Skip to main content

 

                                       

 

(ʼತುಷಾರʼ ಡಿಸೆಂಬರ್‌ 2023ರ ಸಂಚಿಕೆಯಲ್ಲಿ ಪ್ರಕಟವಾದ ನನ್ನ ವಿಶೇಷ ಲೇಖನ)

             ಪಿ ಎನ್ ಎಸ್ ಘಾಜಿó ಮುಳುಗಡೆ
ರಹಸ್ಯವಾಗಿ ಉಳಿದ ಜಲಾಂತರ್ಗಾಮಿಯ ಜಲಸಮಾಧಿಯ ಕಥೆ  

 (ಈ ಲೇಖನವನ್ನು ಮೊಬೈಲ್ ನಲ್ಲಿ ಓದುವವರ ಗಮನಕ್ಕೆ:

ಘಾಜಿ ಅನ್ನುವುದನ್ನು ನಾನು ಸರಿಯಾಗಿ ಟೈಪ್ ಮಾಡಿರುತ್ತೇನೆ.

ನೀವು ಇದನ್ನು ಕಂಪ್ಯೂಟರ್ ನಲ್ಲಿ ತೆರೆದು ಓದಿದರೆ ಇದು ಸ್ಪಷ್ಟವಾಗುತ್ತದೆ.

ಆದರೆ ಯಾವುದೋ ತಾಂತ್ರಿಕ ಕಾರಣದಿಂದ, ಅದು ಮೊಬೈಲ್ ನಲ್ಲಿ ಗಾಜಿಂ ಎಂದು ಬದಲಾಗುತ್ತಿದೆ ಎಂಬುದನ್ನು ದಯವಿಟ್ಟು ಗಮನಿಸಿ.)

ಇಸವಿ 2003. ಬಂಗಾಳ ಕೊಲ್ಲಿಯಲ್ಲಿ ವಿಶಾಖಪಟ್ಟಣಂ ಬಂದರಿನ ಸಮೀಪ ಕಡಲಿನಡಿಯ ಶಾಂತತೆಯನ್ನು ಕದಡುವ ಚಟುವಟಿಕೆಯೊಂದು ನಡೆಯುತ್ತಿದೆ. ಕಡಲಿನಡಿಯಲ್ಲಿ, ಮೂತಿಯ ಭಾಗ ಸಿಡಿದು ಹೋಗಿದ್ದ, ತನ್ನ ಪಾಡಿಗೆ ತಾನು ಸೋತು ಮಲಗಿದ್ದ ಒಂದು ಸಬ್ಮೆರೀನ್ (ಜಲಾಂತರ್ಗಾಮಿ) ಅವಶೇಷವನ್ನು ಭಾರತದ ನೌಕಾಪಡೆಯ ನುರಿತ ಮುಳುಗುಗಾರರು, ಒಡೆದು ಒಳನುಗ್ಗಿ ತಡಕಾಡುತ್ತಿದ್ದಾರೆ. ಕೆಲವು ಕುರುಹುಗಳು, ಜೊತೆಯಲ್ಲಿ ಆರು ಯೋಧರ ಶವಗಳು, ಇವಿಷ್ಟರೊಂದಿಗೆ ಅವರು ಅದರಿಂದ ಹೊರಬರುತ್ತಾರೆ. ಮುಂದೆ ಆರು ಯೋಧರ ಕಳೇಬರಗಳನ್ನು ಭಾರತದ ಸಕಲ ಸೇನಾಪಡೆಯ ಗೌರವಗಳೊಂದಿಗೆ ದಫನ ಮಾಡಲಾಗುತ್ತದೆ.

ವಿಶೇಷವೇನೆಂದರೆ ಕಡಲು ಮಾತ್ರ ಭಾರತದ ಗಡಿಯೊಳಗಿನದ್ದು. ಜಲಾಂತರ್ಗಾಮಿ ಭಾರತದ್ದಲ್ಲ ಮತ್ತು ಕಳೇಬರಗಳು ಭಾರತದವರದ್ದÀಲ್ಲ. ಯೋಧರು ಪಾಕಿಸ್ತಾನದ ನೌಕಾಪಡೆಯವರು. ಅಂದ ಹಾಗೆ ಘಾಸಿಗೊಂಡು ಮಲಗಿದ್ದ ಜಲಾಂತರ್ಗಾಮಿ ಕೂಡಾ ಪಾಕಿಸ್ತಾನದ್ದು ಮತ್ತದರ ಹೆಸರು ಘಾಜಿó. (ಅರ್ಥಾತ್ಓರ್ವ ಧೀರ, ಮಹಾ ಪರಾಕ್ರಮಿ ಮುಸ್ಲಿಂ ಯೋಧ.)  

ದಶಕಗಳ ಹಿಂದೆ, ಪಾಕಿಸ್ತಾನದ ಹೆಮ್ಮೆ ಆದರೆ ಭಾರತದ ಪಾಲಿಗೆ ಒಳಗೊಳಗೇ ಒಂದು ದುಃಸ್ವಪ್ನ ಅನಿಸಕೊಂಡಿದ್ದ ಪಾಕ್ ಜಲಾಂತರ್ಗಾಮಿ ಘಾಜಿó, ಭಾರಿ ಸ್ಫೋಟದೊಂದಿಗೆ ಬಂಗಾಳ ಕೊಲ್ಲಿಯಲ್ಲಿ ಮುಳುಗಿದ್ದು ಮಾತ್ರವಲ್ಲ, ತನ್ನ ಗರ್ಭದಲ್ಲಿ ಕೆಲವು ಸತ್ಯಗಳನ್ನು, ರಹಸ್ಯಗಳನ್ನು ಮತ್ತು ಕುರುಹುಗಳನ್ನು ಬಚ್ಚಿಟ್ಟುಕೊಂಡು ಜಲಸಮಾಧಿಯಾಗಿದೆ.

 ಘಾಜಿó ಮುಳುಗಿ ಬಂದ ದಾರಿ

ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನ ಹೆಮ್ಮೆಯಿಂದ ಕೊಚ್ಚಿಕೊಳ್ಳುತ್ತಿದ್ದ ಅದರ ಮುಸ್ಲಿಂ ವೀರ ಕಲಿ ಘಾಜಿó ನಿಜಕ್ಕೂ ಪಾಕಿಸ್ತಾನದ್ದಲ್ಲ, ಅದು ಅಮೇರಿಕಾದ್ದು. 1945ರಿಂದ 1963ರವರೆಗೆ ಅಮೇರಿಕಾದ ನೌಕಾ ಸೇನೆಯಲ್ಲಿ ಮಳುಗೆದ್ದು ಸೇವೆ ಸಲ್ಲಿಸಿದ್ದಯು ಎಸ್ ಎಸ್ ಡಯಾಬ್ಲೋ (ಎಸ್ ಎಸ್ 479)’ ಹೆಸರಿನ ಜಲಾಂತರ್ಗಾಮಿಯೇ ಮುಂದೆ ಘಾಜಿó ಅವತಾರ ತಾಳಿದ್ದು. 1963ರಲ್ಲಿ ಜಾನ್ ಎಫ್ ಕೆನಡಿ ಅಧ್ಯಕ್ಷರಾಗಿದ್ದ ಕಾಲದಲ್ಲಿ ಅಮೇರಿಕಾ ಅದನ್ನು ಪಾಕಿಗೆ ಲೀಸ್ ಆಧಾರದಲ್ಲಿ ನೀಡಿತು. ಸಮಯದಲ್ಲಿ ಅಯೂಬ್ ಖಾನ್ ಪಾಕ್ ಅಧ್ಯಕ್ಷನಾಗಿದ್ದ. ಅಂದಹಾಗೆ, ಡಯಾಬ್ಲೋ ಎಂಬ ಸ್ಪಾನಿಶ್ ಪದದ ಅರ್ಥ ದೆವ್ವ (ಡೆವಿಲ್)!

ಸೋತುನೀರು ಮುಕ್ಕಿದರೂ, ದಕ್ಷಿಣ ಏಷಿಯಾದಲ್ಲಿ ಮೊತ್ತಮೊದಲ ಬಾರಿಗೆ ಕಡಲಾಳವನ್ನು ಜಾಲಾಡಿದ, ಕಾರ್ಯಾಚರಿಸಿದ ಜಲಾಂತರ್ಗಾಮಿ ಘಾಜಿó ಎಂಬ ಅದರ ಹೆಗ್ಗಳಿಕೆಯನ್ನು ಅಳಿಸಲಾಗದು. ಇನ್ನು ಭಾರತ ಘಾಜಿóಯನ್ನು ಒಂದು ಭೀತಿಯೆಂದೇ ಬಗೆದಿತ್ತು. ನಿಜ ಹೇಳಬೇಕೆಂದರೆ ಪಾಕಿಸ್ತಾನ ನೌಕಾಸೇನೆಗೆ ಸೇರ್ಪಡೆ ಮಾಡಿದಾಗ ಅದನ್ನು ಒಂದಿಷ್ಟು ನಿರ್ವೀರ್ಯ, ನಿರಾಯುಧಗೊಳಿಸಲಾಗಿತ್ತು ! ‘ಅನಾಧುನೀಕರಣ (ಅನ್ ಮಾಡರ್ನೈಸ್)ಗೊಳಿಸಲಾಗಿತ್ತು. ಅದು ಒಂದುಕ್ಲಾಕ್ವರ್ಕ್ ಮೌಸ್-ಅಂದರೆ  ಕೇವಲ ತರಬೇತಿಗೆ ಮಾತ್ರ ಸೂಕ್ತವಾದ ಜಲಾಂತರ್ಗಾಮಿ- ಎಂಬ ಹಿನ್ನಡೆಯನ್ನು ಇಟ್ಟಿತ್ತು. ಆದರೆ ಭಾರತ ಮಾತ್ರ ಅದೊಂದು  ಸುಸಜ್ಜಿತ ಜಲಾಂತರ್ಗಾಮಿ ಎಂಬ ತಪ್ಪು ಕಲ್ಪನೆಯಿಂದ ಸಮಯದಲ್ಲಿ  ಅನಾವಶ್ಯಕ ಭೀತಿಗೆ ಒಳಗಾಗಿತ್ತು ಎನ್ನಲಾಗಿದೆ.

ಅಂತೂ ಇಂತೂ 1964ರಲ್ಲಿ ಪಾಕ್ ನೌಕಾದಳ ಸೇರಿದ ಅದರಲ್ಲಿ ಅದೇ ವರ್ಷ 14 ಟೋರ್ಪೆಡೋಗಳನ್ನು ಅಳವಡಿಸಲಾಯಿತು ಮತ್ತು ಅದಕ್ಕೆ  ಘಾಜಿó ಎಂದು ಹೆಸರಿಸಲಾಯಿತು. ಸಾಗರ ತಳದಲ್ಲಿ ಅಪಾಯಕಾರಿ ಮೈನ್ ಗಳನ್ನು ಅಳವಡಿಸುವ ತಾಂತ್ರಿಕ ಸಾಮಥ್ರ್ಯ ಘಾಜಿóಗೆ ಇತ್ತು.

 

 ಘಾಜಿó ಮುಳುಗಡೆ- ಬಾಂಗ್ಲಾ ವಿಮೋಚನೆಯ ಉಪಕಥೆ

   ಒಂದರ್ಥದಲ್ಲಿ ಘಾಜಿó ಮುಳುಗಡೆಯ ಪ್ರಸಂಗ, ಬಾಂಗ್ಲಾ ವಿಮೋಚನೆಯ ಒಂದು ಉಪಕಥೆ ಅನ್ನಬಹುದು. ಮತ್ತದು ಭಾರತ-ಪಾಕ್ ಯುದ್ಧಕಾಂಡದ ಭಾಗವೂ ಹೌದು.

ಒಂದೆಡೆ ಪೂರ್ವ ಪಾಕಿಸ್ತಾನದಲ್ಲಿ, ಪಾಕಿಸ್ತಾನದಿಂದ ವಿಮೋಚನೆ ಬಯಸಿದಮುಕ್ತಿ ಬಾಹಿನಿ ಹೋರಾಟ ತಾರಕಕ್ಕೇರಿದೆ. ಇತ್ತ ಹೋರಾಟವನ್ನು ಹತ್ತಿಕ್ಕಲು ಪಾಕಿಸ್ತಾನಸರ್ಚ್ ಲೈಟ್ ಆಪರೇಷನ್ ಹೆಸರಿನಲ್ಲಿ ಪ್ರಾರಂಭಿಸಿದ ನರಮೇಧ ರಕ್ತದ ಓಕುಳಿ ಹರಿಸಿದೆ. ಸ್ವಾತಂತ್ರ್ಯ ಹೋರಾಟದ ಕೆಚ್ಚಿನಿಂದ ಕಣಕ್ಕಿಳಿದಮುಕ್ತಿ ಬಾಹಿನಿ ರಣೋತ್ಸಾಹಿಗಳನ್ನು ಮಣಿಸುವುದು ಅಷ್ಟು ಸುಲಭವಲ್ಲವೆಂಬುದು ಪಾಕಿಸ್ತಾನಕ್ಕೆ ಕ್ರಮೇಣ ಮನವರಿಕೆಯಾಗಿದೆ. ಇತ್ತ ನಿತ್ಯ ನುಸುಳುತ್ತಿರುವ ಪೂರ್ವ ಪಾಕಿಸ್ತಾನದ ನಿರಾಶ್ರಿತರು ಭಾರತವನ್ನು ಸಂಕಷ್ಟಕ್ಕೆ, ಧರ್ಮ ಸಂಕಟಕ್ಕೆ ನೂಕಿದ್ದಾರೆ.

ಅದಾಗಲೇ, ‘ಮುಕ್ತಿ ಬಾಹಿನಿ ಹೋರಾಟಕ್ಕೆ ಭಾರತ ಬೆಂಬಲ ನೀಡುತ್ತಾ ಬಂದಿತ್ತು ಮತ್ತು ಇದರಿಂದ ಪಾಕಿಸ್ತಾನಕ್ಕೆ ಹಿನ್ನಡೆಯಾಗುತ್ತಿತ್ತು. 1971 ಡಿಸೆಂಬರ್ 3ರಂದು ಸಂಜೆ ಪಾಕಿಸ್ತಾನವು ಭಾರತದ ವಾಯುಸೇನಾ ನೆಲೆಗಳ ಮೇಲೆ ಧಾಳಿ ಮಾಡಿದ್ದು ಭಾರತದ ಪಾಲಿಗೆ ವೈರಿ ತನ್ನನ್ನು ತೊಡೆ ತಟ್ಟಿ ಯುದ್ಧಕ್ಕೆ ಕರೆದಂತಾಯಿತು. ಪರಸ್ಪರ ಯುದ್ಧವನ್ನು ಸಾರಿದ್ದೇವೆಂದು ಘೋಷಿಸದೆ ಎರಡೂ ರಾಷ್ಟ್ರಗಳು ಯುದ್ಧದ ಪರಿಸ್ಥಿತಿ ಇರುವುದನ್ನು ಔಪಚಾರಿಕವಾಗಿ ಒಪ್ಪಿಕೊಂಡವು. ಅಂತೂ 1971 ಡಿಸೆಂಬರ್ 3ನೇ ತಾರೀಖು, ಮೂರನೇ ಇಂಡೋ-ಪಾಕ್ ಸಮರದ ಪ್ರಾರಂಭದ ದಿನವೆಂದು ದಾಖಲಾಯಿತು. ಘಾಜಿó ವೃತ್ತಾಂತದ ಕೊನೆಯ ಅಧ್ಯಾಯ ಪ್ರಾರಂಭವಾಗುವುದು ಇಲ್ಲಿಂದ.

ಮುಕ್ತಿ ಬಾಹಿನಿಗೆ ಭಾರತೀಯ ಭೂಸೇನೆಯ ಬೆಂಬಲ, ಆಗತಾನೇ ರೆಕ್ಕೆ ಪುಕ್ಕ ಮೂಡುತ್ತಿದ್ದ ಬಾಂಗ್ಲಾ ವಾಯುಸೇನೆಗೆ (ಪಾಕಿಸ್ತಾನ ವಾಯುಸೇನೆ ತೊರೆದು ಬಂದ ಅಧಿಕಾರಿಗಳು ಮತ್ತು ನೌಕಾಸೇನೆ ತೊರೆದ ಯೋಧರು) ಭಾರತೀಯ ವಾಯು ಸೇನೆಯ ಬೆಂಬಲ- ಎರಡೂ ಒಟ್ಟಿನಲ್ಲಿ ಪಾಕಿಸ್ತಾನದ ಸೇನೆಯನ್ನು ಕಟ್ಟಿಹಾಕಿಬಿಟ್ಟವು.     

 ಚಕ್ರವ್ಯೂಹದಲ್ಲಿ ಬಂಧಿಯಾದ ವೀರ ಯೋಧ

1971ರಲ್ಲಿ ಭಾರತೀಯ ನೌಕಾ ಸೇನೆಯ ಪೂರ್ವ ನೇವಲ್ ಕಮಾಂಡ್, ಅಂದಿನ ಎನ್ ಎಸ್ (ಇಂಡಿಯನ್ ನೇವಲ್ ಶಿಪ್) ವಿಕ್ರಾಂತ್ನ್ನು ಮುಂದಿಟ್ಟುಕೊಂಡು ದಕ್ಷವಾಗಿ ರಚಿಸಿದ ಚಕ್ರವ್ಯೂಹದ ಪರಿಣಾಮ ಪೂರ್ವ- ಪಾಕಿಸ್ತಾನವು ಬಂಗಾಳ ಕೊಲ್ಲಿಯಲ್ಲಿ ಸಂಪೂರ್ಣ ದಿಗ್ಬಂಧನಕ್ಕೊಳಗಾಯಿತು.

ಪಾಕಿಸ್ತಾನಕ್ಕೆ, ಪೂರ್ವ ಪಾಕಿಸ್ತಾನದಲ್ಲಿ ಬಂಡುಖೋರರನ್ನು ಮಟ್ಟಹಾಕುತ್ತಿದ್ದ ತನ್ನ ಸೇನೆಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಇದ್ದಿದ್ದ ಅತ್ಯಂತ ಸುರಕ್ಷಿತ ರಹದಾರಿ ಸಾಗರ ಮಾರ್ಗ ಮಾತ್ರ. ನೆಲ ಅಥವಾ ಆಕಾಶ ಎರಡು ಮಾರ್ಗ ಬಳಸಿದರೂ ಭಾರತದ ಹದ್ದುಗಣ್ಣಿನಿಂದ ತಪ್ಪಿಸಿಕೊಳ್ಳುವುದು ದುಸ್ಸಾಧ್ಯ. ಹೀಗಿರುವಾಗ ಭರತ ಖಂಡದ ದಕ್ಷಿಣ ಭಾಗಕ್ಕೆ ಒಂದು ಸುತ್ತು ಬಂದು ಬಂಗಾಳ ಕೊಲ್ಲಿ ತಲುಪುವುದು ಇದ್ದುದರಲ್ಲಿ ಕ್ಷೇಮ. ಆದರೆ ಅಲ್ಲೂ ಪಾಕಿಸ್ತಾನಕ್ಕೆ ಸವಾಲೆನಿಸಿದ್ದು ಭಾರತದ ಎನ್ ಎಸ್ ವಿಕ್ರಾಂತ್! ಹೀಗಾಗಿ ಅದನ್ನು ಹೊಡೆದುರುಳಿಸದಿದ್ದರೆ, ಸಾಗರ ಮಾರ್ಗ ಕೂಡಾ ಸುಗಮವಲ್ಲ ಎಂದು  ಪಾಕ್ ಬಗೆಯಿತು.

ಅಂತೂ ಇಂತೂ ಹೈರಾಣಾಗಿ ಹೋಗಿದ್ದ ಪಾಕ್, ತನ್ನ ಬ್ರಹ್ಮಾಸ್ತ್ರವನ್ನು ಕಣಕ್ಕಿಳಿಸಲು ನಿರ್ಧರಿಸಿತು. ಪಿ ಎನ್ ಎಸ್ (ಪಾಕಿಸ್ತಾನ್ ನೇವಲ್ ಶಿಪ್) ಘಾಜಿó ಯನ್ನು ಯುದ್ಧರಂಗಕ್ಕೆ ತರುವ ನಿರ್ಧಾರ ಮಾಡಿದ ಪಾಕ್, ಕುಂಭಕರ್ಣನನ್ನು ಬಡಿದೆಬ್ಬಿಸಿ ಅದಕ್ಕೆ -ಅರ್ಥಾತ್ ತಂಡಕ್ಕೆ-ಎರಡು ಕೆಲಸಗಳನ್ನು ವಿಧಿಸಿತು. ಎರಡರಲ್ಲಿ ಮೊದಲ ಆದ್ಯತೆ: ಎನ್ ಎಸ್ ವಿಕ್ರಾಂತ್ ನ್ನು ಮುಳುಗಿಸುವುದು. ಎರಡನೆಯದ್ದು: ಭಾರತದ ಪೂರ್ವ ಕಡಲ ತೀರದಡಿಯಲ್ಲಿ ಮೈನ್ (ನೆಲ ಬಾಂಬ್)ಗಳನ್ನು ಹುದುಗಿಸಿಡುವುದು. ಮೊದಲನೇ ಕಾರ್ಯದಲ್ಲಿ ಸಫಲವಾದರೂ ವಿಫಲವಾದರೂ-ಎರಡನೆಯದ್ದನ್ನು ಮಾಡಿಯೇ ತೀರಬೇಕೆಂಬ ಕಟ್ಟಪ್ಪಣೆಯನ್ನು ವಿಧಿಸಲಾಗಿತ್ತು. 

ಅರ್ಜುನನ್ನು ಕರ್ಣನೇ ಎದುರಿಸಬೇಕು, ಭೀಮನನ್ನು ದುರ್ಯೋಧನನೇ ಎದುರಿಸಬೇಕು ಎಂಬಂತೆ ಪೂರ್ವ ಪಾಕಿಸ್ತಾನದಲ್ಲಿ ಎನ್ ಎಸ್ ವಿಕ್ರಾಂತ್ ಆಟಾಟೋಪಗಳನ್ನು ಮಣಿಸಲು ಘಾಜಿóಯೇ ಬೇಕು ಎಂಬುದು ಪಾಕ್ಗೆ ಗೊತ್ತಿತ್ತು. ಆದರೆ ಅದಕ್ಕೆ ವಯಸ್ಸಾಗುತ್ತಿದೆ. ಸಾಲದ್ದಕ್ಕೆ ಪದೇ ಪದೇ ಅದರ ಸಲಕರಣೆಗಳು ಕೈಕೊಡುತ್ತಿವೆ. ಪೂ. ಪಾಕ್ ಚಿತ್ತಗಾಂಗ್ ನಲ್ಲಿರುವ ನಿರ್ವಹಣೆಯ ಸೌಲಭ್ಯಗಳು ಕಳಪೆ ಬೇರೆ.

ಹೀಗಾಗಿ ಘಾಜಿó ಪರವಾಗಿ- ಅಂದರೆಅದನ್ನು ಹುಚ್ಚು ಸಾಹಸದಿಂದ ಕಾಪಾಡಬೇಕೆಂದು ಪಾಕ್ ಸೇನೆಯಲ್ಲಿ ಕೆಲವರು ವ್ಯಕ್ತಪಡಿಸಿದ ವಿರೋಧವನ್ನು ಲೆಕ್ಕಿಸದೆ- ಅದನ್ನು ರಣರಂಗಕ್ಕೆ ಛೂ ಬಿಡಲಾಯಿತು.  ಆದರೆ ಅದು ಆತ್ಮಾಹುತಿ ಧಾಳಿ ಆಗಿ ಬಿಡುತ್ತದೆಂದು ಅದಕ್ಕೇನು ಗೊತ್ತು? ಎನ್ ಎಸ್ ವಿಕ್ರಾಂತ್ ರವಾನಿಸಿದ ಕೆಲವು ಸಂದೇಶಗಳನ್ನು ಛೇದಿಸಿ, ಅದರ ಒಳಾರ್ಥವನ್ನು ಭೇದಿಸಿದ್ದ ಪಾಕ್ ನೌಕಾದಳಕ್ಕೆಅದು ವಿಶಾಖಪಟ್ಟಣಂ ಕಡಲ ತೀರದಲ್ಲಿ ಲಂಗರು ಹಾಕಿರುವುದು ಪಕಾ್ಕ(?) ಎಂದು ಮನವರಿಕೆಯಾಗಿತ್ತು. ಸಾಲದ್ದಕ್ಕೆ ವಿಶಾಖಪಟ್ಟಣಂನಿಂದ ಪಾಕ್ ಬೇಹುಗಾರರು ನೀಡಿದಮಾಹಿತಿ ಅದನ್ನೇ ಪುಷ್ಠೀಕರಿಸುತ್ತಿತ್ತು. ಹೀಗಾಗಿ ನವೆಂಬರ್ 14, 1971ರಂದು ಕರಾಚಿ ಬಂದರಿನಿಂದ ಸದ್ದಿಲ್ಲದೆ ಸಾಗರಕ್ಕಿಳಿದ ಧೀರ ಯೋಧ ವಿಶಾಖಪಟ್ಟಣಂನತ್ತ ತನ್ನ ಅವಸಾನದ ಯಾನ ಪ್ರಾರಂಭಿಸಿದ. (ಅಷ್ತಕ್ಕೂ ಘಾಜಿó, ಎನ್ ಎಸ್ ವಿಕ್ರಾಂತ್ ಬೇಟೆಗಿಳಿದದ್ದು ಇದು ಮೊದಲ ಬಾರಿಯಲ್ಲ. 1965 ಇಂಡೋ-ಪಾಕ್ ಯುದ್ಧದ ವೇಳೆ ಅದು ಅರಬೀ ಸಮುದ್ರದಲ್ಲಿ ವಿಕ್ರಾಂತ್ಅನ್ನು ಅರಸಿ ಸೋತು ಮರಳಿತ್ತು.)   

ಒಂದು ಮಹಾ ಸ್ಫೋಟ-ನಾನಾ ಊಹಾಪೋಹ

1971 ಡಿಸೆಂಬರ್ 4 ನೇ ತಾರೀಖು ಶುರುವಾಗಿ ಮಧ್ಯರಾತ್ರಿಯ 15  ನಿಮಿಷಗಳ ನಂತರ, ವಿಶಾಖಪಟ್ಟಣಂ ಕರಾವಳಿ ಕಾವಲು ಪಡೆಗೆ ಕಡಲಿನಲ್ಲಿ  ಕಿವಿಗಡಚಿಕ್ಕುವ ಸ್ಫೋಟದ ಸದ್ದು ಕೇಳಿಸುತ್ತದೆ. ಸ್ಫೋಟಕ್ಕೆ ಸುಮಾರು ಅರ್ಧ ಮೈಲು ದೂರದವರೆಗಿನ ಮನೆಗಳ ಕಿಟಕಿಬಾಗಿಲಿನ ಗಾಜುಗಳು ಕೂಡಾ ಬಿರುಕು ಬಿಡುತ್ತವೆ.

ಆಕಾಶವಾಣಿಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರರಾಷ್ಟ್ರವನ್ನು ಉದ್ದೇಶಿಸಿ (ಇಂಡೋ ಪಾಕ್ ಯುದ್ಧದ ಕುರಿತು) ವಿಶೇಷ ಭಾಷಣವನ್ನು ಕೇಳಲು ಎಚ್ಚರವಾಗಿದ್ದವರು, ನಿದ್ದೆಯಿಂದ ಹೌಹಾರಿ ಎದ್ದವರು-ಎಲ್ಲರೂ ಭೂಕಂಪವಾಯಿತೆಂದು ಬಗೆದು ಹೊರಗೋಡಿ ಬರುತ್ತಾರೆ. ಕಡಲ ತೀರದವರು ಕಡಲಲ್ಲಿ ಭಾರೀ ಸ್ತಂಭದಂತಹ ಅಲೆ ಮೂಡಿ ಮರೆಯಾದುದನ್ನು ಕಂಡು ಗಾಬರಿಯಾಗುತ್ತಾರೆ.

ಬೆಳಗ್ಗೆ ಕಡಲಿಗಿಳಿದ ಬೆಸ್ತರು, ವಿಶಾಖಪಟ್ಟಣಂ ಬಂದರಿನಾಚೆ ತೇಲುತ್ತಿದ್ದ ಯಾವುದೋ ನೌಕೆಯ ಅವಶೇಷಗಳು ಮತ್ತು ಅಲ್ಲಲ್ಲಿ ಹಡಿರುವ ತೈಲವನ್ನು ಕಂಡು ಸಂಬಂಧಪಟ್ಟವರಿಗೆ ಸುದ್ದಿ ಮುಟ್ಟಿಸುತ್ತಾರೆ. ಅಲ್ಲಿ ರಾತ್ರೆ ಸ್ಫೊಟಿಸಿ ಮುಳುಗಡೆಯಾಗಿರುವುದು ಪಾಕ್ ಜಲಾಂತರ್ಗಾಮಿ ಘಾಜಿó ಎಂಬ ವಾರ್ತೆ ಸುತ್ತಮುತ್ತ ಹರಡುತ್ತದೆ. 

ಇಡೀ ಘಾಜಿó ವೃತ್ತಾಂತದ ಒಂದು ಸ್ವಾರಸ್ಯಕರ ಅಂಶವೇನೆಂದರೆ ದಿನ ಅಲ್ಲಿ ಮುಳುಗಡೆಯಾಗಿರುವುದು ಪಾಕ್ ಸೇನೆಯ ಜಲಾಂತರ್ಗಾಮಿ ಘಾಜಿó ಎಂಬ ವಿಷಯದಲ್ಲಿ ಮಾತ್ರ ಸೇನಾ ವಿದಗ್ಧರು, ಬೃಹಸ್ಪÀತಿಗಳು, ತಜ್ಞರು, ಮಾಧ್ಯಮದವರು ಮತ್ತು ಕೃತಿಕಾರರ ನಡುವೆ ಒಮ್ಮತವಿರುವುದು! ಆದರೆಹೇಗೆ? ಯಾರಿಂದ? ಯಾವುದರಿಂದ?’ ಎಂಬ ಪ್ರಶ್ನೆಗಳಿಗೆ  ಇದಮಿತ್ಥಂ ಎಂದು ಉತ್ತರಿಸುವುದಾಗಲಿ, ಕರಾರುವಕ್ಕಾಗಿಇದೇ ಕಾರಣ ಎಂದು ಬೊಟ್ಟು ಮಾಡುವುದಾಗಲಿ- ಇಲ್ಲಿಯವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ. ಎಲ್ಲವೂ ಅಂದಾಜು, ಊಹಾಪೋಹಗಳ ಜವುಗು ನೆಲೆಯ ಮೇಲೆ ಕಟ್ಟಿದ ವಾಲುವ ಸೌಧಗಳು!

ಎನ್ ಎಸ್ ವಿಕ್ರಾಂತ್ನನ್ನು ಹೊಡೆದುರುಳಿಸಿದರೆ ಭಾರತ ಸೇನೆಯ ಸೊಂಟ ಮುರಿದಂತೆ ಎಂದು ಹಟ ತೊಟ್ಟು ಹೊರಟ ಘಾಜಿó, ಭಾರತದ ವಿಶಾಖಪಟ್ಟಣಂ ಸಮೀಪವೇ ಸ್ಫೋಟಗೊಂಡು ಮುಳುಗಿ ಹೀನಾಯವಾಗಿ ಜಲಸಮಾಧಿಯಾದುದರ ಹಿಂದಿನ ಅಸಲಿ ಕಾರಣವೇನು? ಬೇಟೆಗಾರನೇ ಬೇಟೆಯಾಗಿ ಹೋದುದು ಹೇಗೆ?

  ಭಸ್ಮಾಸುರನಾಯಿತೇ ಘಾಜಿó ?

ಒಂದು ಊಹೆಯ ಪ್ರಕಾರ, (ಊಹೆ ಅಲ್ಲ, ಅದುವೇ ಸತ್ಯ ಅನ್ನುವವರ ಕ್ಷಮೆ ಕೋರುತ್ತಾ) ಘಾಜಿó, ವಿಶಾಖಪಟ್ಟಣಂ ಬಂದರಿನ ಕಡಲಿನಾಳದಲ್ಲಿ ತಾನೇ ಅಳವಡಿಸಿದ ಮೈನ್ಗಳಿಗೆ ಬಲಿಯಾಯಿತು. ಬಹುಶಃ ಕಡಲಿನ ಆಳದಲ್ಲಿ ಇಟ್ಟ ಒಂದು ತಪ್ಪು ಹೆಜ್ಜೆಗೆ ಅದು ಭಾರೀ ಬೆಲೆ ತೆರಬೇಕಾಯಿತು.  ಭಾರತದ ಮಾಜಿ ನೇವಲ್ ಚೀಫ್ ಅಡ್ಮಿರಲ್ ಅರುಣ್ ಪ್ರಕಾಶ್ ಅವರು ಇತ್ತೀಚೆಗೆ ಇದನ್ನೇ ಪ್ರತಿಪಾದಿಸಿ ಒಂದಿಷ್ಟು ವಿವಾದಕ್ಕೆ ಕಾರಣರಾದರು. ಘಾಜಿóಯನ್ನು ಹಿಮ್ಮೆಟ್ಟಿಸುವಲ್ಲಿ ನಮ್ಮ ನೌಕಾದಳದ ಯೋಧರು ಪ್ರದರ್ಶಿಸಿದ  ಶೌರ್ಯ, ಸಾಹಸಗಳನ್ನು ನಾನು ಕೊಂಡಾಡುತ್ತೇನೆ. ಆದರೆ ಅದರ ಸ್ಫೋಟಕ್ಕೆ  ಕಾರಣ ಇನ್ನೂ ನಿಗೂಢವಾಗಿದೆ ಅನ್ನುವ ಮೂಲಕ ಅವರು

ವಿವಾದವನ್ನು ಕೊಂಚ ತಣ್ಣಗಾಗಿಸಿದರು. ರಕ್ಷಣಾ ಕ್ಷೇತ್ರದಲ್ಲಿ ವಿಶೇಷ ಪರಿಣತಿಯಿರುವ ಸಂದೀಪ್ ಉಣ್ಣಿತಾನ್ ಕೂಡಾ, ‘ಫಾರ್ವಾರ್ಡ್ ಟೋರ್ಪೆಡೋ ರೂಮ್ ನಲ್ಲಿ ಸಂಭವಿಸಿದ ಸ್ಫೋಟದಿಂದ ಘಾಜಿó ಮುಳುಗಡೆಯಾಯಿತು ಎಂಬ ವಾದವನ್ನು ಪುಷ್ಠೀಕರಿಸುತ್ತಾರೆ.   

ಮುಳುಗಿದ ಘಾಜಿó ಅಳಿದುಳಿದ ಭಾಗಗಳನ್ನು ಪರಿಶೀಲಿಸಿದ ಭಾರತೀಯ ನೌಕಾದಳದವರು, ಅದು ಹೊರಗಿನ ಆಕ್ರಮಣದಿಂದ ಅದ ಸ್ಫೋಟಕ್ಕೆ ಬಲಿಯಾಗಲಿಲ್ಲ, ಅದೇನಿದ್ದರೂ ಒಳಗೇ ಸಂಭವಿಸಿದ ಸ್ಫೋಟದ ಪರಿಣಾಮ ಎಂದು ಅಭಿಪ್ರಾಯಪಟ್ಟರು. ಅಂದರೆ ಅದು ತಾನೇ ಅಳವಡಿಸಿದ ಮೈನ್ ಗಳ ಸ್ಫೋಟಕ್ಕೆ ಬಲಿಯಾಯಿತು ಎಂದು ಅಂದಾಜಿಸುವಂತಿಲ್ಲ! ಹಾಗಿದ್ದಲ್ಲಿ ಮತ್ತಿನ್ನೇನು?

ಅದರಲ್ಲಿ ಸುರಕ್ಷತೆಯ ಮಟ್ಟವನ್ನೂ ಮೀರಿ ಜಲಜನಕ ಶೇಖರಣೆಯಾಗಿತ್ತು! ಅದೊಂದು ಭಾರೀಬಾಂಬ್ ಆಗಿ ಬದಲಾಗಿತ್ತು! ಮೈನ್ ಗಳು, ಟೋರ್ಪಡೋಗಳು, ಡೆಪ್ತ್ ಚಾರ್ಜ್ಗಳು ಮತ್ತು ಮದ್ದು ಗುಂಡುಗಳ ಭಂಡಾರದಂತಿದ್ದ ಜಲಾಂತರ್ಗಾಮಿಯೊಳಗೆ ಅಜೀರ್ಣವಾಗುವಷ್ಟು ಜಲಜನಕ ತುಂಬಿಕೊಂಡರೆ ಇನ್ನೇನು ತಾನೆ ಆಗಲು ಸಾಧ್ಯ? 

ಯಾವುದೇ ಸಬ್ ಮೆರೀನ್ ಕಡಲಿನಲ್ಲಿ ಸುಮಾರು ಮುನ್ನೂರು ಮೀಟರ್ ಗಿಂತ ಆಳಕ್ಕೆ ಮುಳುಗಿದ ಮೇಲೆ ಅದನ್ನು ಪತ್ತೆ ಹಚ್ಚುವುದು ಅಸಾಧ್ಯ.  ಘಾಜಿó, ಹೇಳಿಕೇಳಿ ಒಂದು ಡೀಸೆಲ್ ಚಾಲಿತ ಜಲಾಂತರ್ಗಾಮಿ. ಡೀಸೆಲ್ ಚಾಲಿತ ಜಲಾಂತರ್ಗಾಮಿಗಳಿಗೆ ಕಡಲಿನ ಆಳದಲ್ಲಿ ತುಂಬಾ ಸಮಯ ಇದ್ದರೆಉಸಿರು ಕಟ್ಟಿದಂತಾಗುತ್ತದೆ. ಅದಕ್ಕೂ ಪದೇ ಪದೇ ತಾಜಾ ಆಮ್ಲಜನಕದ ಆವಶ್ಯಕತೆ ಇರುತ್ತದೆ ಮತ್ತು ಅದರೊಳಗೆ ತುಂಬಿಕೊಳ್ಳುವ ಮಲಿನ ವಾಯುವನ್ನು ಹೊರಹಾಕುವುದು ಕೂಡಾ ಅದಕ್ಕೆ ಅಷ್ಟೇ ಅತ್ಯಗತ್ಯ. ಏಕೆಂದರೆ ಡೀಸೆಲ್ ಉರಿಯಬೇಕಾದರೆ ತಾಜಾ ಆಮ್ಲಜನಕ ಬೇಕು. ಡೀಸೆಲ್ ಇಂಜಿನ್ ಚಾಲೂ ಆಗದಿದ್ದರೆ ಬ್ಯಾಟರಿಗಳನ್ನು ರೀಚಾರ್ಜ್ ಮಾಡುವುದು ಅಸಾಧ್ಯ. ಬ್ಯಾಟರಿಗಳನ್ನು ರೀಚಾರ್ಜ್ ಮಾಡುವಾಗ ಅವು ಹೊರಸೂಸುವ ಅನಿಲವೇ ಅಪಾಯಕಾರಿ ಜಲಜನಕ! ಜಲಜನಕದ ಸಾಂದ್ರತೆ ಮಿತಿಮೀರಿದಾಗ ಅದು ಸ್ಫೋಟಿಸಬಲ್ಲದು.

ಪೂರ್ತಿ ಬಂದ್ ಆಗಿರುವ ಜಲಾಂತರ್ಗಾಮಿಯೊಳಗೆ ತಾಜಾ ಆಮ್ಲಜನಕ  ಸಿಗುವುದಾದರೂ ಹೇಗೆ? ಜಲಾಂತರ್ಗಾಮಿಯ ಒಳಗಿನ ನಾವಿಕರಿಗೂ ಶುದ್ಧ ಗಾಳಿ ಪದೇ ಪದೇ ಅಗತ್ಯ ತಾನೆ? (ನ್ಯೂಕ್ಲಿಯರ್ ಸಬ್ ಮೆರೀನ್ಗಳು ತಾತ್ವಿಕವಾಗಿ ವರ್ಷಾನುಗಟ್ಟಲೆ ಕಡಲ ಅಡಿಯಲ್ಲಿ ಇರಬಲ್ಲವು. ಆದರೆ ದುರಸ್ತಿ, ನಾವಿಕರ ಅರೋಗ್ಯ ಇತ್ಯಾದಿ ಅಗತ್ಯಗಳನ್ನು ಪೂರೈಸಲು ಅವು ಕೂಡಾ ಕಡಲಡಿಯಿಂದ ಆಗಾಗ್ಗೆ ಮುಕ್ತಿಯನ್ನು ಬಯಸುತ್ತವೆ.)

ತನ್ನ ಸ್ಥಿತಿ ಗತಿಯನ್ನು ( ನೇವಿಗೇಷನ್ ಪೊಸಿಷನ್) ನಿರ್ದಿಷ್ಟವಾಗಿ ತಿಳಿಯಲು ಮತ್ತು ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಕೂಡಾ ಕಡಲಿನಿಂದ ಮೇಲೆಬರುವುದು ಜಲಾಂತರ್ಗಾಮಿಗಳಿಗೆ ಅನಿವಾರ್ಯ.

ಆಂತೂ ಇಂತೂ ವಿಶಾಖಪಟ್ಟಣಂ ಕಡಲ ತೀರವನ್ನು ಸದ್ದಿಲ್ಲದೆ ತಲುಪಿದ ಘಾಜಿó ಕಮಾಂಡಿಂಗ್ ಆಫಿಸರ್ ಜಾಫರ್ ಮಹಮ್ಮದ್ ಖಾನ್ಗೆ, ಅಲ್ಲಿನ ಬಂದರು ತಲುಪಿ ಎನ್ ಎಸ್ ವಿಕ್ರಾಂತ್ನ್ನು ಹೊಡೆದುರುಳಿಸುವುದು ತಾನು ಅಂದುಕೊಂಡಷ್ಟು ಸುಲಭವಲ್ಲ ಎಂದು ಮನದಟ್ಟಾಗುತ್ತದೆ. ಕಾರಣ? ಬಂದರು ತಲಪುವುದಕ್ಕೆ ಇರುವ ಅಗಲಕಿರಿದಾದ ಇಕ್ಕಟ್ಟಿನ ಕಾಲುವೆಯಂತ ರಹದಾರಿ ಮತ್ತು ಅದನ್ನು ಒಲ್ಲೆ ಅನ್ನುವ ಘಾಜಿó ಅಗಾಧ ಕಾಯ! ಹೀಗಾಗಿ ಘಾಜಿó, ಬಂದರಿನ ಹೊರಗೆ ಹೊಂಚು ಹಾಕಿ, ಎನ್ ಎಸ್ ವಿಕ್ರಾಂತ್ ಹೊರಬರುವುದನ್ನು ಕಾಯತೊಡಗಿತು.

ಆದರೆ ಕಡೇ ಪಕ್ಷ ಒಂದೆರಡು ದಿನಕ್ಕೊಮ್ಮೆಯಾದರೂ ಕಡಲಿನ ಮೇಲ್ಮೈ   (ಪೆರಿಸ್ಕೋಪ್ ಉದ್ದದಷ್ಟು ಆಳದವರೆಗೆ)ಗೆ ಜಲಾಂತರ್ಗಾಮಿ ಬರಲೇಬೇಕಲ್ಲ? ಹಗಲು ಅಂತೂ ಅಸಾಧ್ಯ! ಹಾಗೆ ಮಾಡಿದಲ್ಲಿ ಭಾರತ ತನ್ನ ಸರ್ವನಾಶ ಮಾಡುವುದು ನಿಶ್ಚಿತ. ಏಕೆಂದರೆ ಪಾಕ್, 1971 ಡಿಸೆಂಬರ್ 3ರಂದೇ ಸಂಜೆ ಭಾರತದ ವಾಯು ನೆಲೆಗಳ ಮೇಲೆ ಹಠಾತ್ ದಾಳಿ ನಡೆಸಿದ ಮೇಲೆ ಭಾರತ ತನ್ನ ಬಂದರು, ನೌಕಾನೆಲೆ, ವಾಯುನೆಲೆಗಳ ಮೇಲೆ ಹದ್ದಿನ ಕಣ್ಣು ಇರಿಸಿಯಾಗಿತ್ತು. ಇತ್ತ ಕ್ಷಣಕ್ಷಣಕ್ಕೂ ಘಾಜಿó   ಹೊಟ್ಟೆಯೊಳಗೆ ಜಲಜನಕದ ಮಟ್ಟ ಏರುತ್ತಲೇ ಇದೆ. 

ನೀರೊಳಗಿರ್ದುಂ ಬೆಮರ್ದಂ

ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಸೋತ ಮೇಲೆ, ತನ್ನನ್ನು ಅಮಾನುಷವಾಗಿ ಕೊಂದು ಭೀಮ ತನ್ನ ಶಪಥವನ್ನು ಪೂರೈಸುವುದು ಖಂಡಿತ ಎಂದು ಬಲ್ಲ ದುರ್ಯೋಧನ, ಅವನಿಂದ ತಪ್ಪಿಸಿಕೊಳ್ಳಲು ವೈಶಂಪಾಯನ ಸರೋವರದಡಿ ಅಡಗಿ ಕುಳಿತಿದ್ದಾನೆ. ಕೃಷ್ಣನಿಂದ ಇದರ ಸುಳಿವು ಪಡೆದ ಭೀಮ, ವೈಶಂಪಾಯನದ ಸಮೀಪ ರಣೋತ್ಸಾಹದಿಂದ ಗಟ್ಟಿಯಾಗಿ ಹೂಂಕರಿಸಿದ್ದಾನೆ. ಅಷ್ಟಕ್ಕೇ ಭಯದಿಂದ ತತ್ತರಿಸಿದ ದುರ್ಯೋಧನನೀರೊಳಗಿರ್ದುಂ ಬೆಮರ್ದಂ ಎಂದು ಕವಿ ಬಣ್ಣಿಸಿದ್ದಾನೆ. ಈಗ ಅದೇ ಪಾಡು ಅನುಭವಿಸಿದ ಘಾಜಿó ಗ್ಯಾಸ್ ಟ್ರಬಲ್ ತಡೆಯಲಾರದೆ ಸ್ಫೋಟಗೊಂಡು ಮೋಕ್ಷ ಪಡೆಯಿತು!

ಯಾರು ಇಂದರ್ ಸಿಂಗ್?

ಅಕ್ಟೋಬರ್ 2, 2023ರಂದು ಭಾರತ ತನ್ನ ಓರ್ವ ವೀರ ಪುತ್ರನನ್ನು ಕಳೆದುಕೊಂಡಿತು. (1924 ಅಕ್ಟೋಬರ್ 4ರಂದು ಜನಿಸಿದ ಅವರು, ಇನ್ನೂ 367 ದಿನ ಬದುಕಿದ್ದಿದ್ದರೆ ಒಂದು ಶತಕ ಪೂರೈಸುತ್ತಿದ್ದರು.)  ಅವರೇ ವೀರ ಚಕ್ರ ಪ್ರಶಸ್ತಿ ಪುರಸ್ಕøÀ ಲೆಫ್ಟಿನೆಂಟ್ ಕಮಾಂಡರ್ ಇಂದರ್ ಸಿಂಗ್. 96ನೇ ವಯಸ್ಸಿನಲ್ಲೂ ಹದಿಹರೆಯದವರನ್ನು ನಾಚಿಸುವಂತೆ ಈಜು ಬಲ್ಲವರಾಗಿದ್ದರಂತೆ ಸಿಂಗ್. ಘಾಜಿó ಮುಳುಗಡೆಯಲ್ಲಿ ಅವರು ತೋರಿದ ಶೌರ್ಯ, ಸಾಹಸ, ಸಮಯಪ್ರಜ್ಞೆ, ವಹಿಸಿದ ನಿರ್ಣಾಯಕ ಪಾತ್ರವನ್ನು ಪರಿಗಣಿಸಿ ಅವರಿಗೆ ವೀರ ಚಕ್ರ ಬಿರುದು ನೀಡಲಾಗಿತ್ತು.

ಹಾಗಿದ್ದಲ್ಲಿ ಘಾಜಿó ಮುಳುಗಡೆಯಾದದ್ದು ಕೇವಲ ತನ್ನ ಸ್ವಯಂಕೃತ ಅಪರಾಧದಿಂದಲ್ಲವೇ? ಭಾರತ ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರಅಲ್ಲ.’! ಅಲ್ಲಿಗೆ ಘಾಜಿó ವೃತ್ತಾಂತದ ಇನ್ನೊಂದು ಮಜಲು ಬಿಚ್ಚಿಕೊಳ್ಳುತ್ತದೆ.

ಕೈಗಡಿಯಾರವೇ ಸಾಕ್ಷಿ

ಭಾರತ ಸರ್ಕಾರದ ವಾದ, ‘ಘಾಜಿó, ಭಾರತೀಯ ನೌಕಾ ಸೇನೆಯ ಡಿಸ್ಟ್ರಾಯರ್ ಎನ್ ಎಸ್ ರಜಪೂತ್ ನಿಂದ ಸಿಡಿಸಲಾದ ಡೆಪ್ತ್ ಚಾರ್ಜ್ ( ಜಲಾಂತರ್ಗಾಮಿಗಳ ಮೇಲೆ ಧಾಳಿ ಮಾಡಲು ಬಳಸುವ ಒಂದು ವಿಧದ ಸಿಡಿತಲೆ) ಧಾಳಿಗೆ ಬಲಿಯಾಯಿತು ಎಂದು. ಅಂದು ಎನ್ ಎಸ್ ರಜಪೂತ್, ಲೆಫ್ಟಿನೆಂಟ್ ಕಮಾಂಡರ್ ಇಂದರ್ ಸಿಂಗ್ ಅವರ ಸುಪರ್ದಿಯಲ್ಲಿತ್ತು.

ಇನ್ನು ವಾದವನ್ನು ಸಂಪೂರ್ಣ ತಳ್ಳಿ ಹಾಕುವಂತಿಲ್ಲ. ಏಕೆಂದರೆ ಘಾಜಿó ಅವಶೇಷಗಳಿಂದ ಹೆಕ್ಕಿ ತೆಗೆದ ತಟಸ್ಥವಾದ ಕೈಗಡಿಯಾರವೊಂದರಲ್ಲಿ ತೋರಿಸುತ್ತಿದ್ದ ಸಮಯ ಡಿಸೆಂಬರ್ 4, 1971 ಪ್ರಾರಂಭದ ಮಧ್ಯರಾತ್ರಿ ಕಳೆದು 12:15 ಗಂಟೆ ( ಎಮ್). ಎನ್ ಎಸ್ ರಜಪೂತ್ ಡೆಪ್ತ್ ಚಾರ್ಜ್ ಸಿಡಿಸಿದ ಸಮಯ ಕೂಡಾ ಇದೇ ಅಗಿತ್ತು. ಇದು ಕೇವಲ ಕಾಕತಾಳೀಯ ಅನ್ನುವುದು ಹೇಗೆ?

ಕಪಟ ನಾಟಕ ವೇಷಾಧಾರಿ

ಭೀಷ್ಮ, ಕರ್ಣ, ದುರ್ಯೋಧನ ಹೀಗೆ ಕೌರವ ಪಡೆಯ ಅತಿರಥ ಮಹಾರಥರನ್ನು ಯುಕ್ತಿಯಿಂದ ಮಣಿಸುವ ಚಾಣಾಕ್ಷ ಪಟ್ಟುಗಳನ್ನು. ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣ ಪರಮಾತ್ಮಧರ್ಮ ಸಂಸ್ಥಾಪನೆÉಗೆ ಅನುಸರಿಸಿದ ಕುಟಿಲೋಪಾಯದ ಪರಂಪರೆಯನ್ನು ಭಾರತದ ನೌಕಾಸೇನೆ ಇಲ್ಲೂ ಮುಂದುವರಿಸಿತು.

ಘಾಜಿó, ಎನ್ ಎಸ್ ವಿಕ್ರಾಂತ್ ಬೇಟೆಗೆ ಹೊರಟಿರುವುದರ ಸುಳಿವು ಭಾರತದ ನೌಕಾದಳಕ್ಕೆ ಅಷ್ಟರಲ್ಲೇ ಸಿಕ್ಕಿಯಾಗಿತ್ತು. ಪೂರ್ವ ನೇವಲ್ ಕಮಾಂಡ್ ಅಂದಿನ ಫ್ಲಾಗ್ ಆಫಿಸರ್ ಕಮಾಂಡಿಂಗ್ ಇನ್ ಚೀಫ್, ವೈಸ್ ಅಡ್ಮಿರಲ್ ನೀಲಕಂಠಕೃಷ್ಣನ್ (2 ಮಹಾ ವೀರಚಕ್ರ, 12 ವೀರಚಕ್ರ ಬಿರುದು ಪಡೆದ) ಅವರ ಆರನೆಯ ಇಂದ್ರಿಯ ಚುರುಕಾಯಿತು. ಅವರು ಮೊದಲಿಗೆ ಎನ್ ಎಸ್ ವಿಕ್ರಾಂತ್ ರಕ್ಷಣೆಗೆ ಮುಂದಾದರು.

ಅಂತೆಯೇ ಎನ್ ಎಸ್ ವಿಕ್ರಾಂತ್ನ್ನು, ರಣರಂಗದಿಂದ ದೂರವಿಡಲಾಯಿತು. (ಒಂದು ಮೂಲದ ಪ್ರಕಾರ ಬೋಂಬೇ (ಮುಂಬಯಿ) ಕಡಲ ಬಂದರಿನಲ್ಲಿದ್ದ ಅದನ್ನು ಅಂಡಮಾನ್ ಕಡಲ ತೀರಕ್ಕೆ ಸಾಗಿಸಲಾಯಿತು.) ಎನ್ ಎಸ್ ವಿಕ್ರಾಂತ್ ಪಾತ್ರವನ್ನುಕಪಟ ನಾಟಕ ವೇಷಾಧಾರಿ, ವಯಸ್ಸಾಗುತ್ತಿದ್ದ, ಎರಡನೇ ಮಹಾಯುದ್ಧದ ಡಿಸ್ಟ್ರಾಯರ್ (ಬಂದೂಕು, ಕ್ಷಿಪಣಿ, ಟೋಪರ್Àಡೋಗಳಿಂದ ಸುಸಜ್ಜಿತವಾದ ಬೃಹತ್ ಯುದ್ಧ ನೌಕೆ ) ‘ ಎನ್ ಎಸ್ ರಜ್ಪೂತ್ಗೆ ವಹಿಸಲಾಯಿತು. ಅಷ್ಟಕ್ಕೂ ಎನ್ ಎಸ್ ರಜ್ಪೂತ್ನ್ನು ಆಗಲೇ ವಿಶಾಖಪಟ್ಟಣಂಗೆ ಸಾಗಿಸಿದ್ದು ಅದನ್ನು ನಿಷ್ಕ್ರಿಯಗೊಳಿಸುವ ಉದ್ದೇಶದಿಂದ. ಹೀಗಾಗಿಕಪಟ ನಾಟಕ ವೇಷಾಧಾರಿಯಾಗಲು ಅದು ಹೇಳಿಮಾಡಿಸಿದಂತಿತ್ತು. ಒಂದು ವೇಳೆ ಘಾಜಿó ತನ್ನ ದಾಳಿಯಲ್ಲಿ ಯಶಸ್ವಿಯಾದರೂ, ನಾಶವಾಗುವುದು ಪಾಕ್ ನೌಕಾ ದಳ ಎನ್ ಎಸ್ ವಿಕ್ರಾಂತ್ ಎಂದು ಬಗೆವ, ಉಪಯೋಗಶೂನ್ಯ ಎನ್ ಎಸ್ ರಜ್ಪೂತ್ ತಾನೇ? ಹೀಗಾಗಿ ಎನ್ ಎಸ್ ರಜ್ಪೂತ್,  ಎನ್ ಎಸ್ ವಿಕ್ರಾಂತ್ ಪಾತ್ರ ವಹಿಸಿತು. ಲೋಹದ ತಿಮಿಂಗಿಲಗಳ ಮುಸುಕಿನ ಮುಸುಕಿನ ಗುದ್ದಾಟ ಇನ್ನಷ್ಟೂ ಕಳೆಗಟ್ಟಿದ್ದು ಆವಾಗ!    

ಮಂಕು ಬೂದಿ ಎರಚಿದರು!

ಭಾರತೀಯ ನೌಕಾದಳ ಉದ್ದೇಶಪೂರ್ವಕವಾಗಿಯೇ ಸುರಕ್ಷಾ ಕಟ್ಟುಪಾಡುಗಳನ್ನು ಉಲ್ಲಂಘಿಸಿ, ‘ ಎನ್ ಎಸ್ ವಿಕ್ರಾಂತ್ನಿಂದ ಕಳುಹಿಸಲಾಯಿತು ಎಂದು ಪಾಕಿಸ್ತಾನ ತಪ್ಪಾಗಿ ಭಾವಿಸುವಂತಹ (ಹುಸಿ) ಸಂದೇಶಗಳನ್ನು ರವಾನಿಸಲಾರಂಭಿಸಿತು.

ಸುಮಾರು ಎರಡು ಸಾವಿರ ನಾವಿಕರಿಗೆ ಊಟೋಪಚಾರದ ವ್ಯವಸ್ಥೆ ಆಗಬೇಕಿದೆ, ‘ರೀ ಫ್ಯೂಯೆಲಿಂಗ್ಗೆ ಇಂಧನ ಬೇಕಾಗಿದೆ ಇತ್ಯಾದಿ  ಸಂದೇಶಗಳನ್ನು ಬೇಕು ಬೇಕಂತಲೇ ಸುರಕ್ಷೆಯನ್ನು ಉಲ್ಲಂಘಿಸಿ, ವಿಕ್ರಾಂತ್ ಹೆಸರಲ್ಲಿ (ಅದರ ಕಾಲ್ಸೈನ್ ಬಳಸಿ), ಎನ್ ಎಸ್ ರಜಪೂತ್ನಿಂದ ಕಳುಹಿಸಲಾಯಿತು. ವಿಶಾಖಪಟ್ಟಣಂನಲ್ಲಿ ಎನ್ ಎಸ್ ವಿಕ್ರಾಂತ್ ಯೋಧರಿಗೆ ಬೇಕಾಗಿದೆ ಎಂದು ಮಣಗಟ್ಟಲೆ ದವಸ ಧಾನ್ಯ, ತರಕಾರಿ ಇತ್ಯಾದಿಗಳ ಖರೀದಿಯಾಯಿತು. (ಇದರ ಹಿಂದಿದ್ದದ್ದು, ವಿಶಾಖಪಟ್ಟಣಂನಲ್ಲಿ ಇದ್ದಿರಬಹುದಾದ ಪಾಕ್ ಬೇಹುಗಾರರು (ತಪ್ಪು) ಗುಪ್ತ ಮಾಹಿತಿಯನ್ನು ಪಾಕ್ ಸೇನೆಗೆ ರವಾನಿಸಲಿ ಎಂಬ ಉದ್ದೇಶ.) 

ನವೆÀಂಬರ್ 23ರಂದು ವಿಕ್ರಾಂತ್ ಬೇಟೆಗಿಳಿದಿದ್ದ ಘಾಜಿóಗೆ, ತಾನು 10 ದಿನಗಳಷ್ಟು ತಡವಾಗಿ ಬೇಟೆಗಿಳಿದಿದ್ದರ ಅರಿವು ಇರಲಿಲ್ಲ. ವಿಕ್ರಾಂತ್ ದೂರದಲ್ಲೆಲ್ಲೋ (ಅಂಡಮಾನ್ ದ್ವೀಪUÀ ಸಮೀಪ?) ವಿಶ್ರಾಂತಿ ಪಡೆಯುತ್ತಿದ್ದರೆ, ಇತ್ತ ಘಾಜಿó, ಭಾರತೀಯ ನೌಕಾದಳ ಹೆಣೆದ ಖೆಡ್ಡಾದತ್ತ ಸಾಗುತ್ತಿತ್ತು!

ವಿಪರ್ಯಾಸವೆಂದರೆ, 1965 ಇಂಡೋ-ಪಾಕ್ ಯುದ್ಧದ ವೇಳೆ ವಿಕ್ರಾಂತ್ ತನ್ನ ಬಾಯ್ಲರ್ ಒಂದರಲ್ಲಿ ತಲೆದೋರಿದ ದೋಷದಿಂದ ಗರಿಷ್ಠ ವೇಗ ತಲಪುವುದರಲ್ಲಿ ಸೋಲುತ್ತಿತ್ತು ಹೀಗಾಗಿ ಅದು ಯುದ್ಧದ ಮಟ್ಟಿಗೆ ಉಪಯೋಗ ಶೂನ್ಯವಾಗಿತ್ತು. ಮಾತ್ರವಲ್ಲ, ಹೀಗಿದ್ದ ವಿಕ್ರಾಂತನ್ನು ಮುಂಬಯಿ ಬಂದರಿನಿಂದ ಅಂಡಮಾನ್ ತೀರದತ್ತ ಅಷ್ಟು ತ್ವರಿತವಾಗಿ ಸಾಗಿಸಿದ್ದರ ಹಿಂದೆಏನೋ ಭಾರತೀಯ ಜುಗಡ್ ನಡೆದಿದೆ ಎಂಬ ಅನುಮಾನಗಳಿವೆ. 

ಎಲ್ಲಾ ಶ್ರೀಕೃಷ್ಣನ ಲೀಲೆ!

ಅಂದಿನ ವೈಸ್ ಅಡ್ಮಿರಲ್ ಕೃಷ್ಣನ್, ರಜ್ಪೂತ್ ನೌಕೆಯ ಕಮಾಂಡಿಂಗ್ ಆಫಿಸರ್ ಲೆಫ್ಟಿನೆಂಟ್ ಇಂದರ್ ಸಿಂಗ್ ಅವರನ್ನು ಕರೆದು ಮುಂದಿನ ಕಾರ್ಯತಂತ್ರದ ವಿವರಣೆ ನೀಡುತ್ತಾರೆ. ಸಿಲೋನ್ (ಈಗ ಶ್ರೀಲಂಕ) ಈಚೆಗೆ ಒಂದು ಪಾಕಿಸ್ತಾನಿ ಸಬ್ಮೆರಿನ್ ರೀ ಫ್ಯೂಯೆಲಿಂಗ್ಗೋಸ್ಕರ ತಂಗಿತ್ತು ಮತ್ತು ಈಗ ಅದು ಮದ್ರಾಸ್(ಚೆನ್ನೈ) / ವಿಶಾಖಪಟ್ಟಣಂ ಆಸುಪಾಸಿನಲ್ಲಿರುವುದು  ಖಡಾಖಂಡಿತ ಎಂದು ಹೇಳುತ್ತಾರೆ. ಇತ್ತ ಡಿಸ್ಟ್ರಾಯರ್ ಎನ್ ಎಸ್ ರಜ್ಪೂತ್ ತನ್ನ ರೀಫೂಯೆಲ್ಲಿಂಗ್ ಪೂರ್ತಿಯಾದ ತಕ್ಷಣ ವಿಶಾಖಪಟ್ಟಣಂ ಬಂದರ್ನಿಂದ ಹೊರ ಬರಬೇಕು ಮಾತ್ರವಲ್ಲ ಅದರ ನೌಕಾಯಾನದ ತಾಂತ್ರಿಕ ಸಲಕರಣೆಗಳನ್ನೆಲ್ಲಾ (ನೇವಿಗೇಷನಲ್ ಏಯ್ಡ್ಸ್)ನ್ನು ಬಂದ್ ಮಾಡಿರಬೇಕು (ಹೀಗೆ ಮಾಡಿದ ಮೇಲೆ ಒಂದು ನೌಕೆಯನ್ನು ಪತ್ತೆ ಹಚ್ಚುವುದು ಸುಲಭವಲ್ಲ) ಎಂದು ಅವರಿಗೆ ಮನದಟ್ಟು ಮಾಡುತ್ತಾರೆ.

ಒಂದು ಊಹೆಯ ಪ್ರಕಾರ-ಇತ್ತ ಘಾಜಿó, ವಿಶಾಖಪಟ್ಟಣಂನ ಸುತ್ತಮುತ್ತಲಲ್ಲಿ ವಿಕ್ರಾಂತ್ನ್ನು ಪತ್ತೆ ಮಾಡುವುದರಲ್ಲಿ ವಿಫಲವಾಗುತ್ತದೆ. ಹೀಗಾಗಿ ತನಗೆ ಆದೇಶಿಸಿದಂತೆ ತನ್ನ ಎರಡನೇ ಆದ್ಯತೆಯನ್ನು ನೆರವೇರಿಸಲು ತೊಡಗುತ್ತದೆ. ಅದುವೇ ಕಡಲಿನಲ್ಲಿ ಮೈನ್ಗಳನ್ನು ಅಳವಡಿಸುವುದು.

  ಎನ್ ಎಸ್ ರಜ್ಪೂತ್ಗೆ, ಘಾಜಿó ಇದೆಯೆಂದು ಅಂದಾಜಿಸಲಾದ ವಲಯದಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಂತೆ ಕಿವಿಮಾತು ಹೇಳಲಾಗಿತ್ತು. ಆದರೆ ಉನ್ನತಾಧಿಕಾರಿಗಳು ವಲಯವನ್ನು ಸಂಪೂರ್ಣವಾಗಿ ನಿರ್ಬಂಧಿಸಿರಲಿಲ್ಲವಾಗಿದ್ದುದರಿಂದ, ರಜಪೂತ್ ರಣೋತ್ಸಾಹಿ ಕಮಾಂಡಿಂಗ್ ಆಫಿಸರ್,  ಹುಚ್ಚು ಸಾಹಸಿ ಲೆಫ್ಟಿನೆಂಟ್ ಇಂದರ್ ಸಿಂಗ್, ಡಿಸ್ಟ್ರಾಯರ್ ರಜಪೂತ್ನ್ನು ವಿಶಾಖಪಟ್ಟಣಂ ಬಂದರಿನಿಂದ ಹೊರತಂದ ಬಳಿಕ ನಿರ್ಬಂಧಿತ ಜಾಗಕ್ಕೆ ಅದನ್ನು ನುಗ್ಗಿಸಿಯೇ ಬಿಟ್ಟರು! ಅವರಿಗೋ ತಮ್ಮ ತಂಡದ ಯೋಧರ ಮೇಲೆ ಅಪಾರ ವಿಶ್ವಾಸ. ‘ತನಗೆ ಏನಾದರೇನಂತೆ?’ ಎಂದು ಸೀದಾ ಆಕ್ರಮಣಕ್ಕೆ ಮುನ್ನುಗ್ಗುವ ಛಾತಿ, ಎದೆಗಾರಿಕೆ. (‘ದಿ ಘಾಜಿó ಅಟಾಕ್ ಹಿಂದಿ ಚಿತ್ರದ ಕೊನೆಯ ಭಾಗದ ದೃಶ್ಯಗಳು ಕೇವಲ ಕಾಲ್ಪನಿಕ ಆಗಿರಲಿಕ್ಕಿಲ್ಲ ಅನಿಸುತ್ತದೆ.)

ಮಹಾ ಸ್ಫೋಟಕ್ಕೆ ಕ್ಷಣಗಣನೆ ಶುರು

ಅದು ಸರಿ ಸುಮಾರು 1971, ಡಿಸೆಂಬರ್ 3 ಮತ್ತು 4 ನಡುವಿನ ಮಧ್ಯರಾತ್ರಿ ಹೊತ್ತು. ರಜಪೂತ್ ತುಸು ದೂರ ಕ್ರಮಿಸಿದ ಮೇಲೆ ಕಡಲಿನಲ್ಲಿ ಜಲಾಂತರ್ಗಾಮಿಯೊಂದರ ಪೆರಿಸ್ಕೋಪ್ ಮುಳುಗಡೆಯಾಗುವಾಗ ಉಂಟಾಗುವಂತಹ ಒಂದು ಅಲ್ಲೋಲಕಲ್ಲೋಲ ಇಂದರ್ ಸಿಂಗ್ ಅವರ ಗಮನಕ್ಕೆ ಬಂತು. ಕಡಲಿನ ಕೆಳಗಡೆ ಅದೇನೋ ಚಲಿಸುತ್ತಿದೆ! ಅನುಭವಿ ಸೇನಾನಿಗೆ ಅದು ಘಾಜಿó ಎಂದು ತಕ್ಷಣ ಹೊಳೆಯಿತು ಮತ್ತು ಅವರು ತಡ ಮಾಡಲಿಲ್ಲ.

ತಕ್ಷಣ ಚಲನವಲನವನ್ನೇ ಅನುಸರಿಸಿ ರಜಪೂತ್ನಿಂದ ಡೆಪ್ತ್ ಚಾರ್ಜ್ಗಳನ್ನು ಸಿಡಿಸಿದ್ದಲ್ಲದೆ, ಡಿಸ್ಟ್ರಾಯರ್ ಭಾರೀ ವೇಗದಲ್ಲಿ ಸ್ಫೋಟ ಸಂಭವಿಸಬಹುದಾದ ಬಿಂದುವಿನಿಂದ ದೂರಕ್ಕೆ ದೌಡಾಯಿಸುವಂತೆ ಮಾಡಿದರು. ಪೂರ್ವಕ್ಕೆ ಸುಮಾರು ಅರ್ಧ ನಾಟಿಕಲ್ ಮೈಲು ಸಾಗಿದ ಮೇಲೆ ನೌಕೆಯಲ್ಲಿದ್ದವರಿಗೆ ಕಂಡುಬಂತು, ರಜಪೂತ್ ಡೆಪ್ತ್ ಚಾರ್ಜ್ಗಳನ್ನು ಗುರಿಯಿಟ್ಟ ಜಾಗದಲ್ಲಿ ಭಾರೀ ಸದ್ದಿನೊಂದಿಗೆ ಸಂಭವಿಸಿದ ಒಂದು ಸ್ಫೋಟ!

ಅಲ್ಲಿ ಮುಳುಗಡೆಯಾದದ್ದು ಪಾಕ್ ಜಲಾಂತರ್ಗಾಮಿ ಘಾಜಿó ಎಂದು ಸಾಬೀತಾಗುತ್ತದೆ ಮತ್ತು ಅವಶೇಷಗಳಿಂದ ಹೊರತೆಗೆದ, ನಡೆಯುವುದು ನಿಂತು ಹೋದ ಒಂದು ಕೈಗಡಿಯಾರ 12:15 ಸಮಯ ತೋರಿಸುತ್ತದೆ-ಅದು ಎನ್ ಎಸ್ ರಜಪೂತ್ ಡೆಪ್ತ್ ಚಾರ್ಜ್ ಧಾಳಿ ಮಾಡಿದ ಸಮಯ.

ಭಾರತದ ಪಾರಮ್ಯವನ್ನುಮುಳುಗಿಸುವ ಪ್ರಯತ್ನ?

 1971 ಡಿಸೆಂಬರ್ 3ರಿಂದ ಶುರುವಾಗಿ, 16ರಂದು ಪಾಕ್ ಸೇನೆ ಶರಣಾಗುವವರೆಗೆ ಮುಂದುವರಿದ ಯುದ್ಧದದ ಗತಿಯನ್ನು ಬದಲಿಸುವಲ್ಲಿ, ಘಾಜಿಯ ಮುಳುಗಡೆ ನೀಡಿದ ತಿರುವು ಮಹತ್ವದ್ದು. ಪೂರ್ವ ಪಾಕಿಸ್ತಾನ ಇತಿಹಾಸ ಸೇರಿ, ಅಲ್ಲಿ ಬಾಂಗ್ಲಾ ದೇಶದ ಉದಯಕ್ಕೆ ಕಾರಣವಾದ ಯುದ್ಧದ ಕುರಿತು ದೇಶ ವಿದೇಶಗಳ ನಿವೃತ್ತ ಸೇನಾ ವರಿಷ್ಠರು, ಯುದ್ಧ ಕೌಶಲ್ಯ ಪ್ರವೀಣರು, ಪತ್ರಕರ್ತರು ಇನ್ನೂ ಹಲವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ವರದಿ, ಲೇಖನಗಳು ಪ್ರಕಟವಾಗಿವೆ.  ವಿಕಿಪೀಡಿಯಾ ಸೇರಿದಂತೆ ಆನ್ಲೈನಲ್ಲಿ ಯುದ್ಧ ಮತ್ತು ಘಾಜಿó ಮುಳುಗಡೆಯ ಕುರಿತು ಮಾಹಿತಿಯ ಭರಪೂರವೇ ಹರಿದಾಡುತ್ತಿದೆ.ಎಲ್ಲರೂ ಒಕ್ಕೊರಲಿನಲ್ಲಿ ಮಂಡಿಸುವ ಅಭಿಪ್ರಾಯ ಒಂದೇ- ಘಾಜಿ ಸ್ಫೋಟಗೊಳ್ಳಲು ಭಾರತದ ಆಕ್ರಮಣ ಕಾರಣ ಅಲ್ಲವೇ ಅಲ್ಲ!

ವಿಷಯದಲ್ಲಿ ಇವರಿಗೇಕೆ ಇಷ್ಟೊಂದು ಹಠಮಾರಿತನ? ‘ದಕ್ಷಿಣ ಏಷಿಯಾದ ರಾಷ್ಟ್ರವೊಂದು ಯುದ್ಧದಲ್ಲಿ ತೋರಿದ ಪರಾಕ್ರಮವನ್ನು ಹೇಗೆ ಒಪ್ಪಿಕೊಂಡು ಬಿಡುವುದು? ಮುಂದೆ ಅದು ವಲಯದ ದೇಶಗಳ ನಡುವೆ ಮೇಲುಗೈ ಸಾಧಿಸಿದರೆ ತಮ್ಮ ಪಾಡೇನು?’ ಎಂಬ ಆತಂಕ ಮುಂದುವರಿದ ದೈತ್ಯ ರಾಷ್ಟ್ರಗಳನ್ನು ಕಾಡಿತೆ? ಇದೂ ಕೂಡಾ ಭಾರತವನ್ನುಎಲ್ಲಿಡಬೇಕೋ ಅಲ್ಲಿಡುವ, ಹೀಗಳೆವ, ನಿಂದಿಸುವ ಸಾಮ್ರಾಜ್ಯಶಾಹಿಗಳ ಷಡ್ಯಂತ್ರದ ಭಾಗವಿದ್ದಿರಬಹುದೆ?

 ಅಷ್ಟಕ್ಕೂ ಘಾಜಿó ಮೂಲದಲ್ಲಿ ಪಾಕಿಸ್ತಾನದ ಜಲಾಂತರ್ಗಾಮಿ ಅಲ್ಲ! ಅದು ಅಮೇರಿಕಾದ ( ಕಾಲದ) ಒಂದು ಅತ್ಯಾಧುನಿಕ ಸಬ್ಮೆರೀನ್ ಡಯಾಬ್ಲೋ! ಇಂಥಾ ದೈತ್ಯ ಲೋಹದ ತಿಮಿಂಗಿಲವನ್ನು, ತೃತೀಯ ಜಗತ್ತಿಗೆ ಸೇರಿದÀ ಭಾರತದಂತಹ ಬಡದೇಶ ಹೊಡೆದು ಉರುಳಿಸಿತು ಎಂದು ಒಪ್ಪಿಕೊಂಡರೆ, ವಿಶ್ವದ ದೊಡ್ಡಣ್ಣನ ಪಾಲಿಗೆ ಅದೆಂತಹ ಮುಖಭಂಗ! ಅಲ್ಲಿನ ಶಸ್ತ್ರಾಸ್ತ್ರ ಉದ್ಯಮಕ್ಕೆ ಇದು ಮಾರಕ ಎನಿಸದೇ? ಅವರ ಲಾಬಿ ಅಲ್ಲಿನ ರಾಜಕೀಯದ ಮೇಲೆ ಬೀರುವ ಪ್ರಭಾವ ಜನಜನಿತ.

ಹೋಗಲಿ, ಚಾಣಕ್ಯ ಪರಂಪರೆಯ ಭಾರತ, ಯಾವ ಸಾವು ನೋವು, ನಾಶ ನಷ್ಟ ಇಲ್ಲದೆ; ಪಾಕಿಸ್ತಾನದ ಬೇಹುಗಾರಿಕೆ ಜಾಲದ ದಿಕ್ಕು ತಪ್ಪಿಸಿ, ಚಳ್ಳೆಹಣ್ಣು ತಿನ್ನಿಸಿ, ಘಾಜಿóಯಂಥ ಘಾಜಿó ಮೇಲೆ ಅತ್ಯಂತ ಚಾಣಾಕ್ಷತನದಿಂದ ಬಲೆ ಬೀಸಿ, ತನ್ನ ದೇಶದ ಗಡಿಯೊಳಗೆ ಸಾಗರದ ಖೆಡ್ಡಾದಲ್ಲಿ ಕೆಡವಿ, ಅತ್ತ ಮುಳುಗಲಾಗದ ಇತ್ತ ಏಳಲಾಗದ ಇಕ್ಕಟ್ಟಿನಲ್ಲಿ ಸಿಲುಕಿಸಿ-ತಾನಾಗಿಯೇ ಸ್ಫೋಟಗೊಳ್ಳುವಂತೆ ಮಾಡಿದ್ದು-ಮತ್ತು ಎನ್ ಎಸ್ ವಿಕ್ರಾಂತ್ನ್ನು ಘಾಜಿó ಧಾಳಿಯಿಂದ ಕೂದಲೂ ಕೊಂಕದಂತೆ ರಕ್ಷಿಸಿದ್ದು- ಸಣ್ಣ ಸಾಧನೆಯಂತೂ ಖಂಡಿತಾ ಅಲ್ಲ! ಇದನ್ನು ಬಿಟ್ಟು, ‘ಅದು ಹೇಗೆ ಸ್ಫೋಟಗೊಂಡಿತು?’ ಅನ್ನುವುದನ್ನೇ ಇವರೇಕೆ ಭೂತ ಕನ್ನಡಿ ಹಿಡಿದು ನೋಡಿ, ವಿಷಯಾಂತರ ಮಾಡುವುದು? ಭಾರತದ ಚಾಣಾಕ್ಷತನವನ್ನು ಮೆಚ್ಚುವ ಒಂದೇ ಮಾತು ವಿದ್ವಾಂಸ ವಲಯದಿಂದ ಏಕೆ ಕೇಳಿ ಬಂದಿಲ್ಲ? 

2010 ಇಸವಿಯಲ್ಲಿ ಭಾರತದ ನೌಕಾ ಸೇನೆ, ಘಾಜಿó ಮುಳುಗಡೆಯ ಕುರಿತು ತಮ್ಮ ತನಿಖೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾಶಪಡಿಸಿತು. ಇದು ಚರಿತ್ರೆಯನ್ನು ಸುಳ್ಳಾಗಿಸುವ ಪ್ರಯತ್ನ ಅನ್ನುವುದು ಹಲವರ ಅಂಬೋಣ.

ಘಾಜಿó ಸ್ಮಾರಕ 

ಪಾಕಿಸ್ತಾನವೆಂದೂಭಾರತೀಯ ನೌಕಾಪಡೆಯ ಧಾಳಿಯಿಂದ ಘಾಜಿó ಅಂತ್ಯವಾಯಿತು ಎಂಬ ವಾದವನ್ನು ಒಪ್ಪಲೇ ಇಲ್ಲ. ಹಾಗೇ ನಿರೀಕ್ಷಿಸಿದರೆ ಅದು ನಮ್ಮ ದಡ್ಡತನ. ಪಾಕಿಸ್ತಾನ, ಘಾಜಿó ವರಿಷ್ಠರು ಮತ್ತು ತಂಡಕ್ಕೆ ಶೌರ್ಯ ಪ್ರಶಸ್ತಿ ಘೋಷಿಸಿತು. ಕರಾಚಿ ಬಂದರಿನಲ್ಲಿ ಘಾಜಿó ಸ್ಮಾರಕ  ನಿರ್ಮಿಸಿತು ಮತ್ತು ಘಾಜಿó ಕಮಾಂಡರ್ ಜಾಫರ್ ಮಹಮ್ಮದ್ ಖಾನ್ ಹೆಸರಿನಲ್ಲಿಪಿ ಎನ್ ಎಸ್ ಜಾಫರ್ ಹೆಸರಿನ ನೌಕಾನೆಲೆಯನ್ನು ಸ್ಥಾಪಿಸಿತು. 

 

ನಾವು ಕಾಣಲಾಗದ ನಮ್ಮ ಕಾಣಿಕೆ

1972 ಇಸವಿಯಲ್ಲಿ ಯು ಎಸ್ ಹಾಗೂ ಅಂದಿನ ಯು ಎಸ್ ಎಸ್ ಆರ್ ಎರಡೂ ರಾಷ್ಟ್ರಗಳು ಬಂಗಾಳ ಕೊಲ್ಲಿಯಲ್ಲಿ ಸಮಾಧಿಯಾದ ಘಾಜಿó ಅವಶೇಷವನ್ನು ತಮಗೆ ತಮ್ಮದೇ ಖರ್ಚಿನಲ್ಲಿ ಮೇಲಕ್ಕೆ ಎತ್ತಲು ಅನುಮತಿ ನೀಡಿ ಎಂದು ಭಾರತದ ಬಳಿ ಮನವಿ ಮಾಡಿದವು. ಫಾಕಿಸ್ತಾನ ಕೂಡಾನಮ್ಮ ಘಾಜಿóಯನ್ನು ನಮಗೆ ಬಿಟ್ಟುಕೊಡಿ ಎಂದು ಕೋರಿತ್ತು.   ಇದನ್ನು ಭಾರತ ನಯವಾಗಿ ತಿರಸ್ಕರಿಸಿತು. ‘ಅದು ಯದ್ಧದಲ್ಲಿ ಗೆದ್ದುದಕ್ಕೆ ಭಾರತಕ್ಕೆ ಸಿಕ್ಕ ಕಾಣಿಕೆ. ಅದನ್ನು ಮರಳಿಸಲಾರೆವು ಎಂದಿತು ಅಂದಿನ ಸರ್ಕಾರ.

ಒಂದಿಷ್ಟು ರಹಸ್ಯಗಳನ್ನು, ಸತ್ಯಗಳನ್ನು, ಪುರಾವೆಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡ, ‘ಭಾರತೀಯರಿಗೆ ನೋಡಲು ಸಿಗದ ಭಾರತದ ಯುದ್ಧ ಪಾರಿತೋಷಕ ಘಾಜಿó ಅವಶೇಷ, ವರುಷಗಳು ಕಳೆದಂತೆ ಕಡಲ ತೀರದೊಳಗೆ ಉರುಳಿ ಇನ್ನಷ್ಟೂ ಆಳಕ್ಕೆ ಇಳಿಯಿತು ಮತ್ತು ಅದರ ರಹಸ್ಯದ ಆಳವನ್ನು ಅಷ್ಟೇ ಹೆಚ್ಚಿಸಿತು. 

   

Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾಗಲ್ಲ, ನಿಜವಾಗಿ, ʼಒಂದು ಆಕೃತಿಯ ಒಳಭಾಗಗಳನ್ನು, ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...
        Food for Teeth                                    If you thought millions of people in Mera Bharat( that’s Mahan) grapple with the issue of not knowing from where their next meal would come, you are all wrong-or else you are not watching much of the idiot box as much as the people calculating the TRP suppose you do! Now what is TRP? It is Television Rating Points. That’s someone somewhere is glad to know how much you weigh as a couch-potato. So when you are watching TV someone is ‘watching’ you like the BB (Big Brother).  A cute device called ‘People’s Meter’ might have been attached to your TV. Or to the one in one of your neighbors’ house. This device keeps track of what you watch and how often, how long etc. And that info is accessed by the geniuses who are ...