ಟಿವಿ ಪರದೆಯ ಅರ್ಧ ಭಾಗದಲ್ಲಿ ಭಾಷಣದ ದೃಶ್ಯಾವಳಿ ಮೂಡುತ್ತಿದ್ದಂತೆ, ಉಳಿದ ಅರ್ಧ ಭಾಗದಲ್ಲಿ ಭಾಷಣದ ಕನ್ನಡ ಅನುವಾದ ಸ್ಕ್ರೋಲ್ ಆಗುತ್ತಾ ಸಾಗುತ್ತಿತ್ತು.

ಆವರು ‘ಹಮ್ ಸಾಂಪ್ರದಾಯಿಕತಾ ಸೆ ಸಹಮತ್ ನಹೀ ಹೈಂ …ಹಮ್ ಉಸ್ಕೇ ಖಿಲಾಫ್ ಹೈಂ’ ಅನ್ನುತ್ತಿರಬೇಕಾದರೆ ಕನ್ನಡದಲ್ಲಿ ‘ನಾವು ಸಾಂಪ್ರದಾಯಿಕತೆಯ ಪರವಾಗಿ ಇಲ್ಲ, ನಾವು ಅದನ್ನು ವಿರೋಧಿಸುತ್ತೇವೆ’ ಎಂಬ ‘ಭಾಷಾವಂತಾರ’ ಮೂಡಿ ಬಂತು. ಎಲ್ಲಾದರೂ ಉಂಟೆ? ಭಾಜಪದಂಥಾ ಪಕ್ಷದ ಅಗ್ರಗಣ್ಯ ನಾಯಕ ‘ನಾವು ಸಾಂಪ್ರದಾಯಿಕತೆಯನ್ನು ವಿರೋಧಿಸುತ್ತೇವೆ’ ಅಂದಿದ್ದಾರೆ ಎಂದು ಕನ್ನಡದಲ್ಲಿ ಬರೆದರೆ ಅದರ ಅರ್ಥವೇನು? ಅವರು ಅಂದದ್ದು ನಾವು ಕೋಮುವಾದವನ್ನು ವಿರೋಧಿಸುತ್ತೇವೆ ಎಂದು. ಇಂಗ್ಲಿಶ್‍ನ ‘ಕಮ್ಯೂನಲಿಸಂ’ ಗೆ ಹಿಂದಿಯಲ್ಲಿ ಸಾಂಪ್ರದಾಯಿಕತಾ ಅನ್ನುತ್ತಾರೆ ಕನ್ನಡದಲ್ಲಿ ಕೋಮುವಾದ ಎಂಬ ಪದ ರೂಢಿಯಲ್ಲಿದೆ. ಇದನ್ನು ತಿಳಿಯುವ ಗೋಜಿಗೆ ಹೋಗದೆ ಭಾಷಾಂತರಿಸಿದರೆ ಇಂಥಾ ಅಪಾರ್ಥಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ!
ಹಿಂದಿಯಲ್ಲಿ ‘ಕಡೀ ಅಲೋಚನಾ ಕೀ’ ಅನ್ನುವುದನ್ನು ‘ಚೆನ್ನಾಗಿ ಆಲೋಚನೆ ಮಾಡಿದರು’ ಎಂದು ಭಾಷಾಂತರಿಸಿದರೆ ಅರ್ಥ ಅನರ್ಥವಾಗಿಬಿಡುತ್ತದೆ. ಎಕೆಂದರೆ ಅದು ಕನ್ನಡದ ಆಲೋಚನೆ ಅಲ್ಲ. ಹಿಂದಿಯಲ್ಲಿ ಆಲೋಚನೆ ಅನ್ನುವುದು ಟೀಕೆ, ಖಂಡನೆ ಇತ್ಯಾದಿಗಳಿಗೆ.

ಹಾಗೇನೇ, ಕನ್ನಡದ ಶಿಕ್ಷೆ ಹಿಂದಿಯಲ್ಲಿ ಶಿಕ್ಷ ಆಗುತ್ತದೆ ಅಂದುಕೊಳ್ಳುವುದಲ್ಲ- ಹಿಂದಿಯಲ್ಲಿ ಶಿಕ್ಷ ಅನ್ನುವುದು ನಮ್ಮ ಶಿಕ್ಷಣಕ್ಕೆ ಎಂದು ನೆನಪಿಟ್ಟುಕೊಳ್ಳದಿದ್ದರೆ ಅನುವಾದಕರಿಗೆ ಶಿಕ್ಷೆ ಕಟ್ಟಿಟ್ಟದ್ದು! ಹಿಂದಿ ಹಾಗೂ ಮಲಯಾಳಂನಲ್ಲಿ ‘ಪ್ರವಾಸೀ ಭರತೀಯ’ ಎನ್ನವುದನ್ನು, ಎನ್ ಆರ್ ಐ ಎಂಬ ಅರ್ಥದಲ್ಲಿ ಬಳಸುತ್ತಾರೆ ಎಂಬ ಅರಿವು ಭಾಷಾಂತರಗಾರರಿಗೆ ಇಲ್ಲದಿದ್ದದ್ದಲ್ಲಿ ‘ಅನಿವಾಸಿ ಭಾರತೀಯರು’ ಕೇವಲ ಪ್ರವಾಸಿಗಳಾಗಿ ಹೋಗಿ, ಕೆಲವು ಸೌಲಭ್ಯಗಳಿಂದ ವಂಚಿತರಾಗುವ ಅಪಾಯವಿದೆ!

ಪುನ: ಮಲಯಾಳಂಗೆ ಬಂದರೆ, ಕನ್ನಡದ ‘ಅವಸರ’ ಕ್ಕೆ ಮಲಯಾಳಂ ನಲ್ಲಿ ‘ಅವಕಾಶ’ ಎಂದು ಅರ್ಥ. ನಮ್ಮ ಅವಕಾಶ ಅವರ ಪಾಲಿಗೆ ಹಕ್ಕು. ಹೋಗಲಿ, ಹಿಂದಿಯಲ್ಲಿ ‘ಅವಸರ್’ ಅಂದರೆ ಸಂದರ್ಭ. ಇದಾವುದನ್ನೂ ತಿಳಿಯದೆ, ಅವಸರದಲ್ಲಿ ಭಾಷಾಂತರ ಮಾಡಲು ಹೊರಟರೆ ‘ಅಪಘಾತಕ್ಕೆ ಅವಸರವೇ ಕಾರಣ’ ಎಂಬ ಮಾತು ಅಕ್ಷರಶಃ ನಿಜವಾಗಿ ಬಿಡಬಹುದು! ಉದಯೋನ್ಮುಖ ಮಲಯಾಳಂ ನಟನೊಬ್ಬ ‘ನನಗೆ ಅವಸರವಿಲ್ಲ’ ಎಂದು ಮಲಯಾಳಂನಲ್ಲಿ ಹೇಳಿದರೆ ಅವನಿಗೆ ಸಿನೆಮಾಗಳಲ್ಲಿ ಅವಕಾಶ ದೊರೆಯುತ್ತಿಲ್ಲ ಎಂದು ಅರ್ಥ. ಅದನ್ನು ಹಾಗೇ ಭಾಷಾಂತರಿಸಿದರೆ ನಾವು ‘ಅವನು ಬೆಳಕಿಗೆ ಬರಲು ಆತುರ ಪಡುತ್ತಿಲ್ಲ’ ಎಂದು ಅರ್ಥ ಮಾಡಿಕೊಳ್ಳುತ್ತೇವೆ ಅಷ್ಟೆ?

ಇಲ್ಲಿ ವಿಧಾನ ಸಭೆಯಲ್ಲಿ ನಡೆಯುವ ‘ಕಲಾಪ’ ಕೇರಳದಲ್ಲಿ ‘ಗಲಾಟೆ’ ಅನಿಸಿಕೊಳ್ಳುತ್ತದೆ! ( ವಿಧಾನ ಸಭೆಯಲ್ಲಿ ಮತ್ತಿನ್ನೇನು ನಡೆಯುತ್ತದೆ ಎಂದು ಕೇಳಬೇಡಿ). ಅಂದರೆ ಮಲಯಾಳಂನಲ್ಲಿ ‘ವಿಧಾನ ಸಭೆಯಲ್ಲಿ ಇಂದು ಯಾವುದೇ ಕಲಾಪಗಳು ಇರಲಿಲ್ಲ’ ಅನ್ನುವುದನ್ನು ಹಾಗೇ ಭಾಷಾಂತರಿಸಿದರೆ, ಕನ್ನಡದ ಓದುಗ ಅಲ್ಲಿ ಯಾವ ವಹಿವಾಟು ಕೂಡಾ ನಡೆಯಲಿಲ್ಲ ಎಂದು ಅರ್ಥ ಮಾಡಿಕೊಳ್ಳುತ್ತಾನೆಯಷ್ಟೆ?
ನಮ್ಮ ‘ಪ್ರಶ್ನೆ’ ಮಲಯಾಳಂನಲ್ಲಿ ‘ಸಮಸ್ಯೆ’ ಅಥವಾ ಇನ್‍ಗ್ಲಿಶ್‍ನ ‘ಇಶ್ಶೂ’ ( ನಮ್ಮ ಪ್ರಶ್ನೆ ಅಲ್ಲಿ ‘ಚೋದ್ಯ’)
(ಹಾಗೇ ನೋಡಿದರೆ ‘ಪ್ರಶ್ನೆ ಪತ್ರಿಕೆ’ ಒಂದು ಸಮಸ್ಯೆ ತಾನೆ?) ರಾಷ್ಟ್ರೀಯಂ ಅಂದರೆ ಮಲಯಾಳಂ ನಲ್ಲಿ ರಾಜಕೀಯ ಎಂದು ಅರ್ಥ! (ಹಾಗಂದರೆ ಆರ್ ಎಸ್ ಎಸ್ ವಿರೋಧಿಗಳಿಗೆ ಖುಷಿಯಾಗಬಹುದು). ನಮ್ಮ ರೇಖೆ ಅಲ್ಲಿ ‘ದಾಖಲಾತಿ’ ( ರೇಖ ಎಂಬ ರೂಪದಲ್ಲಿ). ನಮ್ಮ ಪರಂಪರೆ, ಅಲ್ಲಿ ಧಾರಾವಾಹಿ! ರಾಜ್ಯ ಅಂದರೆ ಮಲಯಾಳಂ ನಲ್ಲಿ ರಾಷ್ಟ್ರ ಎಂದು ಅರ್ಥ. ಇವು ಕೆಲವು ಉದಾಹರಣೆಗಳು. ಇಂಥವು ಇನ್ನೂ ಇವೆ.

ಹೋಗಲಿ ಇದನ್ನೆಲ್ಲಾ ಓದಿ ತಲೆ ಗಿರ್ರೆನ್ನುತ್ತಿದೆಯಾದರೆ ಒಂದು ಸ್ವಾರಸ್ಯಕರ ವಿಷಯಕ್ಕೆ ಬರೋಣ-ಹಾಗೆಂದೊಡನೆ, ನೀವು ಊಹಿಸಿದಂತೆ ಈ ವಿಷಯ ಕಾಮಕ್ಕೆ ಸಂಬಂಧಿಸಿದ್ದು.
ಅತ್ಯಾಚಾರ ಪ್ರಕರಣಗಳನ್ನು ವರದಿ ಮಾಡುವಾಗಲೆಲ್ಲಾ, ನಮ್ಮ ಸುದ್ದಿ ವಾಹಿನಿಗಳು ತಪ್ಪದೇ ‘ ಕಾಮುಕನಿಂದ ಅತ್ಯಾಚಾರ’ ಎಂಬ ಪದ ಪುಂಜ ಬಳಸುತ್ತವೆಯಷ್ಟೆ? (ಮತ್ತಿನ್ನೇನು, ಕಾಮುಕನಲ್ಲದವನು ಅತ್ಯಾಚಾರ ಮಾಡುತ್ತಾನೆಯೆ? ಎಂಬಂಥ ದಡ್ಡ ಪ್ರಶ್ನೆಗಳನ್ನು ಕೇಳಬಾರದು) ಆದರೆ, ಕೇರಳದಲ್ಲಾದರೆ, ಎಫ್ ಐ ಆರ್ ನ್ನು ಅಥವಾ ಕೋರ್ಟ್ ‘ಕಲಾಪ’ ವನ್ನು ಕನ್ನಡದಿಂದ ಮಲಯಾಳಂ ಗೆ ಭಾಷಾಂತರಿಸುವ ಸಂದರ್ಭ ಬಂದರೆ, ಭಾಷಂತರಗಾರ ಎಡವಿದರೆ, ಅವನಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾದರೂ ಆಶ್ಚರ್ಯವಿಲ್ಲ! ಏಕೆಂದರೆ-ನಂಬಿದರೆ ನಂಬಿ ಬಿಟ್ಟರೆ ಬಿಡಿ- ಮಲಯಾಳಂ ನಲ್ಲಿ ‘ಕಾಮುಕನ್/ಕಾಮುಕಿ’ ಅಂದರೆ ‘ಪ್ರಿಯತಮ/ ಪ್ರಿಯತಮೆ’ (ನಲ್ಲ/ನಲ್ಲೆ) ಎಂದು ಅರ್ಥ! ( ಪ್ರಿಯತಮ/ಪ್ರಿಯತಮೆ ಈ ಎರಡು ಪದಗಳು ಕೂಡಾ ಮಲಯಾಳಂನಲ್ಲಿ ಬಳಕೆಯಲ್ಲಿವೆ.) ಹೀಗಾಗಿ ‘ಅದು ಪರಸ್ಪರ ಒಪ್ಪಿಗೆಯಿಂದ ನಡೆದ ಲೈಂಗಿಕ ಕ್ರಿಯೆ’ ಎಂದು ವ್ಯಾಖ್ಯಾನಗೊಳ್ಳುವ ಅಪಾಯವಿದೆ.

ಮೊದ ಮೊದಲು ಮಲಯಾಳಂ ಸಿನೆಮಾ ಹಾಡುಗಳನ್ನು, ಅದರಲ್ಲೂ ಮುಖ್ಯವಾಗಿ ಯೇಸುದಾಸ್‍ರ ಅದ್ಭುತ ಗಾಯನವನ್ನು ಮಲಯಾಳಂನಲ್ಲಿ ಕೇಳತೊಡಗಿದಾಗ, ಈ ಪದಗಳಿಂದ ಸ್ವಲ್ಪ ಕಿರಿಕಿರಿ ಅನಿಸುತ್ತಿತ್ತು. ‘ಎಲಾ ಈ ಮಲ್ಲುಗಳೇ! ಹೀಗೆ ಓಪನ್ ಆಗಿ ‘ಕಾಮುಕನ್/ ಕಾಮುಕಿ’ (ಮಲಯಾಳಂ ಉಚ್ಚಾರಣೆ ಕಾಮುಗನ್/ಕಾಮುಗಿ ಎಂದಿರುತ್ತದೆ!) ಅನ್ನುತ್ತಾರಲ್ಲ? ಇವರಿಗೇನಾಗಿದೆ?’ ಎಂದು ನಾವು ಅಚ್ಚರಿಪಡುತ್ತಿದ್ದೆವು. ( ಆದರೆ ಆ ಹಾಡುಗಳ ಗುಣಮಟ್ಟ, ಆ ಗಾನ ಗಂಧರ್ವನ ಅಪ್ರತಿಮ ಗಾಯನ ಇವೆಲ್ಲಾ ಈ ಚಿತ್ರವಿಚಿತ್ರ ಪ್ರಯೋಗಗಳನ್ನು ಮೀರಿ ಅವುಗಳನ್ನು ನಾವು ಮೆಚ್ಚುವಂತೆ ಮಾಡಿತ್ತು ಅನ್ನುವುದು ಅತ್ಲಾಗಿರಲಿ!) ನಮ್ಮ ಮಲಯಾಳಿ ‘ಚಂಗಾತಿಗಳು’ ( ಕನ್ನಡದ ಸಂಗಾತಿ, ಅಲ್ಲಿ ಚಂಗಾತಿ!) ಈ ‘ಕಾಮುಕ/ಕಾಮುಕಿಯರು’ ನಾವು ಅಂದುಕೊಂಡಂತೆ ಕಾಮ ಪೀಪಾಸುಗಳಲ್ಲ, ಪ್ರೇಮಿಗಳು ಎಂದು ತಿಳಿಹೇಳಿದಾಗ ನಾವು ನಿಟ್ಟುಸಿರು ಬಿಟ್ಟೆವು!

 ಕಾಸರಗೋಡಿನವರಾದ ನಾವು, 70 ರ ದಶಕದಲ್ಲಿ, ಮಲಯಾಳಂ ಗೆ ನಿಧಾನವಾಗಿ ತೆರೆದುಕೊಳ್ಳುತ್ತಿದ್ದಾಗ, ಯೇಸುದಾಸ್ ಗಾಯನದಲ್ಲಿ ಮೂಡಿ ಬಂದ ಒಂದು ಸಿನೆಮಾ ಹಾಡು ಹೀಗಿತ್ತು: ‘ಕಾಲವೊಬ್ಬ ಅಜ್ಞಾತ ಕಾಮುಕ, ಜೀವನ ಒಬ್ಬಳು ಪ್ರಿಯ ಕಾಮುಕಿ- - -‘  ಇದಕ್ಕೆ ನಮ್ಮ ಪ್ರತಿಕ್ರಿಯೆ ‘ಹಾಡೇನೋ ಚೆನ್ನಾಗಿದೆ. ಆದರೆ- - -’ ಎಂಬುದಾಗಿತ್ತು! 

ಮಲಯಾಳಂ ನಲ್ಲಿ ‘ಉಗ್ರ’ ಅನ್ನುವುದನ್ನು ‘ಅಮೋಘ’ ‘ಉತ್ತಮ’ ಎಂಬ ಅರ್ಥದಲ್ಲಿ ಬಳಸುತ್ತಾರೆ! ನಮ್ಮ ವಿಕಾರ ಅವರ ಪಾಲಿಗೆ ಭಾವನೆ, ನಮ್ಮ ವೈರಾಗ್ಯ ಅವರ ಪಾಲಿಗೆ ದ್ವೇಷ, ಸಿಟ್ಟು. ಶಬ್ದ ಅನ್ನುವುದನ್ನು ಗಾಯಕನ ಸ್ವರ, ಧ್ವನಿ ಎಂಬ ಅರ್ಥದಲ್ಲೂ ಬಳಸುತ್ತಾರೆ! ನಮ್ಮ ಸೌಜನ್ಯ ಅವರ ಪಾಲಿಗೆ ಉಚಿತ!

ನಮ್ಮ ಸಾರಿಗೆ ಸಚಿವ ಅವರ ಪಾಲಿಗೆ ‘ಗದಾಗದ ಮಂತ್ರಿ’ ಹಾಗಂದರೆ ಕೆಲವರಿಗೆ ದಶಕಗಳ ಹಿಂದೆ ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ದಿವಂಗತ ಗುಂಡೂರಾಯರ ನೆನಪಾಗಬಹುದು. ಅವರನ್ನು ಎಲ್ಲೆಡೆ ಒಂದು ಗದೆಯನ್ನು ನೀಡಿ ಸನ್ಮಾನಿಸುವುದು ಅಂದಿನ ಫ್ಯಾಷನ್ ಆಗಿತ್ತು. ಅವರು ಚುನಾವಣೆಯಲ್ಲಿ ಸೋತ ಮೇಲೆ ಮುಖ್ಯ ಮಂತ್ರಿಗಳನ್ನು ಈ ರೀತಿ ಗದೆ ನೀಡಿ ಸತ್ಕರಿಸುವ ಸಂಪ್ರದಾಯಕ್ಕೂ ತೆರೆ ಬಿತ್ತು. ಆದರೆ ಇದು ಆ ಗದೆ ಅಲ್ಲ. ಗತ+ ಆಗತ= ಗತಾಗತ (ಅಂದರೆ ಸಂಸ್ಕøತದಲ್ಲಿ ‘ಹೊಗುವ ಬರುವ’ -ಅಂದರೆ ಸಾರಿಗೆ ಎಂದು ತಾನೆ ಅರ್ಥ?) ಇನ್ನು, ಗತಾಗತ ಮಲಯಾಳಿಗಳ ನಾಲಿಗೆಯಲ್ಲಿ ಗದಾಗದ ಆಗಿಬಿಡುತ್ತದೆ! ಆಂದರೆ ‘ಹೋಗುವ ಬರುª’À ಸಚಿವರು-(ಹಾಗೆಂದೊಡನೆ ರಾಜಿನಾಮೆ ನೀಡಿ ವಾಪಸಾದ ನಮ್ಮ ರಾಜ್ಯದ ಸಚಿವರು ನಿಮಗೆ ನೆನಪಾದರೆ, ಅದು ನನ್ನ ತಪ್ಪಲ್ಲ.)

ಇದೆಲ್ಲಾ ಯಾಕೆ ಹೀಗಾಗುತ್ತದೆ ಅಂದರೆ ಒಂದೊಂದು ಭಾರತೀಯ ಭಾಷೆಯಲ್ಲಿ, ಸಂಸ್ಕøತದ ಒಂದೊಂದು ಪದವನ್ನು ಒಂದೊಂದು ಅರ್ಥದಲ್ಲಿ ಬಳಸಲಾಗುತ್ತದೆ. ‘ವಿಶ್ವವಾಣಿ’ಯ ಅಂಕಣಕಾರ, ಲೇಖಕ ಶ್ರೀವತ್ಸ ಜೋಶಿ ಅವರು ‘ಬಿಂದು’ ಎಂಬ ಒಂದು ಸಂಸ್ಕøತ ಪದಕ್ಕೆ ಹದಿನಾರು ಅರ್ಥಗಳಿವೆ ಎಂದು ತಮ್ಮ ಒಂದು ಅಂಕಣದಲ್ಲಿ ವಿವರಿಸಿದ್ದನ್ನು ಒಮ್ಮೆ ನೆನಪಿಸಿಕೊಳ್ಳಿ. (ಅವರ ಅಂಕಣಗಳು ಯಾಕೆ ಸಂಗ್ರಹ ಯೋಗ್ಯ ಅನ್ನುವುದಕ್ಕೆ ಇದೊಂದು ಉದಾಹರಣೆ ಸಾಕು.) ಆದುದರಿಂದ, ಸಂಸ್ಕøತದ ಒಂದು ಪದ ಎರಡೂ ಭಾಷೆಯಲ್ಲಿ ಬಳಕೆಯಲ್ಲಿದೆ ಎಂದ ಮಾತ್ರಕ್ಕೆ, ಒಂದರಿಂದ ಇನ್ನೊಂದಕ್ಕೆ ಭಾಷಾಂತರಿಸುವಾಗ ಆ ಪದಗಳನ್ನುಯಥಾವತ್ತಾಗಿ ಬಳಸಿದರೆ, ಮೂಲ ಅರ್ಥಕ್ಕೆ ಧಕ್ಕಯಾಗುತ್ತದೆ ಹಾಗೂ ಅಪಾರ್ಥ, ಅನರ್ಥ ಹಾಗೂ ನಗೆಪಾಟಲಿಗೆ ಕಾರಣವಾಗಬಲ್ಲುದು.

 ‘ಕ್ರಮ’ ಮತ್ತು ‘ಶಿಕ್ಷಣ’ ಎರಡೂ ಪದಗಳು ಕನ್ನಡದಲ್ಲಿ ಬಳಕೆಯಲ್ಲಿವೆ. ಹಾಗೆಂದು ತೆಲುಗಿನ ‘ಕ್ರಮ ಶಿಕ್ಷಣ’ ಎಂಬ ಪದವನ್ನು ನಾವು ಕನ್ನಡದಲ್ಲಿ ಆ ಅರ್ಥದಲ್ಲಿ ಬಳಸುತ್ತೇವೆಯೇ? ತೆಲುಗಿನ ನಾಯಕನೊಬ್ಬ ‘ಜಾತೀಯತೆಗಾಗಿ ಹೋರಾಡಿರಿ’ ಎಂದು ಕರೆ ನೀಡಿದರೆ ಅದನ್ನು ಕನ್ನಡದಲ್ಲಿ ಹಾಗೇನೇ ಬರೆದು ಬಿಟ್ಟರೆ-ಎಂಥಾ ಆಭಾಸವಾದೀತು! ( ಸದ್ಯದ ಕರ್ನಾಟಕದ ರಾಜಕೀಯ ಪರಿಸ್ಥಿತಿಯಲ್ಲಿ ನಾಯಕ ಶಿಖಾಮಣಿಗಳು ಹೀಗೊಂದು ಕರೆ ನೀಡಿದರೆ ಆಶ್ಚರ್ಯಪಡಬೇಕಾಗಿಲ್ಲ. ಅದು ಬೇರೆ ಮಾತು). ತೆಲುಗಿನಲ್ಲಿ ‘ಜಾತೀಯ’ ಅನ್ನುವುದು ನಮ್ಮ ‘ರಾಷ್ಟ್ರೀಯ’ ಎಂಬ ಅರ್ಥದಲ್ಲಿ!  ಹಿಂದಿಯ ಸಂಚಾರವನ್ನು (ಕನ್ನಡದಲ್ಲಿ ಸಂವಹನ) , ಆರಕ್ಷಣವನ್ನು (ಕನ್ನಡದಲ್ಲಿ ಮೀಸಲಾತಿ), ಆತಂಕವಾದವನ್ನು ( ಕನ್ನಡದಲ್ಲಿ ಭಯೊತ್ಪಾದನೆ) ಸೂಚನಾ ಅನ್ನುವುದನ್ನು (ಕನ್ನಡದಲ್ಲಿ ಮಾಹಿತಿ) ಹಾಗೇನೇ ಬಳಸಿದರೆ-ಕುಪೋಷಣೆ ಎಂದರೆ ಸರಿ ಅನ್ನುವವರ ಪಾಲಿಗೆ ಇದು ತಪ್ಪು ಅನಿಸದಿರಬಹುದು-ಆದರೆ ಕನ್ನಡಿಗರಲ್ಲಿ ಎಷ್ಟು ಜನರಿಗೆ ಇದು ಅರ್ಥವಾದೀತು? ಎಂಥಾ ಎಡವಟ್ಟುಗಳಿಗೆ ಕಾರಣವಾಗಬಹುದು? ನಾನು ಎತ್ತಿರುವ ಪ್ರಶ್ನೆ ಇದು.

Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾಗಲ್ಲ, ನಿಜವಾಗಿ, ʼಒಂದು ಆಕೃತಿಯ ಒಳಭಾಗಗಳನ್ನು, ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...
        Food for Teeth                                    If you thought millions of people in Mera Bharat( that’s Mahan) grapple with the issue of not knowing from where their next meal would come, you are all wrong-or else you are not watching much of the idiot box as much as the people calculating the TRP suppose you do! Now what is TRP? It is Television Rating Points. That’s someone somewhere is glad to know how much you weigh as a couch-potato. So when you are watching TV someone is ‘watching’ you like the BB (Big Brother).  A cute device called ‘People’s Meter’ might have been attached to your TV. Or to the one in one of your neighbors’ house. This device keeps track of what you watch and how often, how long etc. And that info is accessed by the geniuses who are ...