Skip to main content
  ಮಿದುಳಲ್ಲಿ ಅಡಗಿತ್ತೆ ಬ್ರಹ್ಮಾಂಡದ ರಹಸ್ಯ?
(ಐನ್ಸ್ಟೈನ್ ಮಿದುಳು ಮತ್ತು ಇತರ ಸಂಗತಿಗಳುಎಂಬ ತಲೆಬರಹದೊಂದಿಗೆ, ಮಾರ್ಚ್ 2020 ತುಷಾರದಲ್ಲಿ ಪ್ರಕಟವಾದ ನನ್ನ ಲೇಖನದ ಅನ್ಎಡಿಟೆಡ್ ಆವೃತ್ತಿ)    
ಮಿದುಳು ಅಂದರೇನು? ಮನುಷ್ಯ ಮಿದುಳಿನ ಮರ್ಮವನ್ನು ಭೆದಿಸುವುದು ಹೇಗೆ? ಯಾವುದರಿಂದ? ಮಿದುಳನ್ನು ಮಿದುಳಿನಿಂದಲೇ ಅರಿಯಬೇಕಷ್ಟೆ! ಒಂದು ವೇಳೆ, ಮಿದುಳನ್ನು ಮೀರಿಸುವ ಕಂಪ್ಯೂಟರ್ನ್ನು ಮಾನವ ಆವಿಷ್ಕರಿಸಿದರೂ ಕೂಡಾಕೊಟ್ಟ ಕೊನೆಯಲ್ಲಿ ಅದು ಮನುಷ್ಯನ ಸೃಷ್ಟಿ ಅಲ್ಲವೇ? ಅದು ಮಿದುಳಿನ ರಹಸ್ಯವನ್ನು ಬಯಲು ಮಾಡಿದ್ದೇ ಆದಲ್ಲಿಬಯಲಾದ ರಹಸ್ಯ ವಸ್ತುನಿಷ್ಠವಾಗಿರಲು ಹೇಗೆ ಸಾಧ್ಯ? ಪರೋಕ್ಷವಾಗಿ, ಅದು ಮಿದುಳನ್ನು ಮಿದುಳು ಅರಿತಂತೆ ಅಲ್ಲವೇ?
 ( ಲೇಖನದ ಉದ್ದಕ್ಕೂ  ಮಿದುಳು ಎಂಬ ಪದವನ್ನುಮನುಷ್ಯನ ಮಿದುಳುಎಂಬ ಅರ್ಥದಲ್ಲಿ ಬಳಸಲಾಗಿದೆ. ಮಿದುಳು ಹೆಚ್ಚಿನ ಜೀವ ಪ್ರಭೇದಗಳಗೆ ಇವೆ, ಮನುಷ್ಯರಿಗೆ ಮಾತ್ರವಲ್ಲ ಆದುದರಿಂದ ಒಕ್ಕಣೆ ಮತ್ತು ಮಿದುಳು ಇಲ್ಲದವರಂತೆ ಬಾಳುವ ಮನುಷ್ಯರೂ ಇದ್ದಾರೆ-ಅಷ್ಟೇಕೆ ಲೋಕಲ್ಲಿರುವುದು ಅವರದ್ದೇ ಬಾಹುಳ್ಯ ಅನ್ನುವುದು ಬೇರೆ ಮಾತು!)
ಮಿದುಳಿನ ಮೇಲೊಂದು ಇಣುಕು ನೋಟ
ಮೊದಲಿಗೆ, ಮಿದುಳಿನ ಬಗ್ಗೆ ಇದುವರೆಗೆ ವಿಜ್ಞಾನಿಗಳು, ವೈದ್ಯರು ಕಲೆ ಹಾಕಿರುವ ಮಾಹಿತಿಯ ಮೇಲೆ ಒಂದು ಇಣುಕು ನೋಟ ಬೀರೋಣ. ಆದರೂ ನೆನಪಿಡಿ-ಮಿದುಳನ್ನು ಅರಿಯುವಲ್ಲಿ ಮಿದುಳಿನ ಇತಿಮಿತಿಯೇ ಅಡ್ಡಿಯಾಗಿದ್ದು ನಾವು ಖಚಿತ ಅಂದುಕೊಂಡಿರುವುದರ ಬುಡ ಕೂಡಾ ತುಂಬಾ ದೃಢ ಅನ್ನುವಂತಿಲ್ಲ!
ಶತಮಾನಗಳ ಹಿಂದೆ ಮಹಾನ್ ತತ್ತ್ವಜ್ಞಾನಿ ಅರಿಸ್ಟಾಟಲ್, ಮಿದುಳಿನ ಹೂರಣದ ಕುರಿತು ಭಾರಿಮಂಡೆ. . .ಅಲ್ಲಲ್ಲ. . . ಎದೆ ಬಿಸಿಮಾಡಿದ್ದ ಅನಿಸುತ್ತದೆ. ಹೀಗಾಗಿಯೆ ಅವನು ತನ್ನ ಜೀವಶಾಸ್ತ್ರ (‘ಅರಿಸ್ಟಾಟಲ್ಸ್ ಬಯಾಲಜಿ’) ಗ್ರಂಥದಲ್ಲಿನಮ್ಮ ಬುದ್ಧಿವಂತಿಕೆ ಇರುವುದು ನಮ್ಮ ಹೃದಯದಲ್ಲಿ ಮತ್ತು ಮಿದುಳಿನ ಕೆಲಸ ಅದನ್ನು ತಂಪಾಗಿಸುವುದುಎಂದು ಬರೆದ! ಅಂಥಾ ಕುಶಾಗ್ರಮತಿಯನ್ನೇ ಮಿದುಳು ದಾರಿ ತಪ್ಪಿಸಿತ್ತು ಅಂದಮೇಲೆ, ಹುಲು ಮಾನವರಿಗೆ ಅದರ ರಹಸ್ಯ ದಕ್ಕುತ್ತದೆ ಅಂದುಕೊಳ್ಳುವುದು ಮಿದುಳಿನ ಮರ್ಮವನ್ನು ಅಪಮೌಲ್ಯಗೊಳಿಸಿದಂತಾಗುತ್ತದೆ. ಅಂದಿನ ಅರಿಸ್ಟಾಟಲ್ನಿಂದ ಹಿಡಿದು ಇಂದಿನ ಭಾರತ ಸಂಜಾತ ನ್ಯೂರಾಲಜಿಸ್ಟ್ ಪದ್ಮಭೂಷಣ ಡಾ ವಿ.ಎಸ್. ರಾಮಚಂದ್ರನ್ ವರೆಗೆ ವಿಜ್ಞಾನಿಗಳು, ವೈದ್ಯರು ನಡೆಸಿದ ಸತತ ಅಧ್ಯಯನ, ಸಂಶೋಧನೆಗಳ ಫಲದಿಂದ ಇಂದು ನಮಗೆ ಮಿದುಳಿನ ಬಗ್ಗೆ ಸಾಕಷ್ಟು ಮಾಹಿತಿ ದೊರೆತಿದೆ ಮತ್ತು ಅದರ ಕಾರ್ಯ ವೈಖರಿ ತಕ್ಕ ಮಟ್ಟಿಗೆ ಅರ್ಥವಾಗಿದೆ-ಅಥವಾ ಸದ್ಯ ಹಾಗಂದುಕೊಳ್ಳಬಹುದು.    
ನಮಗೆ ಬಾಲ ಇಲ್ಲ-ಆದರೆ ನಮ್ಮ ಮಿದುಳಿಗೆ ಬಾಲದಂತಹಾ ಒಂದು ಬಳ್ಳಿ ಇದೆಮಿದುಳು ಮತ್ತು ಮಿದುಳ ಬಳ್ಳಿ ಸೇರಿ ಕೇಂದ್ರೀಯ ನರಮಂಡಲ ವ್ಯವಸ್ಥೆ  ಅನಿಸಿಕೊಳ್ಳುತ್ತದೆ. ಸೆರೀಬ್ರಮ್, ಬ್ರೇನ್ ಸ್ಟೆಮ್ ಹಾಗೂ ಸೆರೆಬೆಲಮ್ ಮಿದುಳಿನ ಮುಖ್ಯ ಭಾಗಗಳು. (ವಿಜ್ಞಾನ ಇದುವರೆಗೆ ಗುರುತಿಸಿರುವ ಒಟ್ಟು ಭಾಗಗಳು 17). ಈಗ ನೀವು ಲೇಖನದ ಪದಗಳನ್ನು ನಿಮ್ಮ ಕಂಗಳ ಮೂಲಕ ಗ್ರಹಿಸಿ, ಮಾಹಿತಿಯನ್ನುಪ್ರಕ್ರಿಯೆಗೆ ಒಳಪಡಿಸುವುದು, ‘ಸಮನ್ವಯಗೊಳಿಸುವುದು, ಅರ್ಥ ಮಾಡಿಕೊಂಡು, ಮುಂದೆ ಓದುವುದೋ ಬೇಡವೋ ಎಂದುನಿರ್ಧರಿಸುವುದುಇವೆಲ್ಲವನ್ನೂ ಮಾಡುತ್ತಿರುವುದು ನಿಮ್ಮ ಮಿದುಳಿನ ಮೂಲಕ, ನೆನಪಿಡಿ! (ನಾನು ಬರೆಯುವಾಗ ಅದಕ್ಕಿಂತ ಹೆಚ್ಚಾಗಿ ಮಿದುಳನ್ನು ಬಳಸಿರಬಹುದು. ಬರೆಯುವುದು, ಓದುವಷ್ಟು ಸುಲಭದ ಕ್ರಿಯೆ ಅಲ್ಲ ತಾನೆ?)
ಸೆರೀಬ್ರಮ್ ಮಿದುಳಿನ ಅತಿ ದೊಡ್ಡ ಭಾಗ ಮತ್ತು ಇದರಲ್ಲಿ ಎರಡು ಅರ್ಧ ಗೋಳಗಳು ಇವೆ. (ಇವೆರಡು, ಎಡ-ಬಲ ಎಂದು ಬಡಿದಾಡಿಕೊಳ್ಳದೆ, ಮೇಲು-ಕೀಳೆನ್ನದೆ, ಒಂದಕ್ಕೊಂದು ನೆರವಾಗುತ್ತ ಇರುವುದರಿಂದ ನಾವು ಆರೋಗ್ಯವಂತರಾಗಿರುತ್ತೇವೆ!) ಸೆರೀಬ್ರಮ್ನದ್ದು ಮಾಹಿತಿಯನ್ನು ಅರ್ಥೈಸುವ ಕೆಲಸ.
ಆದರೆ ಎಡ ಗೋಳಾರ್ಧದಲ್ಲಿ ಬಲ ಗೋಳಾರ್ಧಕ್ಕಿಂತ 186 ದಶಲಕ್ಷದಷ್ಟು ಹೆಚ್ಚುವರಿ ನ್ಯೂರಾನ್ಗಳು (ಮಿದುಳಿನ ಜೀವಕೋಶಗಳು) ಇವೆ ಮತ್ತು ಮಟ್ಟಿಗೆ ಇಲ್ಲಿ ಎಡವು ಮೇಲುಗೈ ಸಾಧಿಸಿದೆ! ಪ್ರತಿಯೊಂದು ಗೋಳಾರ್ಧದಲ್ಲಿ ನಾಲ್ಕು ಲೋಬ್ (ಭಾಗಗಳಿವೆ) ಮತ್ತು ಪ್ರತಿ ಒಂದೊಂದು ಭಾಗ ಒಂದೊಂದು ವಿಶೇಷ ಕಾರ್ಯ ನಿರ್ವಹಿಸುತ್ತದೆ. ಕೆಲವು ಒಂದಕ್ಕಿಂತ ಹೆಚ್ಚು ಕರ್ತವ್ಯ ನಿಭಾಯಿಸುವುದೂ ಇದೆ.
ಸೆರೀಬ್ರಮ್ ಹೊರ ಭಾಗದ ಸೆರೀಬ್ರಲ್ ಕಾರ್ಟೆಕ್ಸ್ ಮೇಲೆ ಪದರು ಪದರಾಗಿರುವುದು ಬೂದು ಪದಾರ್ಥ( ಗ್ರೇ ಮ್ಯಾಟರ್). ಕೆಲವೊಮ್ಮೆ ಮಿದುಳು ಅನ್ನುವ ಬದಲು ಗ್ರೇ ಮ್ಯಾಟರ್ ಅನ್ನುವುದೂ ಉಂಟು! ವಿಪರ್ಯಾಸವೇನೆಂದರೆ, ನಾವು ಬದುಕಿರುವಾಗ ಅದರದ್ದು ಬೂದು ಬಣ್ಣದ ಬದಲು ಗುಲಾಬಿ ಬಣ್ಣ ಆಗಿರುತ್ತದೆ ಮತ್ತು ಗುಲಾಬಿ ಬಣ್ಣಕ್ಕೆ ಕಾರಣ ರಕ್ತ ಪರಿಚಲನೆ. ಅದು ಬೂದು ಬಣ್ಣಕ್ಕೆ ತಿರುಗುವುದು ಸಾವಿನ ಅನಂತರ! ಸೆರೀಬ್ರಮ್ ಅಡಿಯಲ್ಲಿರುವುದು ಸೆರೀಬ್ರಲ್ ಬಿಳಿ ಪದಾರ್ಥ. ಇಲ್ಲಿಯವರೆಗೆ ವಿಜ್ಞಾನಿಗಳು ಬಿಳಿಪದಾರ್ಥಕ್ಕೆ ಅಂಥಾ ಗಣನೀಯ ಪಾತ್ರವೇನೂ ಇಲ್ಲ ಎಂದು ಬಗೆದಿದ್ದರು. ಆದರೆ ಇತ್ತೀಚಿನ ಸಂಶೋಧನೆಗಳಿಂದ ಅದರ ಪಾತ್ರವೇನೆಂಬುದು ಬೆಳಕಿಗೆ ಬಂದಿದೆ. ಕಲಿಯುವಿಕೆ ಮತ್ತು ಮಿದುಳಿನ ಕ್ರಿಯೆಯಲ್ಲಿ ಏರುಪೇರಾದಾಗ ಅದು ವಹಿಸುವ ಪಾತ್ರ ಮಹತ್ವದ್ದು.              
ಮಿದುಳಿಗೆ ಬ್ರೈನ್ ಸ್ಟೆಮ್ ಎಂಬ ಒಂದು ಕಾಂಡವಿದೆ. ಇದು ಇರುವುದು ಸೆರೀಬ್ರಮ್ ಕೆಳಗೆ ಮತ್ತು ತಲೆ ಬುರುಡೆಯ ಹಿಂಭಾಗದಲ್ಲಿ. ಕಾಂಡದ ಹಿಂದಿರುವ ಭಾಗ ಸೆರೀಬೆಲಮ್. ಗಾತ್ರದಲ್ಲಿ ಇಡೀ ಮಿದುಳಿನ 10% ನಷ್ಟಿರುವ ಇದರಲ್ಲಿ ನ್ಯೂರಾನ್ ಗಳ ಪಾರುಪತ್ಯ ಗಣನೀಯ! ಮಿದುಳಿನ ಒಟ್ಟಾರೆ 100 ಬಿಲಿಯ ( 1000 ಕೋಟಿ) ನ್ಯೂರಾನ್ಗಳಲ್ಲಿ ಸಿಂಹಪಾಲು-ಶೇಕಡಾ 50ರಷ್ಟು- ಇಲ್ಲೇ ಜಮೆಯಾಗಿವೆಯಂತೆ! ಮೋಟಾರ್ ಕಂಟ್ರೋಲ್ ಇದರ ಕರ್ತವ್ಯ. ನೀವು ಸೈಕ್ಲಿಂಗ್ ಕಲಿಯುತ್ತಿರುವಾಗ ಒಂದೊಂದೇ ಪಟ್ಟುಗಳನ್ನು ನೆನಪಿಡುವಂತೆ ನೋಡಿಕೊಳ್ಳುವುದು ಇದೇ ಸೆರೀಬೆಲಮ್.
ಕಣ್ಣುನೀರಿಗೆ, ಹಲವು ಹೋರ್ಮೋನ್ಗಳ ಸ್ರವಿಸುವಿಕೆಗೆ ಕಾರಣವಾಗುವ ಪಿಟ್ಯೂಟರಿ, ದೇಹದ ಉಷ್ಣತೆ ಕಾಪಾಡುವ ಹೈಪಾಥಲಮಸ್ ಗ್ರಂಥಿಗಳು ಕೂಡಾ ಮಿದುಳಿನ ಭಾಗಗಳು.
ನಿಮಗೀಗಾಗಲೇ ತಿಳಿದಿರಬಹುದು-ಮಿದುಳಿನ ಜೀವಕೋಶಗಳು ನ್ಯೂರಾನ್ಗಳು ಮತ್ತು ಇವುಗಳೇ ನಮ್ಮ ನೋವು, ನಲಿವು, ಅರಿವು, ನೆನಪು, ಮರೆವು, ಚಟುವಟಿಕೆ ಮಾತ್ರವಲ್ಲ ಮಿದುಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ. . . ಎಲ್ಲವುಗಳಿಗೆ ಕಾರಣವೆಂದು. ನಮ್ಮ ಎಲ್ಲಾ ಸಂವೇದನೆಗಳು, ಯೋಚನೆಗಳು ಇತ್ಯಾದಿಗಳು ನ್ಯೂರಾನ್ಗಳ ನಡುವೆ ನಡೆಯುವ ವಿದ್ಯುತ್ ಪ್ರವಾಹ ರೂಪದ ಸಂದೇಶಗಳ ಫಲಪ್ರತಿ ನ್ಯೂರಾನ್ಗೆ ಇನ್ನೊಂದು ನ್ಯೂರಾನ್ ಜೊತೆ ನಂಟು ಇದೆ. ಸೂಕ್ಷ್ಮ ತಂತಿಗಳ ಮೂಲಕ ಅವುಗಳ ನಡುವೆ ಸಂಪರ್ಕ ಏರ್ಪಡುತ್ತದೆ. ಔಟ್ ಗೋಯಿಂಗ್ ಸಂದೇಶಗಳು ಏಕ್ಸನ್ ಎಂದು ಕರೆಯಲಾಗುವ ತಂತಿಗಳ ಮೂಲಕ ನ್ಯೂರಾನ್ ನಿಂದ ನ್ಯೂರಾನ್ಗೆ ಸಾಗುತ್ತವೆ ಹಾಗೂ ಇನ್ ಕಮಿಂಗ್ ಸಂದೇಶಗಳು ಡೆನ್ಡ್ರೈಟ್ ಎಂದು ಕರೆಯಲಾಗುವ ತಂತಿಗಳ ಮೂಲಕ ನ್ಯೂರಾನ್ನಿಂದ ನ್ಯೂರಾನ್ಗಳಿಗೆ ತಲುಪುತ್ತವೆ. ಇದಕ್ಕೆ ಕಾರಣ ಭುಗಿಲೇಳುವ ವಿದ್ಯುತ್ ಚಟುವಟಿಕೆ ಎಂಬುದು ತಿಳಿದಿದೆಯಾದರೂ, ಗ್ರಹಿಕೆಯಲ್ಲಿ ಡೆನ್ಡ್ರೈಟ್ ಪಾತ್ರ ವಿಜ್ಞಾನಿಗಳ ಪಾಲಿಗೆ ಇನ್ನೂ ನಿಗೂಢ!
  ನ್ಯೂರಾನ್ಗಳ ನಡುವಿನ ಜಂಕ್ಷನ್ ಗೆ ಸೈನಾಪ್ಸ್ ಎಂದು ಹೆಸರು ಮತ್ತು ನ್ಯೂರೋಟ್ರಾನ್ಸ್ಮಿಟರ್ಗಳು ಬಿಡುಗಡೆಯಾಗುವುದು ಇಲ್ಲಿಂದ. ನ್ಯೂರೋಟ್ರಾನ್ಸ್ಮಿಟರ್ ಒಂದು ರಾಸಾಯನಿಕ. (ಮಿದುಳಿನ ಜೀವಶಾಸ್ತ್ರದಲ್ಲಿ, ಎಲ್ಲಿ ರಸಾಯನಶಾಸ್ತ್ರ, ಎಲ್ಲಿ ವಿದ್ಯುತ್ಶಾಸ್ತ್ರ ತಲೆಹಾಕುತ್ತದೋ ಹೇಳಲಾಗದು!). ಇದು ನ್ಯೂರಾನ್ನಿಂದ ನ್ಯೂರಾನ್ಗೆ ಸೈನಾಪ್ಸ್ ಮೂಲಕ ಸಂದೇಶ ರವಾನಿಸುವ ವಾಹಕ.
ಆದರೆ ಮಿದುಳೆಂದರೆ ಕೇವಲ ನ್ಯೂರಾನ್ ಮಾತ್ರವಲ್ಲ. ಹಾಗೆಂದು ಬಗೆದರೆಅನ್ನದಾತಗ್ಲಿಯಲ್ ( ಅಥವಾ ಗ್ಲಯಲ್) ಸೆಲ್ಗೆ ಅನ್ಯಾಯ ಮಾಡಿದಂತೆ! ನ್ಯೂರಾನ್ಗಳ ಪರಿಪಾಲನೆ, ಆಹಾರ ಒದಗಿಸುವುದು ಗ್ಲಿಯಲ್ ಸೆಲ್ಗಳ ಕರ್ತವ್ಯ.
ಮಿದುಳೆಂಬ ಸ್ವಾರಸ್ಯಕರ ಲೋಳೆ                  
ಕೆದಕುತ್ತಾ ಹೋದರೆ ಮಿದುಳಿನ ಕುರಿತು ಸಾಕಷ್ಟು ಸ್ವಾರಸ್ಯಕರ ಅಂಶಗಳು ಹೊರಬೀಳುತ್ತವೆ. ಮಾತ್ರವಲ್ಲ, ಮಿದುಳೆಂಬ ಗೊಂಡಾರಣ್ಯ ಹೊಕ್ಕರೆ, ಅದರ ಲೋಳೆಯೊಳಗಿನ ಒಳಸುಳಿಗಳಲಿ ಸಿಲುಕಿದರೆ, ಗೋಜಲಿನ ಪರಿಣಾಮದಿಂದ ನಮ್ಮ ಮಿದುಳನ್ನು ಸ್ವಸ್ಥವಾಗಿಡುವುದು ಸ್ವಲ್ಪ ಕಷ್ಟವಾದೀತು!
ಮಿದುಳಿಗೆ ನೋವಾಗುವುದಿಲ್ಲವಂತೆ! (ಹುಶಾರ್! ಹಾಗೆಂದು ದಯವಿಟ್ಟು ಪ್ರಯೋಗ ಮಾಡಿ ನೋಡಲು ಹೋಗಬೇಡಿ ಮತ್ತೆ!) ನಮಗಾಗುವ ನೋವನ್ನು ನಮ್ಮ ಮಿದುಳು ಗ್ರಹಿಸುತ್ತದೆ. ಆದರೆ ಮಿದುಳಿಗೇ ನೋವಾದರೆ ಅದನ್ನು ಗ್ರಹಿಸುವ ಇನ್ನೊಂದು ಅಂಗವಿಲ್ಲ ತಾನೇ? ಹೀಗಾಗಿಯೇ, ರೋಗಿಗೆ ಮೂರ್ಛೆ ಇರುವಾಗಲೂ ಮಿದುಳಿನ ಶಸ್ತ್ರಚಿಕಿತ್ಸೆ ಸಾಧ್ಯ!
ನಿಮ್ಮ ಕಣ್ಣುಗಳು, ನಿಮ್ಮ ಮಿದುಳಿನ ವಿಸ್ತೃತ  ಭಾಗ. ಅರ್ಥಾತ್, ಒಬ್ಬ ನರಭಕ್ಷಕ ನಿಮ್ಮ ಮಿದುಳಿಗೆ ಕೈ ಹಾಕಿ ದರ ದರ ಹೊರಗೆಳೆದರೆ ಅದರ ಜೊತೆ ನಿಮ್ಮ ಕಂಗಳೂ ಹೊರಬರುತ್ತವೆ!
ನಮ್ಮ ಮಿದುಳು ತಟಸ್ಥವಾಗಿರುವುದಿಲ್ಲ (ನಮ್ಮ ನಿಲುವುಗಳು, ಅಭಿಪ್ರಾಯಗಳು ಹಾಗಿರಬಹುದು!) 80% ನೀರೇ ತುಂಬಿಕೊಂಡಿರುವ ಮಿದುಳು, ಸೆರಿಬ್ರೋಸ್ಪೈನಲ್ ದ್ರವದಲ್ಲಿ ತೇಲಾಡುತ್ತಿರುತ್ತದೆ!
ಕೂದಲು ಉದುರುತ್ತದೆ ಎಂದು ಪರಿತಪಿಸುವವರಿದ್ದಾರೆ. ಆದರೆ ಬುರುಡೆಯೊಳಗೆ ದಿನ ನಿತ್ಯ ಅಳಿದು ಹೋಗುವ ಸುಮಾರು ಒಂದು ಲಕ್ಷದಷ್ಟು ನ್ಯೂರಾನ್ಗಳಿಗಾಗಿ ಅಳುವವರು ಯಾರೂ ಇಲ್ಲ! ಆದರೇನಂತೆ, ಚಿಂತಿಸಬೇಡಿ! ಅದೇ ವೇಳೆ ನ್ಯೂರಾನ್ಗಳ ಉತ್ಪತ್ತಿಯೂ ಸಾಗುತ್ತಿರುತ್ತದೆ.
ನೀವು ಮಿತ ಆಹಾರಿ ಇರಬಹುದು. ಆದರೆ ನಿಮ್ಮ ಮಿದುಳು ನಿಮ್ಮ ಶರೀರದಲ್ಲಿರುವ ಬಕಾಸುರ! ಅತೀ ಹೆಚ್ಚು ಇಂಧನ ಕಬಳಿಸುವ ಅಂಗವದು. ದೇಹದ ಒಟ್ಟು ಇಂಧನದ ಶೆಕಡಾ 20ರಷ್ಟನ್ನು ಮತ್ತು ಒಟ್ಟು ಗ್ಲುಕೋಸ್ ಶೇಕಡಾ25ರಷ್ಟನ್ನು  ಮಿದುಳು ಸ್ಹಾಹಾ ಮಾಡುತ್ತದೆ. ನಮ್ಮ ಪರಿವೆಯೆ ಇಲ್ಲದೆ ನಮ್ಮ ದೇಹದಲ್ಲಿ ನಡೆಯುವ ಚಟುವಟಿಕೆಗಳು, ಸಕಲಜೀವಕೋಶಗಳ ಉಸ್ತುವಾರಿ ಮತ್ತು ವಿದ್ಯುತ್ ತರಂಗಗಳನ್ನು ದೇಹದೆಲ್ಲಡೆ ಪ್ರವಹಿಸುವುದು ಮಿದುಳಿನ ಕೈಯಲ್ಲಿದೆ ಮತ್ತು ಇದಕ್ಕೆ ಸಾಕಷ್ಟು ಇಂಧನ ವ್ಯಯವಾಗುತ್ತದೆ. ಆಮ್ಲಜನಕದ ವಿಷಯದಲ್ಲೂ ನಮ್ಮ ಮಿದುಳು ಭಾರೀ ಹೊಟ್ಟೆಬಾಕ. ರಕ್ತದ ಶೇಕಡಾ 20 ರಷ್ಟು ಆಮ್ಲಜನಕ, ಒಟ್ಟು ದೇಹದ ತೂಕದ 2% ನಷ್ಟೂ ಇಲ್ಲದ ಮಿದುಳಿಗೆ ಬೇಕಾಗುತ್ತದಂತೆ!
 ಇದೇ ಮಿದುಳು ಒಂದು ಬಲ್ಬ್ ಉರಿಸಲು ಬೇಕಾದಷ್ಟು ಇಂಧನವನ್ನೂ ಉತ್ಪಾದಿಸಬಲ್ಲುದು. ನೀವು ಬರಿ ನಿದ್ರಿಸುತ್ತಿರುವಾಗಲೂ, ಅದು 25 ವಾಟ್ ಶಕ್ತಿಯ ಬಲ್ಬ್ ಉರಿಸುವಷ್ಟು ಇಂಧನ ಒದಗಿಸಬಲ್ಲುದು. (ಮುಂದೊಂದು ದಿನ, ಝೀರೋ ವೋಲ್ಟ್ ಬಲ್ಬ್ ಉರಿಸುವ ಅಗತ್ಯ ಬೀಳದಂತೆ ಮಾಡಬಹುದು!)
ಯಾರಾದರೂನಿಮಗೆ ಕೊಬ್ಬು ಜಾಸ್ತಿಅಂದರೆ ಅದನ್ನು ಪ್ರಶಂಸೆಯೆಂದು ನಗುಮುಖದಿಂದ ಸ್ವೀಕರಿಸಿ. ನೆನಪಿಡಿ, ನಿಮ್ಮ ಶರೀರದಲ್ಲಿ ಅತಿ ಹೆಚ್ಚು ಕೊಬ್ಬು ಇರುವುದು ನಿಮ್ಮ ಮಿದುಳಿನಲ್ಲಿ! ಕೊಬ್ಬು ನ್ಯೂರಾನ್ಗಳಿಗೆ ಒಂದು ರೀತಿ ಕವಚ ಇದ್ದ ಹಾಗೆ ಮಾತ್ರವಲ್ಲ ಸಂದೇಶಗಳು ಮಿದುಳಿನ ಮೂಲಕ ಮತ್ತು ಇತರ ದೇಹದ ಎಲ್ಲಾ ಭಾಗಗಳಿಗೆ ಯಾವ ಲೋಪವೂ ಇಲ್ಲದೆ ತಲುಪಲು ಅತ್ಯಗತ್ಯ.
ಮಿದುಳಲ್ಲಿ ಏಕೆ ಇಷ್ಟೊಂದು ನೆರಿಗೆಗಳು, ಇಷ್ಟೊಂದು ಮಡಿಕೆಗಳು ಎಂದು ಅಚ್ಚರಿಪಡುವಿರಾದರೆ ಗಮನಿಸಿ. ಅತಿ ಚಿಕ್ಕ ಜಾಗದಲ್ಲಿ ಅತಿ ಹೆಚ್ಚಿನ ಮೇಲ್ಮೈ ವಿಸ್ತೀರ್ಣ ಹೊಂದಲು ನಿಮ್ಮ ಮಿದುಳು ಜಾಣ್ಮೆಯಿಂದ ಕಂಡುಕೊಂಡ ಉಪಾಯವಿದು! ಹೀಗಿರುವುದರಿಂದ ಮಿದುಳಿಗೆ ತನ್ನ ನ್ಯೂರಾನ್ಗಳ ಜಾಲವನ್ನು ವಿಸ್ತರಿಸಲು ಸಾಧ್ಯ.
ಸಾಮಾಜಿಕ ಜಾಲತಾಣಗಳ ಪರಿಭಾಷೆಯಲ್ಲಿ ಹೇಳುವುದಾದರೆ ಮಿದುಳಿನ ಪ್ರತಿಯೊಂದು ನ್ಯೂರಾನ್ಗೂ ಇದೆ ಅತಿ ಹೆಚ್ಚು-ಅಂದರೆ ಸುಮಾರು 25,000ದಷ್ಟು- ಹಿಂಬಾಲಕರು (ಫಾಲೋವರ್)ಗಳು ಅಥವಾ ಸಂಗಾತಿಗಳು. ನ್ಯೂರಾನ್ಗಳ ನಡುವಿನ ನಂಟಸ್ಥಿಕೆ ಮಟ್ಟದ್ದು! ಬದುಕಿನ ಮೊದಲ ಕೆಲವು ವರ್ಷಗಳಲ್ಲಿ ಪ್ರತಿ ಸೆಕೆಂಡಿಗೆ ಒಂದು ದಶಲಕ್ಷ ಹೊಸ ಸಂಪರ್ಕಗಳು ನ್ಯೂರಾನ್ಗಳ ನಡುವೆ (ನ್ಯೂರಲ್ ಕನೆಕ್ಷನ್ಸ್) ಏರ್ಪಡುತ್ತವೆಯಂತೆ.
ಲೇಖನದ ಪ್ರಾರಂಭದಲ್ಲಿ ಹೇಳಿರುವಂತೆ ಕಾರ್ಯಕ್ಷಮತೆಯಲ್ಲಿ ಮಿದುಳನ್ನು ಮೀರಿಸುವ ಗಾತ್ರದ ಕಂಪ್ಯೂಟರ್ನ್ನು ಆವಿಷ್ಕರಿಸುವುದು ನಮಗೆ (ಅರ್ಥಾತ್ ಮನುಷ್ಯ ಮಿದುಳಿಗೆ!) ಇನ್ನೂ ಸಾಧ್ಯವಾಗಿಲ್ಲ. ಗಣಿತದಲ್ಲಿ ಸಾಮಥ್ರ್ಯವುಳ್ಳ ಕಂಪ್ಯೂಟರ್ ಇಲ್ಲ. ಮಿದುಳಿನಷ್ಟು ವೇಗವಾಗಿ ಕೆಲಸ ಮಾಡುವ ಕಂಪ್ಯೂಟರ್ ಇನ್ನೂ ಬಂದಿಲ್ಲ. ನಿಮ್ಮ ತೋಳು ಮತ್ತು ಕಾಲಿನಿಂದ ಮಿದುಳಿಗೆ ಸಂದೇಶಗಳು ರವಾನೆಯಾಗುವ ವೇಗ ಗಂಟೆಗೆ 241ಕಿಮೀ ಅಂದರೆ ಅದರ ವೇಗ ಅರ್ಥವಾದೀತು
  ಬಹುಶ: ತನಗೆ ಒಬ್ಬ ಪ್ರತಿಸ್ಪರ್ಧಿ ಹುಟ್ಟುವುದಕ್ಕೆ ಮಿದುಳು ತಾನೇ ತಡೆ ಒಡ್ಡುತ್ತಿದೆಯೇನೋ? ಅದು ಏಕೆಂಬುದು ಬ್ರಹ್ಮನಿಗೇ ಗೊತ್ತು! (ಅಥವಾ ಹೀಗೂ ಇರಬಹುದೆ- ಅಂತಾ ಸಾಮರ್ಥ್ಯ ವುಳ್ಳ ಕಂಪ್ಯೂಟರ್ನ್ನು ಆವಿಷ್ಕರಿಸಿದ ಪಕ್ಷದಲ್ಲಿ ಮನುಷ್ಯ ತನ್ನ ಮಿದುಳಿನ ಬಳಕೆಯನ್ನು ಕಾಲಕ್ರಮೇಣ ಕಡಿಮೆ ಮಾಡಿ, ಕಂಪ್ಯೂಟರ್ಗೆ ಪೂರ್ತಿ ಶರಣು ಶರಣು ಎಂದು, ಮಿದುಳಿನ ವಿಕಾಸಕ್ಕೆ ಕೊನೆಗೆ ಮುಳುವಾಗುವಂತಹಾ ದುರಂತದಿಂದ ಮಿದುಳು ರಹಸ್ಯವಾಗಿ ಮನುಕುಲವನ್ನು ಪಾರುಮಾಡುತ್ತಿರಬಹುದೆ? ಇದು ವಿಜ್ಞಾನದ ವ್ಯಾಪ್ತಿಯನ್ನು ಮೀರಿ ನಿಲ್ಲುವ ಪ್ರಶ್ನೆ!)
ಮಿದುಳಿನ ಗಾತ್ರಕ್ಕೂ ಬುದ್ಧಿಮತ್ತೆಗೂ ಯಾವ ಬಾದರಾಯಣ ಸಂಬಂಧವೂ ಇಲ್ಲ-ಹೀಗೆನ್ನುವಾಗ ವಿಜ್ಞಾನಿಗಳು ನೀಡುವ ಉತ್ತಮ ಉದಾಹರಣೆ-ಅದೇ ಐನ್ಸ್ಟೈನ್ ಮಿದುಳು! ಯುಗಪ್ರವರ್ತಕ ವಿಜ್ಞಾನಿಯ ಮಿದುಳು ಸಾಮಾನ್ಯ ಮಿದುಳಿನ ಗಾತ್ರಕ್ಕಿಂತ ಚಿಕ್ಕದಾಗಿತ್ತಂತೆ. (‘ಹೆಂಗಸರ ಮಿದುಳು ಸಣ್ಣ, ಹೀಗಾಗಿ ಅವರು ದಡ್ಡರುಎಂದು ಆಡಿಕೊಳ್ಳುವವರು ತಮ್ಮ ಮಿದುಳನ್ನು ಪರೀಕ್ಷಿಸಿ ನೋಡುವುದು ಒಳ್ಳೆಯದು!)
ಮೇಧಾವಿಯ ಮಿದುಳಿಗೆ ಒದಗಿದ ದುರ್ಗತಿ!
ಮಿದುಳಿನ ಬಗೆಗಿನ ಚಿಂತನೆ ಐನ್ಸ್ಟೈನ್ನೆಡೆಗೆ, ಐನ್ಸ್ಟೈನ್ ಬಗೆಗಿನ ಚಿಂತನೆ ಮಹಾಮಹಿಮನ ಮಿದುಳಿನೆಡೆಗೆ ಸದಾ ಹೊರಳುವುದು-ಅವನು ಏರಿದ ಉತ್ತುಂಗದ ದ್ಯೋತಕ ಇರಬಹುದೇನೋ!    
 ಇರಲಿ,ಇಂತಿಪ್ಪ ನಮ್ಮ ನಿಮ್ಮೆಲ್ಲರ ಮಿದುಳಿನ ಮರ್ಮ ಭೇದಿಸಬಲ್ಲ ಮಹಾ ಮಿದುಳು ಎಲ್ಲಾದರೂ ಇದೆಯೆ? ಇತ್ತೆ? ಹಾಗೆಂದರೆ ತಕ್ಷಣ ನೆನಪಾಗುವುದು-ಅವಕಾಶ, ಕಾಲ, ವಸ್ತು ಇವೆಲ್ಲವು ಒಂದೇ ಬಳ್ಳಿಯ ಹೂಗಳು ಎಂದು ಸಾಧಿಸಿ ತೋರಿಸಿ, ಮನುಕುಲದ ಯೋಚನಾಗತಿಯನ್ನೇ ಬದಲಿಸಿದ ಮಹಾ ಮೇಧಾವಿ-ಅದೇ ಆಲ್ಬರ್ಟ್ ಐನ್ಸ್ಟೈನ್ ಮಸ್ತಿಷ್ಕ. ಬೆಳಕಿನ ವೇಗವೇ ವೇಗದ ಮಿತಿ ಎಂಬ ಜ್ಞಾನದ ಬೆಳಕನ್ನು ಜಗತ್ತಿಗೆ ಎತ್ತಿ ತೋರಿಸಿದವನ ಬುದ್ಧಿಮತ್ತೆಯ ಮಿತಿಯನ್ನು ಇನ್ನೂ ಯಾರೂ ದಾಟಿಲ್ಲ!
ಹೇಗಿತ್ತು ಅಂಥಾ ಮಿದುಳು? ಹೇಗಿತ್ತು ಅದರ ಕರಾಮತ್ತು? ಅದರಲ್ಲೇನಿತ್ತು ಅಂಥಾ ವಿಶೇಷ? ನ್ಯೂಟನ್ನಂತಹಾ ಬೃಹಸ್ಪತಿಗೆ ದಕ್ಕದ ಸತ್ಯ ಅವನಿಗೆ ಒಲಿದದ್ದು ಹೇಗೆ?
ತಲೆಮಾರಿನವರನ್ನು ಕೂಡಾ ಪ್ರಶ್ನೆಗಳು ಕಾಡುತ್ತವೆ. ಅವನು ಸಂಶೋಧಿಸಿದ ಸತ್ಯಗಳು, ಹುಟ್ಟು ಹಾಕಿದ ಸಮೀಕರಣಗಳು, ಕಾಲ, ಅವಕಾಶ, ಪದಾರ್ಥಗಳನ್ನು ಪೋಣಿಸಿದ ಪರಿ, ಪರಮಾಣುವನ್ನು ಒಡೆದು ನೋಡದೆ, ಅದರಲ್ಲಿ ಸಂಚಯಿಸಿದ ಪ್ರಚಂಡ ಶಕ್ತಿಯನ್ನು ಬಯಲಿಗೆಳೆದ ಕತೆ ಇವೆಲ್ಲಾ ಇಂದಿಗೂ ಅತೀವ ಬೆರಗು ಮೂಡಿಸುತ್ತಿವೆಯೆಂದಾದಲ್ಲಿ, ಅವನು ಹೊಸ ಸಂಚಲನವನ್ನು ಉಂಟು ಮಾಡಿದ ಕಾಲಘಟ್ಟದಲ್ಲಿ ಅವನ ಮಿದುಳಿನ ಕುರಿತಾದ ಕುತೂಹಲ ಯಾವ ಮಟ್ಟದಲ್ಲಿ ಇದ್ದಿರಬೇಡ?
ಕುತೂಹಲ ಕೆಲವರನ್ನು ಅದಾವ ಪರಿ ಕಾಡಿತ್ತೆಂದರೆ ಕೊನೆಗೆ ಅವರಲ್ಲೊಬ್ಬ ಐನ್ಸ್ಟೈನ್ ಮಿದುಳಿಗೆ ಕೈ ಹಾಕಿಯೇ ಬಿಟ್ಟ! (ಗಾಬರಿಯಾಗಬೇಡಿ-ಅವನು ಸಾಹಸಕ್ಕೆ ಕೈ ಹಾಕಿದ್ದು ಐನ್ಸ್ಟೈನ್ ಬದುಕಿದ್ದಾಗ ಅಲ್ಲ!)
ಆಲ್ಬರ್ಟ್ ಐನ್ಸ್ಟೈನ್ ಇಹಲೋಕ ತ್ಯಜಿಸಿದ್ದು 1955 ಏಪ್ರಿಲ್ 18ರಂದು. ಆಗ ಅವನ ವಯಸ್ಸು 76. “ನನ್ನ ಮರಣಾನಂತರ ನನ್ನ ಕಳೇಬರವನ್ನು ಚಿತೆಯಲ್ಲಿ ಭಸ್ಮ ಮಾಡಿ. ನನ್ನ ಭಕ್ತಗಣವನ್ನು ನಿರುತ್ಸಾಹಗೊಳಿಸಲು, ಭಸ್ಮವನ್ನು ರಹಸ್ಯವಾಗಿ ಅಲ್ಲಲ್ಲಿ ಹರಡಿ ಬಿಡಿಐನ್ಸ್ಟೈನ್ ಹೀಗಂದಿದ್ದ ಅನ್ನುತ್ತಾನೆ ಲೇಖಕ ಬ್ರಿಯಾನ್ ಬುರ್ರೆಲ್ ತನ್ನಪೋಸ್ಟ್  ಕಾರ್ಡ್ಸ್  ಫ್ರಮ್ ಬ್ರೈನ್ ಮ್ಯೂಸಿಯಂಎಂಬ ಪುಸ್ತಕದಲ್ಲಿ. ತನ್ನನ್ನು ಮಿತಿ ಮೀರಿ ಆರಾಧಿಸುವವರು ಮಾಡುವ, ಮಾಡಬಹುದಾದ ಅತಿರೇಕ, ಅವಾಂತರಗಳ ಕುರಿತು ಐನ್ಸ್ಟೈನ್ ತೀರಾ ಜಾಗರೂಕನಾಗಿದ್ದದ್ದು ಅವನು ಹೀಗನ್ನಲು ಕಾರಣ. ಆರಾಧಕರು ತನ್ನ ಕಳೇಬರವನ್ನು ಕೂಡಾ ಸುಮ್ಮನಿರಲು ಬಿಡಲಾರರು ಎಂದು ಅವನು ಊಹಿಸಿದ್ದ- ಮತ್ತು ಅವನ ಊಹೆಯಂತೆ ನಡೆದುಕೊಂಡುಮನುಷ್ಯನ ಸ್ವಭಾವವನ್ನು ಅರಿಯುವುದರಲ್ಲೂ ಐನ್ಸ್ಟೈನ್ನದ್ದು ಎತ್ತಿದ ಕೈಎಂದುಸಾಧಿಸಿತೋರಿಸಿದವನ ಹೆಸರು ಥಾಮಸ್ ಸ್ಟೋಲ್ಜ್ ಹಾರ್ವಿ.
ಹೇಳಿ ಕೇಳಿ ಅವನು ಯು ಎಸ್ ಪ್ರಿನ್ಸ್ಟನ್ ಆಸ್ಪತ್ರೆಯ ಪ್ಯಾಥಾಲಜಿಸ್! ಅಂದರೆ, ದೇಹದ ಭಾಗಗಳನ್ನು, ಟಿಶ್ಯೂ ಇತ್ಯಾದಿಗಳನ್ನು ಪ್ರಯೋಗಾಲಯದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸುವುದು ಅವನ ವೃತ್ತಿ ಮತ್ತು ಕರ್ತವ್ಯ. ಅವನು ಉದ್ಯೋಗದಲ್ಲಿದ್ದ ಅದೇ ಆಸ್ಪತ್ರೆಯಲ್ಲಿ ಐನ್ಸ್ಟೈನ್ ಅಸುನೀಗಿದ. ಇನ್ನು ಕೇಳಬೇಕೆ? ‘ರೋಗಿ ಬಯಸಿದ್ದು...’ ಎಂಬ ನಾಣ್ಣುಡಿ ಇಲ್ಲಿ ಸ್ವಲ್ಪ ಉಲ್ಟಾ ಆಗಿ ಹೋಯಿತು. ತನಗೆ ಒದಗಿ ಬಂದ ಸುವರ್ಣಾವಕಾಶವನ್ನು ಅವನುಸದ್ಬಳಕೆಮಾಡಿಕೊಂಡ. ಮನುಕುಲದ ಇತಿಹಾಸದಲ್ಲಿ ಅತ್ಯಂತ ಅಪರೂಪವೆನಿಸಿದ ಭೂತೋ ಭವಿಷ್ಯತಿಅನ್ನುವಂತಹಾ ಮಿದುಳನ್ನು ಅವನು ಮರಣೋತ್ತರ ಪರೀಕ್ಷೆಯ ವೇಳೆ ಲಪಟಾಯಿಸಿದ!
ಲಪಟಾಯಿಸಿದ ಅನ್ನಲು ಕಾರಣ ಐನ್ಸ್ಟೈನ್ ಆಗಲಿ ಅವನ ಕುಟುಂಬದವರಾಗಲಿ, ಯಾರೊಬ್ಬರು ಕೂಡಾ ಐನ್ಸ್ಟೈನ್ ಮಿದುಳನ್ನು ಹೀಗೆ ಹೊರತೆಗೆಯಲು ಯಾರಿಗೂ ಅನುಮತಿ ನೀಡಿರಲಿಲ್ಲ. ಒಂದು ಮೂಲದಂತೆ, ಐನ್ಸ್ಟೈನ್ ತನ್ನ ಶವವನ್ನು ಸುಟ್ಟು ಬಿಡಿ ಅಂದಿದ್ದನಾದರೂ ತನ್ನ ಮಿದುಳಿನ ಅಧ್ಯಯನಕ್ಕೆ ಸಮ್ಮತಿ ಸೂಚಿಸಿದ್ದ. ಆದರೆ ಇತ್ತೀಚೆಗೆ ಕಲೆಹಾಕಲಾದ ಮಾಹಿತಿಗಳನ್ನು ತಾಳೆ ನೋಡಿ ಇದನ್ನು ಅಲ್ಲಗಳೆಯಲಾಗಿದೆ.
ಅದರಲ್ಲೂ, ನಿರ್ದಿಷ್ಟವಾಗಿ ಹಾರ್ವಿಗೆ ರೀತಿ ಮಾಡಲು ಅನುಮತಿಯಂತೂ ಸುತರಾಂ ಇರಲಿಲ್ಲ.
ಇನ್ನು ಹಾರ್ವಿ ಎಂತವನೆಂದರೆ, ಲೇಖಕ ಬ್ರಿಯಾನ್ ಪ್ರಕಾರ, ಕೆಲವು ದಿನಗಳ ತರುವಾಯ, ತನ್ನ ಚೋರಕೃತ್ಯ ಬಯಲಾದೊಡನೆ, ಐನ್ಸ್ಟೈನ್ ಮಗನಿಂದ, ‘ಯಾವುದೇ ವೈಜ್ಞಾನಿಕ ಅನ್ವೇಷಣೆಗೆ ತನ್ನ ಒಪ್ಪಿಗೆ ಇದೆಎಂಬಂತಹಾ ಹೇಳಿಕೆಯನ್ನು (ಅದೂ ಕೂಡಾ ಒಲ್ಲದ ಮನಸ್ಸಿನಿಂದ) ಗಿಟ್ಟಿಸುವಲ್ಲಿ ಯಶಸ್ವಿಯಾದನಂತೆ! ಕದ್ದದ್ದು ಮಾತ್ರವಲ್ಲ, ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಐನ್ಸ್ಟೈನ್ ಮಿದುಳನ್ನು ತಮಗೆ ಒಪ್ಪಿಸು ಎಂದು ಕೇಳಿಕೊಂಡರೂ ಅವನು ನಿರಾಕರಿಸಿದ ಮೇಲೆ ಅವನನ್ನು ಕೆಲಸದಿಂದಲೇ ಹೊರಹಾಕಲಾಯಿತು.
ಮಿದುಳು ಕೈಸೇರಿದ ಸಂಭ್ರಮದಲ್ಲಿ ಮೊದಲು ಅದನ್ನು ತೂಗಿ ನೋಡಿದ ಹಾರ್ವಿ ಅದನ್ನು ನಾನಾ ಕೋನಗಳಲ್ಲಿ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದ. ಅದರೊಳಗೆ 50% ಫಾರ್ಮಾಲಿನ್ ದ್ರಾವಣವನ್ನು ಇಂಜೆಕ್ಟ್ ಮಾಡಿದ ಮತ್ತು ಅದು ಕೆಡದಂತೆ ಮಾಡಲು 10% ಫಾರ್ಮಾಲಿನ್ ದ್ರಾವಣದಲ್ಲಿ ಮುಳುಗಿಸಿದ.
 ಅವನು ಮುಂದೆ ಅದನ್ನು ಫಿಲಡೆಲ್ಫಿಯಾಗೆ ಹೊತ್ತೊಯ್ದ.                 
ನರಭಕ್ಷರ ಬಾಣಸಿಗ ತಲೆಮಾಂಸದ ಖಾದ್ಯಕ್ಕೆ ತಯಾರಿ ಮಾಡುತ್ತಿದ್ದ ಅನ್ನುವಂತಿತ್ತು ದೃಶ್ಯ! ಅಂದರೆ ಅವನು ಆ ಅನರ್ಘ್ಯ   ಮಿದುಳನ್ನು ತುಂಡರಿಸಿದ. ಅಂದಾಜು 1 ಸೆಂಟೀಮೀಟರ್ ಘನಾಕೃತಿಯ ಬರೋಬ್ಬರಿ 240 ತುಂಡುಗಳನ್ನು ಮಾಡಿದ ಭೂಪ ಅವುಗಳನ್ನು ಪ್ಲಾಸ್ಟಿಕ್ನಂತಹಾ ಪದಾರ್ಥ  ಕೊಲೊಡಿಯನ್ನಲ್ಲಿ ಕಟ್ಟಿಟ್ಟ ಮತ್ತು ಅದನ್ನು ಬೀಯರ್ ಕೂಲರ್ ನಲ್ಲಿಟ್ಟು ಬೇಸ್ಮೆಂಟ್ನಲ್ಲಿ ಬಚ್ಚಿಟ್ಟ.
ಅವನ ಪತ್ನಿ ಅವನದ್ದಲ್ಲದಅವನಮಿದುಳಿನ ಗುಟ್ಟು ರಟ್ಟು ಮಾಡುತ್ತೇನೆ ಎಂದು ಬೆದರಿಕೆ ಹಾಕಿದಾಗ ಎಲ್ಲೋ ಇದ್ದವ ವಾಪಾಸು ಬಂದು ಅದನ್ನು ತನ್ನ ಜೊತೆಗೆ ತೆಗೆದುಕೊಂಡು ಮಿಡ್ವೆಸ್ಟ್ ತಲುಪಿದ
ಮಿಡ್ವೆಸ್ಟ್  ಕಾನ್ಸಾಸ್ ನಗರದಲ್ಲಿ ಕೆಲ ಕಾಲ ಮೆಡಿಕಲ್ ಸೂಪರ್ವೈಸರ್ ಆಗಿ ದುಡಿದ. ಅದನ್ನು ಬಿಟ್ಟು ವೆಸ್ಟನ್ನಲ್ಲಿ ವೈದ್ಯನಾಗಿ ಪ್ರಾಕ್ಟೀಸ್ ಮಾಡಿದ ಹಾಗೂ ಬಿಡುವಿನ ವೇಳೆಯಲ್ಲಿ ತನ್ನ ಅಮೂಲ್ಯ ಸಂಪತ್ತಾದ ಮಿದುಳಿನ ಅಧ್ಯಯನ ಮಾಡುತ್ತಲಿದ್ದ. ದಕ್ಷತೆಯ ಮೌಲ್ಯಮಾಪನ ಪರೀಕ್ಷೆಯಲ್ಲಿ ಮೂರು ಬಾರಿ ನಾಪಾಸು ಆಗಿ ತನ್ನ ಮೆಡಿಕಲ್ ಲೈಸೆನ್ಸ್ ಕಳೆದುಕೊಂಡಜೊತೆಯಲ್ಲಿದ್ದುದು ಐನ್ಸ್ಟೈನ್ ಎಂಬ ಏಕಮೇವಾದ್ವಿತೀಯನ ಮಿದುಳು ಆಗಿದ್ದರೂ, ಅದರ ಸೋಂಕು ಕೂಡಾ ಅವನಿಗೆ ಹತ್ತಲಿಲ್ಲ.
ಕಾನ್ಸಾಸ್ಗೆ ಮರಳಿದ ಅವನು ಒಂದು ಪ್ಲಾಸ್ಟಿಕ್ ಎಕ್ಸ್ಟ್ರುಷನ್ ಕಾರ್ಖಾನೆಯ ಅಸಂಬ್ಲಿ ಲೈನ್ನಲ್ಲಿ ಕೆಲಸಕ್ಕೆ ಸೇರಿದ. ಅವನು ವಾಸವಿದ್ದ ಅಪಾರ್ಟ್ಮೆಂಟ್ ನೆರೆಯವನಾದ ಕವಿ ವಿಲಿಯಂ ಬರೋಸ್ನೊಂದಿಗೆ ಅವನ ಪರಿಚಯ ಸ್ನೇಹವಾಗಿ ಬೆಳೆಯಿತು ಮತ್ತು ಈರ್ವರ ನಡುವಿನ ಪಾನ ಗೋಷ್ಠಿಗಳ ನಡುವೆ ಹಾರ್ವೆ ತಾನು ಐನ್ಸ್ಟೈನ್ ಮಿದುಳನ್ನು ಚೂರು ಚೂರು ಮಾಡಿದ ಕತೆಯನ್ನು ಹೇಳಿ ಕೊಚ್ಚಿಕೊಳ್ಳುತ್ತಿದ್ದನಂತೆ. ವಿಲಿಯಂ ಬರೋಸ್ ಕೂಡಾ ಸುಮ್ಮನಿರುತ್ತಿರಲಿಲ್ಲ. ತನ್ನನ್ನು ಭೆಟಿ ಮಾಡಲು ಬರುವವರ ಬಳಿ, ಬೇಕೆನಿಸಿದಾಗ ತಾನು ಐನ್ಸ್ಟೈನ್ ಮಿದುಳಿನ ಒಂದು ತುಣುಕನ್ನು ಸಂಪಾದಿಸಬಲ್ಲೆ ಎಂದು ಹೇಳಿ ಬೀಗುತ್ತಿದ್ದನಂತೆ.
ಹಾರ್ವಿ, ತಾನಾಯಿತು, ತನ್ನ ಎಡವಟ್ಟುಗಳಾಯಿತು ಜೊತೆಗೆ ಯಾರಿಗೂ ದಕ್ಕದ ಮಿದುಳುತನ್ನದಾಯಿತುಅಂದುಕೊಳ್ಳುತ್ತಿರಬೇಕಾದರೆ, ಅವನ ಆಟಾಟೋಪಗಳೆ ಅವನಿಗೆ ಮುಳುವಾದವು. ಐನ್ಸ್ಟೈನ್ ಮಿದುಳಿನ ವಾಸನೆ ಮೂಗಿಗೆ ಅಡರಿದ ಪತ್ರಕರ್ತ ಸ್ಟೀವನ್ ಲವಿ ಕೊನೆಗೂ ಹಾರ್ವಿಯನ್ನು ಪತ್ತೆಹಚ್ಚಿದ. ಅವನು, ಅದು ಯಾವ ಪತ್ರಕರ್ತರ ವರಸೆ ಪ್ರಯೋಗಿಸಿದನೋ, ಒಟ್ಟಿನಲ್ಲಿ ಹಾರ್ವಿ, ಸ್ಟೀವನ್ ಲವಿಗೆ ಮಣಿದ. ಐನ್ಸ್ಟೈನ್ ಮಿದುಳು ತನ್ನ ಬಳಿ ಇರುವುದನ್ನು ಒಪ್ಪಿಕೊಂಡ. ಮಾತ್ರವಲ್ಲ ದಿವ್ಯ ಮಸ್ತಿಷ್ಕದ ದರ್ಶನ ಭಾಗ್ಯವನ್ನು ಅವನಿಗೆ ಕರುಣಿಸಿದ! ಪುಸ್ತಕಗಳ ಅಟ್ಟಿಯೆಡೆಯಲ್ಲಿರಿಸಿದ್ದ ರಟ್ಟಿನ ಪೆಟ್ಟಿಗೆಯೊಂದನ್ನು ಅವನು ಹೊರತೆಗೆದ.
ಮಹಾ ಮಸ್ತಿಷ್ಕದ ದರ್ಶನ!
ಮುಚ್ಚಳವಿಲ್ಲದ ಪೆಟ್ಟಿಗೆಯ ಮೇಲೆ ಸ್ವಲ್ಪ ಮುದ್ದೆಯಾದ ದಿನಪತ್ರಿಕೆಗಳ ಹಾಳೆಗಳಿದ್ದವು. ಅದನ್ನು ಸರಿಸಿ ಅವನು ಹೊರತೆಗೆದ ಡಬ್ಬದ ತುಂಬಾ ಏನೇನೋ ಪದಾರ್ಥಗಳಿದ್ದವು. ನೆರಿಗೆ ನೆರಿಗೆಯಾದ ಶಂಖಾಕಾರದ ವಸ್ತು, ಸ್ಪಂಜಿನಂತಹ ಬೂದು ಬಣ್ಣದ ಪದಾರ್ಥ, ಬೀಗಿದ ಡೆಂಟಲ್ ಫ್ಲಾಸ್ನಂತೆ ತೋರುವ ಗುಲಾಬಿ ಬಣ್ಣದ ದಾರಗಳು! ಹಾರ್ವಿ ಅವುಗಳನ್ನು ಐನ್ಸ್ಟೈನ್ ಸೆರೀಬೆಲಮ್, ಸೆರೀಬ್ರಲ್ ಕಾರ್ಟೆಕ್ಸ್ ಒಂದು ಚೂರು, ಎಯೋಟಿಕ್ ರಕ್ತನಾಳಗಳು (ಮಾನವ ಶರೀರದ ಅತಿ ದೊಡ್ಡ ರಕ್ತನಾಳ) ಎಂದು ವಿವರಿಸಿದ. ಪುನ: ಪೆಟ್ಟಿಗೆಗೆ ಕೈ ಹಾಕಿದ ಅವನು, ಒಂದು ದೊಡ್ಡ ಗಾಜಿನ ಜರಡಿಯನ್ನು ಹೊರತೆಗೆದ. ಅದಕ್ಕೆ ಲೋಹದ ಮುಚ್ಚಳ ಹಾಕಲಾಗಿತ್ತು ಮತ್ತು ಟೇಪ್ ಅಂಟಿಸಲಾಗಿತ್ತು.
ಅದರೊಳಗೆ ಅಂಟು ಅಂಟಾದ ರಾಸಾಯನಿಕ ದ್ರಾವಣದಲ್ಲಿ ಸಂಖ್ಯೆಗಳನ್ನು ನಮೂದಿಸಿದ, ಒಂದೇ ಆಕಾರ ಬರುವಂತೆ ಕತ್ತರಿಸಿದ ಹಲವು ಅರೆ ಪಾರದರ್ಶಕ ಕ್ಯೂಬ್ (ಘನಾಕೃತಿ)ಗಳು ತೇಲುತ್ತಿದ್ದವು! ಅಲ್ಲಿತ್ತು ನೋಡಿ ಐನ್ಸ್ಟೈನ್ ಮಿದುಳು!!”
ನ್ಯೂ ಜೆರ್ಸಿ ಮಂಥ್ಲಿಪತ್ರಿಕೆಯ ಆಗಸ್ಟ್ 1978 ಸಂಚಿಕೆಯಲ್ಲಿ ಪ್ರಕಟವಾದ ತನ್ನಮೈ ಸರ್ಚ್ ಫಾರ್ ಐನ್ಸ್ಟೈನ್ಸ್ ಬ್ರೈನ್ಎಂಬ ಲೇಖನದಲ್ಲಿ, ತಾನು ಮಿದುಳನ್ನು ಮೊದಲ ಬಾರಿಗೆ ನೋಡಿದ ಅನರ್ಘ್ಯ ಗಳಿಗೆಯನ್ನು ಸ್ಟೀವನ್ ಲವಿ ರೀತಿ ಬಣ್ಣಿಸಿದ್ದಾನೆ. ( ಕುರಿತು ತನ್ನ ಅನುಭವವನ್ನು ಅವನುಟೆಡ್ ಟಾಕ್ನಲ್ಲಿ ಹಂಚಿಕೊಂಡಿದ್ದು, ಅದು ಯೂ ಟ್ಯೂಬ್ನಲ್ಲಿ ಲಭ್ಯವಿದೆ
ಒಡೆದು ಛಿದ್ರವಾದ ಅಣುವಿನೊಳಗೆ ಅಡಗಿರುವ ಶಕ್ತಿ, ಬ್ರಹ್ಮಾಂಡದ ಕೃಷ್ಣ ವಿವರಗಳ ರಹಸ್ಯ, ಮನುಷ್ಯನ ಸಾಧನೆಯ ಪವಾಡ ಸದೃಶ ಉತ್ತುಂಗ ಇವೆಲ್ಲವೂ ದ್ರಾವಣದಲ್ಲಿ ಸುಳಿದಾಡುತ್ತಲಿತ್ತುಅನ್ನುತ್ತಾನೆ ಅವನು.
 ಸ್ಟೀವನ್ ಲವಿಯ ಲೇಖನ ಎಲ್ಲಾ ಪತ್ರಿಕೆಗಳಲ್ಲೂ ಸುದ್ದಿಯಾದೊಡನೆ, ನ್ಯೂರೋಸೈಂಟಿಸ್ಟ್ಗಳು ಐನ್ಸ್ಟೈನ್ ಮಿದುಳಿಗಾಗಿ ಥಾಮಸ್ ಹಾರ್ವಿ ಮೇಲೆ ಮುಗಿಬಿದ್ದರು. ಅವನು ಅವರೊಂದಿಗೆ ಹಂಚಿಕೊಂಡ ಮಿದುಳಿನ ಭಾಗಗಳನ್ನು ಪರಿಪರಿಯಾಗಿ ಪರೀಕ್ಷೆಗೊಳಪಡಿಸಿ ಅಧ್ಯಯನ ಮಾಡಲಾಯಿತು.
(ಮುಂದಿನ ಕೆಲವು ವರ್ಷಗಳು ಕಾರ್ಟೂನ್ಗಳಿಗೆ, ಕಾಮಿಡಿ ಶೊಗಳಿಗೆ, ಟಾಬ್ಲಾಯ್ಡ್ಗಳಿಗೆ, ಮಕ್ಕಳ ಕಥೆಗಳಿಗೆ, ಕಾದಂಬರಿಗಳಿಗೆ ಐನ್ಸ್ಟೈನ್ ಮಿದುಳು ಆಹಾರ ಒದಗಿಸಿತು.) 
 ಇದೆಲ್ಲಾ ತಣ್ಣಗಾದ ಮೇಲೆ, ಐನ್ಸ್ಟೈನ್ ಮಿದುಳಿನ ಕತೆ ಅಥವಾ ಒಂದರ್ಥದಲ್ಲಿ ಪಯಣ ನಿರಾಶಾದಾಯಕ ತಿರುವು ಪಡೆಯುವುದು!
ಅಧ್ವಾನವಾದ ಅಧ್ಯಯನ
ಅಧ್ಯಯನಗಳ ಫಲಿತಾಂಶಗಳಲ್ಲಿ ವಿಜ್ಞಾನ ಲೋಕವು ಗಹನವಾದುದು ಅಥವಾ ಗಂಭಿರವಾದುದು ಎಂದು ಪರಿಗಣಿಸುವಂತದು ಇರಲಿಲ್ಲ ಅನ್ನುವುದು ಖೇದಕರ. ಇವುಗಳಲ್ಲಿ ಯಾವುದು ಕೂಡಾ ಖಚಿತ ಅಥವಾ ಇದಮಿತ್ಥಂ ಎಂಬ ನೆಲೆಯಲ್ಲಿ ಇರಲಿಲ್ಲ. ಮಾತ್ರವಲ್ಲ, ಅಧ್ಯಯನಕ್ಕೆ ಬಳಸಿದ ವಿಧಾನಗಳು ಪ್ರಶ್ನಾರ್ಹವಾಗಿದ್ದವು ಅನ್ನುತ್ತಾರೆ ಪರಿಣಿತರುಐನ್ಸ್ಟೈನ್ ಮಿದುಳಿನಲ್ಲಿ ಕೆಲವು ಸಣ್ಣ ಪುಟ್ಟ ವೈಶಿಷ್ಟ್ಯಗಳನ್ನು ಪತ್ತೆ ಹಚ್ಚಲಾಗಿತ್ತು. ಆದಾಗ್ಯೂ ಅವುಗಳು ಅವನ ಮೇಧಾವಿತನಕ್ಕೆ ಕಾರಣ ಎಂದು ಸಾಧಿಸಲು ಸಾಧ್ಯವಾಗಲಿಲ್ಲ. ಹೋಲಿಸಿ ನೋಡೋಣ ಎಂದರೆ ಪುನ: ಅದೇ ಸಮಸ್ಯೆ-ಅಂಥಾ ಇನ್ನು ಕೆಲವು ಮಿದುಳು ಎಲ್ಲಿವೆ? ಮಾತ್ರವಲ್ಲ, ಸಂಶೊಧನೆಗಳು ಪೂರ್ವಗ್ರಹ ಪೀಡಿತವಾಗಿದ್ದುದು ನಿಖರತೆಗೆ ತೊಡಕಾಯಿತು.
ಐನ್ಸ್ಟೈನ್ ಮಿದುಳಿನ ಛಾಯಾಚಿತ್ರವನ್ನು ಅಧ್ಯಯನ ಮಾಡಿದವರು ಅದರ ಒಂದು ನಿರ್ದಿಷ್ಟ ಜಾಗದ ಖಾಲಿ ಭಾಗವನ್ನು ಬೊಟ್ಟು ಮಾಡಿ ಅವನ ಯೋಚನಾ ವಿಧಾನ (ಅವನೇ ನುಡಿದಂತೆಪದಗಳಿಗಿಂತ ದೃಶ್ಯರೂಪದಲ್ಲಿ ಚಿಂತಿಸುವ ಅವನ ಕ್ರಮ’) ಹಾಗಾಗಲು ಅದೇ ಕಾರಣ ಅಂದು ಬಿಟ್ಟರು. ಆದರೆ ಅದನ್ನು ನಿರಾಧಾರಿತವೆಂದು ವಿಜ್ಞಾನ ಲೋಕ ನಿರಾಕರಿಸಿತು.
1985ರಲ್ಲಿ ಹಾರ್ವಿ ಮತ್ತು ಅವನ ತಂಡ, ಐನ್ಸ್ಟೈನ್ ಮಿದುಳಿನಬ್ರಾಡ್ಮನ್ಏರಿಯಾ39’ ಎಂಬ ಭಾಗದಲ್ಲಿ ನ್ಯೂರಾನ್ ಹಾಗೂ ಗ್ಲಿಯಾ ಸೆಲ್ಗಳ ನಡುವಿನ ಅನುಪಾತ ತುಂಬಾ ಕಡಿಮೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿತು. ಆದರೆ ಅವರು ಐನ್ಸ್ಟೈನ್ ಮಿದುಳಿನ ಜೊತೆ ಹೋಲಿಸಿ ನೋಡಿದ ಮಿದುಳುಗಳು ಅವನ ವಯೋಮಾನದವರದ್ದಲ್ಲ. ಅವೆಲ್ಲಾ ತಾಜಾ ಮಿದುಳುಗಳು ಆದರೆ ಐನ್ಸ್ಟೈನ್ನದ್ದು ಮೂರು ದಶಕ ಬೀಯರ್ ಕೂಲರ್ನಲ್ಲಿ ಬಂಧಿಯಾಗಿತ್ತು.
  ಇದೇ ಹಾರ್ವಿ ಮತ್ತು ಅವನ ತಂಡ, ಐನ್ಸ್ಟೈನ್ ಮಿದುಳಿನ ಛಾಯಾಚಿತ್ರಗಳನ್ನು ಆಧರಿಸಿ, ಮಿದುಳಿನಲ್ಲಿ ಗಣಿತದ ಪರಿಣತಿಗೆ ಕಾರಣ ಎಂದು ಸಾಮಾನ್ಯವಾಗಿ ಬಗೆಯಲಾಗುವ ಭಾಗದಲ್ಲಿ, ವಿಪರೀತ ಮಡಿಕೆಗಳು ಇರುವುದನ್ನು ಪತ್ತೆ ಹಚ್ಚಿತು. ಆದರೆ ಐನ್ಸ್ಟೈನ್ಗೆ ಗಣಿತದಲ್ಲಿ ಅಂಥಾ ವಿಶೇಷ ಪ್ರತಿಭೆ ಇರಲಿಲ್ಲ ಎಂಬ ಕಟು ಸತ್ಯದೆದುರು ಪತ್ತೆದಾರಿಕೆ ಸೋತು ಹೋಯಿತು!
  ಐನ್ಸ್ಟೈನ್ ತನ್ನ ಅಸಾಧಾರಣ ಬುದ್ಧಿವಂತಿಕೆಯ ಕುರಿತು  ಕುತೂಹಲದಿಂದ ಚಡಪಡಿಸುವವರು ತನ್ನ ಮಿದುಳಿನ ನ್ಯೂರಾನ್ಗಳ ಸಂಖ್ಯೆ ಇತ್ಯಾದಿಗಳನ್ನು ಹಿಡಿದುಕೊಂಡು ತನ್ನ ತಲೆ ತಿನ್ನಬಲ್ಲರು ಎಂದು ಊಹಿಸಿದ್ದನಂತೆ. ಹೀಗಾಗಿಯೆ ಇರಬೇಕು ಅವನು ಪ್ರಿನ್ಸ್ಟನ್ ತನ್ನ ಕಚೇರಿಯಲ್ಲಿ ಹೀಗೆ ಬರೆದಿದ್ದನಂತೆ “Not everything that counts can be counted, and not everything that can be counted counts.” (ಗಣನೀಯವಾಗಿರುವುದನೆಲ್ಲವನೂ ಗಣತಿಗೆ ಒಳಪಡಿಸಲಾಗದು. ಗಣತಿಗೆ ಒಳಪಡಿಸಲಾಗುವುದೆಲ್ಲವೂ ಗಣನೀಯವಾಗಿರದು.)               
ಅಸಾಧಾರಣ ಐಕ್ಯು ಇರುವವರನ್ನು ಐನ್ಸ್ಟೈನ್ಗೆ ಹೋಲಿಸುವ ಚಾಳಿ ಕೆಲವರಿಗೆ ಇದೆ. ವಿಪರ್ಯಾಸವೆಂದರೆ ಅವನ ಐಕ್ಯುವನ್ನು ಎಂದೂ ಪರೀಕ್ಷಿಸಿರಲಿಲ್ಲ! ಅವೆಲ್ಲಾ ಅವನ ಮರಣೋತ್ತರ ನಡೆಸಿದ ಊಹಾಪೋಹಗಳು. ಮಾತ್ರವಲ್ಲ ಐಕ್ಯು ಅನ್ನುವ ಪರಿಕಲ್ಪನೆಯನ್ನೇ ಕೆಲವು ಪರಿಣಿತರು ಪ್ರಶ್ನಿಸುತ್ತಿದ್ದಾರೆ ಅನ್ನುತ್ತದೆರೀಡರ್ರ್ಸ್ ಡೈಜೆಸ್ಟ್ನಲ್ಲಿ ಇತ್ತೀಚೆಗೆ ಪ್ರಕಟವಾದ ಲೇಖನ! ಐನ್ಸ್ಟೈನ್ನಂತಹಾ ಅಪೂರ್ವ ಮೇಧಾವಿಯ ಬುದ್ಧಿವಂತಿಕೆಯನ್ನು ತೀರಾ ಸಮಾನ್ಯ ಬುದ್ಧಿವಂತರ ( rank ವಿಜೇತರು ಎಂದು ನೀವು ಓದಿಕೊಳ್ಳಬಹುದು) ಬುದ್ಧಿವಂತಿಕೆಯನ್ನು ಅಳೆಯುವ ವಿಧಾನದಿಂದ ಅಳೆಯುವುದು ಮೊದಲನೆ ತಪ್ಪು. ಇನ್ನು ಅದನ್ನು ಊಹಿಸಿ ನಿರ್ಧರಿಸುವುದು ಎರಡನೆ ತಪ್ಪು.
ಮೇಧಾವಿಯ ಮಿದುಳಿಗೆ ಮ್ಯೂಸಿಯಂ ಭಾಗ್ಯ 
1997ರಲ್ಲಿ ಥಾಮಸ್ ಹಾರ್ವಿ ತನ್ನ ಬಳಿ ಅಳಿದುಳಿದಿದ್ದ ಐನ್ಸ್ಟೈನ್ ಮಿದುಳಿನ ಭಾಗಗಳನ್ನು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದ ಅವನ ಮೊಮ್ಮಗಳಿಗೆ ಮರಳಿಸಲು ಯತ್ನಿಸಿದನಾದರೂ ಅವಳು ಅವುಗಳನ್ನು ನಿರಾಕರಿಸಿದಳು. ಥಾಮಸ್ ಹಾರ್ವಿ 2007ರಲ್ಲಿ ನಿಧನನಾದ. ಅವನ ವಾರಸುದಾರರು ಅವನ ಬೆಲೆ ಬಾಳುವ ಆಸ್ತಿಯಾಗಿದ್ದ ಮಿದುಳಿನ ಕೆಲವು ಭಾಗಗಳನ್ನು ಹಾಗೂ ಆತ ಸೆರೆಹಿಡಿದಿದ್ದ ಐನ್ಸ್ಟೈನ್ ಮಿದುಳಿನ 14 ಛಾಯಾಚಿತ್ರಗಳನ್ನು ಯು ಎಸ್ (ಮೇರಿಲ್ಯಾಂಡ್ ಸಿಲ್ವರ್ ಸ್ಪ್ರಿಂಗ್ಲ್ಲಿರುವ) ‘ನ್ಯಾಷನಲ್ ಮ್ಯೂಸಿಯಂ ಆಫ್ ಹೆಲ್ತ್ ಆಂಡ್ ಮೆಡಿಸಿನ್ಗೆ ನೀಡಿದರು. ಉಳಿದ 46 ತುಣುಕುಗಳನ್ನು ಫಿಲಡೆಲ್ಫಿಯಾದಮ್ಯೂಟರ್ ಮ್ಯೂಸಿಯಂ ಆಂಡ್ ಹಿಸ್ಟೋರಿಕಲ್ ಲೈಬ್ರರಿಪಡೆಯಿತು.
ಐನ್ಸ್ಟೈನ್ ಯಶೋಗಾಥೆಗೆ ಹೋಲಿಸಿದರೆ ಹರಿದು ಹಂಚಿ ಹೋಗಿ, ಎಲ್ಲೆಲ್ಲೋ ಸೇರಿ ಕೊನೆಗೆ ವಸ್ತು ಸಂಗ್ರಹಾಲಯಗಳಲ್ಲಿ ವಿರಮಿಸಿದ ಅವನ ಮಿದುಳಿನ ಪಯಣ ಒಂದು ಪ್ರಹಸನದಂತೆ ತೋರುತ್ತದೆ. ಆಸಕ್ತಿ, ಕುತೂಹಲ ಉಳ್ಳವರು ಅವುಗಳನ್ನು ಅಲ್ಲಿ ವೀಕ್ಷಿಸಬಹುದು. ಅದರಾಚೆಗೆ ಅವುಗಳು ಉಪಯೋಗ ಶೂನ್ಯ!
ಕೆಲವು ವಿಜ್ಞಾನಿಗಳ ಪ್ರಕಾರ ಮರಣೋತ್ತರ ಅಧ್ಯಯನದಿಂದ ಮಿದುಳಿನ ರಚನೆ-ಕ್ರಿಯೆಗೆ ಸಂಬಂಧಿಸಿದ ತೊಡಕಾದ ವಿಷಯಗಳನ್ನು ಪರಿಹರಿಸುವುದು ಅಸಾಧ್ಯ. ಅದೇನಿದ್ದರೂ ಅತ್ಯಾಧುನಿಕ ಇಮೇಜಿಂಗ್ ತಂತ್ರಜ್ಞಾನ ಬಳಸಿ ಜೀವಂತ ಮಿದುಳಿನ ಅಧ್ಯಯನಗಳಿಂದ ತಿಳಿಯಬಹುದು. ವಿಪರ್ಯಾಸವೆಂದರೆ ಐನ್ಸ್ಟೈನ್ ಜೀವಿತಾವಧಿಯಲ್ಲಿ ತಂತ್ರಜ್ಞಾನ ಅಷ್ಟೊಂದು ಮುಂದುವರಿದಿರಲಿಲ್ಲ. (ಒಂದು ವೇಳೆ ಮುಂದುವರಿದಿದ್ದರೂ, ಅಂಥಾ ಅಧ್ಯಯನಕ್ಕೆ ಅವನ ಸಮ್ಮತಿ ದೊರೆಯುವುದು ಅಷ್ಟರಲ್ಲೇ ಇದೆ!) ಒಂದು ವೇಳೆ ಆಧುನಿಕ ವಿಧಾನಗಳಿಂದ ಅಂಥಾ ಮಿದುಳಿನಲ್ಲಿ ಕೆಲವು ಗುಣಲಕ್ಷಣಗಳನ್ನು ಪತ್ತೆ ಹಚ್ಚಿದರು ಕೂಡಾ “ ‘ಇಗೋ ನೋಡಿ! ಐನ್ಸ್ಟೈನ್ ಓರ್ವ ಮಹಾನ್ ಭೌತಶಾಸ್ತ್ರಜ್ಞನಾಗಲು ಇದೇ ಕಾರಣಎಂದು ಬೊಟ್ಟು ಮಾಡಿ ಹೇಳುವುದು ಅಸಾಧ್ಯಅನ್ನುತ್ತಾನೆ ಹಾರ್ವರ್ಡ್ ನರವಿಜ್ಞಾನಿ ಆಲ್ಬರ್ಟ್ ಗಲ ಬರ್ಡ್. (ಅವನ ಮಿದುಳಿನ ಅಂಥಾ ಪ್ರತ್ಯೇಕತೆ, ಹೆಚ್ಚು ಬಹಿರಂಗವಾಗದ ಐನ್ಸ್ಟೈನ್ ಸ್ತ್ರೀಲೋಲತನಕ್ಕೆ ಕಾರಣವಾಗಿದ್ದರೆ, ಇಡೀ ಸಂಶೋಧನೆ ದಿಕ್ಕು ತಪ್ಪಿದಂತಾದೀತು!)    
ಒಂದು ವಾನರ, ಕಂಪ್ಯೂಟರ್ ಕಾರ್ಯವೈಖರಿ ತಿಳಿಯಲು, ಅದನ್ನು ಒಡೆದು ಅದರ ಹಾರ್ಡ್ವೇರ್ಅನ್ನು ಬಿಚ್ಚಿ, ಚೂರು ಚೂರು ಮಾಡಿ ನೋಡುವುದು ಎಷ್ಟು ಅಸಂಬದ್ಧವೆನಿಸುತ್ತದೋ-ಥಾಮಸ್ ಹಾರ್ವಿ ಸೇರಿ ಇತರರು ಮಾಡಿದ್ದು ಅದೇ ದಡ್ಡತನವನ್ನು. ಹಾರ್ಡ್ವೇರನ್ನು ಬಗೆದು ಸಾಫ್ಟ್ವೇರನ್ನು ಅರಿಯುವುದು ಅಸಾಧ್ಯ. ಮಾತ್ರವಲ್ಲ, ಅಂಥಾ ಮಿದುಳಿಲ್ಲಿಸಾಫ್ಟ್ವೇರ್ಗೆ ಮಿಗಿಲಾದ ಊಹಾತೀತವಾದ, ಇಂದ್ರಿಯಾತೀತವಾದ ಅದೇನೋ ಇನ್ನೊಂದು ಮಾಯೆಅಡಗಿರಬಹುದೇನೋ? ಬಹುಶಃ ಅದನ್ನು ನಮ್ಮ ಮಿದುಳಿನಿಂದಲೇ ಗ್ರಹಿಸಲು, ಅರಿಯಲು (ಸದ್ಯ) ಅಸಾಧ್ಯವಾಗಿದ್ದರೆ-ಇವೆಲ್ಲವೂ ವ್ಯರ್ಥ ಡೊಂಬರಾಟಗಳು ಅನಿಸಿಕೊಳ್ಳುತ್ತವೆ.
ನಮ್ಮ ಶರೀರ, ಮಿದುಳು ಇವೆಲ್ಲಾ ನಿಗೂಢ ವಿಶ್ವದ ಭಾಗವಷ್ಟೆ? ಅದರೊಳಗಿನ ಯಾವುದೋ ಕಣದಲ್ಲಿ ವಿಶ್ವದ ಸೃಷ್ಟಿಯ ರಹಸ್ಯ ಅಡಗಿದ್ದು, ಐನ್ಸ್ಟೈನ್ನಂಥವರ ಮಿದುಳಿನಲ್ಲಿ ಅದು ಬೆಳಗುತ್ತದೆಯೇ? ಉತ್ತರಿಸಬಲ್ಲುದೆ ಕಾಲ
ಅಂಥದೊಂದು ಮಿದುಳಿನ ಮರ್ಮವನ್ನು ಅನಾವರಣ ಮಾಡಲು, ಹುಟ್ಟಿ ಬರಬೇಕು ಅಂಥವನೊಬ್ಬ. ಬೆಳಕಿನ ವೇಗಕ್ಕೆ ಬೆಳಕೇ ಸಾಟಿ ಅಂದವನೊಬ್ಬ. ಮತ್ತೆ ಹುಟ್ಟಿ ಬಾ ಆಲ್ಬರ್ಟ್ ಐನ್ಸ್ಟೈನ್!    



      ಮಿದುಳಿನ ಆರೋಗ್ಯ ಕಾಪಾಡಲು ಕೆಲವು ಟಿಪ್ಸ್
ಮಿದುಳಿನ ಅಧ್ಯಯನದಿಂದ ಅದರ ಆರೋಗ್ಯಕ್ಕೆ ಪೂರಕವೆನಿಸಿದ ಕೆಲವು ಅಂಶಗಳನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ. ಧ್ಯಾನ ಮಿದುಳಿನೊಳಗಿನ ಸರ್ಕೀಟ್ಗಳ ಬಲ ಸಂವರ್ಧನೆಗೆ ಕಾರಣವಾಗುತ್ತದೆ, ವಯಸ್ಸಾಗುವಿಕೆಯನ್ನು ಕುಂಠಿತಗೊಳಿಸುತ್ತದೆ, ನೆನೆಪಿನ ಶಕ್ತಿ ಹೆಚ್ಚಿಸುತ್ತದೆ.
ಮಿದುಳು ಸಂಗಾತಿಗಳನ್ನು ಬೇಡುತ್ತದೆ. ಹೆಚ್ಚು ಹೆಚ್ಚು ಜನರೊಂದಿಗೆ ಬೆರೆಯುವುದು, ಸಾಮಾಜಿಕ ಜೀವನ, ಸಲ್ಲಾಪ, ಹರಟೆ ಹೊಡೆಯುವುದು ಇವೆಲ್ಲಾ ಮಿದುಳಿಗೆ ವಕ್ಕರಿಸುವ ಮರೆಗುಳಿತನವನ್ನು ಕೊಂಚ ದೂರವಿಡುತ್ತದೆ.
ಬ್ರಹ್ಮಚಾರಿಗಳು ಕ್ಷಮಿಸಬೇಕು. ಅರೋಗ್ಯಕರ ಲೈಂಗಿಕತೆ ಮಿದುಳಿನ ಆರೋಗ್ಯಕ್ಕೆ ಒಳ್ಳೆಯದು ಅನ್ನುತ್ತದೆ ಅಧ್ಯಯನ. ಅದು ಆತಂಕ, ಖಿನ್ನತೆಗಳನ್ನು ಹೊರಗಿಟ್ಟು ಉತ್ತಮ ನಿದ್ರೆಯನ್ನು ಬರಮಾಡುತ್ತದೆ, ಗ್ರಹಿಕೆಯ ಪ್ರಕ್ರಿಯೆಗೆ ನೆರವಾಗುತ್ತದೆ.
ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ. . .’ಎಂಬ ಕವಿ (ಹಂಸಲೇಖಾ) ವಾಣಿ ಸುಳ್ಳಲ್ಲ ಅನ್ನುತ್ತಾರೆ ವಿಜ್ಞಾನಿಗಳು. ಪ್ರೀತಿ ಕವಿತೆಯನ್ನು, ಹಾಡನ್ನು ಮಾತ್ರವಲ್ಲ, ಮನಸ್ಸಿಗೆ ಮುದ ನೀಡಬಲ್ಲ (ಹೋರ್ಮೋನ್ ಹಾಗೂ ನ್ಯೂರೋಟ್ರಾನ್ಸ್ಮಿಟರ್ ಎಂದು ಬಗೆಯಲಾದ) ಡೋಪಮೀನ್ ಸ್ಫುರಣೆಗೂ ಕಾರಣವಾಗುತ್ತದೆ ಎನ್ನಲಾಗಿದೆ.
ಮನಸಾರೆ ನಗುವುದು ಕೂಡಾ ಇದೇ ಪರಿಣಾಮ ಬೀರುತ್ತದೆ. ಅದರಿಂದ ಮಿದುಳಿನಲ್ಲಿ ಡೋಪಮೀನ್ ಹಾಗೂ ನಮ್ಮನ್ನು ಖುಷಿಯಾಗಿಡುವ ಅದೇ ಮಾದರಿಯ ಸೆರಟಾನಿನ್ ಎಂಬ ಇನ್ನೊಂದು ರಾಸಾಯನಿಕದ ಸ್ಫುರಣೆಯಾಗುತ್ತದೆ.
ಆರೋಗ್ಯಕರ ಮಿದುಳಿಗೆ ಆರೋಗ್ಯಕರ ಕನಸುಗಳು ಅತ್ಯಗತ್ಯ. ಕನಸು ಕಾಣುವುದರಿಂದ ಮಿದುಳು ಸ್ಥಿಮಿತದಲ್ಲಿರುತ್ತದೆ. ಇಲ್ಲವಾದಲ್ಲಿ ಅದು ಸದಾ ಅತಂಕದ, ಉದ್ವಿಗ್ನದ ಸ್ಥಿತಿಯಲ್ಲಿರುತ್ತದೆ!
ಪ್ರವಾಸ, ವಿಹಾರ ಇತ್ಯಾದಿಗಳು ಮಿದುಳನ್ನು ಸ್ವಸ್ಥವಾಗಿಡುತ್ತವೆ. ಅಂತೆಯೆ ವ್ಯಾಯಾಮ ಕೂಡಾ ರಕ್ತ ಪರಿಚಲನೆಯನ್ನು ಹಾಗೂ ಆಮ್ಲಜನಕ ಸೇವನೆಯನ್ನು ಹೆಚ್ಚಿಸಿ, ತ್ಯಾಜ್ಯಗಳನ್ನು ಹೊರತಳ್ಳುವುದರಿಂದ ನೆನಪಿನ ಶಕ್ತಿ, ಏಕಾಗ್ರತೆ ಹಾಗೂ ಗ್ರಹಿಕೆಯ ಸಾಮರ್ಥ್ಯ ಹೆಚ್ಚುತ್ತದೆ.
 ನಿದ್ರಾಹೀನತೆ, ಮದ್ಯ ಸೇವನೆ, ಮಿತಿ ಮೀರಿದ ಸಕ್ಕರೆ ಸೇವನೆ, ಮಲ್ಟಿ ಟಾಸ್ಕಿಂಗ್ ಹಾಗೂ ಸ್ಥೂಲಕಾಯ ಇವು ಮಿದುಳಿನ ಪರಮ ವೈರಿಗಳು

Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾಗಲ್ಲ, ನಿಜವಾಗಿ, ʼಒಂದು ಆಕೃತಿಯ ಒಳಭಾಗಗಳನ್ನು, ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...
        Food for Teeth                                    If you thought millions of people in Mera Bharat( that’s Mahan) grapple with the issue of not knowing from where their next meal would come, you are all wrong-or else you are not watching much of the idiot box as much as the people calculating the TRP suppose you do! Now what is TRP? It is Television Rating Points. That’s someone somewhere is glad to know how much you weigh as a couch-potato. So when you are watching TV someone is ‘watching’ you like the BB (Big Brother).  A cute device called ‘People’s Meter’ might have been attached to your TV. Or to the one in one of your neighbors’ house. This device keeps track of what you watch and how often, how long etc. And that info is accessed by the geniuses who are ...